ಗುರುವಾರ , ಜೂನ್ 24, 2021
23 °C
ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ

ಅವಧಿ ಮುಗಿದರೂ ಉಳಿದ ನಿಯೋಜನೆ ಸಿಬ್ಬಂದಿ

ಎ.ಎಂ.ಸುರೇಶ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಿಯೋಜನೆ ಮೇಲೆ ಕಾರ್ಯನಿರ್ವಹಿ­ಸುತ್ತಿರುವ ಬೋಧಕೇತರ ಸಿಬ್ಬಂದಿ­ಯನ್ನು ಅವಧಿ ಮುಗಿದ ನಂತರವೂ ನಿಯಮಬಾಹಿರವಾಗಿ ಸೇವೆ­ಯಲ್ಲಿ ಮುಂದುವರಿಸಿರುವ ಪ್ರಕರಣ ರಾಜೀವ್‌­ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಬೆಳಕಿಗೆ ಬಂದಿದೆ.ವಿಶ್ವವಿದ್ಯಾಲಯದಲ್ಲಿ ಒಟ್ಟು 16 ಮಂದಿ ಬೋಧಕೇತರ ಸಿಬ್ಬಂದಿ ನಿಯೋಜನೆ ಮೇಲೆ ಕಾರ್ಯನಿರ್ವಹಿಸು ತ್ತಿದ್ದಾರೆ. ಇದರಲ್ಲಿ 13 ಜನ ಖಾಸಗಿ ಕಾಲೇಜುಗಳ ಸಿಬ್ಬಂದಿ. ಇಬ್ಬರು ರಾಜ್ಯ ಲೆಕ್ಕಪತ್ರ ಇಲಾಖೆಯ ನೌಕರರು. ಒಬ್ಬರು ಕುವೆಂಪು ವಿಶ್ವವಿದ್ಯಾಲಯದ ಸಿಬ್ಬಂದಿ.ಮೂರು ವರ್ಷದ ಅವಧಿಗೆ ಮಾತ್ರ ನಿಯೋಜನೆ ಮೇಲೆ ಸಿಬ್ಬಂದಿಯನ್ನು ತೆಗೆದುಕೊಳ್ಳಲು ಅವಕಾಶ ಇದೆ. ತೀರಾ ಅನಿವಾರ್ಯವಾದರೆ 5 ವರ್ಷದವರೆಗೆ ಮುಂದುವರಿಸಬಹುದು ಎಂದು ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸಭೆಯಲ್ಲಿ ನಿರ್ಣಯವಾಗಿದೆ. ಅಲ್ಲದೆ ರಾಜ್ಯ ಸರ್ಕಾರದ ನಾಗರಿಕ ಸೇವಾ ನಿಯಮಗಳಲ್ಲೂ ಇದನ್ನು ಸ್ಪಷ್ಟವಾಗಿ ತಿಳಿಸಲಾಗಿದೆ.

ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ­ವಿದ್ಯಾಲಯ ಕಾಯ್ದೆಗೆ ಕಳೆದ ಡಿಸೆಂಬರ್‌ನಲ್ಲಿ ಮಾಡಿ­ರುವ ತಿದ್ದುಪಡಿ ಪ್ರಕಾರ ಅನುದಾನಿತ, ಅನುದಾನ­ರಹಿತ ಖಾಸಗಿ ಕಾಲೇಜುಗಳ ಸಿಬ್ಬಂದಿಯನ್ನು ನಿಯೋಜನೆ ಮೇಲೆ ತೆಗೆದುಕೊಳ್ಳಲು ಅವಕಾಶ ಇಲ್ಲ.ರಾಜ್ಯ ಸರ್ಕಾರದ ಅಧಿಕಾರಿಗಳು ಅಥವಾ ಸರ್ಕಾರಿ ವೈದ್ಯಕೀಯ ಕಾಲೇಜಿನ ಸಿಬ್ಬಂದಿಯನ್ನು 3 ವರ್ಷ­ಗಳ ಅವಧಿಗೆ ಮಾತ್ರ ನಿಯೋಜನೆ ಮೇಲೆ ತೆಗೆದುಕೊಳ್ಳಬಹುದೆಂದು ಸ್ಪಷ್ಟವಾಗಿ ಹೇಳಲಾಗಿದೆ.ಇಷ್ಟಾದರೂ, ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ದಲ್ಲಿ 8 ಮಂದಿ ಸಹಾಯಕ ಕುಲ­ಸಚಿವರು, ಮೂವರು ಉಪ ಕುಲಸಚಿ­ವರು, ಇಬ್ಬರು  ಗ್ರಂಥಾಲಯ ಸಹಾಯ­ಕರು ಸೇರಿದಂತೆ 16 ಮಂದಿ ನಿಯೋಜನೆ ಮೇಲೆ ಕಾರ್ಯನಿವರ್ಹಿ ಸುತ್ತಿದ್ದಾರೆ.ಇವರಲ್ಲಿ ನಾಲ್ವರು ಸಹಾಯಕ ಕುಲಸಚಿವರು ಆರು ವರ್ಷಕ್ಕೂ ಹೆಚ್ಚು ಅವಧಿಯಿಂದ ನಿಯೋಜನೆ­ಯಲ್ಲಿದ್ದಾರೆ.  ಒಬ್ಬರು ಐದು ವರ್ಷ,

ಮತ್ತೊಬ್ಬರು ಮೂರೂ­ವರೆ ವರ್ಷದಿಂದ ನಿಯೋಜನೆ ಮೇಲೆ ಸೇವೆಯಲ್ಲಿದ್ದಾರೆ. ಹೆಚ್ಚುವರಿ ಅಧೀಕ್ಷಕರೊಬ್ಬರು ಸುಮಾರು 14 ವರ್ಷದಿಂದ, ಲೆಕ್ಕಾಧಿಕಾರಿ­ಯೊಬ್ಬರು 9 ವರ್ಷದಿಂದ ನಿಯೋಜನೆಯಲ್ಲಿದ್ದಾರೆ.ತಿದ್ದುಪಡಿ ಕಾಯ್ದೆ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ನಿಯೋಜನೆ ಮೇಲೆ ಕಾರ್ಯನಿರ್ವ­ಹಿಸುತ್ತಿರುವ ಸಿಬ್ಬಂದಿಯನ್ನು ಸೇವೆಯಿಂದ ಬಿಡುಗಡೆ ಗೊಳಿಸುವಂತೆ ಕೋರಿ  ಜನವರಿಯಲ್ಲಿ ಎರಡು ಬಾರಿ ಕುಲಪತಿಗಳಿಗೆ ಪತ್ರ ಬರೆಯಲಾಗಿತ್ತು. ಆದರೆ, ಇದುವರೆಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ವಿಶ್ವವಿದ್ಯಾಲಯ ನೌಕರರ ಸಂಘದ ಅಧ್ಯಕ್ಷ ಕೆ.ಟಿ.ನೆಹರು ಅಸಮಾಧಾನ ವ್ಯಕ್ತಪಡಿಸಿದರು.ಕರ್ನಾಟಕ ನಾಗರಿಕ ಸೇವಾ ನಿಯಮ ಗಳನ್ನೇ ಆಧಾರವಾಗಿಟ್ಟುಕೊಂಡು ನಿಯೋಜನೆ ಮೇಲೆ 5 ವರ್ಷದ ಅವಧಿ ಪೂರೈಸಿದ್ದ ಸಹಾಯಕ ಕುಲಸಚಿವ ಡಾ.ರಾಜ್‌ಕುಮಾರ್ ಡೊಂಗ್ರೆ ಅವರನ್ನು 2012ರ ನವೆಂಬರ್‌ನಲ್ಲಿ ಮಾತೃ ಇಲಾಖೆಗೆ ವಾಪಸ್‌ ಕಳುಹಿಸಲಾಗಿತ್ತು. ಉಳಿದವರನ್ನೂ ಅದೇ ರೀತಿ ವಾಪಸ್‌ ಕಳುಹಿಸ­ಬೇಕಾಗಿತ್ತು. ಆದರೆ, ಇದು­ವರೆಗೂ ಕಳುಹಿಸಿಲ್ಲ.ಉದ್ದೇಶಪೂರ್ವಕ­ವಾಗಿಯೇ ಅವರನ್ನು ರಕ್ಷಿಸುವ ಪ್ರಯತ್ನ ನಡೆದಿದೆ ಎಂಬ ಮಾತು­ಗಳು ವೈದ್ಯ­ಕೀಯ ಇಲಾಖೆಯಲ್ಲೇ ಕೇಳಿಬರುತ್ತಿವೆ.ಖಾಸಗಿ ಕಾಲೇಜುಗಳ ಹಿತಾಸಕ್ತಿ ಕಾಪಾಡಲು ಹಿಂದೆ ಒಂದೊಂದು ಕಾಲೇಜಿನಿಂದ ಒಬ್ಬರನ್ನು ನಿಯೋಜನೆ ಮೇಲೆ ತೆಗೆದುಕೊಳ್ಳಲಾಗಿದೆ. ವಿಶ್ವ ವಿದ್ಯಾಲಯದಲ್ಲಿ ಪಾರದರ್ಶಕ ವ್ಯವಸ್ಥೆ ಇಲ್ಲ ಎಂದು ಹಿರಿಯ ಅಧಿಕಾರಿ ಯೊಬ್ಬರು ತಿಳಿಸಿದರು.