ಭಾನುವಾರ, ಜನವರಿ 19, 2020
26 °C

ಅವಕಾಶ ನೀಡಿ ಜೊತೆಗೂಡಿ

ಡಾ. ಎಚ್.ಬಿ.ಚಂದ್ರಶೇಖರ್ Updated:

ಅಕ್ಷರ ಗಾತ್ರ : | |

ಅವಕಾಶ ನೀಡಿ ಜೊತೆಗೂಡಿ

ಬಾಡಿದ ಮುಖ, ನಿರಾಸೆ ಹೊತ್ತ ಕಂಗಳು. ಮಗನ ಭವಿಷ್ಯವನ್ನು ಉಜ್ವಲಗೊಳಿಸಲು ನಗರದ ಪ್ರತಿಷ್ಠಿತ ಶಾಲೆಯಲ್ಲಿ ಪ್ರವೇಶ ದೊರಕಿಸಬೇಕೆಂಬ ಆ ಪೋಷಕರ ಹಂಬಲ  ಈಡೇರಲಿಲ್ಲ. ಶ್ರವಣ ತೊಂದರೆ ಇರುವ ಸಂತೋಷನಿಗೆ ಆ ಶಾಲೆ ಪ್ರವೇಶ ನಿರಾಕರಿಸಿತ್ತು. ಹೀಗೆ ಸಂತೋಷನಂತೆ ವಿವಿಧ ರೀತಿಯ ನ್ಯೂನತೆ ಇರುವ  ಸಾವಿರಾರು ಕಂದಮ್ಮಗಳು ಹೆಚ್ಚಿನ ಶಾಲೆಗಳಲ್ಲಿ ಪ್ರವೇಶ ಪಡೆಯುವುದು ಕನಸಿನ ಮಾತೇ ಸರಿ.ಸರ್ಕಾರಿ ಶಾಲೆಗಳಲ್ಲಿ ಅಂಗವಿಕಲರೂ ಸೇರಿದಂತೆ ಎಲ್ಲ ಮಕ್ಕಳಿಗೆ ಮುಕ್ತ ಪ್ರವೇಶವಿದೆ. ಆದರೆ ಹೆಚ್ಚಿನ ಖಾಸಗಿ ಶಾಲೆಗಳು ಇಂತಹವರಿಗೆ ಪ್ರವೇಶ ನೀಡುವು­ದಿಲ್ಲ. ಒಂದು ವೇಳೆ ಪ್ರವೇಶ ಪಡೆದರೂ ತನ್ನ ಅಂಗವೈಕಲ್ಯ ಅಥವಾ ದೈಹಿಕ/ ಮಾನಸಿಕ ಮಿತಿಯ ಕಾರಣದಿಂದ ಈ ಮಕ್ಕಳು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದಾರೆ.ಸಂಪೂರ್ಣ ದೃಷ್ಟಿ ಇರದ, ಮಾತು ಬಾರದ ಅಥವಾ ಕೇಳಿಸಿಕೊಳ್ಳಲು ಸಾಧ್ಯವಾಗದ ಮಕ್ಕಳನ್ನು ಅದು ಹೇಗೆ ಸಾಮಾನ್ಯ ಶಾಲೆಗಳಲ್ಲಿ ಸೇರಿಸಿಕೊಂಡು ಶಿಕ್ಷಣ ನೀಡುವುದು ಎಂದು ನಮ್ಮಲ್ಲಿ ಸಂಶಯ ಮೂಡಬಹುದು. ಅವರನ್ನು ವಿಶೇಷ ಶಾಲೆಗಳಿಗೆ ಕಳಿಸಿದರೆ ಪರಿಣಾಮಕಾರಿಯಾಗಿ ಕಲಿಯಬಲ್ಲರು ಎಂದು ನಾವು ಭಾವಿಸಬಹುದು. ಆದರೆ ಅಂಗವಿಕಲರು ಇತರ ಮಕ್ಕಳೊಂದಿಗೆ ಬೆರೆತು ಕಲಿಯುವುದರಿಂದ ಹೆಚ್ಚು ಉತ್ಸಾಹ ಹಾಗೂ ಪರಿಣಾಮಕಾರಿಯಾಗಿ ಕಲಿಯುತ್ತಾರೆ ಎಂಬುದನ್ನು ಹೆಚ್ಚಿನ ಸಂಶೋಧನೆಗಳು ದೃಢಪಡಿಸಿವೆ.