ಶುಕ್ರವಾರ, ಜೂನ್ 18, 2021
23 °C

ಅವಕಾಶ ಬಳಸಿಕೊಳ್ಳುವರೇ ಕೊಹ್ಲಿ?

ಪ್ರಮೋದ್‌ ಜಿ.ಕೆ. Updated:

ಅಕ್ಷರ ಗಾತ್ರ : | |

‘ಬದ್ಧತೆ ಮೈಗೂಡಿಸಿಕೊಳ್ಳುವುದು ಮತ್ತು ಕಠಿಣ ನಿರ್ಧಾರಗಳನ್ನು ತಳೆಯುವುದು ನಾಯಕನಾದವನಿಗೆ ಅನಿವಾರ್ಯ. ಈ ಎರಡೂ ಗುಣಗಳು ವಿರಾಟ್‌ ಕೊಹ್ಲಿಯಲ್ಲಿವೆ. ಆದ್ದರಿಂದ ಅವರು ಪೂರ್ಣಾವಧಿ ನಾಯಕರಾಗಲು ಸೂಕ್ತವಾದ ವ್ಯಕ್ತಿ...’ -ಆಸ್ಟ್ರೇಲಿಯಾದ ಮಾಜಿ ನಾಯಕ ಇಯಾನ್‌ ಚಾಪೆಲ್‌ ಹೇಳಿದ ಮಾತಿದು. ಅವರ ಮಾತಿನಲ್ಲಿಯೂ ಅರ್ಥವಿದೆ.ಕೊಹ್ಲಿ ಕೇವಲ ಬ್ಯಾಟ್ಸ್‌ಮನ್‌ ಆಗಿ ಅಲ್ಲ ನಾಯಕರಾಗಿಯೂ ಯಶಸ್ಸಿನ ಹಾದಿಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಪ್ರಮುಖ ಬ್ಯಾಟ್ಸ್‌ಮನ್‌ಗಳು ವಿಫಲರಾದಾಗ ಏಕಾಂಗಿಯಾಗಿ ಗೆಲುವು ತಂದುಕೊಡಬಲ್ಲ ಸಾಮರ್ಥ್ಯ ಅವರಿಗಿದೆ. ಏಷ್ಯಾಕಪ್‌ನ ಬಾಂಗ್ಲಾದೇಶ ಎದುರಿನ ಪಂದ್ಯದಲ್ಲಿ ತೋರಿದ ಪ್ರದರ್ಶನವೇ ಇದಕ್ಕೆ ಸಾಕ್ಷಿ.ಟೆಸ್ಟ್‌ ಮತ್ತು ಏಕದಿನ ತಂಡಗಳಿಗೆ ಪ್ರತ್ಯೇಕ ನಾಯಕರುಗಳನ್ನು ನೇಮಿಸಬೇಕು ಎಂದು ಹಲವು ವರ್ಷಗಳಿಂದ ಕೂಗು ಎದ್ದಿದೆ. ಈ ರೀತಿಯ ವ್ಯವಸ್ಥೆ ಪಾಕಿಸ್ತಾನದಲ್ಲಿದೆ. ಟೆಸ್ಟ್‌್ ಮತ್ತು ಏಕದಿನ ತಂಡಕ್ಕೆ ಮಿಸ್ಬಾ ಉಲ್‌ ಹಕ್‌ ಮತ್ತು ಟ್ವೆಂಟಿ-20 ತಂಡಕ್ಕೆ ಮೊಹಮ್ಮದ್‌ ಹಫೀಜ್‌ ನಾಯಕರು. ಅದೇನೇ ಇರಲಿ, ಭಾರತದಲ್ಲಿ ದೋನಿ ನಂತರ ಪೂರ್ಣಾವಧಿ ನಾಯಕ ಸ್ಥಾನಕ್ಕೆ ಮುಂಚೂಣಿಯಲ್ಲಿರುವ ಹೆಸರು ಕೊಹ್ಲಿ ಅವರದ್ದು.ಇದೇ ಮೊದಲಲ್ಲ

