ಬುಧವಾರ, ಡಿಸೆಂಬರ್ 11, 2019
20 °C

ಅವಕಾಶಗಳ ಸದುಪಯೋಗಕ್ಕೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅವಕಾಶಗಳ ಸದುಪಯೋಗಕ್ಕೆ ಸಲಹೆ

ಗುಲ್ಬರ್ಗ: ಜಾಗತಿಕ ಮಟ್ಟದಲ್ಲಿ ಭಾರತ ಮಿಂಚುತ್ತಿರುವುದಕ್ಕೆ ಯುವಶಕ್ತಿಯೇ ಕಾರಣವಾಗಿದ್ದು, ಅವರು ತಮಗೆ ದೊರೆತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಮುಂದೆ ಬರಬೇಕು ಎಂದು ಖ್ಯಾತ ವಿಜ್ಞಾನಿ ಪ್ರೊ. ಗೋವರ್ಧನ ಮೆಹ್ತಾ ತಿಳಿಸಿದರು.ನಗರದ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವ ಸಮಾರಂಭದಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಸ್ವೀಕರಿಸಿ ಮಾತನಾಡಿದರು.ದೇಶಕ್ಕೆ ಬಂದೊದಗಿದ್ದ ಆರ್ಥಿಕ ಬಿಕ್ಕಟ್ಟನ್ನು ಸಮರ್ಥವಾಗಿ ಎದುರಿಸಿ ಅದಕ್ಕೆ ಸೂಕ್ತ ಪರಿಹಾರ ಕಂಡುಕೊಂಡಿರುವ ಭಾರತ ವಿಶ್ವಮಟ್ಟದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿದೆ. ಮಾಹಿತಿ ಮತ್ತು ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಇಡೀ ಜಗತ್ತು ಕಿರಿದಾಗಿದೆ. ಅವಕಾಶಗಳಿಗಾಗಿ ಕಾದು ಕುಳಿತುಕೊಳ್ಳದೆ, ಕಠಿಣ ಪರಿಶ್ರಮ, ಕೌಶಲ ಮತ್ತು ತ್ಯಾಗದ ಮೂಲಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಅತ್ಯಂತ ಕಡಿಮೆ ಅವಧಿಯಲ್ಲೇ ಶ್ರೇಷ್ಠ ಸಾಧನೆ ಮಾಡಿರುವ ಕರ್ನಾಟಕದ ಏಕೈಕ ಕೇಂದ್ರೀಯ ವಿಶ್ವವಿದ್ಯಾಲಯದ ಸಾಧನೆ ನಿಜಕ್ಕೂ ಶ್ಲಾಘನೀಯ ಎಂದು ಬಣ್ಣಿಸಿದರು.ಕುಲಪತಿ ಪ್ರೊ.ಎ.ಎಂ. ಪಠಾಣ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಅನೂಪ್ ಪೂಜಾರಿ, ಪರೀಕ್ಷಾಂಗ ನಿರ್ದೇಶಕ ಡಾ. ಅಲಿರಾಜ ಮುಸ್ಲಿ, ಸಮ ಕುಲಾಧಿಪತಿ ಪ್ರೊ. ಎಸ್. ಚಂದ್ರಶೇಖರ ವೇದಿಕೆಯಲ್ಲಿದ್ದರು.ಪ್ರಿಯಾ ಕಾರ್ಯಕ್ರಮ ನಿರೂಪಿಸಿದರು. ಅಪ್ಪಗೆರೆ ಸೋಮಶೇಖರ ವಂದಿಸಿದರು. ವಿದ್ಯಾರ್ಥಿಗಳು ಹಾಗೂ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)