ಇಲ್ಲಿ ಮುಖ್ಯವಾದ ಅಂಶವೆಂದರೆ, ಅಂಗವಿಕಲರ  ನ್ಯೂನತೆಯ ಪ್ರಮಾಣವನ್ನು ಅಳೆದು, ಅವರಿಗೆ ಅಗತ್ಯವಾದ ಸೂಕ್ತ ಸಾಧನ ಮತ್ತು ಸಲಕರಣೆಗಳನ್ನು (ದೃಷ್ಟಿಹೀನರಿಗೆ ಬ್ರೈಲ್ ಪುಸ್ತಕ, ಶ್ರವಣ ದೋಷ ಇರುವವರಿಗೆ ಕೇಳಿಸಿಕೊಳ್ಳುವ ಉಪಕರಣಗಳು, ಆಂಗಿಕ ಸಮಸ್ಯೆ ಇರುವವರಿಗೆ ಗಾಲಿ ಕುರ್ಚಿ ಇತ್ಯಾದಿ) ನೀಡುವುದರ ಜೊತೆಗೆ ಅವರಿಗೆ ಇತರ ಮಕ್ಕಳೊಂದಿಗೆ ಹೇಗೆ ಕಲಿಸಬೇಕೆಂಬ ಬಗ್ಗೆ ಶಿಕ್ಷಕರಿಗೆ ಅಗತ್ಯ ತರಬೇತಿಯನ್ನು ನೀಡಿದರೆ ಸಾಮಾನ್ಯ ತರಗತಿಗಳಲ್ಲೇ ಅವರನ್ನು ಸಮನ್ವಯಗೊಳಿಸಿ ಕಲಿಸಲು ಸಾಧ್ಯವಿದೆ.ಕೆಲವು ವಿಧದ ಅಂಗವಿಕಲರು ಸಾಮಾನ್ಯ ಮಕ್ಕಳಿಗೆ ಸರಿಸಮಾನವಾಗಿ ಕಲಿಯದೇ ಇರಬಹುದು. ಆದರೆ ಸಾಮಾನ್ಯ ತರಗತಿಗಳಲ್ಲಿ ಅಂತಹವರನ್ನು ಸೇರಿಸಿಕೊಂಡು ಕಲಿಸುವುದರಿಂದ ಜೀವನ ಕೌಶಲಗಳನ್ನು ಕಲಿಯುವುದರ ಜೊತೆಗೆ ಅವರು ಜೀವನೋತ್ಸಾಹವನ್ನು ಪಡೆದುಕೊಳ್ಳುತ್ತಾರೆ. ಇದರಿಂದ ಸಮಾಜದ ಮುಖ್ಯವಾಹಿನಿಗೆ ಬರಲು ಅವರಿಗೆ ಸಾಧ್ಯವಾಗುತ್ತದೆ. ಅದಿಲ್ಲದೆ ಅಂಗವಿಕಲರನ್ನು  ಪ್ರತ್ಯೇಕವಾದ ವಿಶೇಷ ಶಾಲೆಗಳಲ್ಲಿ ಮಾತ್ರ ದಾಖಲಿಸಿ ಕಲಿಸುವುದರಿಂದ ಅವರನ್ನು ಪ್ರತ್ಯೇಕಿಸಿದಂತೆ ಆಗುತ್ತದೆ. ಅಷ್ಟೇ ಅಲ್ಲ ಸಮಾಜದ ಮುಖ್ಯ ಸ್ತರದಿಂದ ಅವರನ್ನು ದೂರ ಇಟ್ಟಂತೆ ಆಗುತ್ತದೆ.ಇದು ಕಾನೂನಿನ ದೃಷ್ಟಿಯಿಂದ ಅಪರಾಧ, ಜೊತೆಗೆ ಅಮಾನವೀಯ ಸಹ. ಅವಶ್ಯ ಇದ್ದಲ್ಲಿ ಅಲ್ಪ ಅವಧಿಯವರೆಗೆ ಅಂಗವಿಕಲರು  ವಿಶೇಷ ಕೌಶಲಗಳ ಕಲಿಕೆಗೆ (ಬ್ರೈಲ್ ಲಿಪಿ ಕಲಿಕೆ, ಮಾತಿನ ಚಿಕಿತ್ಸೆ...) ಶಾಲೆಯಲ್ಲೇ ಸ್ಥಾಪಿಸಿರಬಹುದಾದ ಸಂಪನ್ಮೂಲ ಕೊಠಡಿಗಳಿಗೆ ತೆರಳಿ ತರಬೇತಿ ಪಡೆಯಬಹುದು. ಆದರೆ ಅವರನ್ನು ಸಾಮಾನ್ಯ ತರಗತಿಗಳಲ್ಲಿ ದಾಖಲಿಸಿ ಎಲ್ಲ ಮಕ್ಕಳಂತೆ ಶಿಕ್ಷಣ ನೀಡುವ ಸಮನ್ವಯ ಶಿಕ್ಷಣವು ಪ್ರಸ್ತುತ ಪ್ರಚಲಿತದಲ್ಲಿದೆ.ಇಲ್ಲಿ ಇನ್ನೊಂದು ಪ್ರಮುಖ ಆಯಾಮವಿದೆ. ಅಂಗವಿಕಲ ಮಕ್ಕಳು ಸಾಮಾನ್ಯ ಮಕ್ಕಳ ಜೊತೆ ಕಲಿಯುವುದರಿಂದ ಸಾಮಾನ್ಯ ಮಕ್ಕಳು ಅಂತಹವರನ್ನು ಅರ್ಥ ಮಾಡಿಕೊಳ್ಳಲು, ಅವರೊಂದಿಗೆ ಒಡನಾಡಲು, ಮುಕ್ತವಾಗಿ ಬೆರೆಯಲು ಅವಕಾಶ ದೊರೆಯುತ್ತದೆ. ಇದು ಭವಿಷ್ಯದಲ್ಲಿ ಸಾಮಾನ್ಯರು ಅಂಗವಿಕಲರೊಂದಿಗೆ ಸಹಚರ್ಯ ಸಾಧಿಸಲು,  ಆರೋಗ್ಯಕರ, ಸಮಾನ ಸಮಾಜದ ಸೃಷ್ಟಿಗೆ ಉತ್ತಮ ವೇದಿಕೆ ಒದಗಿಸಬಲ್ಲದು.ಸರ್ಕಾರದ ಮಟ್ಟದಲ್ಲಿ ಇದಕ್ಕೆ ಪೂರಕವಾದ ಕಾರ್ಯಕ್ರಮಗಳು ಜಾರಿಯಲ್ಲಿವೆ. ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ಪ್ರಾಥಮಿಕ ಶಾಲೆಗಳಲ್ಲಿ,  9ರಿಂದ 12ನೇ ತರಗತಿಯವರೆಗೆ ಪ್ರೌಢ ಹಂತದಲ್ಲಿ ಅಂಗವಿಕಲರಿಗಾಗಿ ಸಮನ್ವಯ ಶಿಕ್ಷಣ ಕಾರ್ಯಕ್ರಮ ಜಾರಿಯಲ್ಲಿದೆ. ಸರ್ವ ಶಿಕ್ಷಣ ಅಭಿಯಾನದಡಿ ಪ್ರತಿ ವರ್ಷ ಅಂಗವಿಕಲ  ಮಕ್ಕಳನ್ನು ಗುರುತಿಸಲು ಸಮೀಕ್ಷೆ ಹಮ್ಮಿಕೊಳ್ಳಲಾಗುತ್ತಿದೆ. 