ಸೋಮವಾರ, ಮೇ 23, 2022
22 °C

ಅವಧಿಗೆ ಮುನ್ನ ಮತಪೆಟ್ಟಿಗೆಗೆ ಸೀಲ್: ಹೊಸನಗರದಲ್ಲಿ ಮಾತಿನ ಚಕಮಕಿ, ಗೊಂದಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸನಗರ: ಪಟ್ಟಣದ ಪದವೀಧರ ಕ್ಷೇತ್ರದ ಮತಗಟ್ಟೆಯಲ್ಲಿ ಅವಧಿಗೆ ಮುನ್ನ ಮತಪೆಟ್ಟಿಗೆ ಸೀಲ್ ಮಾಡಿದ್ದಾರೆ ಎಂಬ ಕಾರಣ ಕೆಲ ಕಾಲ ವಾಗ್ವಾದ, ಮಾತಿನ ಚಕಮಕಿನಿಂದ ಬಿಗುವಿನ ವಾತಾವರಣ ಉಂಟಾಗಿದ್ದು, ಬಿಟ್ಟರೆ ಉಳಿದಂತೆ ತಾಲ್ಲೂಕಿನಾದ್ಯಂತ ಶಾಂತಿಯುತ ಮತದಾನ ನಡೆಯಿತು.

ತಾಲ್ಲೂಕು ಕಚೇರಿಯಲ್ಲಿ ಇರುವ ಶಿಕ್ಷಕರ ಕ್ಷೇತ್ರದ ಮತಗಟ್ಟೆಯಲ್ಲಿ ಚುನಾವಣಾಧಿಕಾರಿ ಭಾರತೀಯ ಕಾಲಮಾನದಂತೆ ಮಧ್ಯಾಹ್ನ 3.50ಕ್ಕೆ ಮತಪೆಟ್ಟಿಗೆಯನ್ನು ಸೀಲ್ ಮಾಡಿದ ಕಾರಣ 100 ಮೀ. ಅಂತರದೊಳಗೆ ಇದ್ದ ನಾಲ್ವರು ಮತದಾರರು ಮತದಿಂದ ವಂಚಿತರಾಗಿದ್ದಾರೆ ಎಂದು ಸಭಾಪತಿ ಡಿ.ಎಚ್. ಶಂಕರಮೂರ್ತಿ ಪರ ಮತಗಟ್ಟೆ ಏಜೆಂಟ್ ಶ್ರೀಧರ ಭಂಡಾರಿ ಚುನಾವಣಾಧಿಕಾರಿ, ನೈಋತ್ಯ ಪದವೀಧರ ಕ್ಷೇತ್ರ, ಮೈಸೂರು ಅವರಿಗೆ ದೂರು ಸಲ್ಲಿಸಿದ್ದಾರೆ.

ಪರಿಣಾಮ ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ವಾಲೆಮನೆ ಶಿವಕುಮಾರ್ ದಂಪತಿ ಸೇರಿದಂತೆ ನಾಲ್ವರು ತಮ್ಮ ಚಲಾಯಿಸಲು ಸಾಧ್ಯವಾಗಲಿಲ್ಲ. ಸಿಟ್ಟಿಗೆದ್ದ ಬಿಜೆಪಿ ಕಾರ್ಯಕರ್ತರು ಚುನಾವಣಾಧಿಕಾರಿ ವಿರುದ್ಧ ಘೋಷಣೆ ಕೂಗಿದರು.

ತಾಲ್ಲೂಕಿನಲ್ಲಿ 2 ಮತಗಟ್ಟೆಗಳು ಇದ್ದು ಹೊಸನಗರದಲ್ಲಿ ಪದವೀಧರ ಕ್ಷೇತ್ರದಲ್ಲಿ 702 ಮತದಾರರಲ್ಲಿ 509 ಮತಗಳು ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ 156ರಲ್ಲಿ 115 ಮತಗಳು ಮತ್ತು ಮಾಸ್ತಿಕಟ್ಟೆಯಲ್ಲಿ ಪದವೀಧರ ಕ್ಷೇತ್ರದಲ್ಲಿ 132ಕ್ಕೆ 85 ಮತ್ತು ಶಿಕ್ಷಕರ ಕ್ಷೇತ್ರದಲ್ಲಿ 45ಕ್ಕೆ 26 ಮತಗಳು ಚಲಾವಣೆ ಆಗಿದೆ. ನವ ಪದವೀಧರರು ಉತ್ಸಾಹದಿಂದ ತಮ್ಮ ಚೊಚ್ಚಲ ಮತವನ್ನು ಚಲಾಯಿಸಿದರು.

ಬಿರುಸಿನ ಮತದಾನ

ಭದ್ರಾವತಿ ವರದಿ: ಹೊಸದಾಗಿ ಪದವೀಧರ ಮತಪಟ್ಟಿಗೆ ನೋಂದಾಯಿತರಾದ ಮತದಾರರಿಂದ ಬಿರುಸಿನ ಮತದಾನ ಭಾನುವಾರ ಇಲ್ಲಿನ ಎರಡು ಮತಗಟ್ಟೆಯಲ್ಲಿ ನಡೆದ ಬಗ್ಗೆ ವರದಿಯಾಗಿದೆ.

ತಹಶೀಲ್ದಾರ್ ಕಚೇರಿ ಆವರಣ ಹಾಗೂ ನ್ಯೂಟೌನ್ ಸರ್ಕಾರಿ ಬಾಲಿಕಾ ಪದವಿಪೂರ್ವ ಕಾಲೇಜು ಆವರಣದಲ್ಲಿ ಶಿಕ್ಷಕ ಹಾಗೂ ಪದವೀಧರ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಅಂದಾಜು ಕ್ರಮವಾಗಿ ಶೇ 60 ಹಾಗೂ ಶೇ 57 ಮತದಾನ ನಡೆದಿದೆ.

ಹೊಸ ಮತದಾರರು ಸೇರ್ಪಡೆಯಾದ ಮತಗಟ್ಟೆಯ ಬಳಿ ಸರದಿ ಸಾಲಿನಲ್ಲಿ ಮತದಾನ ನಡೆದದ್ದು, ಕಂಡು ಬಂದರೆ, ಹಳೇ ಮತಪಟ್ಟಿ ಇದ್ದ ಮತಗಟ್ಟೆ ಬಳಿ ಮಂದಗತಿ ಮತದಾನ ನಡೆದದ್ದು ವಿಶೇಷವಾಗಿತ್ತು.

ಪ್ರತಿ ಮತದಾನ ಕೇಂದ್ರದಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಹಾಗೂ ವಿಡಿಯೊ ಚಿತ್ರೀಕರಣ ನಡೆದದ್ದು, ಈ ಬಾರಿಯ ವಿಶೇಷ, ಕಾಲಕಾಲಕ್ಕೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಮತಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಕಂಡುಬಂತು.

ಚಿತ್ರೀಕರಣಕ್ಕೆ ವಿರೋಧ

ಗರ್ಲ್ಸ್ ಕಾಲೇಜಿನ ಮತಗಟ್ಟೆಯಲ್ಲಿ ಮತ ಚಲಾಯಿಸುವ ಟೇಬಲ್‌ಗೆ ಸಮೀಪ ಕ್ಯಾಮೆರಾ ಇಟ್ಟಿದ್ದು, ಮತದಾರರ ಆಕ್ರೋಶಕ್ಕೆ ಕಾರಣವಾಯಿತು. ಅದನ್ನು ವಿರೋಧಿಸಿದ ಶಿಕ್ಷಕ ಮತದಾರ, ಮತಗಟ್ಟೆ ಅಧಿಕಾರಿಗೆ ಈ ಕ್ರಮ ಸರಿಯಲ್ಲಿ, ಹೀಗಾದರೆ ಗುಪ್ತ ಮತದಾನಕ್ಕೆ ಅರ್ಥವಿಲ್ಲ ಎಂದು ಪ್ರಶ್ನಿಸಿದರು.

ಇದರಿಂದ ವಿಚಲಿತರಾದ ಅಧಿಕಾರಿ ಕ್ಯಾಮೆರಾ ಸ್ಥಳವನ್ನು ಬದಲಿಸುವಂತೆ ಸಿಬ್ಬಂದಿಗೆ ಸೂಚಿಸಿ, ವಾತಾವರಣ ತಿಳಿ ಮಾಡಿದರು. ಈ ನಡುವೆ ಪದವೀಧರ ಕ್ಷೇತ್ರಕ್ಕೆ ಮತ ಹಾಕಿದ ಶಿಕ್ಷಕರು, ಶಿಕ್ಷಕ ಕ್ಷೇತ್ರದಲ್ಲಿನ ಮತಕ್ಕಾಗಿ ಹುಡುಕಾಟ ನೆಡೆಸಿದ್ದು, ಕಂಡು ಬಂದರೆ ಕೆಲವರು ಶಿಕ್ಷಕ ಸ್ಥಾನಕ್ಕೆ ಮತ ಚಲಾಯಿಸಿ ಪದವಿ ಮತಕ್ಕಾಗಿ ಹುಡುಕಾಟ ನಡೆಸಿದ್ದ, ದೃಶ್ಯ ಕಂಡುಬಂತು.

ಅಭ್ಯರ್ಥಿಗಳ ಭೇಟಿ

ಪದವೀಧರ ಕ್ಷೇತ್ರದ ಅಭ್ಯರ್ಥಿಗಳಾದ ಡಿ.ಎಚ್. ಶಂಕರಮೂರ್ತಿ ಹಾಗೂ ಎಸ್.ಪಿ. ದಿನೇಶ್ ಮತದಾನ ಆರಂಭವಾದ ಕೆಲವೇ ಗಂಟೆಯಲ್ಲಿ ಇಲ್ಲಿನ ಎರಡು ಕೇಂದ್ರಕ್ಕೆ ಭೇಟಿ ನೀಡಿ ಪ್ರಚಾರ ನಿರತ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಿ, ಕೆಲ ಹೊತ್ತು ಮತಯಾಚಿಸಿದರು.

ಈ ನಡುವೆ ಸ್ಥಳೀಯ ಪಕ್ಷೇತರ ಅಭ್ಯರ್ಥಿ ಬಿ.ಕೆ. ಮಂಜುನಾಥ್ ಎರಡು ಮತಗಟ್ಟೆ ಬಳಿ ಹಾಜರಿದ್ದು, ಮತಯಾಚನೆ ನಡೆಸಿದರು. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಸ್ ಅಭ್ಯರ್ಥಿಗಳ ಪರವಾಗಿ ಆಯಾ ಪಕ್ಷದ ಕಾರ್ಯಕರ್ತರು ಮುಖಂಡರು ಪ್ರಚಾರ ನಡೆಸಿದ್ದು ಚುನಾವಣಾ ಬಿಸಿ ಹೆಚ್ಚು ಮಾಡಿತ್ತು.

ಶಾಸಕ ಬಿ.ಕೆ. ಸಂಗಮೇಶ್ವರ, ಜಿಲ್ಲಾ ಪಂಚಾಯ್ತಿ ಸದಸ್ಯ ಎಚ್.ಎಲ್. ಷಡಾಕ್ಷರಿ, ಮಾಜಿ ಶಾಸಕ ಎಂ.ಜೆ. ಅಪ್ಪಾಜಿ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಶಾಸಕ ಕೆ.ಜಿ. ಕುಮಾರಸ್ವಾಮಿ ಸೇರಿದಂತೆ ಹಲವು ಮುಖಂಡರು ಮತದಾನ ಕೇಂದ್ರದ ಬಳಿ ಹಾಜರಿದ್ದು ಮತದಾರರ ಗಮನ ಸೆಳೆದರು.

ನೀರಸ ಮತದಾನ

ಕಾರ್ಗಲ್ ವರದಿ: ಪದವೀಧರ ಕ್ಷೇತ್ರದ ಚುನಾವಣೆಗೆ ಭಾರಂಗಿ ಹೋಬಳಿ ವ್ಯಾಪ್ತಿಯಲ್ಲಿ ನೀರಸ ಮತದಾನದ ವಾತಾವರಣ ಕಂಡುಬಂತು.

ತಾಳಗುಪ್ಪ, ತಲವಾಟ, ಇಡುವಾಣಿ, ಕಾರ್ಗಲ್, ಜೋಗ, ಲಿಂಗನಮಕ್ಕಿ, ಸುತ್ತಮುತ್ತಲ ಪ್ರಮುಖ ಗ್ರಾಮಗಳ ಮತದಾರರಿಗೆ ಕಾರ್ಗಲ್ ಪ್ರಾಥಮಿಕ ಶಾಲೆಯಲ್ಲಿ ಮತದಾನ ಕೇಂದ್ರವನ್ನು ಚುನಾವಣಾಧಿಕಾರಿ ಇದೇ ಪ್ರಥಮಬಾರಿಗೆ ತೆರೆದಿದ್ದರು.

ಸರ್ಕಾರಿ ನೌಕರರೇ ಹೆಚ್ಚಾಗಿರುವ ಶರಾವತಿ ಯೋಜನಾ ಪ್ರದೇಶದಲ್ಲಿ ಹೆಚ್ಚು ಪದವೀಧರರು ಮತದಾನದ ಹಕ್ಕನ್ನು ಪಡೆದಿರುವುದು ನೂತನ ಮತದಾನ ಕೇಂದ್ರ ತೆರೆಯಲು ಕಾರಣವಾಗಿತ್ತು. 292 ಪದವೀಧರ ಕ್ಷೇತ್ರದ ಮತದಾರರು ಕಾರ್ಗಲ್ ಕೇಂದ್ರದಲ್ಲಿದ್ದು, ಕೇವಲ 123 ಮತಗಳು ಮಾತ್ರ ಚಲಾವಣೆಯಾಗಿ, ಶೇ 44ರಷ್ಟು ಮತದಾನ ಪದವೀಧರ ಕ್ಷೇತ್ರಕ್ಕೆ ನಡೆಯಿತು.

ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ 41 ಶಿಕ್ಷಕರು ಮತದಾನದ ಹಕ್ಕನ್ನು ಹೊಂದಿದ್ದು, 27 ಮತ ಚಲಾವಣೆಯಾಗಿ, 67 ಮತದಾನ ಶಿಕ್ಷಕರ ಕ್ಷೇತ್ರಕ್ಕೆ ನಡೆಯಿತು. ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರದ ಮಾಮೂಲಿ ಸಂತೆಯನ್ನು ಜಿಲ್ಲಾಡಳಿತದ ಆದೇಶದ ಮೇರೆಗೆ ರದ್ದುಗೊಳಿಸಲಾಗಿತ್ತು. ಸಬ್‌ಇನ್‌ಸ್ಪೆಕ್ಟರ್ ಗುರುರಾಜ್ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ಶಾಂತಿಯುತ

ಸೊರಬ ವರದಿ: ವಿಧಾನಸಭಾ ಕ್ಷೇತ್ರದ ನೈಋತ್ಯ ಪದವೀಧರ ಹಾಗೂ ನೈಋತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ತಾಲ್ಲೂಕಿನಲ್ಲಿ ಭಾನುವಾರ ಶಾಂತಿಯುತವಾಗಿ ನಡೆಯಿತು.

ತಾಲ್ಲೂಕಿನಲ್ಲಿ ಪಟ್ಟಣದ ತಾಲ್ಲೂಕು ಕಚೇರಿ ಮತ್ತು ಆನವಟ್ಟಿ ಬಾಲಿಕಾ ಪ್ರೌಢಶಾಲೆಯ ಮತಗಟ್ಟೆಯಲ್ಲಿ ಪದವೀಧರ ಕ್ಷೇತ್ರಕ್ಕೆ ಶೇ 78.1 ಮತ್ತು ಶಿಕ್ಷಕರ ಕ್ಷೇತ್ರಕ್ಕೆ ಶೇ 87.4 ಮತದಾನ ನಡೆದಿದೆ.

ಆನವಟ್ಟಿ ಮತಗಟ್ಟೆಯಲ್ಲಿ ಒಟ್ಟು 375 ಹಾಗೂ ಸೊರಬ ಮತಗಟ್ಟೆಯಲ್ಲಿ 287 ಮತಗಳು ಸೇರಿ ಒಟ್ಟು 662 ಮತದಾರರಿದ್ದಾರೆ. ಸೊರಬ ಮತಗಟ್ಟೆಯಲ್ಲಿ 245 ಪುರುಷ, 43 ಮಹಿಳೆ, ಆನವಟ್ಟಿ ಮತಗಟ್ಟೆಯಲ್ಲಿ 189 ಪುರುಷ ಹಾಗೂ 40 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ.

ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 151 ಮತಗಳಿದ್ದು, ಸೊರಬದಲ್ಲಿ 71 ಪುರುಷ, 6 ಮಹಿಳಾ ಆನವಟ್ಟಿಯಲ್ಲಿ 40 ಪುರುಷ, 6 ಮಹಿಳೆಯರು ಮತ ಚಲಾಯಿಸಿದ್ದಾರೆ. ಚುನಾವಣಾ ನಿಯೋಜಿತ ಅಧಿಕಾರಿಯಾಗಿ ತಹಶೀಲ್ದಾರ್ ಶ್ರೀಧರಮೂರ್ತಿ ಪಂಡಿತ್, ಮಾದರಿ ನೀತಿ ಸಂಹಿತೆ ತಂಡದ ಮುಖ್ಯಸ್ಥರಾಗಿ ಶಂಕರಪ್ಪ ಕಾರ್ಯ ನಿರ್ವಹಿಸಿದರು. 

ಬೆಳಿಗ್ಗೆ ಶಾಸಕ ಎಚ್. ಹಾಲಪ್ಪ ಭೇಟಿ ನೀಡಿದ್ದರು. ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಶಾಂತಿಯುತ ಮತದಾನಕ್ಕೆ ಸಹಕರಿಸಿದರು.

ಮತ ಚಲಾವಣೆ

ಶಿಕಾರಿಪುರ ವರದಿ: ವಿಧಾನ ಪರಿಷತ್ ನೈಋತ್ಯ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ತಾಲ್ಲೂಕಿನ ಪದವೀಧರರು ಒಟ್ಟು ಇರುವ 1,304 ಮತಗಳಲ್ಲಿ 898 ಮತಗಳನ್ನು ಚಲಾವಣೆ ಮಾಡಿದ್ದಾರೆ.

ಶಿಕ್ಷಕರ ಕ್ಷೇತ್ರದಲ್ಲಿ ಇರುವ 343 ಮತಗಳಲ್ಲಿ 295 ಮತಗಳನ್ನು ಚಲಾವಣೆ ಮಾಡಿದ್ದಾರೆ. ಒಟ್ಟಿನಲ್ಲಿ ತಾಲ್ಲೂಕಿನ ಎರಡು ಮತ ಕೇಂದ್ರಗಳಾದ ತಾಲ್ಲೂಕು ಕಚೇರಿ ಸಭಾಂಗಣ ಮತ್ತು ಶಿರಾಳಕೊಪ್ಪದ ಪಟ್ಟಣ ಪಂಚಾಯ್ತಿ ಸಭಾಂಗಣದಲ್ಲಿ ಮತದಾನ ನಡೆಯಿತು. ಶಿಕ್ಷಕರ ಕ್ಷೇತ್ರದಲ್ಲಿ ಶೇ. 86 ಮತದಾನ ಆಗಿದ್ದು, ಪದವೀಧರ ಕ್ಷೇತ್ರದಲ್ಲಿ ಶೇ 68.86 ಮತದಾನವಾಗಿದೆ.

ಪಟ್ಟಣದ ತಾಲ್ಲೂಕು ಕಚೇರಿ ಸಂಭಾಗಣದಲ್ಲಿ ಬೆಳಿಗ್ಗೆಯಿಂದಲೇ ಬಿರುಸಿನಿಂದ ಮತದಾನ ಪ್ರಕ್ರಿಯೆ ಪ್ರಾರಂಭವಾಯಿತು. ಬೆಳಿಗ್ಗೆಯಿಂದಲೇ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ ಮತ್ತು `ಕಾಡಾ~ ಅಧ್ಯಕ್ಷ ಕೆ. ಶೇಖರಪ್ಪ, ಕೆ.ಎಸ್. ಗುರುಮೂರ್ತಿ ಹಾಗೂ ಇತರ ಮುಖಂಡರು ಮತ ಕೇಳಿದರೆ. ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಕೆಪಿಸಿಸಿ ಸದಸ್ಯರಾದ ಎಚ್.ಎಸ್. ಶಾಂತವೀರಪ್ಪಗೌಡ, ನಗರದ ಮಹಾದೇವಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಣಿ ಮಾಲತೇಶ್, ಯುವ ಕಾಂಗ್ರೆಸ್ ಅಧ್ಯಕ್ಷ ಹುಲ್ಮಾರ್ ಮಹೇಶ್ ಹಾಗೂ ಇತರ ಮುಖಂಡರು ಮತ ಕೇಳಿದರು.

ಜೆಡಿಎಸ್ ಪರವಾಗಿ ಸು.ಹಾ. ಮಂಜುನಾಥ್, ತ್ಯಾಗರ್ತಿ ನೀಲಪ್ಪ, ಬೆಂಕಿ ಯೋಗೀಶ್ ಮತ ಕೇಳಿದರು. ಹಿಂದಿನ ವಿಧಾನ ಪರಿಷತ್ ಚುನಾವಣೆಗೆ ಹೋಲಿಸಿದರೆ ಈ ಬಾರಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಮೂರೂ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ತುಂಬಾ ಹುಮ್ಮಸ್ಸಿನಿಂದ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.