ಅವನಂತಲ್ಲದ ಇವ

7

ಅವನಂತಲ್ಲದ ಇವ

Published:
Updated:
ಅವನಂತಲ್ಲದ ಇವ

ಚಿತ್ರ: ಗಬ್ಬರ್ ಸಿಂಗ್ (ತೆಲುಗು)

ಹರೀಶ್ ಶಂಕರ್ ನಿರ್ದೇಶನದ ತಕಲಿಯಲ್ಲಿ ಚಂದದ ವಸ್ತ್ರವೊಂದು  ರೂಪುಗೊಂಡಿದೆ. ಸಲ್ಮಾನ್‌ಖಾನ್ ಅಭಿನಯದ `ದಬಾಂಗ್~ ಚಿತ್ರದ ತೆಲುಗು ಅವತರಣಿಕೆಯಾದರೂ `ಗಬ್ಬರ್ ಸಿಂಗ್~ಗೆ ತೆಲುಗು ಸೊಗಡಿದೆ. ಕಥಾನಾಯಕ ವೆಂಕಟರತ್ನಂ ನಾಯ್ಡುವಿನ ತಾಯಿ ಎರಡನೇ ಮದುವೆಯಾದವಳು. ಮಲತಂದೆಗೆ ಈತನ ಬಗ್ಗೆ ಮಮತೆ ಅಷ್ಟಕ್ಕಷ್ಟೇ. ಮುಂದೆ ವೆಂಕಟರತ್ನಂ ನಾಯ್ಡು ಪೊಲೀಸ್ ಅಧಿಕಾರಿಯಾಗುತ್ತಾನೆ.ಗಬ್ಬರ್‌ಸಿಂಗ್ ಎಂಬ ಹೊಸ ಹೆಸರಿನೊಂದಿಗೆ ಅಬ್ಬರಿಸುತ್ತಾನೆ. ಸ್ವಂತ ಊರು ಕೊಂಡವೀಡುವಿಗೆ ವರ್ಗವಾಗಿ ಬಂದ ಆತನ ಎದುರು ರೌಡಿ ಗ್ಯಾಂಗ್ ಇದೆ. ತೋಳ್ಬಲದ ಸಿದ್ದಪ್ಪ ನಾಯ್ಡು ರಾಜಕೀಯವಾಗಿ ಬೆಳೆಯಲು ಹಾತೊರೆಯುತ್ತಿರುವವನು.ಆದರೆ ಅದಕ್ಕೆ ಮುಳ್ಳಾಗುವುದು ಗಬ್ಬರ್‌ಸಿಂಗ್. ಆಗ ಅಸ್ತ್ರ- ಪ್ರತ್ಯಸ್ತ್ರಗಳ ಮಳೆ. ಆತನ ಒಲವಿನರಸಿ ಭಾಗ್ಯಲಕ್ಷ್ಮಿ. ಪ್ರೇಮ ಹಬೆಯಾಡುವ ಕಾಲಕ್ಕೆ ಕಾದ ಸಿದ್ದಪ್ಪ ನಾಯ್ಡು ಇಬ್ಬರ ಮದುವೆಗೆ ಅಡ್ಡಿಪಡಿಸಲು ಯತ್ನಿಸಿ ಸೋಲುತ್ತಾನೆ. ಈ ನಡುವೆ ಗಬ್ಬರ್‌ಸಿಂಗ್‌ಗೆ ಮಾತೃ ವಿಯೋಗ. ವೈರಿ ಪಡೆಯ ಕೈ ಮೇಲಾಗುತ್ತದೆ. ಇದನ್ನೆಲ್ಲಾ ನಾಯಕ ಹೇಗೆ ಮೆಟ್ಟಿ ನಿಲ್ಲುತ್ತಾನೆ ಎಂಬುದು ಚಿತ್ರದ ತಿರುಳು.ನಿರೂಪಣೆಯಲ್ಲಿ `ದಬಾಂಗ್~ಗಿಂತಲೂ ಚಿತ್ರ ಒಂದು ಹೆಜ್ಜೆ ಮುಂದು. ಅಲ್ಲಿ ಅಷ್ಟಾಗಿ ಕಾಣದ ಹಾಸ್ಯ ಇಲ್ಲಿ ಧಾರೆಯಾಗಿದೆ. ಆದಿವಾಸಿ ಕುಶಲ ಕಲೆಯ ಚಿತ್ರಣದಿಂದಾಗಿ ಅನೇಕ ದೃಶ್ಯಗಳಿಗೆ ಕಲಾತ್ಮಕ ಸ್ಪರ್ಶ. ಕತೆ ಇರಲಿ, ಸಾಹಸ ದೃಶ್ಯಗಳಲ್ಲೂ `ದಬಾಂಗ್~ ಛಾಯೆ ಇಣುಕದಂತೆ ನಿರ್ದೇಶಕರದು ಎಚ್ಚರದ ನಡಿಗೆ.ದೇವಿ ಶ್ರೀಪ್ರಸಾದ್ ಸಂಗೀತ ಕಿವಿಗೆ ಇಂಪು. ವಿದೇಶದ ಸುಂದರ ತಾಣಗಳು ಹಾಡಿನ ಚೆಲುವನ್ನು ಹೆಚ್ಚಿಸಿವೆ. ಜಯನನ್ ವಿನ್ಸೆಂಟ್‌ರ ಛಾಯಾಗ್ರಹಣಕ್ಕೆ ದೃಶ್ಯ ಸಮೃದ್ಧತೆ. ಹೊಡೆದಾಟದ ದೃಶ್ಯಗಳಲ್ಲಿ ಗೌತಮ್‌ರಾಜು ಸಂಕಲನ ಹೆಚ್ಚು ಕೆಲಸ ಮಾಡಿದೆ.

ನಾಯಕ ಪವನ್ ಕಲ್ಯಾಣ್ ಮಾತಿನ ಮಲ್ಲ.ಬಂದೂಕಿನಲ್ಲಿ ಗುಂಡು ಸಿಡಿದಷ್ಟೇ ಸಲೀಸಾಗಿ ಅವರ ಮಾಯ್ಕಾರ ಮಾತುಗಳು ಸಿಡಿದಿವೆ. ಎಂದಿನಂತೆ ನೃತ್ಯದತ್ತ ಅವರ ಧ್ಯಾನ ಹೆಚ್ಚು. ಹಳ್ಳಿ ಹುಡುಗಿ ಭಾಗ್ಯಲಕ್ಷ್ಮಿಯಾಗಿ ಶೃತಿ ಹಾಸನ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಾಯಕನ ಸುತ್ತಲೇ ಗಿರಕಿ ಹೊಡೆಯುವ ಕತೆಯಲ್ಲಿ ಅವರಿಗೆ ದೊರೆತ ಚಿಕ್ಕ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡಿದ್ದಾರೆ.ಆದರೆ ಅವರ ಮೈ ಮೇಲಿನ `ಟ್ಯಾಟೂ~ ಹಳ್ಳಿಯ ಮುಗ್ಧತೆಗೆ ಸವಾಲೊಡ್ಡುವಂತಿದೆ! ಸಾಂಬಾ ಪಾತ್ರಧಾರಿಯಾಗಿ ಅಲಿ, ಬ್ಯಾಂಕ್ ರಿಕವರಿ ಅಧಿಕಾರಿಯಾಗಿ ಬ್ರಹ್ಮಾನಂದಂ ಹಾಸ್ಯದ ಹೊನಲು ಹರಿಸಿದ್ದಾರೆ. ನಾಯಕಿಯ ತಂದೆಯಾಗಿ ಪೋಷಕನಟ ಕೋಟಾ ಶ್ರೀನಿವಾಸ್‌ರಾವ್ ಅವರಿಗೆ ಭಿನ್ನ ಪಾತ್ರ. ಪೋಷಕ ಪಾತ್ರಗಳಲ್ಲಿ ಸುಹಾಸಿನಿ, ನಾಗಿನೀಡು, ರಾವ್ ರಮೇಶ್ ಖಳನಾಯಕರಾಗಿ ತನಿಕೇಳ್ಳ ಭರಣಿ, ಅಭಿಮನ್ಯು ಸಿಂಗ್ ಕತೆಗೆ ರಕ್ತ ಮಾಂಸ ತುಂಬಿದ್ದಾರೆ.`ಮಿರಪಕಾಯ್~ನಂಥ ಹಿಟ್ ಚಿತ್ರ ಕೊಟ್ಟ ನಿರ್ದೇಶಕರು, ತೆಲುಗು ಪ್ರೇಕ್ಷಕರು ಹಾಗೂ ಪವನ್ ಅಭಿಮಾನಿಗಳ ಮನವರಿತು ಚಿತ್ರ ಹೆಣೆದಿದ್ದಾರೆ. ಶೀರ್ಷಿಕೆಗೆ ತಕ್ಕಂತೆ ಹಿಂದಿಯ ಅಜರಾಮರ ಚಿತ್ರ `ಶೋಲೆ~ಯ ನೆನಪು ಚಿತ್ರದಲ್ಲಿ ಇಣುಕಿದೆ. ಖಳರಿಗೆ ಖಳನಾಗಿ ನಿಂತ ತೆಲುಗಿನ ಗಬ್ಬರ್‌ಗೆ ಹೊಸ ಹುರುಪು-ಹೊಳಪು ದಕ್ಕಿದೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry