ಭಾನುವಾರ, ಡಿಸೆಂಬರ್ 8, 2019
24 °C

ಅವಕಾಶ ಸಿಕ್ಕರೆ ತಯಾರಿದ್ದೇನೆ: ಬಿ.ಎಸ್.ಯಡಿಯೂರಪ್ಪ ಪುನರುಚ್ಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅವಕಾಶ ಸಿಕ್ಕರೆ ತಯಾರಿದ್ದೇನೆ: ಬಿ.ಎಸ್.ಯಡಿಯೂರಪ್ಪ ಪುನರುಚ್ಚಾರ

ಬೆಂಗಳೂರು: `ಅಧಿಕಾರ ಕಳೆದುಕೊಂಡ ನಂತರವೂ ರಾಜ್ಯಾದ್ಯಂತ ಕೈಗೊಂಡಿರುವ ಪ್ರವಾಸಕ್ಕೆ ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಜನರ ಆಶೀರ್ವಾದ, ಅವಕಾಶ ಸಿಕ್ಕರೆ ರಾಜ್ಯದ ಅಭಿವೃದ್ಧಿಗಾಗಿ ಜವಾಬ್ದಾರಿ ವಹಿಸಿಕೊಳ್ಳಲು ಸಿದ್ಧ. ಆದರೆ ಎಂದಿಗೂ ಜನರ ನಂಬಿಕೆ- ವಿಶ್ವಾಸಕ್ಕೆ ಧಕ್ಕೆ ತರುವ ಕೆಲಸ ಮಾಡುವುದಿಲ್ಲ~ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೋಮವಾರ ಇಲ್ಲಿ ಹೇಳಿದರು.ನಗರದ ಮೈಸೂರು ರಸ್ತೆಯ ಬಿಐಎಂಎಸ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ `ನಾಯಕತ್ವ~ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ವಿದ್ಯಾರ್ಥಿಗಳ ಜತೆ ಸಂವಾದದಲ್ಲಿ ತೊಡಗಬೇಕಾಗಿದ್ದ ಅವರು, ಕನ್ನಡದಲ್ಲೇ ಭಾಷಣ ಮಾಡಿದರು. ಕೊನೆಯಲ್ಲಿ ವಿದ್ಯಾರ್ಥಿಗಳ ಆಯ್ದ ನಾಲ್ಕೈದು ಲಿಖಿತ ಪ್ರಶ್ನೆಗಳಿಗೆ ಉತ್ತರಿಸಿದರು. `ಅಧಿಕಾರ ಕಳೆದುಕೊಂಡು ಆರೋಪ ಎದುರಿಸುತ್ತಿರುವ ನಾನು ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುವುದು ಸಮಂಜಸವಲ್ಲ. ಸಮಯ ಬಂದಾಗ ನಾನೇ ಸಮರ್ಪಕ ಉತ್ತರ ನೀಡುತ್ತೇನೆ~ ಎಂದು ಸ್ಪಷ್ಟನೆ ನೀಡಿದರು.`21ನೇ ಶತಮಾನ ಭಾರತದ ಶತಮಾನ. ಆದರೆ, ಜಗತ್ತಿಗೇ ಮಾರ್ಗದರ್ಶನ ನೀಡುತ್ತಿರುವ ಭಾರತ ಏಕೆ ಹೀಗಾಗಿದೆ ಎಂಬ ಬಗ್ಗೆ ಚಿಂತಿಸುವ ಕಾಲ ಬಂದಿದೆ. ನಮ್ಮಲ್ಲಿ ಯೋಗ್ಯ ಹಾಗೂ ಪ್ರಾಮಾಣಿಕರನ್ನು ಗುರುತಿಸುವ ಪ್ರಯತ್ನ ನಡೆಯುತ್ತಿಲ್ಲ. ಇದರಿಂದ ಅನ್ಯಾಯದ ವಿರುದ್ಧ ಸಿಡಿದೇಳುವ ಪ್ರವೃತ್ತಿಯನ್ನು ಮರೆಯುತ್ತಿದ್ದೇವೆ. ಪರಿಣಾಮ ದುಃಸ್ಥಿತಿ ಎದುರಿಸುತ್ತಿದ್ದೇವೆ~ ಎಂದು ಅವರು ವಿಷಾದ ವ್ಯಕ್ತಪಡಿಸಿದರು.`ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಮಾಜಿ ಪ್ರಧಾನಿ ವಾಜಪೇಯಿ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರಂತಹ ಆದರ್ಶ ವ್ಯಕ್ತಿಗಳನ್ನು ಹುಡುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದಿನ ರಾಜಕಾರಣ ಹೇಗಾಗಿದೆಯೆಂದರೆ ಗಾಜಿನ ಮನೆಯಲ್ಲಿ ಕೂತು ಪರಸ್ಪರ ಕಲ್ಲೊಡೆದುಕೊಳ್ಳುತ್ತಿದ್ದೇವೆ. ಆರೋಪ- ಪ್ರತ್ಯಾರೋಪ ಮಾಡುವ ಮೂಲಕ ಬಡಿದಾಡಿಕೊಳ್ಳುತ್ತಿದ್ದೇವೆ. ಮತದಾರರೇ ನಮ್ಮ ಮಾಲೀಕರು. ಆದರೆ, ಸಮಾಜದ ಆಗು-ಹೋಗುಗಳ ಬಗ್ಗೆ ವಿಧಾನಸಭೆ, ಸಂಸತ್ತಿನಲ್ಲಿ ಚರ್ಚೆ ನಡೆಯುತ್ತಿಲ್ಲ. ನಮ್ಮ ಪ್ರತಿನಿಧಿಗಳಿಗೆ ಈ ಬಗ್ಗೆ ಅರಿವಿದೆಯೇ ಎಂಬುದರ ಬಗ್ಗೆ ಚಿಂತಿಸಬೇಕಾಗಿದೆ~ ಎಂದರು.ಕ್ಷುಲ್ಲಕ ಕಾರಣಕ್ಕೆ ಕೆಳಗಿಳಿಸಿದ್ರು