2013– -14ನೇ ಸಾಲಿನಲ್ಲಿ ರಾಜ್ಯದಲ್ಲಿ ಹತ್ತು ವಿವಿಧ ವರ್ಗಗಳಡಿ (ಸಂಪೂರ್ಣ ದೃಷ್ಟಿದೋಷ, ಭಾಗಶಃ ದೃಷ್ಟಿ ದೋಷ, ಶ್ರವಣ ದೋಷ, ಮಾತಿನ ದೋಷ, ಮೂಳೆ ಸಂಬಂಧಿ ದೋಷ, ಬಹುವೈಕಲ್ಯ, ಬುದ್ಧಿಮಾಂದ್ಯತೆ, ಕಲಿಕಾ ದೋಷ, ಮೆದುಳಿನ ಪಾರ್ಶ್ವವಾಯು, ಆಟಿಸಂ ಸ್ಪೆಕ್ಟ್ರಮ್ ದೋಷ) ಒಟ್ಟು 1.27 ಲಕ್ಷ ಅಂಗವಿಕಲ  ಮಕ್ಕಳನ್ನು ಗುರುತಿಸಲಾಗಿದೆ. ಹೀಗೆ ಗುರುತಿಸಿದ ಮಕ್ಕಳಿಗೆ ತಾಲ್ಲೂಕು ಹಂತದಲ್ಲಿ ವೈದ್ಯಕೀಯ ಶಿಬಿರಗಳನ್ನು ಆಯೋಜಿಸಿ, ಅವರಲ್ಲಿರುವ ನ್ಯೂನತೆಯ ಪ್ರಮಾಣವನ್ನು ಅಳೆದು, ಅಗತ್ಯವಾದ ಸಾಧನ -ಸಲಕರಣೆಗಳನ್ನು ಒದಗಿಸಲಾಗುತ್ತಿದೆ.ಈ ಮಕ್ಕಳನ್ನು ಇತರ ಮಕ್ಕಳೊಂದಿಗೆ ಹೇಗೆ ಸಮನ್ವಯಗೊಳಿಸಿ ಕಲಿಸಬಹುದೆಂಬ ಬಗ್ಗೆ ಶಿಕ್ಷಕರಿಗೆ ತರಬೇತಿ ಹಾಗೂ ಪೋಷಕರಿಗೆ ಆಪ್ತ ಸಮಾಲೋಚನೆಯನ್ನು ನೀಡಲಾಗುತ್ತಿದೆ.  ತೀವ್ರ ನ್ಯೂನತೆ ಇದ್ದು ಶಾಲೆಗೆ ಬರಲಾಗದವರಿಗೆ ಕ್ಲಸ್ಟರ್‌ ಹಂತದಲ್ಲಿ ಶಾಲಾ ಸಿದ್ಧತಾ ಶಿಬಿರಗಳನ್ನು ಆಯೋಜಿಸಿ, ಶಾಲಾ ಪೂರ್ವ ತರಬೇತಿಯನ್ನು ನೀಡಿ ಸಮನ್ವಯಗೊಳಿಸಲಾಗುತ್ತಿದೆ. ಕೆಲವು ಪ್ರಕರಣಗಳಲ್ಲಿ ಇಂತಹ ಮಕ್ಕಳನ್ನು ಹತ್ತಿರದ ಶಾಲೆಗಳಿಗೆ ದಾಖಲಿಸಿ, ಸ್ವಯಂ ಸೇವಕರಿಂದ ಅವರ ಮನೆಯಲ್ಲೇ ಶಿಕ್ಷಣ ನೀಡುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಈ ಪ್ರಯತ್ನಗಳ ಫಲವಾಗಿ ರಾಜ್ಯದಲ್ಲಿ ಒಂದು ಲಕ್ಷಕ್ಕೂ ಅಧಿಕ ಅಂಗವಿಕಲ ಮಕ್ಕಳು ಕಲಿಯುವಂತೆ ಆಗಿದೆ.ಇದೆಲ್ಲದರ ನಡುವೆಯೂ, ಅಂಗವಿಕಲ ಮಕ್ಕಳು ಶಾಲೆಗಳಿಗೆ ಸರಾಗವಾಗಿ ಬರಲು ಅನುಕೂಲವಾಗುವಂತೆ ಎಲ್ಲ  ಶಾಲೆಗಳಲ್ಲಿ ಇಳಿಜಾರು ಹಾಗೂ ನಗರ ಪ್ರದೇಶಗಳಲ್ಲಿರುವ ಬಹುಮಹಡಿ  ಶಾಲೆಗಳಲ್ಲಿ ಲಿಫ್ಟ್ ಸೌಲಭ್ಯ ಇರುವಂತೆ ಗಮನ ಹರಿಸಬೇಕಿದೆ.  ಅಂಗವಿಕಲರಿಗಾಗಿ  ವಿಶೇಷ ವ್ಯವಸ್ಥೆ ಹೊಂದಿದ ಶೌಚಾಲಯಗಳನ್ನು ನಿರ್ಮಿಸಬೇಕಿದೆ. ಇಂತಹ ಮಕ್ಕಳಿಗೆ ಅವರ ನ್ಯೂನತೆಗೆ ತಕ್ಕಂತೆ ಅಗತ್ಯವಾದ ಸಾಧನ ಸಲಕರಣೆಗಳನ್ನು ಒದಗಿಸುವುದರ ಜೊತೆಗೆ, ಶಾಲೆಯಲ್ಲಿ ಸಂಪನ್ಮೂಲ ಕೊಠಡಿ ಸ್ಥಾಪಿಸಬೇಕಾಗಿದೆ.ಎಲ್ಲಕ್ಕಿಂತ ಮುಖ್ಯವಾಗಿ ಖಾಸಗಿ ಶಾಲೆಗಳೂ ಸೇರಿದಂತೆ ಶಿಕ್ಷಕರ ಮನೋಭಾವದಲ್ಲಿ ಬದಲಾವಣೆ ತರಲು ಹಾಗೂ ಸಾಮಾನ್ಯ ತರಗತಿಗಳಲ್ಲಿ ಅವರನ್ನು ಸಮನ್ವಯಗೊಳಿಸುವ ವಿಧಾನಗಳ ಬಗ್ಗೆ ಅಗತ್ಯವಾದ ತರಬೇತಿಗಳನ್ನು ಆಯೋಜಿಸಬೇಕಿದೆ. ಜೊತೆಗೆ ಪೋಷಕರು, ಎಸ್.ಡಿ.ಎಂ.ಸಿ. ಸದಸ್ಯರು ಮತ್ತು ಖಾಸಗಿ ಶಾಲೆಗಳ ಆಡಳಿತ ಮಂಡಳಿ ಸದಸ್ಯರಿಗೆ ಆಪ್ತ ಸಮಾಲೋಚನೆ ಅಥವಾ ಜಾಗೃತಿ ಶಿಬಿರಗಳನ್ನು ಏರ್ಪಡಿಸಿದರೆ ಅವರಲ್ಲಿ ಅಗತ್ಯ ಬದಲಾವಣೆ ತರಲು ಸಾಧ್ಯ.ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆಯ ಪ್ರಕಾರ, ದೈಹಿಕ ಅಂಗವೈಕಲ್ಯವೂ ಒಳಗೊಂಡಂತೆ ಯಾವುದೇ ಕಾರಣಗಳಿಗಾಗಿ ಯಾವುದೇ ರೀತಿಯ ಮಕ್ಕಳಿಗೆ ಶಾಲೆಗಳು ಪ್ರವೇಶವನ್ನು ನಿರಾಕರಿಸುವಂತಿಲ್ಲ. ಯಾವುದೇ ಶಾಲೆಯಲ್ಲಿ ಪ್ರವೇಶ ಪಡೆದು ಕಲಿಯುವುದು ಪ್ರತಿ ಅಂಗವಿಕಲ ಮಗುವಿನ ಹಕ್ಕು. ಅದೇ ರೀತಿ ಯಾವುದೇ ರೀತಿಯ ಅಂಗವಿಕಲ  ಮಕ್ಕಳನ್ನು ಒಪ್ಪಿಕೊಂಡು ಪ್ರವೇಶ ದೊರಕಿಸುವುದು ಪ್ರತಿ ಶಾಲೆಯ ಕರ್ತವ್ಯ.ಅಂಗವಿಕಲ ಮಕ್ಕಳಿಗೆ ಬೇಕಿರುವುದು ಅನುಕಂಪ­ವಲ್ಲ, ಎಲ್ಲರಂತೆ ಅವರೂ ಇರುವ ಅವಕಾಶ. ಪ್ರತಿ ಮಗುವೂ ವಿಶಿಷ್ಟ ಹಾಗೂ ಅಮೂಲ್ಯ. ಈ ನಿಟ್ಟಿನಲ್ಲಿ ಎಲ್ಲ ಮಕ್ಕಳೂ ಜೊತೆಗೂಡಿ ಕಲಿಯುವಂತೆ ಕಾರ್ಯೋ­ನ್ಮುಖ ಆಗುವುದು ನಾಗರಿಕ ಸಮಾಜದ ಕರ್ತವ್ಯ ಸಹ.ಮಹತ್ವದ ಮೈಲುಗಲ್ಲು

ವಿಶ್ವದ ಸುಮಾರು 9.3 ಕೋಟಿ ಮಕ್ಕಳು ಒಂದಲ್ಲ ಒಂದು ಬಗೆಯ ಅಂಗವೈಕಲ್ಯದಿಂದ ಬಳಲುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ತಮ್ಮ ಓರಗೆಯ ಮಕ್ಕಳು ಪಡೆಯುತ್ತಿರುವ ಶಿಕ್ಷಣ ಹಾಗೂ ಹಕ್ಕುಗಳಿಂದ ವಂಚಿತರಾಗಿದ್ದಾರೆ.

ಒಟ್ಟಾರೆ ಶಿಕ್ಷಣ ವಂಚಿತ ಮಕ್ಕಳಲ್ಲಿ ಹೆಚ್ಚಿನವರು ಅಂಗವಿಕಲರು, ಬಡತನದ ಬೇಗೆಯಲ್ಲಿರುವ ಮಕ್ಕಳು ಮತ್ತು ಬಾಲಕಿಯರು. ಇವರೂ ಸೇರಿದಂತೆ ಎಲ್ಲ ಪ್ರಕಾರದ ಮಕ್ಕಳನ್ನೂ ಶೈಕ್ಷಣಿಕ ಪರಿಧಿಯೊಳಗೆ ತರುವ ನಿಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ‘ಎಲ್ಲರಿಗೂ ಶಿಕ್ಷಣ’ ಎಂಬ ಮಹತ್ವದ ಘೋಷಣೆ ಹೊರಡಿಸಿದ ‘ಜೊಮ್ತಿಯನ್ ವಿಶ್ವ ಸಮಾವೇಶ’ವು (1990) ಮಹತ್ವದ ಮೈಲುಗಲ್ಲಾಗಿದೆ.ವಿಶೇಷ ಅವಶ್ಯಕತೆಗಳ ಶಿಕ್ಷಣ ಕುರಿತಂತೆ ನಡೆದ ‘ಸಾಲಮಂಕಾ ವಿಶ್ವ ಸಮಾವೇಶ’ವು (1994) ಎಲ್ಲ ಮಕ್ಕಳಿಗೂ ಶಿಕ್ಷಣದ ಘೋಷಣೆಗೆ ಹೆಚ್ಚು ಒತ್ತು ನೀಡಿತು. ಬೀದಿ ಮಕ್ಕಳು ಹಾಗೂ ಅಂಗವಿಕಲರು ಸೇರಿದಂತೆ ಎಲ್ಲ ಮಕ್ಕಳಿಗೆ ಶಾಲೆಗಳು ಮುಕ್ತ ಅವಕಾಶ ಕಲ್ಪಿಸಬೇಕೆಂಬ ನಿರ್ಣಯವನ್ನು ಸಮಾವೇಶ ತೆಗೆದುಕೊಂಡಿತು.

ಪ್ರತಿಕ್ರಿಯಿಸಿ (+)