ಕೊಹ್ಲಿ ಭಾರತ ತಂಡಕ್ಕೆ ನಾಯಕರಾಗಿರುವುದು ಇದೇ ಮೊದಲಲ್ಲ. 2013ರಲ್ಲಿ ವೆಸ್ಟ್‌್ ಇಂಡೀಸ್‌ನಲ್ಲಿ ನಡೆದ ಲಂಕಾ, ವಿಂಡೀಸ್‌ ಮತ್ತು ಭಾರತ ನಡುವಿನ ತ್ರಿಕೋನ ಏಕದಿನ ಸರಣಿಗೆ ಮೊದಲ ಸಲ ತಂಡವನ್ನು ಮುನ್ನಡೆಸಿದ್ದರು. ಹೋದ ವರ್ಷದ ಜುಲೈ ಹಾಗೂ ಆಗಸ್ಟ್‌ನಲ್ಲಿ ನಡೆದ ಜಿಂಬಾಬ್ವೆ ಎದುರಿನ ಸರಣಿಯಲ್ಲೂ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತಿದ್ದರು. ಆ ಪ್ರವಾಸದಲ್ಲಿ ಭಾರತ  5-0ರಲ್ಲಿ ಏಕದಿನ ಸರಣಿ ಗೆದ್ದುಕೊಂಡಿತ್ತು.2008ರಲ್ಲಿ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಕೊಹ್ಲಿ ಎರಡೇ ವರ್ಷದಲ್ಲಿ ಉಪನಾಯಕರಾದರು. ಶ್ರೀಲಂಕಾದಲ್ಲಿ ನಡೆದ ಜಿಂಬಾಬ್ವೆ, ಭಾರತ ಮತ್ತು ಲಂಕಾ ನಡುವಿನ ತ್ರಿಕೋನ ಸರಣಿಗೆ ಮೊದಲ ಸಲ ಉಪನಾಯಕನ ಜವಾಬ್ದಾರಿ ಹೊತ್ತರು.ಕೊಹ್ಲಿ ಇದುವರೆಗೂ (ಏಷ್ಯಾಕಪ್‌ನ ಶ್ರೀಲಂಕಾ ಎದುರಿನ ಪಂದ್ಯದ ಅಂತ್ಯಕ್ಕೆ) ಹತ್ತು ಪಂದ್ಯಗಳಿಗೆ ತಂಡವನ್ನು ಮುನ್ನಡೆಸಿದ್ದಾರೆ. ಇದರಲ್ಲಿ ಭಾರತ ಎಂಟರಲ್ಲಿ ಗೆಲುವು ಸಾಧಿಸಿದೆ. ಏಷ್ಯಾಕಪ್‌ನಂಥ ದೊಡ್ಡ ಟೂರ್ನಿಯಲ್ಲಿ ತಂಡದ ನೇತೃತ್ವ ಹೊತ್ತಿರುವ ಕೊಹ್ಲಿ 19 ವರ್ಷದೊಳಗಿನವರ ವಿಶ್ವಕಪ್‌ ತಂಡಕ್ಕೂ ನಾಯಕರಾಗಿ ಯಶಸ್ಸು ಕಂಡಿದ್ದಾರೆ.2008ರಲ್ಲಿ ಇವರ ನಾಯಕತ್ವದಲ್ಲಿ ಭಾರತ ತಂಡ ವಿಶ್ವಕಪ್‌ ಚಾಂಪಿಯನ್‌ ಆಗಿತ್ತು. ಜೊತೆಗೆ ರಾಯಲ್ ಚಾಲೆಂಜರ್ಸ್‌್ ಬೆಂಗಳೂರು ತಂಡಕ್ಕೂ ಕೊಹ್ಲಿಯೇ ಸಾರಥ್ಯ. ನಾಯಕನ ಸ್ಥಾನದ ಜವಾಬ್ದಾರಿಯ ಒತ್ತಡದಲ್ಲಿ ಬ್ಯಾಟಿಂಗ್‌ ಇಲ್ಲವೇ ಬೌಲಿಂಗ್‌ ಮಂಕಾಗುವ ಅಪಾಯ  ವಿರುತ್ತದೆ. ಆದರೆ, ಕೊಹ್ಲಿ ಎಲ್ಲಾ ಒತ್ತಡವನ್ನು ಮೀರಿ ಸಮರ್ಥವಾಗಿ ರನ್‌ ಗಳಿಸುತ್ತಿದ್ದಾರೆ.ಹೋದ ವಾರ ಬಾಂಗ್ಲಾದೇಶ ಎದುರಿನ ಪಂದ್ಯದಲ್ಲಿ ಕೊಹ್ಲಿ ಸಿಡಿಸಿದ ಶತಕ ವಿಶ್ವ ದಾಖಲೆಗೆ ಕಾರಣವಾಗಿದ್ದನ್ನು ಮರೆಯುವಂತಿಲ್ಲ. ಏಕದಿನ ಕ್ರಿಕೆಟ್‌ನಲ್ಲಿ 124 ಇನಿಂಗ್ಸ್‌ಗಳಿಂದ ಅವರು 19 ಶತಕ ಗಳಿಸಿದ್ದಾರೆ. ಇಷ್ಟೇ ಶತಕಗಳನ್ನು ಕಲೆ ಹಾಕಲು ಕ್ರೀಸ್‌ ಗೇಲ್‌ 189 ಇನಿಂಗ್ಸ್‌್ ತೆಗೆದುಕೊಂಡಿದ್ದು ಇದುವರೆಗಿನ ದಾಖಲೆಯಾಗಿತ್ತು.ಬದ್ಧತೆಯ ಪ್ರತಿಬಿಂಬ

