ಮಂಗಳವಾರ, ಜೂನ್ 22, 2021
22 °C

ಅವಧಿಗೆ ಮುನ್ನವೇ ಕೃಷ್ಣೆ ಬರಿದು; ನೀರಿಗೆ ಹಾಹಾಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅವಧಿಗೆ ಮುನ್ನವೇ ಕೃಷ್ಣೆ ಬರಿದು; ನೀರಿಗೆ ಹಾಹಾಕಾರ

ವಿಜಾಪುರ: ಉತ್ತರ ಕರ್ನಾಟಕ ಜನತೆಯ ಜೀವನಾಡಿ ಕೃಷ್ಣೆ ಬತ್ತಿದೆ. ಆಲಮಟ್ಟಿ, ನಾರಾಯಣಪುರ, ಹಿಪ್ಪರಗಿ ಜಲಾಶಯಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿದೆ. ನೀರಿಗಾಗಿ ಎಲ್ಲೆಡೆ ಹಾಹಾಕಾರ ಉಂಟಾಗಿದ್ದು  ಈಗ ಎಲ್ಲರೂ ಮಹಾರಾಷ್ಟ್ರದ ಕೊಯ್ನಾ ಜಲಾಶಯದತ್ತ ಮುಖ ಮಾಡಿದ್ದಾರೆ.ಅಲಮಟ್ಟಿ ಜಲಾಶಯದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 23 ಟಿಎಂಸಿ ಅಡಿಯಷ್ಟು ನೀರು ಕಡಿಮೆ ಇದೆ. ರಾಜ್ಯದಲ್ಲಿ 483 ಕಿ.ಮೀ. ಹರಿಯುವ ಕೃಷ್ಣಾ ನದಿಯೂ ಬತ್ತಿದೆ. ನದಿ ತೀರದ ಜನ, ಕುಡಿಯುವ ನೀರಿಗಾಗಿ ಈ ನದಿಯನ್ನೇ ಅವಲಂಬಿಸಿರುವ ನಗರ-ಪಟ್ಟಣ-ಗ್ರಾಮಗಳು ತೊಂದರೆ ಎದುರಿಸುತ್ತಿವೆ.`ಈ ವರ್ಷ ಮಳೆ ಕೈಕೊಟ್ಟ ಪರಿಣಾಮ ಅವಧಿಗೆ ಮುನ್ನವೇ ನದಿಯಲ್ಲಿ ಹರಿವು ಕಡಿಮೆಯಾಗಿದೆ. ಈ ವರ್ಷದಷ್ಟು ಭೀಕರ ಬೇಸಿಗೆಯನ್ನು ಕಳೆದ 40 ವರ್ಷಗಳಲ್ಲಿ ನಾವೆಂದೂ ಕಂಡಿರಲಿಲ್ಲ~ ಎನ್ನುತ್ತಿದ್ದಾರೆ ನದಿ ತೀರದ ಜನ.`ಆಲಮಟ್ಟಿ ಜಲಾಶಯಕ್ಕೆ ಪ್ರತಿ ವರ್ಷ ನವೆಂಬರ್ ಅಂತ್ಯದವರೆಗೂ ಒಳಹರಿವು ಇರುತ್ತಿತ್ತು. ಈ ವರ್ಷ ಅದು ಅಕ್ಟೋಬರ್ ಮೊದಲ ವಾರದಲ್ಲಿಯೇ ಸ್ಥಗಿತಗೊಂಡಿತು. ಈ ವರ್ಷ ವಿದ್ಯುತ್ ಉತ್ಪಾದಿಸಲು ಹೆಚ್ಚು ನೀರನ್ನು ಬಳಸಿದ್ದು ಹಾಗೂ ಅಸಮರ್ಪಕ ನೀರು ನಿರ್ವಹಣೆಯಿಂದಾಗಿ ಜಲಾಶಯದಲ್ಲಿ ನೀರು ಕಡಿಮೆಯಾಗಿದೆ~ ಎಂಬ ಆರೋಪ ಕೇಳಿ ಬರುತ್ತಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಜೊತೆ ಸದಾನಂದಗೌಡ ಚರ್ಚೆ
ಪ್ರಜಾವಾಣಿ ವಾರ್ತೆ

ಬೆಂಗಳೂರು: ಮಹಾರಾಷ್ಟ್ರದ ಕೊಯ್ನಾದಿಂದ `ಕೃಷ್ಣಾ~ ನದಿಗೆ ಐದು ಟಿಎಂಸಿ ನೀರು ಬಿಡುಗಡೆ ಮಾಡುವ ಸಂಬಂಧ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಮಹಾರಾಷ್ಟ್ರ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಸೋಮವಾರ ವಿಧಾನಸಭೆಯಲ್ಲಿ ತಿಳಿಸಿದರು.ಶೂನ್ಯವೇಳೆಯಲ್ಲಿ ಸಿದ್ದು ಸವದಿ, ಎಸ್.ಕೆ.ಬೆಳ್ಳುಬ್ಬಿ, ಶ್ರೀಶೈಲಪ್ಪ ಬಿದರೂರು ಅವರು ಮಾಡಿದ ಪ್ರಸ್ತಾವಕ್ಕೆ ಉತ್ತರಿಸಿದ ಸಚಿವರು, ಬಾಗಲಕೋಟೆ, ವಿಜಾಪುರ ಮತ್ತಿತರ ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಕೊಯ್ನಾದಿಂದ ನೀರು ಬಿಡುಗಡೆ ಮಾಡುವಂತೆ ಮಹಾರಾಷ್ಟ್ರದ ನೀರಾವರಿ ಸಚಿವರು, ಮುಖ್ಯಮಂತ್ರಿಗಳಿಗೆ ಪತ್ರದ ಮೂಲಕ ಮನವಿ ಮಾಡಲಾಗಿದೆ ಎಂದರು.ಅಲ್ಲಿನ ಅಗತ್ಯ ನೋಡಿಕೊಂಡು ನೀರು ಬಿಡುವ ಭರವಸೆ ನೀಡಿದ್ದಾರೆ. ಸದಾನಂದಗೌಡ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಅವರೊಂದಿಗೆ ಚರ್ಚೆ ನಡೆಸಿ, ಆದಷ್ಟು ಬೇಗ ನೀರು ಬಿಡುಗಡೆ ಮಾಡುವಂತೆ ಕೋರಲಿದ್ದಾರೆ ಎಂದು ತಿಳಿಸಿದರು.ಇದಕ್ಕೂ ಮುನ್ನ ಮಾತನಾಡಿದ ಸವದಿ, `ಮಹಾರಾಷ್ಟ್ರಕ್ಕೆ ಬಾಕಿ ಇರುವ ಹಣವನ್ನು ಪಾವತಿ ಮಾಡಿ, 4-5 ಟಿಎಂಸಿ ನೀರು ಪಡೆಯಲು ಕ್ರಮ ಕೈಗೊಳ್ಳಿ~ ಎಂದು ಆಗ್ರಹಿಸಿದರು.
`ಆಲಮಟ್ಟಿ ಜಲಾಶಯದಲ್ಲಿ ಕಳೆದ ವರ್ಷ ಇದೇ ದಿನ 45.691 ಟಿಎಂಸಿ ಅಡಿ (512.74 ಮೀಟರ್) ನೀರು ಸಂಗ್ರಹವಿತ್ತು. ಸದ್ಯ ಜಲಾಶಯದಲ್ಲಿ 22.737 ಟಿಎಂಸಿ ಅಡಿ (508.31ಮೀಟರ್) ಮಾತ್ರ ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಜಲಾಶಯದಲ್ಲಿ ಸದ್ಯ 23 ಟಿಎಂಸಿ ಅಡಿಯಷ್ಟು ನೀರು ಕಡಿಮೆ ಇದೆ~ ಎನ್ನುತ್ತಾರೆ ಕೃಷ್ಣಾ ಭಾಗ್ಯ ಜಲ ನಿಗಮದ ಆಲಮಟ್ಟಿಯ ಸೂಪರಿಂಟೆಂಡೆಂಟ್ ಎಂಜಿನಿಯರ್ ಪೋದ್ದಾರ.`4.975 ಟಿಎಂಸಿ ನೀರನ್ನು ಬಳಕೆ ಮಾಡಲಾಗದು. ಇನ್ನುಳಿದ 17 ಟಿಎಂಸಿ ನೀರನ್ನು ಕುಡಿಯಲು ಬಳಸಬಹುದಾಗಿದೆ. ಬೇಸಿಗೆಯಲ್ಲಿ ನೀರು ಆವಿಯಾಗುವಿಕೆ ಪ್ರಮಾಣ ಹೆಚ್ಚಾಗುವುದರಿಂದ ಸ್ವಲ್ಪ ಮಟ್ಟಿಗೆ ಸಮಸ್ಯೆ ಆಗಬಹುದು~ ಎಂಬುದು ಅವರ ವಿವರಣೆ.`ಆಲಮಟ್ಟಿ ಜಲಾಶಯದ ಡೆಡ್ ಸ್ಟೋರೇಜ್ ಮಟ್ಟವನ್ನು (ಎಂಡಿಡಿಎಲ್) 504 ಮೀಟರ್‌ಗೆ ನಿಗದಿ ಮಾಡಲಾಗಿದೆ. ಇಷ್ಟು ಮಟ್ಟದ ವರೆಗೆ ಜಲಾಶಯದ ನೀರನ್ನು ಹೊರ ಬಿಟ್ಟರೆ ವಿಜಾಪುರ ನಗರವೂ ಸೇರಿದಂತೆ ಕೃಷ್ಣಾ ನದಿ ನೀರಿನ ಮೇಲೆ ಅವಲಂಬಿತವಾಗಿರುವ ನಗರ-ಪಟ್ಟಣಗಳಿಗೆ ನೀರು ಪೂರೈಕೆ ಸಾಧ್ಯವೇ ಇಲ್ಲ. ಈ ಮಟ್ಟವನ್ನು 506.5 ಮೀಟರ್‌ಗೆ ನಿಗದಿ ಮಾಡಿ ಅಷ್ಟು ಪ್ರಮಾಣದ ನೀರನ್ನು ಕಾಯ್ದುಕೊಳ್ಳುವಂತೆ ಕೆಬಿಜೆಎನ್‌ಎಲ್ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ~ ಎನ್ನುತ್ತಾರೆ ಜಲಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಸನ್ನಮೂರ್ತಿ.`ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು  ಬಂದರೆ ಮಾತ್ರ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದೊರೆಯಬಹುದು~ ಎನ್ನುತ್ತಾರೆ ಜಿಲ್ಲಾಧಿಕಾರಿ ಶಿವಯೋಗಿ ಕಳಸದ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.