ಮಂಗಳವಾರ, ಜನವರಿ 28, 2020
24 °C

ಅವಮಾನವಲ್ಲ ಇದು ನಿರಾಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಡಿಲೇಡ್ (ಪಿಟಿಐ) : ಭಾರತವು ಆಸ್ಟ್ರೇಲಿಯಾ ವಿರುದ್ಧ ಸರಣಿ ಸೋಲನುಭವಿಸಿರುವ ರೀತಿಯನ್ನು ಅವಮಾನಕಾರಿ, ಮುಜುಗರ ತರುವಂಥದು ಎಂದೆಲ್ಲಾ ಮಾಧ್ಯಮಗಳಲ್ಲಿ ವರದಿ ಆಗಿರುವುದಕ್ಕೆ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.`ಇದು ಮುಜುಗರವೂ ಅಲ್ಲ, ಅವಮಾನವೂ ಅಲ್ಲ~ ಎಂದಿರುವ ಅವರು `ಸೋಲಿನಿಂದ ನಿರಾಸೆ ಮಾತ್ರ ಆಗಿದೆ~ ಎಂದು ಶುಕ್ರವಾರ ಇಲ್ಲಿ ಸುದ್ದಿಗಾರರಿಗೆ ಸ್ಪಷ್ಟಪಡಿಸಿದರು.ವಿದೇಶಿ ನೆಲದಲ್ಲಿ ಭಾರತ ತಂಡವು ಮತ್ತೊಂದು ಸಂಪೂರ್ಣ ಸರಣಿ ಸೋಲಿನ ಅಂಚಿನಲ್ಲಿ ನಿಂತಿರುವುದು ತಮಗೂ ಬೇಸರವೆಂದು ಒಪ್ಪಿಕೊಂಡ ಅವರು `ಕೆಲವರು ಮುಜುಗರಗೊಳ್ಳುವಂಥ ಸೋಲು ಎಂದೆಲ್ಲ ಹೇಳುತ್ತಿದ್ದಾರೆ. ಆದರೆ ಹೀಗೆ ಪದಬಳಕೆ ಮಾಡುವುದೇ ಸರಿಯಲ್ಲ. ಮುಜುಗರ ಪಡುವುದಕ್ಕೆ ಇದೇನು ಮೋಸದ ಘಟನೆಯಲ್ಲ~ ಎಂದ ಅವರು `ನಿರಾಸೆ ಎನ್ನುವುದು ನನ್ನ ವಿವರಣೆಯ ಪದ~ ಎಂದು ತಿಳಿಸಿದರು.`ಇದು ಆಟ. ಫಲಿತಾಂಶದ ಬಗ್ಗೆ ಚಿಂತೆ ಮಾಡುತ್ತಾ ಕುಳಿತುಕೊಳ್ಳುವುದು ಸರಿಯಲ್ಲ. ನಾವು ಎಷ್ಟು ಉತ್ತಮ ಹೋರಾಟ ನಡೆಸಿದೆವು ಎನ್ನುವುದು ಮಾತ್ರ ಮುಖ್ಯವಾಗಬೇಕು~ ಎಂದ ಅಶ್ವಿನ್ `ಇಲ್ಲಿಯವರೆಗಿನ ಆಟದಲ್ಲಿ ನಾವು ಅಂದುಕೊಂಡ ರೀತಿಯಲ್ಲಿ ಎಲ್ಲವೂ ನಡೆಯಲಿಲ್ಲ. ಪ್ರಯತ್ನ ಮಾಡಿದ್ದೇವೆ. ಪ್ರಶ್ನೆಗಳು ಹಲವಾರು ಇವೆ. ಅವುಗಳಿಗೆ ಸೂಕ್ತ ಉತ್ತರ ನೀಡುವ ಕಾಲವೂ ಬರುತ್ತದೆ~ ಎಂದು ದಿಟ್ಟತನದಿಂದ ನುಡಿದರು.`ಕೆಂಪು ಚೆಂಡಿನ ಆಟ ಮುಗಿಯುತ್ತಾ ಬಂದಿದೆ. ಬಿಳಿ ಚೆಂಡಿನೊಂಡಿಗೆ ಆಡುತ್ತೇವೆ. ಆಗ ನಾವೇನೆಂದು ತೋರಿಸುತ್ತೇವೆ~ ಎಂದ ಚೆನ್ನೈನ ಯುವ ಬೌಲರ್ `ಹಿಂದೆ ಏನಾಯಿತು ಎಂದು ಯೋಜಿಸುವುದು ನಮ್ಮ ಗುಣವಲ್ಲ. ಮುಂದೆ ಏನು ಮಾಡಬೇಕು ಎನ್ನುವ ಕಡೆಗೆ ಗಮನ ನೀಡುತ್ತೇವೆ. ಅದೇ ಸರಿಯಾದ ಜೀವನ ಮಾರ್ಗ~ ಎಂದರು.ಬ್ಯಾಟಿಂಗ್ ವೈಫಲ್ಯದ ಕಾರಣ ತಂಡವು ಬಹಳಷ್ಟು ಟೀಕೆಗೆ ಕಾರಣವಾಗಿದೆ ಎಂದು ಕೇಳಿದಕ್ಕೆ `ಯಾವುದೇ ಒಂದು ವಿಭಾಗವನ್ನು ಇಲ್ಲವೆ ಕೆಲವು ಆಟಗಾರರನ್ನು ದೂರುವ ಅಗತ್ಯವಿಲ್ಲ. ಒಟ್ಟಾರೆ ತಂಡ ವಿಫಲವಾಗಿದೆ. ಗೆಲುವು ಪಡೆಯಲು ಸಾಧ್ಯವಾಗುವಂಥ ಆಟವನ್ನು ನಾವೆಲ್ಲರೂ ಒಟ್ಟಾಗಿ ಆಡಿಲ್ಲ. ಅದೊಂದೇ ಸತ್ಯ~ ಎಂದು ಸ್ಪಷ್ಟಪಡಿಸಿದರು.

ಪ್ರತಿಕ್ರಿಯಿಸಿ (+)