`ನನ್ನನ್ನು ಕ್ಷುಲ್ಲಕ ಕಾರಣಕ್ಕೆ ಕೆಲವರು ಅಧಿಕಾರದಿಂದ ಕೆಳಗಿಳಿಸಿದರು. ವೀರೇಂದ್ರ ಪಾಟೀಲರು ರಾಜೀನಾಮೆ ನೀಡಿದಾಗ ಕೇವಲ ನಾಲ್ಕೈದು ಮಂದಿ ಶಾಸಕರ ಅವರ ಜತೆಯಲ್ಲಿದ್ದರು. ಆದರೆ, ನಾನು ಅಧಿಕಾರ ಕಳೆದುಕೊಂಡಾಗಲೂ 70ರಿಂದ 75 ಶಾಸಕರು ನನ್ನ ಜತೆ ಇದ್ದರು. ಅವರ ಜತೆಯಲ್ಲೇ ರಾಜಭವನಕ್ಕೆ ಮೆರವಣಿಗೆಯಲ್ಲಿ ತೆರಳಿ ರಾಜೀನಾಮೆ ನೀಡಿದೆ. ಸಿಎಂ ಸ್ಥಾನ ಹೋದರೂ ನನ್ನ ಮೇಲೆ ಜನ ಇಟ್ಟಿರುವ ಪ್ರೀತಿ- ವಿಶ್ವಾಸವನ್ನು ನೋಡಿದರೆ ಯಾವ ಸ್ಥಾನಮಾನವೂ ಬೇಡ. ಹೀಗೇ ಪ್ರವಾಸ ಮಾಡಿಕೊಂಡಿರೋಣ. ಜೀವನದಲ್ಲಿ ಇದಕ್ಕಿಂತ ಇನ್ನೇನು ಬೇಕು ಎಂದೆನಿಸುತ್ತಿದೆ~ ಎಂದು ಹೇಳಿದರು.`ನಾನು ಎಂದಿಗೂ ಅಧಿಕಾರಕ್ಕಾಗಿ ಕುರ್ಚಿಗೆ ಅಂಟಿಕೊಳ್ಳಲಿಲ್ಲ. ವಾಜಪೇಯಿ ಅವರೇ ಕರೆದು ಕೇಂದ್ರದಲ್ಲಿ ಮಂತ್ರಿಯಾಗುವಂತೆ ಕೇಳಿದಾಗಲೂ ಎಂ. ರಾಜಶೇಖರಮೂರ್ತಿ ಅವರನ್ನು ರಾಜ್ಯಸಭೆಗೆ ಕಳಿಸಿದೆ. ಆದರೆ, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜೆಡಿಎಸ್ 20 ತಿಂಗಳ ಅಧಿಕಾರ ಅನುಭವಿಸಿದ ನಂತರ ನನಗೆ ಷರತ್ತಿನ ಮೇಲೆ ಮುಖ್ಯಮಂತ್ರಿ ಸ್ಥಾನ ನೀಡಿತು. ಬಹುಶಃ ಆ ಷರತ್ತುಗಳನ್ನೆಲ್ಲಾ ಒಪ್ಪಿದ್ದರೆ ರಾಜ್ಯವನ್ನೇ ಒತ್ತೆಯಿಡಬೇಕಾಗುತ್ತದೆ ಎಂದು ಭಾವಿಸಿ ಏಳೇ ದಿನದಲ್ಲಿ ರಾಜೀನಾಮೆ ನೀಡಿ ಹೊರ ಬಂದೆ~ ಎಂದರು.`ಆನಂತರ ವಿಶ್ವಾಸ ರಾಜಕಾರಣದ ಮೇಲೆ ಬಿಜೆಪಿಯನ್ನು ಜನ ಬೆಂಬಲಿಸಿದರು. ರಾಜ್ಯದ ಅಭಿವೃದ್ಧಿಗಾಗಿ `ಆಪರೇಷನ್ ಕಮಲ~ ಮೂಲಕ ಶಾಸಕರನ್ನು ಸೆಳೆಯುವುದು ಅನಿವಾರ್ಯವಾಯಿತು. 110 ಶಾಸಕರನ್ನು ಕಟ್ಟಿಕೊಂಡು ಯಡಿಯೂರಪ್ಪ ರಾಜಕೀಯ ದೊಂಬರಾಟವಾಡುತ್ತಿದ್ದಾರೆ ಎಂದು ಕೆಲವರು ಟೀಕಿಸಿದರು. ರಾಜ್ಯದಲ್ಲಿ ಮೂರೂವರೆ ವರ್ಷಗಳ ಕಾಲ ಸರ್ಕಸ್ ರೀತಿಯಲ್ಲಿ ಸರ್ಕಾರ ನಡೆಸಿದರೂ ರಾಜ್ಯವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯಲು ಸಾಧ್ಯವಾಯಿತು. ಕರ್ನಾಟಕವನ್ನು ಮಾದರಿ ರಾಜ್ಯ ಮಾಡಬೇಕೆಂಬುದು ನನ್ನ ಬಯಕೆ. ಅದಕ್ಕಾಗಿ ಯಾವುದೇ ಸ್ಥಾನಮಾನ ಇಲ್ಲದಿದ್ದರೂ ನಿರಂತರ ಹೋರಾಟ ಮಾಡುತ್ತೇನೆ~ ಎಂದು ಯಡಿಯೂರಪ್ಪ ನುಡಿದರು.ಪತ್ರಿಕೆ ಮತ್ತು ಟಿವಿ ನೋಡಿ ನನ್ನನ್ನು ನಿರ್ಧರಿಸಬೇಡಿ

`ಈ ಯಡಿಯೂರಪ್ಪನ ಬಗ್ಗೆ ಪತ್ರಿಕೇಲಿ ಓದಿ ಅಥವಾ ಟಿವಿ ನೋಡಿ ತೀರ್ಮಾನಕ್ಕೆ ಬರಬೇಡಿ. ಮೂರೂವರೆ ವರ್ಷಗಳಿಂದಲೂ ನನ್ನ ಕಾಲೆಳೆಯುವ ಪ್ರಯತ್ನ ನಿರಂತರವಾಗಿ ನಡೆಯಿತು. ಆದರೂ, ದೇವರು ಮೆಚ್ಚುವ ರೀತಿ ಕೆಲಸ ಮಾಡಿದೆ. ನನ್ನನ್ನು 24 ದಿನ ಜೈಲಿಗೆ ಕಳಿಸಿದ ಪುಣ್ಯಾತ್ಮರಿಂದ ಬಹಳಷ್ಟು ರಾಜಕಾರಣಗಳಿಗೆ ಸಂತೋಷವಾಗಿರಬಹುದು. ಒಂದು ಖಾಸಗಿ ದೂರಿನ ಆಧಾರದ ಮೇರೆಗೆ ದೇಶದ ಯಾವುದೇ ಮುಖ್ಯಮಂತ್ರಿ ಜೈಲಿಗೆ ಹೋದಂತಹ ಉದಾಹರಣೆ ಇಲ್ಲ. ಜೈಲಿಗೆ ಹೋದರೂ ಎದೆಗುಂದಲಿಲ್ಲ~ ಎಂದು ನೋವಿನಿಂದ ನುಡಿದರು.ತೋಳ್ಬಲ ಪ್ರದರ್ಶನ ಅಲ್ಲ

