ಬುಧವಾರ, ಮೇ 12, 2021
24 °C

ಅಳಿವೆ ಬಾಗಿಲಿನಲ್ಲಿ ಹೂಳು: ಕಡಲ ಮಕ್ಕಳ ಗೋಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಳಿವೆ ಬಾಗಿಲಿನಲ್ಲಿ ಹೂಳು: ಕಡಲ ಮಕ್ಕಳ ಗೋಳು

ಮಂಗಳೂರು: `ಈ ಅಳಿವೆ ಬಾಗಿಲಿನಲ್ಲಿ ನಿರಂತರ ಅವಘಡಗಳು ಸಂಭವಿಸುತ್ತಲೇ ಇವೆ. ಹಾನಿಗೀಡಾದ ದೋಣಿಗಳಿಗೆ ಪರಿಹಾರ ಸಿಗುತ್ತದೆ. ಮೀನುಗಾರರಿಗೆ ತೊಂದರೆಯಾದಾಗ ಕಡೆಗಣಿಸುತ್ತಾರೆ. ಅವಘಡ ಸಂಭವಿಸಿದಾಗಲೂ ಜನಪ್ರತಿನಿಧಿಗಳು ನಮ್ಮನ್ನು ನೋಡಲು ಬರುವುದಿಲ್ಲ~ ಎಂದು ಮೀನುಗಾರ ದಯಾನಂದ ಅಮೀನ್ ಅಳಲು ತೋಡಿಕೊಂಡರು.ನೇತ್ರಾವತಿ-ಗುರುಪುರ ನದಿಗಳು ಅರಬ್ಬಿ ಸಮುದ್ರ ಸಂಧಿಸುವ ಅಳಿವೆ ಬಾಗಿಲಿನಲ್ಲಿ ಹೂಳು ತುಂಬಿ ಮೀನುಗಾರರ ಗೋಳು ದಿನೇ ದಿನೇ ಹೆಚ್ಚುತ್ತಿದೆ. ಮಂಗಳವಾರ ಬೆಳಿಗ್ಗೆ ಮೀನುಗಾರಿಕೆಗೆ ತೆರಳುತ್ತಿದ್ದ ಪರ್ಸಿನ್ ದೋಣಿಯೊಂದು ಬೃಹತ್ ಅಲೆಗೆ ಸಿಕ್ಕಿ ತತ್ತರಿಸಿ ಐವರು ಮೀನುಗಾರರು ಗಾಯಗೊಂಡಿದ್ದರು.ಅಳಿವೆ ಬಾಗಿಲಿನಲ್ಲಿ ಇದೂ ಸೇರಿ ಈ ಮಳೆಗಾಲದಲ್ಲಿ ಐದಕ್ಕೂ ಅಧಿಕ ಅವಘಡ ಸಂಭವಿಸಿದಂತಾಗಿದೆ. ಅಳಿವೆ ಬಾಗಿಲಿನಲ್ಲಿ ಹೋಗುವಾಗ ಮೀನುಗಾರರು ಜೀವ ಕೈಯಲ್ಲಿ ಹಿಡಿದು ಹೋಗಬೇಕು. ಹೂಳೆತ್ತದೆ ಇರುವುದರಿಂದ ಸಮಸ್ಯೆ ದಿನೇ ದಿನೇ ಗಂಭೀರವಾಗುತ್ತಿದೆ.ಮಂಗಳೂರಿನಲ್ಲಿ ಟ್ರಾಲ್‌ಬೋಟ್, ಪರ್ಸಿನ್ ಬೋಟ್ ಸೇರಿದಂತೆ 1,500ಕ್ಕೂ ಅಧಿಕ ಮೀನುಗಾರಿಕಾ ದೋಣಿಗಳು ಇವೆ. ಅಲ್ಲದೆ ಕೇರಳ, ತಮಿಳುನಾಡಿನಿಂದ ಬಂದ ಮೀನುಗಾರಿಕಾ ದೋಣಿಗಳು ಸಹ ಇಲ್ಲಿ ಲಂಗರು ಹಾಕುವುದು ಉಂಟು.`ಸಣ್ಣ ದೋಣಿಗಳಿಗೆ ಹೆಚ್ಚು ಸಮಸ್ಯೆ ಆಗುತ್ತಿದೆ. ಮೀನುಗಾರಿಕೆಗೆ ನಾಲ್ಕು ದಿನ ತೆರಳಿ ಮತ್ತೆ ಮನೆಯಲ್ಲಿ ಕುಳಿತುಕೊಳ್ಳುವ ಸ್ಥಿತಿ ಎದುರಾಗಿದೆ. ಸಚಿವರು ಪ್ರತಿ ವರ್ಷ ಭರವಸೆಯ ಮಹಾಪೂರ ಹರಿಸುತ್ತಾರೆ. ಯೋಜನೆ ಅನುಷ್ಠಾನಕ್ಕೆ ಬರುವುದಿಲ್ಲ. ಮತ್ತೆ ದುರ್ಘಟನೆ ನಡೆದಾಗ ಮೀನುಗಾರರ ನೆನಪಾಗುತ್ತದೆ~ ಎಂದು ಅವರು ಕಿಡಿಕಾರಿದರು.ಅಳಿವೆ ಬಾಗಿಲಿನಲ್ಲಿದ್ದ ಮತ್ತೊಬ್ಬ ಮೀನುಗಾರ ಉಮೇಶ್ ಸಾಲ್ಯಾನ್, `ನಿರಂತರವಾಗಿ ಹೂಳು ತೆಗೆಯುತ್ತಾರೆ. ಆದರೆ ಆ ಹೂಳನ್ನೂ ಅಲ್ಲೇ ಪಕ್ಕ ಹಾಕುತ್ತಾರೆ. ಸಮುದ್ರ ಪ್ರಕ್ಷುಬ್ಧಗೊಂಡಾಗ ಹೂಳೆಲ್ಲಾ ಪುನಃ ಅಳಿವೆ ಬಾಗಿಲಿಗೆ ಹೋಗುತ್ತದೆ. ಇದೊಂದು ದೊಡ್ಡ ಪ್ರಹಸನ~ ಎಂದು ಕಟುವಾಗಿ ಟೀಕಿಸಿದರು.`ಕಳೆದ ವರ್ಷ ಜಿಎಂಆರ್ ಬಾರ್ಜ್ ಮೌಂಟೆಡ್ ಪವರ್ ಪ್ಲಾಂಟ್ ತಣ್ಣೀರುಬಾವಿಯಿಂದ ಆಂಧ್ರ ಪ್ರದೇಶಕ್ಕೆ ಹೋಗುವಾಗ ಹೂಳೆತ್ತಲಾಗಿತ್ತು. ಮರಳು ಮತ್ತೆ ಬಂದಿದೆ. ದುರಂತ ಸಂಭವಿಸಿದಾಗ ಮೀನುಗಾರರ ಸ್ಥಿತಿ ಹೀನಾಯವಾಗಿರುತ್ತದೆ. ಮಲ್ಪೆ ಅಥವಾ ಎನ್‌ಎಂಪಿಟಿಗೆ ಹೋದರೆ ಹೊಡೆದು ಓಡಿಸುತ್ತಾರೆ~ ಎಂದು ಮೀನುಗಾರ ಥಾಮಸ್ ಭಯಾನಕತೆ  ಬಿಚ್ಚಿಟ್ಟರು.`ಹಲವು ವರ್ಷದಿಂದ ಸಚಿವರು ಬರುತ್ತಲೇ ಇದ್ದಾರೆ. ಇಲ್ಲಿ ಬೊಂಡ ಕುಡಿದು ಬೆನ್ನು ತಟ್ಟಿ ಹೋಗುತ್ತಾರೆ. ಸಮಸ್ಯೆ ಬಗೆಹರಿಯುವುದಿಲ್ಲ. ಮತ್ತೆ ಚುನಾವಣೆ ಬಂದಾಗ ನಮ್ಮ ಮೇಲೆ ಅವರಿಗೆ ಭಾರಿ ಪ್ರೀತಿ~ ಎಂದು ಅವರು ವ್ಯಂಗ್ಯವಾಗಿ ನುಡಿದರು.