ತಿದ್ದುಪಡಿ ಕಾಯ್ದೆಗೆ ರಾಜ್ಯಪಾಲರ ಒಪ್ಪಿಗೆ ದೊರೆತಿದೆ. ಆದರೆ, ಇನ್ನೂ ನಿಯಮಾವಳಿಗಳನ್ನು ರೂಪಿಸಿಲ್ಲ. ನಿಯಮಾವಳಿ ರಚನೆಯಾದ ನಂತರ ತಿದ್ದುಪಡಿ ಕಾಯ್ದೆ ಪ್ರಕಾರ ಬೋಧಕೇತರ ಹುದ್ದೆಗಳಿಗೆ ನೇಮಕ ಮಾಡಲಾಗುತ್ತದೆ ಎಂದರು.ಸಮರ್ಥನೆ: ನಿಯೋಜನೆ ಮೇಲೆ ಕಾರ್ಯನಿರ್ವಹಿ­ಸುತ್ತಿರುವ ಸಿಬ್ಬಂದಿಯನ್ನು ಏಕಾಏಕಿ ತೆಗೆದರೆ ವಿಶ್ವವಿದ್ಯಾಲಯದ ಕಾರ್ಯ ಚಟುವಟಿಕೆಗಳಿಗೆ ತೊಂದರೆ ಆಗುತ್ತದೆ. ಹೀಗಾಗಿ ಅವರನ್ನು ಸೇವೆಯಲ್ಲಿ ಮುಂದುವರಿಸಲಾಗಿದೆ. ವಿಶ್ವವಿದ್ಯಾಲ ಯದ ಕಾಯ್ದೆಗೆ ತಿದ್ದುಪಡಿ ಆಗಿರುವ ಕಾರಣ ಸರ್ಕಾರವೇ ಹೊಸಬರನ್ನು ನೇಮಕ ಮಾಡಬೇಕು ಎಂದು ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿಯೊಬ್ಬರು ಸಮರ್ಥಿಸಿಕೊಂಡರು.ಪತ್ರಕ್ಕೆ ಕಿಮ್ಮತ್ತಿಲ್ಲ !

ಖಾಸಗಿ ಕಾಲೇಜುಗಳ ಸಿಬ್ಬಂದಿ ಯನ್ನು ನಿಯೋಜನೆ ಮೇಲೆ ತೆಗೆದು ಕೊಳ್ಳಬಾರದು ಎಂದು ಸರ್ಕಾರ ಸ್ಪಷ್ಟವಾಗಿ ಹೇಳಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿಯಾಗಿದ್ದ ಡಿ.ವಿ.ಪ್ರಸಾದ್ ಅವರು 2005ರಲ್ಲಿ ಆಗಿನ ಕುಲಪತಿ ಡಾ. ಚಂದ್ರಶೇಖರ್‌ ಅವರಿಗೆ ಈ ಸಂಬಂಧ ಪತ್ರ ಬರೆದಿದ್ದರು. ಆದರೆ ಇದರ ಪಾಲನೆಯಾಗಿಲ್ಲ. 2005ರ ನಂತರವೂ ಖಾಸಗಿ ಕಾಲೇಜುಗಳಿಂದ ನಿಯೋಜನೆ ಮೂಲಕ ಸಿಬ್ಬಂದಿಯನ್ನು ನೇಮಕ ಮಾಡಿ ಕೊಳ್ಳಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.