`ನಾಯಕತ್ವ ಎಂದರೆ ಅದು ತೋಳ್ಬಲ ಪ್ರದರ್ಶನ ಅಲ್ಲ. ನಾಯಕನಾದವನಿಗೆ ಜನರ ನಾಡಿಮಿಡಿತ ಗೊತ್ತಿರಬೇಕು. ಜನರ ಕಷ್ಟ ಸುಖದ ಅರಿವಿರಬೇಕು. ಸಂಘಟನೆ ಮೂಲಕ ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಹೋಗುವ ಸಾಮರ್ಥ್ಯವಿರಬೇಕು. ಸಮಸ್ಯೆ ಬಂದಾಗ ಪರಿಹರಿಸುವ ಶಕ್ತಿಯಿರಬೇಕು. ನಾಯಕನಿಗೆ ಬಡವರ ಪ್ರೀತಿ ಗಳಿಸುವ ಹಾಗೂ ಕಣ್ಣೀರಿರೊರೆಸುವ ಗುಣವಿರಬೇಕು. ನಾಯಕತ್ವದ ಗುಣ ಅಷ್ಟು ಸಹಜವಾಗಿ ಬರುವಂಥದ್ದಲ್ಲ. ನಿರಂತರ ಹೋರಾಟದ ಮೂಲಕ ಬರುತ್ತದೆ~ ಎಂದರು.ಬಿಐಎಂಎಸ್ ಕಾಲೇಜಿನ ಸ್ಥಾಪಕ ಅಧ್ಯಕ್ಷ ಎಂ.ಬಿ. ಶಿವಕುಮಾರ್, ಅಧ್ಯಕ್ಷ ಎಂ.ಎಸ್. ಶಿವಪ್ರಮೋದ್, ಕರ್ನಾಟಕ ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಡಿ. ಲಕ್ಷ್ಮೀನಾರಾಯಣ, ಮುಖಂಡ ಶಿವಪ್ಪ ಮತ್ತಿತರರು ಉಪಸ್ಥಿತರಿದ್ದರು.

 

ನನಗೇಕೆ ಡಾಕ್ಟರೇಟ್
ಅಮೆರಿಕ ಮಿಚಿಗನ್ ವಿಶ್ವವಿದ್ಯಾಲಯ ತಮಗೆ ನೀಡಿದ ಡಾಕ್ಟರೇಟ್ ಪದವಿ ಪಡೆದ ಸಂದರ್ಭದಲ್ಲಿ ತೆಗೆದಂತಹ ಗೌನ್ ಧರಿಸಿದ ಆಳೆತ್ತರದ ಕಟೌಟ್ ಅನ್ನು ಕಾಲೇಜಿನ ಆವರಣದಲ್ಲಿ ನಿಲ್ಲಿಸಿದ್ದನ್ನು ಕಂಡ ಯಡಿಯೂರಪ್ಪ, `ದಯವಿಟ್ಟು ಕೂಡಲೇ ಕಟೌಟ್ ತೆಗೆಯಿರಿ. ನನಗೆ ಯಾವುದೇ ಡಾಕ್ಟರೇಟ್ ಪದವಿ ಗೌರವ ಬೇಡ. ಯಾರೂ ನನ್ನನ್ನು ಡಾಕ್ಟರೇಟ್ ಅಂತ ಹೆಸರಿಟ್ಟು ಕರೆಯಬೇಡಿ. ರಾಜ್ಯದ ಪ್ರತಿಯೊಬ್ಬ ವ್ಯಕ್ತಿ ಎರಡು ಹೊತ್ತು ಊಟ ಮಾಡಿ ನೆಮ್ಮದಿಯಿಂದ ಬಾಳಿ ಬದುಕಿದರೆ ಅದರಿಂದಲೇ ನನಗೆ ಹಲವು ಡಾಕ್ಟರೇಟ್ ಸಿಕ್ಕಂತಾಗುತ್ತವೆ~ ಎಂದು ಸಂಘಟಕರನ್ನು ವಿನಂತಿಸಿದರು. ಇದಕ್ಕೂ ಮುನ್ನ ಯಡಿಯೂರಪ್ಪನವರ ಜೀವನ, ಹೋರಾಟದ ಬಗ್ಗೆ ಪ್ರದರ್ಶಿಸಿದ ಕಿರು ಸಾಕ್ಷ್ಯಚಿತ್ರದಲ್ಲಿಯೂ ಪದವಿ ಶಿಕ್ಷಣ ಪಡೆದಿರುವ ಕುರಿತು ತಪ್ಪಾಗಿ ಉಲ್ಲೇಖಿಸಿದ ಬಗ್ಗೆ ಪ್ರಸ್ತಾಪಿಸಿದ ಅವರು, `ನಾನು ಯಾವುದೇ ಪದವಿ ಪಡೆದಿಲ್ಲ~ ಎಂಬ ಸ್ಪಷ್ಟನೆ ನೀಡಿದರು.

 

ಪ್ರತಿಕ್ರಿಯಿಸಿ (+)