`ಇಲ್ಲಿ ಹಾಕಿರುವ ಬ್ರೇಕ್ ವಾಟರ್ ಸಹ ಹೋಗುತ್ತಿದೆ. ತಡೆಗೋಡೆ ಹಾಕಿದರೆ ಸಮಸ್ಯೆ ಇಷ್ಟು ಗಂಭೀರವಾಗುವುದಿಲ್ಲ. ಆಗ ಇಷ್ಟು ದೊಡ್ಡ ಪ್ರಮಾಣದಲ್ಲಿ ಹೂಳು ನಿಲ್ಲುವುದೂ ಇಲ್ಲ~ ಎಂದು ಹಿರಿಯ ಮೀನುಗಾರರ ಮುಖಂಡರೊಬ್ಬರು ತಿಳಿಸಿದರು.ತ್ಯಾಗ ಮಾಡಿದವರಿಗೆ ಜಾಗ ಇಲ್ಲ:  `ಎನ್‌ಎಂಪಿಟಿ ಆರಂಭವಾದುದು ಉಳ್ಳಾಲ ಶ್ರೀನಿವಾಸ ಮಲ್ಯರ ಸಾಹಸದಿಂದ. ಆ ಜಾಗದಲ್ಲಿ ಮೀನುಗಾರರು ದೊಡ್ಡ ಸಂಖ್ಯೆಯಲ್ಲಿ ಇದ್ದರು. ಮಲ್ಯರ ವಿನಂತಿಗೆ ಸ್ಪಂದಿಸಿ ಮೀನುಗಾರರು ಜಾಗ ಬಿಟ್ಟು ಕೊಟ್ಟರು.ಯಾವ ಮೊಗವೀರರೂ ವಿರೋಧ ಮಾಡಲಿಲ್ಲ. ತ್ಯಾಗ ಮಾಡಿದವರಿಗೆ ಈಗ ಎನ್‌ಎಂಪಿಟಿಗೆ ಪ್ರವೇಶ ಇಲ್ಲ. ಇದು ಯಾವ ನ್ಯಾಯ~ ಎಂಬುದು ಮೀನುಗಾರರ ಹಿರಿಯ ಮುಖಂಡ ವಾಸುದೇವ ಬೋಳೂರು ಅವರ ಪ್ರಶ್ನೆ.

 

3ನೇ ಹಂತದ ಬಂದರು ಕಾಮಗಾರಿ ಶೀಘ್ರ: ಮೀನುಗಾರರ ನಿಯೋಗಕ್ಕೆ ಸಿಎಂ ಭರವಸೆಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ರೂ 57 ಕೋಟಿ ವೆಚ್ಚದ 3ನೇ ಹಂತದ ಮೀನುಗಾರಿಕಾ ಬಂದರು ಕಾಮಗಾರಿ ಶೀಘ್ರ ಆರಂಭಿಸಲಾಗುವುದು ಎಂಬ ಭರವಸೆ ನೀಡಿದ್ದಾರೆ ಎಂದು ಮೀನುಗಾರಿಕಾ ಮುಖಂಡರು ತಿಳಿಸಿದ್ದಾರೆ.ಪರ್ಸಿನ್ ಬೋಟ್ ಮೀನುಗಾರರ ಸಂಘ ಹಾಗೂ ಟ್ರಾಲ್ ಬೋಟ್ ಮೀನುಗಾರರ ಸಂಘದ ನೇತೃತ್ವದಲ್ಲಿ 15 ಮಂದಿ ಮೀನುಗಾರ ಮುಖಂಡರು ಮುಖ್ಯಮಂತ್ರಿಯನ್ನು ಬುಧವಾರ ಬೆಂಗಳೂರಿನಲ್ಲಿ ಭೇಟಿ ಮಾಡಿ ಅಳಲು ತೋಡಿಕೊಂಡರು.`ರೂ 57 ಕೋಟಿ ಟೆಂಡರ್ ಪ್ರಕ್ರಿಯೆ ಆಗುತ್ತಿದೆ. ನವರಾತ್ರಿ ಸಂದರ್ಭ ಕಾಮಗಾರಿಗೆ ಚಾಲನೆ ನೀಡಲು ತಾವೇ ಬರುವುದಾಗಿ ಮುಖ್ಯಮಂತ್ರಿ ಒಪ್ಪಿದ್ದಾರೆ~ ಎಂದು ಮೀನುಗಾರ ಮುಖಂಡ ಮೋಹನ ಬೆಂಗ್ರೆ `ಪ್ರಜಾವಾಣಿ~ಗೆ ತಿಳಿಸಿದರು.`ಅಳಿವೆಬಾಗಿಲಿನಲ್ಲಿ ಹೂಳು ತುಂಬಿ ತುಂಬಾ ಸಮಸ್ಯೆಯಾಗಿದೆ. ಈ ಬಾರಿ 10 ದಿನ ಮಾತ್ರ ಸರಿಯಾಗಿ ಮೀನುಗಾರಿಕೆ ನಡೆದಿದೆ. ಈಗ ಮೀನುಗಾರಿಕೆ ನಡೆಸಲು ಆಗುತ್ತಿಲ್ಲ. ದುರಂತ ನಡೆದಾಗ ಎನ್‌ಎಂಪಿಟಿಯವರು ಒಳಗೆ ಪ್ರವೇಶ ನೀಡುತ್ತಿಲ್ಲ~ ಎಂದು ಮುಖಂಡರು ನೋವು ತೋಡಿಕೊಂಡರು.`ಎನ್‌ಎಂಪಿಟಿ ಮುಖ್ಯಸ್ಥರೊಂದಿಗೆ ಮುಖ್ಯಮಂತ್ರಿ ಮಾತನಾಡಿ ಭವಿಷ್ಯದಲ್ಲಿ ಇಂತಹ ಸಮಸ್ಯೆ ಆಗದಂತೆ ವ್ಯವಸ್ಥೆ ಮಾಡಬೇಕು ಎಂಬ ಸೂಚನೆ ನೀಡಿದರು~ ಎಂದು ತಿಳಿಸಿದರು.`ಮೀನುಗಾರರ ಸಮಸ್ಯೆಗಳ ಬಗ್ಗೆ ಶುಕ್ರವಾರ ಅಥವಾ ಶನಿವಾರ ಮಂಗಳೂರಿನಲ್ಲಿ ಸಭೆ ನಡೆಸಿ ಚರ್ಚಿಸಬೇಕು ಎಂದು ಬಂದರು ಹಾಗೂ ಮೀನುಗಾರ ಸಚಿವರಿಗೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಸಭೆ ನಡೆಸದಿದ್ದರೆ ಬಂದರಿಗೆ ಮುತ್ತಿಗೆ ಹಾಕಲಾಗುವುದು~ ಎಂದು ಅವರು ಎಚ್ಚರಿಸಿದರು.ಈ ಸಂದರ್ಭ ಬಂದರು ಸಚಿವ ಕೃಷ್ಣ ಪಾಲೆಮಾರ್, ಮೀನುಗಾರಿಕಾ ಸಚಿವ ಆನಂದ್ ಅಸ್ನೋಟಿಕರ್ ಅವರನ್ನೂ ಮೀನುಗಾರ ಮುಖಂಡರು ಭೇಟಿ ಮಾಡಿ ಚರ್ಚಿಸಿದರು.ಮೀನುಗಾರ ಮುಖಂಡರಾದ ಉಮೇಶ್ ಕರ್ಕೇರ, ನಿತಿನ್ ಕುಮಾರ್, ನವೀನ್ ಕರ್ಕೆರ, ದೇವಾನಂದ ಬೆಂಗ್ರೆ, ಶಶಿಕುಮಾರ್ ಬೆಂಗ್ರೆ, ಸುರೇಂದ್ರ ಸಾಲ್ಯಾನ್, ಹರಿಶ್ಚಂದ್ರ ಪುತ್ರನ್, ಇಬ್ರಾಹಿಂ ಬೆಂಗ್ರೆ, ಅಬ್ದುಲ್ ರಹಿಮಾನ್, ವಿನ್ಸೆಂಟ್, ದಯಾನಂದ ಪುತ್ರನ್, ಉನ್ನಿಕೃಷ್ಣನ್ ನಿಯೋಗದಲ್ಲಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.