ಆಟದ ಬಗ್ಗೆ ಕೊಹ್ಲಿ ಹೊಂದಿರುವ ಬದ್ಧತೆ ಮತ್ತು ಕರಾರುವಾಕ್ಕಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಮನೋಭಾವ ಅವರಿಗೆ ಬೇಗನೆ ಯಶಸ್ಸು ತಂದುಕೊಟ್ಟಿದೆ. ಕೊಹ್ಲಿ ಬದ್ಧತೆಗೆ ಇಲ್ಲೊಂದು ಉದಾಹರಣೆಯಿದೆ. 2006ರಲ್ಲಿ ನಡೆದ ಘಟನೆಯಿದು. ಕರ್ನಾಟಕ ಎದುರಿನ ರಣಜಿ ಪಂದ್ಯದ ಮೂರನೇ ದಿನದಾಟವದು. ಅಂದು ಕೊಹ್ಲಿ ತಂದೆ ಪ್ರೇಮ್‌ ಕೊಹ್ಲಿ ನಿಧನರಾಗಿದ್ದರು. ತಂದೆಯ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡು ಕ್ರೀಡಾಂಗಣಕ್ಕೆ ಮರಳಿದ್ದ ವಿರಾಟ್‌ 90 ರನ್‌ ಗಳಿಸಿದ್ದರು. ದೆಹಲಿಯ ಬ್ಯಾಟ್ಸ್‌ಮನ್‌ ಆಟದ ಬಗ್ಗೆ ಹೊಂದಿರುವ ಬದ್ಧತೆಗೆ ಇದಕ್ಕಿಂತ ಇನ್ನೇನು ಸಾಕ್ಷಿಬೇಕು?ನಾಯಕತ್ವದ ಬಗ್ಗೆ ಕೊಹ್ಲಿ ಅವರನ್ನೊಮ್ಮೆ ಪ್ರಶ್ನಿಸಿದ್ದಾಗ ‘ಗೆದ್ದರೆ ಹೊಗಳುತ್ತಾರೆ. ಸೋತರೆ ತೆಗಳುತ್ತಾರೆ. ಆದ್ದರಿಂದ ನಾಯಕತ್ವದ ಬಗ್ಗೆ ಚಿಂತಿಸಲು ಹೋಗುವುದಿಲ್ಲ. ಪ್ರತಿ ಪಂದ್ಯದಲ್ಲೂ ಚೆನ್ನಾಗಿ ಆಡಬೇಕೆನ್ನುವುದಷ್ಟೇ ನನ್ನ ಗುರಿ’ ಎಂದು ಉತ್ತರ ನೀಡಿದ್ದರು.ಅದೇನೇ ಇರಲಿ, ದೋನಿ ನಂತರ ನಾಯಕ ಸ್ಥಾನ ನಿಭಾಯಿಸಬಲ್ಲ ಸಾಮರ್ಥ್ಯ ಹೊಂದಿರುವುದು ಕೊಹ್ಲಿ ಮಾತ್ರ. ದೋನಿ ಕೂಡಾ ಯಶಸ್ವಿ ನಾಯಕ. ರಾಂಚಿಯ ಆಟಗಾರನ ನಾಯಕತ್ವದಲ್ಲಿ ಭಾರತ ತಂಡ ಏಕದಿನ, ಟ್ವೆಂಟಿ-20 ವಿಶ್ವಕಪ್‌ ಮತ್ತು ಚಾಂಪಿಯನ್ಸ್‌್ ಟ್ರೋಫಿ ಗೆದ್ದುಕೊಂಡಿದೆ. ಆದರೆ, ಮೂರೂ (ಟೆಸ್ಟ್‌, ಏಕದಿನ ಮತ್ತು ಟ್ವೆಂಟಿ-20) ಮಾದರಿಗೆ ಒಬ್ಬರೇ ನಾಯಕರಾಗಿರುವುದು ದೋನಿ ಅವರನ್ನು ಒತ್ತಡಕ್ಕೆ ಒಳಗಾಗುವಂತೆ ಮಾಡಿದೆ.ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್‌ ನೆಲದಲ್ಲಿ ಟೆಸ್ಟ್‌ ಮತ್ತು ಏಕದಿನ ಸರಣಿ ಸೋತುಬಂದಿರುವ ಭಾರತ ತಂಡ ಸಾಕಷ್ಟು ಟೀಕೆ ಎದುರಿಸುತ್ತಿದೆ. ಈಗ ಏಷ್ಯಾಕಪ್‌ನಲ್ಲಿ ಯಶಸ್ಸು ಲಭಿಸಿದರೆ ಅದರ ಶ್ರೇಯ ಭಾರತಕ್ಕಷ್ಟೇ ಅಲ್ಲ ವೈಯಕ್ತಿಕವಾಗಿ ಕೊಹ್ಲಿಗೂ ಸಿಗಲಿದೆ. ಪೂರ್ಣಾವಧಿ ನಾಯಕರಾಗಬೇಕೆನ್ನುವ ಅವರ ಆಶಯಕ್ಕೆ ಏಷ್ಯಾಕಪ್ ವೇದಿಕೆಯಾಗಲಿದೆಯೇ?  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.