ಅವನತಿ ಅಂಚಿನಲ್ಲಿ ಹಬ್ಬುಶೇಂಗಾ ಬೆಳೆ

7

ಅವನತಿ ಅಂಚಿನಲ್ಲಿ ಹಬ್ಬುಶೇಂಗಾ ಬೆಳೆ

Published:
Updated:

ಹನುಮಸಾಗರ:  ಮಸಾರಿ ಭೂಮಿಯಲ್ಲಿ ಅಸಲು ಬೆಳೆಯಾಗಿದ್ದ ಹಬ್ಬುಶೇಂಗಾ ಬೆಳೆ ಕಳೆದ ಹತ್ತಾರು ವರ್ಷಗಳಿಂದ ಬಿತ್ತನೆ ಪ್ರಮಾಣ ಗಮನಾರ್ಹವಾಗಿ ಕಡಿಮೆಯಾಗುತ್ತಾ ಬಂದಿದ್ದು ಈಚೆಗೆ ಹಬ್ಬುಶೇಂಗಾದ ಬೀಜಗಳೆ ಮಾಯವಾದಂತಾಗಿವೆ.ಆದರೆ ಈ ಬಾರಿ ಮುಂಗಾರು ಮಳೆಗೆ ಹನುಮಸಾಗರ ಭಾಗದ ಮಾವಿನ ಇಟಗಿ, ಗುಡದೂರಕಲ್, ಬಾದಿಮನಾಳ ಗ್ರಾಮಗಳಲ್ಲಿ ಕೆಲ ರೈತರು ಹಬ್ಬುಶೇಂಗಾ ಬೆಳೆ ಬಿತ್ತನೆ ಮಾಡಿದ್ದು ಕಂಡು ಬರುತ್ತಿದ್ದು ಸದ್ಯ ಮಳೆಗಾಗಿ ಬೆಳೆ ಬಾಯ್ತೆರದಂತಿದೆ.ಜಾನುವಾರುಗಳಿಗೆಂದೆ ಬೆಳೆಯುತ್ತಿದ್ದ ಹಬ್ಬು ಶೇಂಗಾ ಕೃಷಿಯನ್ನು ಈಗೀಗ ಬಹಳಷ್ಟು ರೈತರು ಕೈ ಬಿಟ್ಟಿದ್ದಾರೆ. ಹಬ್ಬುಶೇಂಗಾದಲ್ಲಿ ಎಣ್ಣೆ ಅಂಶ ಕಡಿಮೆ ಇರುವುದರಿಂದ ಮಾರುಕಟ್ಟೆಯಲ್ಲಿ ಈ ಬೆಳೆಗೆ ಉತ್ತಮ ಬೆಲೆಯಿಲ್ಲ, ಸುಮಾರು 5ತಿಂಗಳದ ದೀರ್ಘಾವಧಿ ಬೆಳೆ ಇದಾಗಿರುವುದು, ಕನಿಷ್ಟ ನಾಲ್ಕಾರು ಮತ್ತಮ ಮಳೆಗಳು ಇದಕ್ಕೆ ಬೇಕಾಗಿರುವುದು, ಜಾನುವಾರುಗಳ ಸಂಖ್ಯೆ ಕಡಿಮೆಯಾಗಿರುವುದರಿಂದ ಹೊಟ್ಟಿನ ಅವಶ್ಯಕತೆ ರೈತರಿಗಿಲ್ಲದಿರುವುದು ಇಂತಹ ಅನೇಕ ಕಾರಣಗಳಿಂದ ಮಣ್ಣಿಗೆ ಅಧಿಕ ಪ್ರಮಾಣದಲ್ಲಿ ಸಾರಜನಕ ಒದಗಿಸುವ ಈ ಬೆಳೆ ಹಲವಾರು ವರ್ಷಗಳಿಂದ ಗೌಣವಾಗಿರುವುದು ಕಂಡು ಬರುತ್ತಿದೆ.ದನದ ಮೋತಿ ನೋಡಿದ್ರ ಹಬ್ಬು ಶೇಂಗಾ ಹಾಕಬೇಕನಸ್ತೈತಿ, ಆದ್ರ ಮಳಿಯಪ್ಪನ ದಾರಿ. ಪ್ಯಾಟ್ಯಾಗಿನ ಧಾರಣಿ ನೋಡಿದ್ರ ಹಬ್ಬು ಶೇಂಗಾ ಬಿತ್ತಬಾರ‌್ದು ನೋಡ್ರಿ ಎಂದು ಮಾವಿನಇಟಗಿ ಗ್ರಾಮದ ಬಸವಂತಪ್ಪ ಹೇಳುತ್ತಾರೆ.

ಈ ಭಾಗದ ಬಿಸಿ ವಾತಾವರಣ, ಮಣ್ಣು ಹಾಗೂ ಹವಾಮಾನ ಹಬ್ಬು ಶೇಂಗಾ ಬೆಳೆಗೆ ಪೂರಕವಾಗಿರುವುದರಿಂದ ಅನಾದಿ ಕಾಲದಿಂದಲೂ ಹಬ್ಬುಶೇಂಗಾ ಬಿತ್ತನೆ ಎಗ್ಗಿಲ್ಲದೆ ನಡೆಯುತ್ತಿತ್ತು.ಹಬ್ಬುಶೇಂಗಾ ಬೆಳೆದರೆ ಭಾರತ ಹುಣ್ಣಿಮೆ, ಬೆಳೆಯದಿದ್ದರೆ ಹೋಳಿ ಹುಣ್ಣಿಮೆ ಇದ್ದಾಂಗ್ರಿ, ಹಿಂಗಾಗಿ ರೈತರು ಈ ಬೆಳೆ ಬಿತ್ತಾಕ ಹಿಂದ ಮುಂದ ನೋಡ್ತಾರ‌್ರಿ, ಈ ಶೇಂಗಾಕ್ಕೆ ಉತ್ತಮ ಮಳೆಗಾಲವಿಲ್ಲದಿದ್ದರೆ ಹಾಕಿದ ಬೀಜ, ಗೊಬ್ಬರದ ಗಂಟು ಕೈಸೇರುವ ವಿಶ್ವಾಸವಿರುವುದಿಲ್ಲ ಎಂದು ಗುಡದೂರಕಲ್ ಗ್ರಾಮದ ಭೀಮಪ್ಪ ಹೇಳುತ್ತಾರೆ.ಉತ್ತಮ ನಾಲ್ಕಾರು ಮಳೆಯಾದರೆ ನೆಲದ ತುಂಬೆಲ್ಲಾ ಹಬ್ಬಿ ಉತ್ತಮ ಇಳುವರಿ ತರುತ್ತದೆ. ಈ ಹಿಂದೆ ರೈತರಿಗೆ ಹಣದ ಲಾಭಕ್ಕಿಂತ ಜಾನುವಾರುಗಳ ಹೊಟ್ಟು, ಮೇವಿನ ಮೇಲೆ ಅತೀವ ಕಾಳಜಿ ಇದ್ದರಿಂದಾಗಿಯೇ ಅವರು ಈ ಬೆಳೆಯನ್ನು ಒಣಬೇಸಾಯದ ಮುಖ್ಯ ಬೆಳೆಯನ್ನಾಗಿಸಿಕೊಂಡಿದ್ದರು.ಇಳುವರಿ ಬರುವುದು ಒಂದೆಡೆಯಾದರೆ ಈ ಬಳ್ಳಿಯಿಂದ ದೊರಕುವ ಹೊಟ್ಟು ಹೆಚ್ಚು ಪೋಷಕಾಂಶಗಳನ್ನು ಹೊಂದಿರುವದರಿಂದ ಜಾನುವಾರುಗಳಿಗೆ ಉತ್ತಮ ಆಹಾರವಾಗಿರುತ್ತದೆ. ಗೆಜ್ಜೆ ಶೇಂಗಾ ಹೆಚ್ಚು ಎಣ್ಣೆ ಅಂಶ ಹೊಂದಿ ಮಾರುಕಟ್ಟೆಯಲ್ಲಿ ಬೇಡಿಕೆ ಪಡೆದರೆ ಹಬ್ಬುಶೇಂಗಾದಲ್ಲಿ ಎಣ್ಣೆಯ ಪ್ರಮಾಣ ಕಡಿಮೆ ಇರುವುದರಿಂದಾಗಿಯೇ ಖರೀದಿದಾರರು ಗೆಜ್ಜೆ ಶೇಂಗಾ ಕೊಳ್ಳಲು ತೋರುವ ಒಲವು ಹಬ್ಬು ಶೇಂಗಾಕ್ಕೆ ತೋರುವುದಿಲ್ಲ. ಜೂಜಾಟದಂತಿರುವ ಮಳೆಗಾಲ, ಕಣ್ಣು ಮುಚ್ಚಾಲೆಯಾಡುವ ವಿದ್ಯುತ್, ಏರುತ್ತಿರುವ ರಸಗೊಬ್ಬರದ ಬೆಲೆ, ಹಬ್ಬು ಶೇಂಗಾದ ಬೀಜ ಸಿಗದಿರುವುದು, ಕೂಲಿ ಆಳಿನ ಸಮಸ್ಯೆ ಈ ಎಲ್ಲಾ ಕಾರಣಗಳಿಂದಾಗಿ ರೈತರು ಹಬ್ಬು ಶೇಂಗಾಕ್ಕೆ ಗುಡ್ ಬೈ  ಹೇಳುತ್ತಿದ್ದಾರೆ.ಕಳೆದ ಹತ್ತಾರು ವರ್ಷಗಳಿಂದ ಬಿತ್ತನೆ ಪ್ರಮಾಣ ಸಂಪೂರ್ಣ ಕಡಿಮೆಯಾಗಿರುವುದರಿಂದ ದನಗಳ ಕೊಟ್ಟಿಗೆಯಲ್ಲಿ ಈಗ ಈ ಬಗೆಯ ಹೊಟ್ಟು ಕಾಣುತ್ತಿಲ್ಲ. ನಾವು ಹಬ್ಬು ಶೇಂಗಾ ಬಿತ್ತೂದು ರೊಕ್ಕಕ್ಕಲ್ರಿ, ದನದ ಹೊಟ್ಟೆಗೆ ಈ ಹೊಟ್ಟು ದಕ್ಕಲಿ ಅಂತ. ಗೆಜ್ಜೆಶೇಂಗಾದ ಹೊಟ್ಟು ಮಳೆಗೆ ತೊಯ್ದರೆ ಕೊಳಿತೈತಿ.ಆದ್ರ ಹಬ್ಬು ಶೇಂಗಾದ ಹೊಟ್ಟು ತೊಯ್ದರೂ ಗರಿ ಗರಿಯಾಗಿ ಒಣಗಿದ ಬಳಿಕ ಜಾನುವಾರುಗಳ ಬಾಯಿಗೆ ರುಚಿ ಕೊಡುತೈತಿ ಎನ್ನುವ ಸಂಗಪ್ಪ ಕಳೆದ ವರ್ಷ ನಾಲ್ಕು ಎಕರೆಯಲ್ಲಿ ಹಬ್ಬು ಶೇಂಗಾ ಬಿತ್ತಿದ್ದರೆ ಮಳೆ ಇಲ್ಲದ್ದರಿಂದ ಕೇವಲ ಮೂರು ಚೀಲ ಮಾತ್ರ ಇಳುವರಿ ಬಂದಿದೆ. ಆದರೆ ಕನಿಷ್ಟ ಪಕ್ಷ ಹೊಟ್ಟು ದೊರಕಿತಲ್ಲ ಎಂಬ ಸಂತೋಷ ಅವರಲ್ಲಿದೆ.ಹಬ್ಬು ಶೇಂಗಾದ ಬೇರು, ಬಳ್ಳಿಯಲ್ಲಿ ಸಾಕಷ್ಟು ರೈಜೋಬಿಯಂ ಅಣುಜೀವಿಗಳು ಇರುವುದರಿಂದ ಮಣ್ಣಿನಲ್ಲಿ ಸಾಕಷ್ಟು ಸಾರಜನಕದ ಪ್ರಮಾಣ ಸಂಗ್ರಹವಾಗುತ್ತದೆ. ಅಲ್ಲದೆ ಬಳ್ಳಿ ಹರಗಿದ ನಂತರ ಮಣ್ಣಿನಲ್ಲಿ ಮುಚ್ಚಿ ಹೋದ ಶೇಂಗಾ ಹೆಕ್ಕಲು ಮೇಲಿಂದ ಮೇಲೆ ನೇಗಿಲು, ಕುಂಟೆ ಹೊಡೆಯುವುದು. ಕೈಯಿಂದ ಕೆದರುವಂತಹ ಕೃಷಿ ಚಟುವಟಿಕೆಗಳು ನಡೆಯುವುದರಿಂದ ಮಣ್ಣು ಹಸನಗೊಳ್ಳುವುದರ ಜೊತೆಗೆ ಮಣ್ಣಿನಲ್ಲಿರುವ ರೋಗಾಣುಗಳು ಹಬ್ಬದಂತಾಗುತ್ತವೆ.ಹಬ್ಬುಶೇಂಗಾ ಬೆಳೆದ ಜಮೀನಿನಲ್ಲಿ ಮುಂದೆ ಬಿತ್ತನೆ ಮಾಡುವ ಯಾವುದೇ ಬೆಳೆ ಹುಲುಸಾಗಿ ಬೆಳೆದು ರೈತನ ಕೈ ಹಿಡಿಯುವಲ್ಲಿ ಸಂದೇಹವಿಲ್ಲ ಎನ್ನಬಹುದಾಗಿದೆ.ಸದ್ಯ ಮರು ಹುಟ್ಟು ಪಡೆಯಬಲ್ಲ ಕೆಲವೇ ಕೆಲವು ದೇಶೀಯ ಬೀಜ ತಳಿಗಳ ಪೈಕಿ ಈ ಹಬ್ಬುಶೇಂಗಾ            ಒಂದಾಗಿದೆ.ಈಗಾಗಲೇ ಬಿತ್ತನೆ ಪ್ರಮಾಣ ಕಡಿಮೆಯಾಗಿರುವುದುರಿಂದ ಬೀಜಕ್ಕಾಗಿ ತಡಕಾಡುವ ಸಂದರ್ಭ ಬಂದಿದೆ. ಮುಂದೊಂದು ದಿನ ಹಬ್ಬುಶೇಂಗಾ ಬೀಜ ಇಲ್ಲದಂತಾಗಲೂಬಹುದು ಎಂಬ ಆತಂಕ ರೈತರದಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry