ಅವನಲ್ಲದ ನಾನು

ಶನಿವಾರ, ಜೂಲೈ 20, 2019
22 °C

ಅವನಲ್ಲದ ನಾನು

Published:
Updated:

`ಕನ್ನಡಿ ಮುಂದೆ ನಿಂತಾಗ ನಾನು `ಅವಳು' ಎನ್ನಿಸುತ್ತಿತ್ತು. ಗಂಡು ದೇಹವಿದ್ದರೂ ಹಾವ- ಭಾವ- ಭಂಗಿ- ನೋಟ ಪ್ರತಿಯೊಂದರಲ್ಲೂ ಅರಿವಿಲ್ಲದೇ ಹೆಣ್ಣು ತುಂಬಿಕೊಳ್ಳುತ್ತಿದ್ದಳು. ಆಕೆಯನ್ನೇ ಹೋಲುತ್ತಿದ್ದ ನನಗೆ ಆಗಾಗ ಉಂಟಾಗುತ್ತಿದ್ದ ಹೆಣ್ಣಿನ ಸಹಜ ಭಾವನೆಗಳು, ತುಮುಲಗಳಿಂದ ಕಚಗುಳಿ ಇಟ್ಟಂತಾಗುತ್ತಿತ್ತು.

ಭರತನಾಟ್ಯದ ಪ್ರತಿ ಮಟ್ಟುವಿನಲ್ಲೂ ಹೆಣ್ಣಿನ ಲಾಸ್ಯದಂತೇ ಹೆಜ್ಜೆ ಮೂಡುತ್ತಿತ್ತು. ಈ ಗಂಡು ದೇಹದೊಳಗೆ ಹೆಣ್ಣೊಬ್ಬಳು ಇದ್ದಾಳೆ ಎಂಬ ಭಾವವದು. ನಾನು ಪರಿವರ್ತನೆ ಹೊಂದಲು ಬಹಳ ದಿನ ಹಿಡಿಯಲಿಲ್ಲ. ಹೆಣ್ಣಿಗೆ ಭಾವನೆಗಳನ್ನು ಹಿಡಿದಿಡಲು ಸಾಧ್ಯವಿಲ್ಲ ಎನ್ನುತ್ತಾರೆ. ಆದರೆ ಗಂಡಿನ ದೇಹ ಹೊತ್ತು, ಹೆಣ್ಣಿನ ಭಾವಗಳನ್ನೇ ತುಂಬಿಕೊಂಡು ಎಲ್ಲರಂತಲ್ಲದ ಬದುಕು ನಡೆಸುವುದು ಅವ್ಯಕ್ತ ನೋವು. ತನ್ನದಲ್ಲದ ದೇಹವನ್ನು ಬಲವಂತವಾಗಿ ಆವಾಹನೆ ಮಾಡಿಕೊಂಡಂತೆ'.`ಬಹುಶಃ ನಾನು ಲಿಂಗ ಪರಿವರ್ತನೆ ಮಾಡಿಸಿಕೊಳ್ಳದಿದ್ದಿದ್ದರೆ ಈ ಭಾರವನ್ನು ಜೀವನವಿಡೀ ಹೊತ್ತು ನರಳುವುದು ಖಂಡಿತವಾಗಿತ್ತು. ಕತ್ತಲಲ್ಲಿ ಕನಸುಗಳನ್ನು ಕೊಂದುಕೊಂಡು ಬದುಕುವುದು ಕರಾಳ ಕೃತ್ಯ. ಅದಕ್ಕೆ ನಾನು ಸಾಕ್ಷಿಯಾಗಬಾರದು ಎನ್ನುವ ದೃಢ ನಿರ್ಧಾರ ಕೈಗೊಂಡೆ. ಗಿರೀಶ್ ಪಣಿಕ್ಕರ್ ಆಗಿದ್ದವನು ಮಾಲಿಕಾ ಗಿರೀಶ್ ಪಣಿಕ್ಕರ್ ಆಗಿ ಬದಲಾದೆ'.ಇದೀಗ ಸಿಂಗಪುರದಲ್ಲಿ ನೆಲೆನಿಂತು ಭರತನಾಟ್ಯ ಕಲೆಯಲ್ಲಿ ಛಾಪು ಮೂಡಿಸಿರುವ ಕಲಾವಿದೆ ಮಾಲಿಕಾ ಗಿರೀಶ್ ಹೀಗೆ ಭಾರವಾದ ಸ್ವರಗಳಲ್ಲಿ ಬದುಕಿನ ಹಳೆಯ ಪುಟಗಳನ್ನು ತಿರುವಿ ಹಾಕುತ್ತಾ ಮಾತಿಗಿಳಿದರು. ಗಿರೀಶ್ ಹುಟ್ಟಿದ್ದು ಕೇರಳದ ಪಾಲಕ್ಕಾಡ್‌ನಲ್ಲಿ. ತಂದೆ ವಾಯುಪಡೆಯಲ್ಲಿದ್ದರು. 10ನೇ ತರಗತಿವರೆಗೂ ಪಾಲಕ್ಕಾಡ್‌ನಲ್ಲಿ ವಿದ್ಯಾಭ್ಯಾಸ ಮಾಡಿ ಪಂಜಾಬ್, ಆಗ್ರಾ, ಕಾಶ್ಮೀರ, ಕೊಯಮತ್ತೂರು ಹೀಗೆ ಹಲವು ಕಡೆ ಬದುಕಿನ ಬಂಡಿ ಸಾಗಿಸಿದವರು.

ಗಿರೀಶ್‌ಗೆ ಚಿಕ್ಕಂದಿನಿಂದಲೂ ನೃತ್ಯದ ಗೀಳು. ಏಳನೇ ವಯಸ್ಸಿಗೇ ಭರತನಾಟ್ಯದ ಕಲಿಕೆ ಶುರುವಾಗಿತ್ತು. 10ನೇ ತರಗತಿ ಮುಗಿದ ಬಳಿಕ ಚೆನ್ನೈನ `ಕಲಾಕ್ಷೇತ್ರ'ದಲ್ಲಿ ಭರತನಾಟ್ಯ ತರಗತಿಗೆ ಸೇರಿಕೊಂಡರು. ಕುಟುಂಬದಲ್ಲಿ ಭರತನಾಟ್ಯದ ಗಂಧಗಾಳಿ ಇಲ್ಲದಿದ್ದರೂ ಈ ಕಲೆ ಗಿರೀಶ್‌ರನ್ನು ಸೆಳೆದದ್ದು ಹೇಗೆ ಎಂಬುದು ಅವರಿಗೂ ಅರಿವಿಲ್ಲ. ಹಾಡು ಕೇಳಿದರೆ ಸಾಕು ಅರಿವಿಲ್ಲದಂತೆ ಹೆಜ್ಜೆ ನಾಟ್ಯಕ್ಕೆ ಸಜ್ಜಾಗುತ್ತಿತ್ತು. ಆಗಲೇ ತಾನೊಂದು ಹೆಣ್ಣು ಎಂಬ ಭಾವ ಅವರಲ್ಲಿ ಸಣ್ಣನೆ ಮೂಡಿತ್ತು.

ನಾಟ್ಯ ಕಲೆಯಲ್ಲಿನ ಆಂಗಿಕ ಅಭಿನಯ, ಹಾವ ಭಾವಗಳೂ ಅವರಲ್ಲಿನ ಸ್ತ್ರೀತ್ವವನ್ನು ಉತ್ತೇಜಿಸಿದವು. ಆದರೆ ಚಿಕ್ಕಂದಿನಲ್ಲಿ ಅದು ಯಾರಲ್ಲೂ ಹೇಳಿಕೊಳ್ಳಲಾಗದ ಸಂಕಟ. ತನ್ನೊಳಗಿನ ವೇದನೆಯನ್ನು ಬಚ್ಚಿಟ್ಟುಕೊಂಡೇ ಬದುಕು ಸವೆಸತೊಡಗಿದರು. ಚೆನ್ನೈನಲ್ಲಿ ಸ್ವಲ್ಪ ವರ್ಷ ಇದ್ದ ಗಿರೀಶ್ ಭರತನಾಟ್ಯದ ಯಶಸ್ಸನ್ನು ಕೊಂಡೊಯ್ದದ್ದು ಸಿಂಗಪುರಕ್ಕೆ.

ಭರತನಾಟ್ಯದಲ್ಲಿ ಪ್ರಾವೀಣ್ಯ ಪಡೆದ ಅವರಿಗೆ ರಂಗಪ್ರವೇಶವೂ ಆಯಿತು. ಆಗ ಅತಿಥಿಯಾಗಿ ಬಂದಿದ್ದ ಕಲಾವಿದೆ ವೈಜಯಂತಿ ಮಾಲಾ ಅವರಿಂದ ಗಿರೀಶ್ ಇನ್ನಷ್ಟು ಪ್ರೇರೇಪಿತರಾದರು. ಸಿಂಗಪುರದ ಸಂಸ್ಥೆಯೊಂದರಲ್ಲಿ ನೃತ್ಯ ಹೇಳಿಕೊಡುತ್ತ್ದ್ದಿದಾಗ ಆ ಸಂಸ್ಥೆಯು `ಮೇಲ್ ಡಾನ್ಸರ್' ಆಗುವಂತೆ ಕೇಳಿತು.`ನಾನು ನೃತ್ಯ ಶಿಕ್ಷಕನಾಗಿದ್ದರೂ ಹೆಣ್ಣು ಮಕ್ಕಳಂತೇ ಬಟ್ಟೆ ತೊಡುತ್ತಿದ್ದೆ. ಕೂದಲು ಬಿಟ್ಟಿದ್ದೆ. ನಾನು ಹೆಣ್ಣು ಎಂದು ಸದಾ ಮನಸ್ಸು ಗುನುಗುತ್ತಿತ್ತು. ನನ್ನೊಳಗಿನ ಹೆಣ್ಣು ಜಾಗೃತಗೊಂಡಳು. ಆ ಸಂಸ್ಥೆ ಬಿಟ್ಟು ನನ್ನದೇ ನೃತ್ಯ ಶಾಲೆ `ಆಕಾಶ ಗಂಗಾ' ಆರಂಭಿಸಿದೆ' ಎಂದು ಘಟನೆಯೊಂದು ತಮ್ಮ ವ್ಯಕ್ತಿತ್ವ ಮಾತ್ರವಲ್ಲ ವೃತ್ತಿಯನ್ನೂ ಬದಲಿಸಿದ್ದನ್ನು ತೆರೆದಿಟ್ಟರು ಮಾಲಿಕಾ.ಅವರ ಯಶಸ್ಸಿಗೆ ಪ್ರೇರಣೆ ಕಲಾವಿದೆ ವೈಜಯಂತಿಮಾಲಾ. ತನಗೆ ಸ್ಫೂರ್ತಿಯಾದ ಗುರುವಿನಿಂದ `ಏಕಲವ್ಯ' ಎಂಬ ಪ್ರಶಂಸೆ ಪಡೆದವರು ಮಾಲಿಕಾ. ತಮ್ಮ ಬದುಕಿನ ಸಾರ್ಥಕ ಕ್ಷಣಗಳವು ಎಂದು ಮೆಲುಕು ಹಾಕುತ್ತಾರೆ ಅವರು. ಕಲಾಕ್ಷೇತ್ರದಿಂದಲೂ ಹಲವು ಗುರುಗಳ ಮಾರ್ಗದರ್ಶನ ಅವರಿಗೆ ದಕ್ಕಿತ್ತು. ನೃತ್ಯ ಶಾಲೆ ಆರಂಭಿಸಿದಾಗ ಹಲವು ಸವಾಲುಗಳು ಎದುರಾದವು.

ಯಾರೂ ಸಹಾಯ ಮಾಡದ ಆ ಹೊತ್ತಿನಲ್ಲಿ ತಮಗೆ ತಾವೇ ಮಾರ್ಗದರ್ಶಿ, ಗುರು, ಉತ್ತೇಜಕರಾದರು. ಆರ್ಥಿಕ ಸಂಕಷ್ಟಗಳನ್ನು ಎದುರಿಸಿದರೂ ಛಲ ಬಿಡಲಿಲ್ಲ. 12 ವರ್ಷದ ನೃತ್ಯ ಪಯಣದಲ್ಲಿ ಪ್ರದರ್ಶನಗಳಿಗೆಂದೇ ಸ್ವಂತ ಖರ್ಚಿನಿಂದ ಸುಮಾರು 60- 70 ಲಕ್ಷ ರೂಪಾಯಿ ವ್ಯಯಿಸುವ ಅನಿವಾರ್ಯತೆ. ಇಂದು ಆ ಪ್ರಯತ್ನಕ್ಕೆ ಪ್ರತಿಫಲ ದಕ್ಕಿದೆ.`ಸಿಂಗಪುರದಲ್ಲಿ ನಾಗರಿಕಳಾಗಬೇಕಾದರೆ ಹೆಣ್ಣಾಗಲೇಬೇಕೆಂಬ ಪರಿಸ್ಥಿತಿ ಉದ್ಭವವಾಯಿತು. ಅಂದು ತುಂಬಾ ಯೋಚಿಸಿ ಕಠಿಣ ನಿರ್ಧಾರ ಮಾಡಿಬಿಟ್ಟೆ. ಅರ್ಧ ಆತ್ಮದಂತೆ ಕೊರಗುವುದಕ್ಕಿಂತ ಮನಸ್ಸಿನ ಮಾತನ್ನು ಕೇಳಲೇಬೇಕು ಎನಿಸಿತ್ತು. ನನ್ನ ವಿದ್ಯಾರ್ಥಿಗಳ ಪೋಷಕರನ್ನು ಕರೆಸಿ, ನಾನು ಲಿಂಗ ಪರಿವರ್ತನೆ ಮಾಡಿಕೊಳ್ಳುತ್ತಿರುವ ವಿಷಯ ತಿಳಿಸಿದೆ.

ಅವರೆಲ್ಲರೂ ಒಪ್ಪಿದರು. 2009ರಲ್ಲಿ ಲಿಂಗ ಪರಿವರ್ತನೆ ಮಾಡಿಸಿಕೊಂಡೆ.  ದೇಹ ಬದಲಾದರೇನು, ಕಲೆಗೆ ವಿಘ್ನವಿಲ್ಲ ಎಂಬುದು ನನ್ನ ವಿಷಯದಲ್ಲಿ ನಿಜವಾಯಿತು. ಸಮಾಜ ಹೇಗೆ ನನ್ನನ್ನು ಸ್ವೀಕರಿಸುತ್ತದೆ ಎಂಬ ಭಯವಿತ್ತು. ನೀರಿಗೆ ಇಳಿಯುವವರೆಗೆ ಮಾತ್ರ ಚಳಿ ಎಂಬಂತೆ, ಒಮ್ಮೆ ನೀರಿಗೆ ಇಳಿದ ಮೇಲೆ ಅದೇನೂ ಲೆಕ್ಕಕ್ಕೆ ಬರಲಿಲ್ಲ.'ಭರತನಾಟ್ಯ ಕಲೆಯನ್ನೇ ಉಸಿರಾಡುವ ಮಾಲಿಕಾ ಅವರ ನಾಟ್ಯ ಪ್ರೇಕ್ಷಕರನ್ನು ರೋಮಾಂಚನಗೊಳಿಸುತ್ತದೆ. ಲಿಂಗ ಪರಿವರ್ತನೆಗೊಂಡ ಮೇಲೆ ಸಾಮಾಜಿಕ, ವೈಯಕ್ತಿಕ ಹಾಗೂ ದೈಹಿಕವಾಗಿ ಹಲವು ಸವಾಲುಗಳನ್ನು ಎದುರಿಸಿರುವ ಅವರು, ಯಾವುದೇ ಆಗಲಿ ಕಷ್ಟದಿಂದ ಪಡೆದರಷ್ಟೇ ಅದಕ್ಕೊಂದು ಬೆಲೆ ಎಂದು ನಂಬಿದ್ದಾರೆ.`ಜೀವನದ ಪ್ರತಿ ಕ್ಷಣವನ್ನೂ ಸವಾಲೆಂಬಂತೆ ನೋಡುತ್ತೇನೆ. ನನ್ನ 13ನೇ ವಯಸ್ಸಿನಲ್ಲೇ ಅಮ್ಮ ತೀರಿಕೊಂಡರು. ಅಪ್ಪ ಬೇರೊಬ್ಬರನ್ನು ಮದುವೆಯಾಗಿ ಹೋದರು. ಆಗಲೂ ಎದೆಗುಂದಲಿಲ್ಲ. ನನ್ನ ಪಾಲಿಗಿದ್ದದ್ದು ಅಕ್ಕ ಮಾತ್ರ. ಸೂರ್ಯ ರಾಮಯ್ಯ ಎಂಬ ದತ್ತು ತಾಯಿಯೂ ಲಂಡನ್‌ನಲ್ಲಿದ್ದಾರೆ. ಮೊದಲು ಕಂಡ ಕಷ್ಟವೆಲ್ಲಾ ಈಗ ಗೌಣ' ಎನ್ನುತ್ತಾರೆ.`ಅರ್ಧನಾರೀಶ್ವರ ಪರಿಕಲ್ಪನೆ ಮುಂಚಿನಿಂದಲೂ ಇದೆ. ಎಲ್ಲ ಪುರುಷರಲ್ಲೂ ಸ್ತ್ರೀ ಗುಣ ಇರುತ್ತದೆ. ಎಲ್ಲ ಸ್ತ್ರೀಯರಲ್ಲೂ ಪುರುಷ ಗುಣವಿರುತ್ತದೆ. ಆದರೆ ಲೆಕ್ಕಕ್ಕೆ ಬರುವುದು ದೇಹ ಮಾತ್ರವಲ್ಲವೇ?' ಎಂಬುದು ಸಮಾಜದ ಮುಂದೆ ಅವರಿಡುವ ಪ್ರಶ್ನೆ. ಹರಿಯುವ ನದಿಯಂತೆ ಸಾಗುತ್ತಿರುವ ಅವರ ಜೀವನವನ್ನು ಎಂದಿಗೂ ಅವರು ನಿರ್ಧರಿಸಿಲ್ಲವಂತೆ. ಒಳ್ಳೆಯದಂತೆ ಕೆಟ್ಟದ್ದನ್ನು ಸ್ವೀಕರಿಸುವುದನ್ನೂ ಕಲಿತಿದ್ದಾರಂತೆ. ಹುಡುಗನಾಗಿ ಸಾಧಿಸಿದ್ದಕ್ಕಿಂತ ಹೆಚ್ಚಾಗಿ ಮಹಿಳೆಯಾಗಿ ಸಾಧಿಸಿದ್ದೇನೆ ಎಂದು ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.`ಮನುಷ್ಯರ ಕಣ್ಣಲ್ಲಿ ಹೇಗಿದ್ದೇವೆ ಎನ್ನುವುದಕ್ಕಿಂತ ನಮ್ಮ ಆತ್ಮಸಾಕ್ಷಿಗೆ ತಕ್ಕಂತೆ ಇದ್ದೇವೆಯೇ ಎನ್ನುವುದು ಮುಖ್ಯ. ನನಗೆ ಒಳ್ಳೆ ಗೃಹಿಣಿಯಾಗಬೇಕೆಂಬ ಆಸೆ. ಮದುವೆಗೂ ಸಿದ್ಧತೆ ನಡೆಯುತ್ತಿದೆ. ವಿದ್ಯಾರ್ಥಿಗಳೇ ನನ್ನ ಮಕ್ಕಳು. ಹೀಗಾಗಿ ಈಗಾಗಲೇ ನನಗೆ ತಾಯ್ತನ ಸಹ ಸಿಕ್ಕಿದೆ' ಎಂದು ಮಾಲಿಕಾ ಹೇಳುತ್ತಾರೆ.

-ಸುಮಲತಾ ಎನ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry