ಭಾನುವಾರ, ಮೇ 16, 2021
22 °C

`ಅವಧಿಗೆ ಮುನ್ನ ಲೋಕಸಭೆ ಚುನಾವಣೆ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಅವಧಿಗೆ ಮುನ್ನ ಲೋಕಸಭೆ ಚುನಾವಣೆ'

ಬೆಂಗಳೂರು: ಅವಧಿಗೆ ಮೊದಲು ಲೋಕಸಭೆಗೆ ಚುನಾವಣೆ ನಡೆಯುವ ಸಾಧ್ಯತೆ ಇರುವ ಕಾರಣ ಆದಷ್ಟು ಬೇಗ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಶುಕ್ರವಾರ ಇಲ್ಲಿ ತಿಳಿಸಿದರು.ತುಮಕೂರು ಜಿಲ್ಲೆಯ ಜೆಡಿಎಸ್ ಮುಖಂಡ, ಮಾಜಿ ಶಾಸಕ ಎಸ್.ಪಿ.ಮುದ್ದಹನುಮೇಗೌಡ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡ ನಂತರ ಸುದ್ದಿಗಾರರ ಜತೆ ಮಾತನಾಡಿದರು.ದೆಹಲಿಯಿಂದ ಬಂದಿರುವ ಮಾಹಿತಿ ಪ್ರಕಾರ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಲೋಕಸಭೆಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಹೀಗಾಗಿ ಕ್ಷೇತ್ರವಾರು ಅಭಿಪ್ರಾಯ ಸಂಗ್ರಹಿಸಲು ಹತ್ತು ದಿನಗಳಲ್ಲಿ ವೀಕ್ಷಕರನ್ನು ನೇಮಕ ಮಾಡಲಾಗುವುದು. ಅವರು ಕೊಡುವ ವರದಿ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಅವರು ಹೇಳಿದರು.`ಕೇಂದ್ರದಲ್ಲಿ ಮತ್ತೆ ಯುಪಿಎ ಸರ್ಕಾರ ರಚನೆ ಆಗಲು ರಾಜ್ಯದ ಪಾತ್ರ ಬಹುಮುಖ್ಯ. ಈ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಗೆ ಈ ಕ್ಷಣದಿಂದಲೇ ತಯಾರಿ ಆರಂಭಿಸಲಾಗಿದೆ' ಎಂದು ವಿವರಿಸಿದರು.ಸಂತಸ: `ಸರಳ, ಸಜ್ಜನಿಕೆಯ ಮುದ್ದಹನುಮೇಗೌಡರು ಮರಳಿ ಗೂಡಿಗೆ ಬಂದಿರುವುದು ಸಂತಸ ತಂದಿದೆ. ಅವರು ಈ ಹಿಂದೆ ಕಾಂಗ್ರೆಸ್ ಬಿಟ್ಟಾಗ ನಮಗೆಲ್ಲ ನೋವಾಗಿತ್ತು. ಈ ವಿಷಯವನ್ನು ಅಂದಿನ ದಿನಗಳಲ್ಲಿ ಎಸ್.ಎಂ.ಕೃಷ್ಣ ಜತೆಗೂ ಹಂಚಿಕೊಂಡಿದ್ದೆ' ಎಂದು ಅವರು ಹೇಳಿದರು.ವಿಷಕಂಠ: ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮೈಸೂರು ಸಂಸದ ಎಚ್.ವಿಶ್ವನಾಥ ಮಾತನಾಡಿ, `ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಹಗಲಿರುಳು ಶ್ರಮಿಸಿದ ಪರಮೇಶ್ವರ್ ಅವರು ಚುನಾವಣೆಯಲ್ಲಿ ಸೋತಿದ್ದು ನೋವಿನ ಸಂಗತಿ. ಅವರ ಸೋಲಿಗೆ ಕಾರಣವಾದ ಅಂಶಗಳು ತಿಳಿದಿದ್ದರೂ ಅವೆಲ್ಲವನ್ನೂ ನುಂಗಿಕೊಂಡು ವಿಷಕಂಠರಾಗಿದ್ದಾರೆ' ಎಂದು ಹೇಳಿದರು.ತಪ್ಪು ಮಾಡಿದ್ದೆ: `ಕಾಂಗ್ರೆಸ್ ಬಿಟ್ಟು ದೊಡ್ಡ ತಪ್ಪು ಮಾಡಿದ್ದೆ. ಈಗ ಅದರ ಅರಿವಾಗಿ ಮತ್ತೆ ಮರಳಿ ಗೂಡಿಗೆ ಬಂದಿದ್ದೇನೆ. ಪಕ್ಷಕ್ಕಾಗಿ ದುಡಿಯುತ್ತೇನೆ' ಎಂದು ಮುದ್ದಹನುಮೇಗೌಡ ಪ್ರತಿಕ್ರಿಯೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.