ಅಳಿವು ಉಳಿವು 5ರ ಗಡುವು

ಗುರುವಾರ , ಜೂಲೈ 18, 2019
28 °C

ಅಳಿವು ಉಳಿವು 5ರ ಗಡುವು

Published:
Updated:

ಬೆಂಗಳೂರು: ಆಡಳಿತಾರೂಢ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಬದಲಾವಣೆಗೆ ಆಗ್ರಹಿಸುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಣ ಪಟ್ಟನ್ನು ಮತ್ತಷ್ಟು ಬಿಗಿಗೊಳಿಸಿದೆ. ಬೇಡಿಕೆ ಈಡೇರಿಕೆಗೆ ಇದೇ 5ರ ಗಡುವನ್ನು ಪಕ್ಷದ ಹೈಕಮಾಂಡ್‌ಗೆ ವಿಧಿಸಿದೆ. ತಪ್ಪಿದರೆ ಪರ್ಯಾಯ ಶಾಸಕಾಂಗ ಪಕ್ಷದ ಸಭೆ ಕರೆಯುವ ಮತ್ತು ಪ್ರತ್ಯೇಕ ಗುಂಪಿನಲ್ಲಿ ಗುರುತಿಸಿಕೊಳ್ಳುವ ಬೆದರಿಕೆ ಹಾಕಿದೆ.ಭಿನ್ನರ ಬಣದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿತವಾಗಿರುವ ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ ಶೆಟ್ಟರ್ ನಿವಾಸದಲ್ಲಿ ಭಾನುವಾರ ಈ ಬಣದ ಸಚಿವರು, ಶಾಸಕರು ಮತ್ತು ಸಂಸದರ ಸಭೆ ನಡೆಯಿತು. ಸಭೆ ಬಳಿಕ ಬೇಡಿಕೆ ಈಡೇರಿಕೆಗೆ ಇದೇ 5ರ ಗಡುವು ಪ್ರಕಟಿಸಲಾಯಿತು. ಹೈಕಮಾಂಡ್ ತಮ್ಮ ಬೇಡಿಕೆಗೆ ಮಣಿಯದಿದ್ದಲ್ಲಿ ಪ್ರತ್ಯೇಕ ಗುಂಪಿನಲ್ಲಿ ಗುರುತಿಸಿಕೊಂಡು ವಿಧಾನಸಭೆಯ ಸ್ಪೀಕರ್ ಮತ್ತು ರಾಜ್ಯಪಾಲರಿಗೆ ಪತ್ರ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.ಇದೇ 5ರ ಒಳಗೆ ಬೇಡಿಕೆ ಈಡೇರದಿದ್ದರೆ ಪರ್ಯಾಯ ಶಾಸಕಾಂಗ ಪಕ್ಷದ ಸಭೆ ಕರೆದು ನಾಯಕನ ಆಯ್ಕೆ ಮಾಡಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಶೆಟ್ಟರ್ ನಿವಾಸದಲ್ಲಿ ನಡೆದ ಸಭೆಯಲ್ಲಿ 51 ಶಾಸಕರು ಪಾಲ್ಗೊಂಡಿದ್ದರು ಎಂದು ಈ ಬಣ ಮಾಧ್ಯಮಗಳಿಗೆ ಪಟ್ಟಿ ಬಿಡುಗಡೆ ಮಾಡಿತು.ರಾಷ್ಟ್ರಪತಿ ಚುನಾವಣೆ ಸಂಬಂಧ ಸೋಮವಾರ ದೆಹಲಿಯಲ್ಲಿ ಬಿಜೆಪಿ ಮುಖ್ಯಮಂತ್ರಿಗಳ ಸಭೆ ನಡೆಯಲಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರ ಪುತ್ರನ ವಿವಾಹ ಆರತಕ್ಷತೆ ಸಮಾರಂಭವೂ ಇದೆ. ಈ ಕಾರಣದಿಂದ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಸೋಮವಾರ ದೆಹಲಿಗೆ ತೆರಳಲಿದ್ದಾರೆ. ಈ ಸಂದರ್ಭದಲ್ಲಿ ಬಿಕ್ಕಟ್ಟು ನಿವಾರಣೆ ಸಂಬಂಧ ಹೈಕಮಾಂಡ್‌ನೊಂದಿಗೆ ಚರ್ಚಿಸುವ ಸಾಧ್ಯತೆ ಇದೆ.ಮಂಗಳವಾರ ದೆಹಲಿಯಲ್ಲಿ ಬಿಜೆಪಿ ಪ್ರಮುಖರ ಸಭೆ ನಡೆಯುವುದರಿಂದ ಅಲ್ಲಿಯವರೆಗೂ ದೆಹಲಿಯಲ್ಲೇ ಉಳಿಯುವ ಸಾಧ್ಯತೆಯೂ ಇದೆ.ಬಿಕ್ಕಟ್ಟು ಮತ್ತಷ್ಟು ಉಲ್ಬಣವಾಗುವುದನ್ನು ತಡೆಯಲು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರು ಎರಡೂ ಬಣಗಳ ಪ್ರಮುಖರೊಂದಿಗೆ ಸಂಜೆ ಮಾತುಕತೆ ನಡೆಸಿದರು. ಸದಾನಂದ ಗೌಡ ಮತ್ತು ಶೆಟ್ಟರ್ ಅವರನ್ನು ಪಕ್ಷದ ಕಚೇರಿಯಲ್ಲಿ ಭೇಟಿಯಾದ ಈಶ್ವರಪ್ಪ, ರಾಜಿ ಸಂಧಾನದ ಪ್ರಯತ್ನ ನಡೆಸಿದರು. ಸಭೆಯ ಬಳಿಕ ಮಾತನಾಡಿದ ಈಶ್ವರಪ್ಪ, `ಶೆಟ್ಟರ್ ಕೂಡ ಸೋಮವಾರ ದೆಹಲಿಗೆ ಬರುತ್ತಾರೆ. ಅಲ್ಲಿ ಎಲ್ಲರೂ ವರಿಷ್ಠರನ್ನು ಭೇಟಿಯಾಗಿ  ಚರ್ಚಿಸುತ್ತೇವೆ~ ಎಂದರು.ಇದುವರೆಗೆ ಯಾವುದೇ ಬಣದೊಂದಿಗೆ ಗುರುತಿಸಿಕೊಳ್ಳದೆ ತಟಸ್ಥವಾಗಿ ಉಳಿದಿದ್ದ ಸಾರಿಗೆ ಸಚಿವ ಆರ್.ಅಶೋಕ ಮತ್ತು ಅವರ ಬೆಂಬಲಿಗರು ಈಗ ವರಸೆ ಬದಲಿಸಿದ್ದಾರೆ. ನೇರವಾಗಿ ಬೆಂಬಲ ವ್ಯಕ್ತಪಡಿಸಲು ಆಗುವುದಿಲ್ಲ. ರಹಸ್ಯ ಮತದಾನ ನಡೆದರೆ ಶೆಟ್ಟರ್ ಅವರನ್ನು ಬೆಂಬಲಿಸುವುದಾಗಿ ಯಡಿಯೂರಪ್ಪ ಅವರಿಗೆ ಭರವಸೆ ನೀಡಿದ್ದಾರೆ ಎಂದು ಗೊತ್ತಾಗಿದೆ.ನಕಾರ: ಸಚಿವ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ಹಿಂದಕ್ಕೆ ಪಡೆದ ಬಳಿಕ ಮಾತುಕತೆಗೆ ಆಹ್ವಾನಿಸುವುದಾಗಿ ಬಿಜೆಪಿ ರಾಜ್ಯ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಮಾಡಿರುವ ಮನವಿಯನ್ನು ಯಡಿಯೂರಪ್ಪ ಬಣ ತಿರಸ್ಕರಿಸಿದೆ. `ನಾಯಕತ್ವ ಬದಲಾವಣೆಯ ಬೇಡಿಕೆ ಈಡೇರುವವರೆಗೂ ರಾಜೀನಾಮೆ ಹಿಂದಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ~ ಎಂದು ಸಚಿವ ಎಂ.ಪಿ.ರೇಣುಕಾಚಾರ್ಯ ಸಭೆಯ ಬಳಿಕ ತಿಳಿಸಿದರು.

ಬಿಕ್ಕಟ್ಟು ನಿವಾರಣೆಗಾಗಿ ನಗರಕ್ಕೆ ಬಂದಿದ್ದ ಪ್ರಧಾನ್ ಭಾನುವಾರ ದೆಹಲಿಗೆ ಹಿಂದಿರುಗಿದರು. ಇದರ ಬೆನ್ನಿಗೇ ಶೆಟ್ಟರ್ ನಿವಾಸದಲ್ಲಿ ಸಭೆ ಸೇರಿದ ಯಡಿಯೂರಪ್ಪ ಬಣದ ಶಾಸಕರು, ಸಂಸದರು, ಹೈಕಮಾಂಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಸಂಸದರೂ ಅಖಾಡಕ್ಕೆ: ನಾಯಕತ್ವ ಬದಲಾವಣೆಗೆ ಆಗ್ರಹಿಸಿ ನಡೆಯುತ್ತಿರುವ ಚಟುವಟಿಕೆಗಳಲ್ಲಿ ಭಾನುವಾರ ಬಿಜೆಪಿ ಸಂಸದರೂ ನೇರವಾಗಿ ಕಾಣಿಸಿಕೊಂಡರು. ಸಂಸದರಾದ ಬಿ.ವೈ.ರಾಘವೇಂದ್ರ, ಪ್ರಭಾಕರ ಕೋರೆ, ಜಿ.ಎಸ್.ಬಸವರಾಜು, ಜಿ.ಎಂ.ಸಿದ್ದೇಶ್ವರ, ಜನಾರ್ದನ ಸ್ವಾಮಿ, ಸುರೇಶ್ ಅಂಗಡಿ, ಶಿವರಾಮೇಗೌಡ ಮತ್ತಿತರರು ಶೆಟ್ಟರ್ ನಿವಾಸದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದರು.  ಸಭೆಯ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸುರೇಶ್ ಅಂಗಡಿ, `ರಾಜ್ಯ ಬಿಜೆಪಿಯಲ್ಲಿನ ಬಿಕ್ಕಟ್ಟು ಬಗೆಹರಿಸುವಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ, ಹಿರಿಯ ಮುಖಂಡರಾದ ಎಲ್.ಕೆ. ಅಡ್ವಾಣಿ, ಅರುಣ್ ಜೇಟ್ಲಿ, ಅನಂತಕುಮಾರ್ ಅವರಿಗೆ ಅನೇಕ ಬಾರಿ ಮನವಿ ಮಾಡಿದ್ದೇವೆ. ಪಕ್ಷದ ವರಿಷ್ಠರು ಈಗಲಾದರೂ ಎಚ್ಚೆತ್ತುಕೊಂಡು ಗಡುವಿನೊಳಗೆ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದೆ ನಡೆಯುವ ಎಲ್ಲ ಬೆಳವಣಿಗೆಗಳಿಗೂ ವರಿಷ್ಠರೇ ಹೊಣೆ~ ಎಂದು ಎಚ್ಚರಿಸಿದರು.ರಾಜೀನಾಮೆಗೆ ಶಾಸಕರ ಬೆಂಬಲ: ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಮಾಡುವಂತೆ ವರಿಷ್ಠರಿಗೆ ಮನವಿ ಮಾಡಲಾಗಿದೆ. ಸಚಿವರು ರಾಜೀನಾಮೆಯನ್ನು ಶಾಸಕರು ಬೆಂಬಲಿಸಿದ್ದಾರೆ. ಪರ್ಯಾಯ ಶಾಸಕಾಂಗ ಪಕ್ಷದ ಸಭೆ ಕರೆಯುವುದು ಸೇರಿದಂತೆ ಮುಂದಿನ ತೀರ್ಮಾನಗಳನ್ನು ತೆಗೆದುಕೊಳ್ಳುವ ಅಧಿಕಾರವನ್ನು ಯಡಿಯೂರಪ್ಪ, ಶೆಟ್ಟರ್ ಅವರಿಗೆ ನೀಡಲಾಗಿದೆ ಎಂದು ಸಚಿವ ರಾಜುಗೌಡ ತಿಳಿಸಿದರು.`ಸದಾನಂದ ಗೌಡ ಅವರು ತಕ್ಷಣ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯಬೇಕು. ಅವರು ಸಭೆ ಕರೆಯದಿದ್ದರೆ ಶಾಸಕರೇ ಸಭೆ ನಡೆಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ. ನಾವು ಪಕ್ಷದ ವಿರುದ್ಧ ಇಲ್ಲ. ಹೈಕಮಾಂಡ್ ನಿರ್ಧಾರಕ್ಕೆ ಬದ್ಧ. ಹೈಕಮಾಂಡ್ ಏನೇ ಆದೇಶ ನೀಡಿದರೂ ಅದನ್ನು ಪಾಲಿಸುತ್ತೇವೆ~ ಎಂದರು.ಯಡಿಯೂರಪ್ಪ ಅವರನ್ನು ಬರಿ ವೀರಶೈವ ಸಮುದಾಯದ ನಾಯಕ ಎಂದು ಕೆಲವು ಪಟ್ಟಭದ್ರರು ಬಿಂಬಿಸುತ್ತಿದ್ದಾರೆ. ಈ ಮೂಲಕ ಸಮಾಜದಲ್ಲಿ ಒಡಕು ಮೂಡಿಸುವ ಕೆಲಸ ಮಾಡುತ್ತಿರುವುದು ಸರಿಯಲ್ಲ. ಅವರು ಎಲ್ಲ ಸಮುದಾಯಗಳ ನಾಯಕರು ಎಂದು ಮಾಜಿ ಸಚಿವ ಶಿವನಗೌಡ ನಾಯಕ್ ಹೇಳಿದರು.

`ವರಿಷ್ಠರಿಗೆ ವರದಿ ನೀಡುವೆ~

`ರಾಜೀನಾಮೆ ವಾಪಸ್ ಪಡೆಯುವಂತೆ ಸಚಿವರಿಗೆ ಸೂಚಿಸಲಾಗಿದೆ. ಬಿಕ್ಕಟ್ಟು ನಿವಾರಣೆ ಸಂಬಂಧ ಎರಡೂ ಬಣಗಳ ಮುಖಂಡರು, ಸಚಿವರು, ಶಾಸಕರೊಂದಿಗೆ ಚರ್ಚಿಸಲಾಗಿದೆ. ಅವರ ಅಭಿಪ್ರಾಯಗಳನ್ನು ವರಿಷ್ಠರ ಗಮನಕ್ಕೆ ತರುತ್ತೇನೆ~ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ತಿಳಿಸಿದರು.`ಬಿಕ್ಕಟ್ಟು ನಿವಾರಣೆ ಸಂಬಂಧ ಹೈಕಮಾಂಡ್ ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಲಿದೆ. ರಾಜ್ಯದಲ್ಲಿನ ಬೆಳವಣಿಗೆಗಳ ಬಗ್ಗೆ ವರಿಷ್ಠರಿಗೆ ಮಾಹಿತಿ ಇದೆ. ರಾಜಕೀಯ ಪಕ್ಷದಲ್ಲಿ ಗೊಂದಲಗಳು ಸಹಜ. ಅವನ್ನು ಇತ್ಯರ್ಥಪಡಿಸುವ ವಿಶ್ವಾಸ ಇದೆ~ ಎಂದು ಸುದ್ದಿಗಾರರಿಗೆ ತಿಳಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry