ಭಾನುವಾರ, ಮಾರ್ಚ್ 26, 2023
31 °C

ಅವಕಾಶಗಳನ್ನು ಬಾಚಿಕೊಳ್ಳಿ; ಬಿಟ್ಟರೆ ಉಳಿಗಾಲವಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅವಕಾಶಗಳನ್ನು ಬಾಚಿಕೊಳ್ಳಿ; ಬಿಟ್ಟರೆ ಉಳಿಗಾಲವಿಲ್ಲ

ಬೆಂಗಳೂರು:  ಶೈಕ್ಷಣಿಕ ಕ್ಷೇತ್ರ ಇದೀಗ ಅವಕಾಶಗಳ ಕಣಜವಾಗಿದೆ. ಯುವಕರು ಅದನ್ನು ಉಪಯೋಗಿಸಿಕೊಳ್ಳಬೇಕು; ಇಲ್ಲದಿದ್ದರೆ ಉಳಿಗಾಲವಿಲ್ಲ ಎಂದು ಕೇಂದ್ರ ಕಾನೂನು ಸಚಿವ ಎಂ.ವೀರಪ್ಪ ಮೊಯಿಲಿ ಅವರು ಮಂಗಳವಾರ ಇಲ್ಲಿ ನುಡಿದರು.ಬೆಂಗಳೂರು ವಿಶ್ವವಿದ್ಯಾಲಯದ 46ನೇ ವಾರ್ಷಿಕ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ‘ಈ ದಶಕವನ್ನು ಹೊಸ ಸಂಶೋಧನೆಗಳ ದಶಕ ಎಂದು ಕರೆಯಲಾಗಿದೆ. ಐಐಟಿ, ಐಐಎಂಗಳು ಕಳೆದ 45 ವರ್ಷಗಳಲ್ಲಿ ಕೇವಲ ಶೇ 1ರಷ್ಟು ಪ್ರಗತಿ ಸಾಧಿಸಿದ್ದವು. ಐದು ವರ್ಷಗಳ ಹಿಂದೆ 18.500 ಕೋಟಿ ರೂಪಾಯಿಗಳ ವೆಚ್ಚದಲ್ಲಿ ವಿವಿಧ ವಿ.ವಿ. ಹಾಗೂ ಶೈಕ್ಷಣಿಕ ಸಂಸ್ಥೆಗಳ ಕಾಯಕಲ್ಪಕ್ಕೆ ನಿರ್ಧರಿಸಿದ್ದರಿಂದ ಪ್ರಗತಿಯ ದರ ಶೇ 54ಕ್ಕೆ ಹೆಚ್ಚಳವಾಗಿದೆ’ ಎಂದು ವಿವರಿಸಿದರು.‘ಈಗ ಅವಕಾಶಗಳು ಪ್ರವಾಹದಂತೆ ಮುನ್ನುಗ್ಗುತ್ತಿದ್ದು, ಅವುಗಳ ಸಮರ್ಥ ಬಳಕೆಯಾಗಬೇಕು. ಆಗ ಯುವಕರು ಹೆಮ್ಮರವಾಗಲು ಸಾಧ್ಯ. ಇಲ್ಲದಿದ್ದರೆ ಬೋನ್ಸಾಯ್ ಮರದಂತೆ ಕುಬ್ಜ ಬೆಳವಣಿಗೆ ಹೊಂದಬೇಕಾಗುತ್ತದೆ. ವಿ.ವಿ.ಯ ವಿವಿಧ ನಿಕಾಯಗಳ ಮುಖ್ಯಸ್ಥರೂ ಕೂಡ ತಮ್ಮಲ್ಲಿದ್ದ ವಿದ್ಯೆಯನ್ನು ಧಾರೆಎರೆಯಬೇಕು’ ಎಂದು ಸಲಹೆ ನೀಡಿದರು.ಯುವಿಸಿಇಗೆ 100 ಕೋಟಿ: ‘ಬೆಂಗಳೂರು ವಿ.ವಿ. ವ್ಯಾಪ್ತಿಗೊಳಪಡುವ ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜು (ಯುವಿಸಿಇ) ಜಾಗತಿಕ ಮಟ್ಟದ ಸಂಸ್ಥೆಯನ್ನಾಗಿ ಅಭಿವೃದ್ಧಿಪಡಿಸಲು ರೂ. 100 ಕೋಟಿ ಬಿಡುಗಡೆ ಮಾಡುವಂತೆ ಕೋರಿ ಪ್ರಧಾನಮಂತ್ರಿ ಮನಮೋಹನ್‌ಸಿಂಗ್ ಅವರಿಗೆ ಪತ್ರ ಬರೆದಿದ್ದೇನೆ’ ಎಂದು ಸಚಿವರು ತಿಳಿಸಿದರು.ಬೆಂಗಳೂರು ವಿ.ವಿ.ಯು ಈಚೆಗೆ ಪರಿಚಯಿಸಿದ ಆನ್‌ಲೈನ್ ಘಟಿಕೋತ್ಸವ ಪ್ರಮಾಣಪತ್ರ ಸೇರಿದಂತೆ ವಿವಿಧ ಕ್ರಮಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದ ಅವರು, ‘ಈ ಎಲ್ಲ ಕಾರ್ಯಗಳಿಗೆ ಒತ್ತಾಸೆಯಾಗಿ ನಿಂತ ಕುಲಪತಿ ಡಾ.ಎನ್.ಪ್ರಭುದೇವ್ ಅವರು ಇತರರಿಗಿಂತ ಭಿನ್ನ’ ಎಂದು ಹೊಗಳಿದರು. ತಾವು ಕೂಡ ಬೆಂಗಳೂರು ವಿ.ವಿ.ಯಲ್ಲೇ ಕಾನೂನು ಪದವಿ ಪಡೆದಿರುವುದರಿಂದ ವಿ.ವಿ.ಯ ಹಳೆಯ ವಿದ್ಯಾರ್ಥಿ ಎಂದು ಹೇಳುವುದನ್ನೂ ಅವರು ಮರೆಯಲಿಲ್ಲ.ವಿ.ವಿ.ಗೆ ಹಣದ ಕೊರತೆ?: ಒಂದೆಡೆ ಸಚಿವ ಮೊಯಿಲಿ ಅವರು ಉನ್ನತ ಶಿಕ್ಷಣಕ್ಕೆ ನೀಡಿರುವ ಹಣಕಾಸು ನೆರವಿನ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರೆ, ಮತ್ತೊಂದೆಡೆ ಕುಲಪತಿ ಡಾ.ಎನ್.ಪ್ರಭುದೇವ್ ಅವರು ವಿ.ವಿ. ಎದುರಿಸುತ್ತಿರುವ ಹಣಕಾಸು ಕೊರತೆಯನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು. ಕಳೆದ ಎರಡು ದಶಕಗಳಲ್ಲಿ ಉನ್ನತ ಶಿಕ್ಷಣವು ಸತತವಾಗಿ ಸಂಪನ್ಮೂಲ ಕೊರತೆಯನ್ನು ಎದುರಿಸುತ್ತಿದೆ. ಶಿಕ್ಷಣ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಹಣ ಮೀಸಲಿಡುವ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ವಿದ್ಯಾರ್ಥಿ ಶುಲ್ಕದ ಮೇಲೆಯೇ ನಾವು ಅವಲಂಬನೆಯಾಗಬೇಕಿದೆ. ಈ ಮಾತನ್ನು ನನ್ನ ವೈಯಕ್ತಿಕ ಅನುಭವದಿಂದ ಹೇಳುತ್ತಿದ್ದೇನೆ. ಇದು ವಾಸ್ತವ ಎಂದು ಒತ್ತಿ ಹೇಳಿದರು. ಮತ್ತೊಂದು ಸವಾಲೆಂದರೆ ಪ್ರತಿವರ್ಷ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಆದರೆ ಸರ್ಕಾರ ನೀಡುವ ಕಡಿಮೆ ಹಣದಲ್ಲೇ ಶಿಕ್ಷಣ ನೀಡಬೇಕಾದ ಪರಿಸ್ಥಿತಿ ಬಂದೊದಗಿದೆ ಎಂದು ವಿಷಾದಿಸಿದರು. ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್.ಆಚಾರ್ಯ ಅವರು ಘಟಿಕೋತ್ಸವಕ್ಕೆ ಗೈರುಹಾಜರಾಗಿದ್ದರು.ಔತಣಕೂಟದ ಹಣ ಚಿನ್ನಕ್ಕೆ: ಕಳೆದ ಬಾರಿ ರ್ಯಾಂಕ್ ವಿಜೇತರಿಗೆ, ಚಿನ್ನದ ದರ ದುಬಾರಿಯಾಗಿದೆ ಎಂದು ಕಾರಣ ನೀಡಿ ವಿವಿಧ ದತ್ತಿಗಳ ಬಡ್ಡಿ ಹಣವನ್ನು ಚೆಕ್ ಮೂಲಕ ನೀಡಿತ್ತು. ಆದರೆ ಕಳೆದ ತಿಂಗಳು ನಡೆದ ವಿ.ವಿ.ಅಕಾಡೆಮಿಕ್ ಕೌನ್ಸಿಲ್ ಸಭೆಯಲ್ಲಿ ಈ ನಿರ್ಧಾರ ಬದಲಿಸಿ ಮತ್ತೆ ಚಿನ್ನದ ಪದಕ ನೀಡಲು ನಿರ್ಧರಿಸಿತ್ತು. ಅಂತೆಯೇ ಚಿನ್ನದ ಪದಕ ನೀಡಿದ್ದು, ಮಂಗಳವಾರ ರಾತ್ರಿ ನಡೆಯಬೇಕಿದ್ದ ಔತಣಕೂಟವನ್ನು ರದ್ದುಪಡಿಸಿ ಆ ಹಣವನ್ನು ಇದಕ್ಕೆ ಬಳಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.