ಬುಧವಾರ, ಜುಲೈ 15, 2020
25 °C

ಅವನು - ಅವಳು: ಕೃಷಿ ನಡೆಯುತ್ತಿರುವುದೇ ಮಹಿಳೆಯಿಂದ

ಸಂದರ್ಶನ: ದೇವು ಪತ್ತಾರ Updated:

ಅಕ್ಷರ ಗಾತ್ರ : | |

ಅವನು - ಅವಳು: ಕೃಷಿ ನಡೆಯುತ್ತಿರುವುದೇ ಮಹಿಳೆಯಿಂದ

ಗ್ರಾಮೀಣ ಪ್ರದೇಶದಲ್ಲಿ ಕೃಷಿ ನಡೆಯುತ್ತಿರುವುದೇ ಮಹಿಳೆಯಿಂದ. ಈಗ ಹಳ್ಳಿಗಳ ಆರ್ಥಿಕತೆ ನಿಂತಿರುವುದೇ ಮಹಿಳೆಯರ ಶ್ರಮದಿಂದ. ‘ಕೃಷಿಯಿಂದ ‘ಲಾಭ ಇಲ್ಲ’ ಎಂದು ಪುರುಷರು ದೂರ ಸರಿದು ನಿಂತಿರುವ ದಿನಗಳಲ್ಲಿ ಮಹಿಳೆಯರೇ ಕೊರತೆ ತುಂಬಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಸೂಕ್ಷ್ಮ ಸಂವೇದನೆ ಉಳ್ಳವರಾದ ಮಹಿಳೆಯರು ಎಲ್ಲ ಕಾಲಗಳಲ್ಲಿಯೂ ಪುರುಷನ ಮಿತಿಗಳನ್ನು ಅರಿತು ಅದನ್ನು ತುಂಬಲು ಪ್ರಯತ್ನಿಸುತ್ತಲೇ ಬಂದಿದ್ದಾರೆ.ಚಾಲುಕ್ಯ ಚಕ್ರವರ್ತಿ ಆರನೇ ವಿಕ್ರಮಾದಿತ್ಯ ಆಡಳಿತ, ವ್ಯವಹಾರ ನೋಡಿಕೊಳ್ಳುತ್ತಿದ್ದರೆ ಅವನ ರಾಣಿಯರು ಕಲೆ, ಸಂಸ್ಕೃತಿಯ ಏಳ್ಗೆಗೆ ಶ್ರಮಿಸಿದರು. ಹಾಗೆಯೇ ಅರಸ ತನ್ನ ಕೆಲಸ ಮಾಡುತ್ತಿಲ್ಲ ಅನ್ನಿಸಿದಾಗಲೆಲ್ಲ ರಾಣಿಯರು ಸೂತ್ರವನ್ನು ಕೈಗೆತ್ತಿಕೊಂಡು ನಡೆಸುತ್ತ ಬಂದರು. ಕೇವಲ ರಾಜ-ಮಹಾರಾಜರ, ಇತಿಹಾಸದ ಪುಟಗಳಲ್ಲಿ ಮಾತ್ರವಲ್ಲ. ಇಂದಿನ ಮಹಿಳೆಯೂ ಅಂತಹ ಹೊಣೆಯರಿತು ಕೆಲಸ ಮಾಡುವುದನ್ನು ಗಮನಿಸಬಹುದು.ಗಂಡನ ಮನೆಗೆ ಬಂದ ನಂತರ ಹೊಸ ಮನೆ, ಜನ, ವಾತಾವರಣಕ್ಕೆ ಹೊಂದಿಕೊಳ್ಳುವುದಕ್ಕಾಗಿ ಸೊಸೆ ಕೆಲಕಾಲ ತೆಗೆದುಕೊಳ್ಳುತ್ತಾಳೆ. ಕುಟುಂಬದ ಮತ್ತು ಗಂಡನ ಮಿತಿಗಳನ್ನು ಅರ್ಥೈಸಿಕೊಂಡು ಅದನ್ನು ಸರಿದೂಗಿಸುವುದಕ್ಕಾಗಿ ಪ್ರಯತ್ನಿಸುತ್ತಾಳೆ.ಗಂಡ ಸೌಮ್ಯನಾಗಿದ್ದು ವ್ಯವಹಾರಕುಶಲಿ ಅಲ್ಲ ಅಂತ ಅನ್ನಿಸುವ ಸಂದರ್ಭಗಳಲ್ಲಿ ತಾನೇ ಅಂತಹ ಜವಾಬ್ದಾರಿ ನಿಭಾಯಿಸಲು ಮುಂದಾಗುತ್ತಾಳೆ. ತನ್ನ ಮೇಲೆ ಕುಟುಂಬದ ಯಾವುದೇ ಜವಾಬ್ದಾರಿ ಇಲ್ಲ ಅನ್ನಿಸುವ ಸಂದರ್ಭಗಳಲ್ಲಿ ಕಲೆ, ಹಾಡುಗಳಲ್ಲಿ ತನ್ನ ವ್ಯಕ್ತಿತ್ವದ ಹುಡುಕಾಟ ನಡೆಸುತ್ತಾಳೆ. ಮದುವೆಗೆ ಮುನ್ನ ತಾಯಿಯ ಮನೆ ಮತ್ತು ನಂತರ ಗಂಡನ ಮನೆಗಳೆರಡರ ಸ್ಥಿತಿಗೆ ಅನುಗುಣವಾಗಿ ಹೊಂದಿಕೊಳ್ಳುವ ಗುಣ ಅವಳಿಗಿದೆ. ಆದ್ದರಿಂದಲೇ ಕುಟುಂಬ ವ್ಯವಸ್ಥೆ ಚೆನ್ನಾಗಿ ನಡೆದಿದೆ.ಪಟ್ಟಣ ಮತ್ತು ನಗರಗಳಲ್ಲಿ ವಾಸಿಸುವ ಮಧ್ಯಮ ವರ್ಗದ ಜನ ಮಾತ್ರ ಆದಾಯ, ಲೆಕ್ಕಾಚಾರ, ತಿಂಗಳ ಖರ್ಚುಗಳ ಜಂಜಾಟದಲ್ಲಿ ಸಿಲುಕಿದವರಂತೆ ವರ್ತಿಸುತ್ತಿದ್ದಾರೆ. ಅಗತ್ಯಗಳನ್ನು ನಿರ್ಧರಿಸಿಕೊಳ್ಳಲಾಗದೇ ಇರುವುದರಿಂದ ಖರೀದಿ- ಖರ್ಚು ಹೆಚ್ಚುತ್ತಿದೆ. ಅದನ್ನು ನಿಭಾಯಿಸುವುದಕ್ಕಾಗಿ ಹೆಣಗಾಡುವಂತಾಗಿದೆ. ಒತ್ತಡ ಹೆಚ್ಚಾಗಿ ‘ಸಿಡಿಯುವ’ ಸ್ಥಿತಿ ನಿರ್ಮಾಣವಾಗಿದೆ.ಅದೇ ಸಂಬಂಧಗಳು ಹಳಸುವುದಕ್ಕಾಗಿಯೂ ಕಾರಣವಾಗಿದೆ. ಅದಕ್ಕೆ ಬದಲಾಗಿ ಹಳ್ಳಿಗಳಲ್ಲಿ ನಿಸರ್ಗ, ಪರಿಸರ, ಪ್ರಾಣಿ-ಪಕ್ಷಿಗಳ ಜೊತೆಗೆ ಸಹಜೀವನ ನಡೆಸುವ ಮಹಿಳೆಯರು ನಿಸರ್ಗದಿಂದ ತಾಳ್ಮೆಯ ಪಾಠ ಕಲಿತವರಂತೆ ವರ್ತಿಸುತ್ತಿದ್ದಾರೆ.ಹೀಗಾಗಿ ಗ್ರಾಮೀಣ ಬದುಕು ಪಟ್ಟಣದ ಬದುಕಿನಷ್ಟು ಬಗ್ಗಡಗೊಂಡಿಲ್ಲ. ಗ್ರಾಮೀಣ ಮಹಿಳೆಯರು ತಮ್ಮ ಮನೆಯೊಳಗಿನ ಕೆಲಸ ನಿರ್ವಹಿಸುವುದರ ಜೊತೆಗೆ ಹೊರಗೆ ಹೊಲ ಮನೆಯ ಕೆಲಸ ಕೂಡ ನಿಭಾಯಿಸುತ್ತಿದ್ದಾರೆ. ಅದಕ್ಕಾಗಿ ಯಾವುದೇ ರೀತಿಯ ಗೊಣಗಾಟ ಮಾಡುತ್ತಿಲ್ಲ.ಸಮಾಜದಲ್ಲಿ ನೋಡುವ ದೃಷ್ಟಿಕೋನದಲ್ಲಿ ಪುರುಷಕೇಂದ್ರಿತ ನೋಟ ಇದೆಯೇ ಹೊರತು ಮೂಲದಲ್ಲಿಲ್ಲ. ಆದ್ದರಿಂದ ಮಹಿಳೆ ಮಾಡಿರುವ ಸಾಧನೆಗಾಗಿ ಅವಳಿಗೇ ಗೌರವ ಸಿಕ್ಕದೆ ಅದು ಪುರುಷರ ಪಾಲಾಗುತ್ತಿದೆ.ಕೃಷಿ ಚಟುವಟಿಕೆಯ ಬಹುಪಾಲು ಕೆಲಸ ಮಾಡುತ್ತಿರುವ ಮಹಿಳೆಯರಿಗೆ ಅದರ ಕ್ರೆಡಿಟ್ ಸಿಗುತ್ತಿಲ್ಲ. ಆದರೆ, ಕೃಷಿಯೂ ಸೇರಿದಂತೆ ಜೀವನದ ಎಲ್ಲ ಹಂತಗಳಲ್ಲಿಯೂ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳುವವಳು ಮಹಿಳೆಯೇ ಆಗಿರುತ್ತಾಳೆ. ಅವಳ ಹೆಸರಿನಲ್ಲಿ ನಿರ್ಣಯ ಪ್ರಕಟವಾಗದೇ ಇರಬಹುದು.ಮೇಲ್ನೋಟಕ್ಕೆ ಪುರುಷರೇ ನಿರ್ಧಾರ ತೆಗೆದುಕೊಳ್ಳುವವರು ಎಂದು ಅನ್ನಿಸಿದರೂ ಅದರ ಹಿಂದಿನ ನಿಲುವು ಮಹಿಳೆಯರದೇ ಆಗಿರುತ್ತದೆ. ಆದ್ದರಿಂದ ಪುರುಷ- ಮಹಿಳೆಯರ ಸಂಬಂಧದಲ್ಲಿ ಯಾವುದೇ ರೀತಿಯ ವ್ಯತಿರಿಕ್ತ ಪರಿಣಾಮ ಉಂಟಾಗಿಲ್ಲ.ಬೀದರ್ ಜಿಲ್ಲೆಯಲ್ಲಿ  ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರು ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಹೊಸ ಚಿಂತನೆ, ವಿಚಾರಧಾರೆಗೆ ತಮ್ಮನ್ನು ತೆರೆದುಕೊಂಡಿದ್ದಾರೆ. ಮಹಿಳೆಯರಿಗೆ ಹಣಕಾಸು ವ್ಯವಹಾರ ಮಾಡಲು ತೊಡಗಿರುವುದರಿಂದ ಕುಟುಂಬದ ಸ್ಥಿತಿ ಸುಧಾರಣೆಗೊಂಡಿದೆ.ಇದು ಆಶಾದಾಯಕ ಬೆಳವಣಿಗೆ. ಬದಲಾದ ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಳ್ಳುವುದನ್ನು ಮಹಿಳೆ ಮೊದಲಿನಿಂದಲೂ ರೂಢಿಸಿಕೊಂಡು ಬಂದಿದ್ದಾಳೆ.ನಿಸರ್ಗಕ್ಕೆ ಉತ್ತಮ ಫಲಿತಗಳನ್ನು ಕಂಡುಕೊಳ್ಳುವುದರಲ್ಲಿ ಆಸಕ್ತಿ. ಹಾಗಾಗಿ ಹೆಚ್ಚು ಕಡಿಮೆ ಎಂಬ ಮಾನದಂಡ ನಿಸರ್ಗದ ನ್ಯಾಯದಲ್ಲಿ ಇಲ್ಲ. ನಿಸರ್ಗದ ಮುಂದೆ ಮಹಿಳೆ-ಪುರುಷರಿಬ್ಬರೂ ಸಮಾನರು. ವ್ಯವಹಾರ ಮತ್ತು ಹಣಕಾಸು ವಹಿವಾಟು ನೋಡಿಕೊಳ್ಳದಿದ್ದರೂ ಮಹಿಳೆಯೇ ಕುಟುಂಬದ ಮುಖ್ಯಸ್ಥಳಂತೆ ಇರುತ್ತಿದ್ದಳು.ಬ್ರಿಟಿಷ್ ಆಡಳಿತ ಮತ್ತು ಯೋಚನಾಕ್ರಮ ಇದ್ದಾಗ ಕೂಡ ಹಣದ ಹಿಂದೆ ಬೆನ್ನತ್ತಿ ಓಡುವ ಮನೋಭಾವ ಇರಲಿಲ್ಲ. ಬದಲಿಗೆ ನೈತಿಕತೆ ಹಾಗೂ ಶೈಕ್ಷಣಿಕ, ಸಾಂಸ್ಕೃತಿಕ ಸಾಧನೆ ಮಾಡುವ ಕಡೆಗೆ ಗಮನ ಹರಿಸುವ ಯೋಚನಾಕ್ರಮ ಇತ್ತು. ಎರಡನೇ ಮಹಾಯುದ್ಧದ ನಂತರ ಅಮೆರಿಕಾದ ನೈತಿಕತೆ ಹೊಣೆಯಿಲ್ಲದೇ ಖುಷಿ ಪಡುವ, ಸಂಭ್ರಮಿಸುವ ಬದುಕು ಚಾಲ್ತಿಗೆ ಬಂದ ಮೇಲೆ ಸಂಬಂಧಗಳು ಹೆಚ್ಚು ಸಂಕೀರ್ಣ ಆಗುವಂತಾಯಿತು.ಬದಲಾದ ಕಾಲ ಮತ್ತು ಸಂದರ್ಭದಲ್ಲಿ ಮಹಿಳೆ- ಪುರುಷರ ನಡುವಿನ ಸೌಹಾರ್ದಯುತ ಸಂಬಂಧ ಹೆಚ್ಚು ಅರ್ಥಪೂರ್ಣವಾಗಿದೆ ಎಂದೇ ನನಗನ್ನಿಸುತ್ತದೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.