ಭಾನುವಾರ, ಫೆಬ್ರವರಿ 28, 2021
29 °C

ಅವರವರ ಭಾವಕ್ಕೆ...

ಡಾ. ಕೆ.ವಿ. ನೇತ್ರಾವತಿ Updated:

ಅಕ್ಷರ ಗಾತ್ರ : | |

ಅವರವರ ಭಾವಕ್ಕೆ...

ಬೇಸಿಗೆ ಕಾಲವಾದ್ದರಿಂದ ಪ್ರತಿ ದಿನ ರಾತ್ರಿ ನಾವೆಲ್ಲರೂ ತಾತನೊಂದಿಗೆ ಮನೆಯ ಅಂಗಳದಲ್ಲಿ ಮಲಗಿ ಆಕಾಶ ನೋಡುತ್ತಿದ್ದೆವು, ತಾತನಿಗೆ ಕತೆ ಹೇಳಲು ಪೀಡಿಸುತ್ತಿದ್ದೆವು. ತಾತ ಆಗಸವನ್ನೇ ನೋಡುತ್ತಾ ಪ್ರತಿ ತಾರೆಗೂ ಒಂದೊಂದು ಕತೆ ಹೇಳುತ್ತಿದ್ದ. ಭೂಮಿಯ ಮೇಲೆ ಬಾಳಿ ಬದುಕಿದ ಜೀವಿಗಳು ಒಳ್ಳೆ ಕೆಲಸ ಮಾಡಿ ಸತ್ತರೆ ನಕ್ಷತ್ರಗಳಾಗುತ್ತಾರೆ ಆಕಾಶದಲ್ಲಿ ಹೊಳೆಯುತ್ತಾರೆ, ಮುಂದೆ ಅವರು ದೇವರುಗಳಾಗುತ್ತಾರೆ. ಹಾಗೆಯೇ ಪಾಪ ಕೆಲಸಗಳನ್ನು ಮಾಡಿ ಸತ್ತವರು ಇಲ್ಲೇ ದೆವ್ವಗಳಾಗಿ ಅಡ್ಡಾಡುತ್ತಾರೆ ಎಂದು ಹೇಳುತ್ತಲೇ ತಮಗೆ ಅನುಭವಕ್ಕೆ ಬಂದ ದೆವ್ವದ ಕತೆಗಳನ್ನು ಹೇಳುತ್ತಿದ್ದರು.ತಾತ ಕುರಿ ಮೇಯಿಸುತ್ತಿದ್ದ. ಒಂದು ದಿನ ಸಂಜೆ ತಾತ ಕುರಿಗಳನ್ನು ದೊಡ್ಡಿಗೆ ಹೊಡೆಯುತ್ತಿರುವಾಗ ಒಂದು ಕುರಿ ತಪ್ಪಿಸಿಕೊಂಡಿರುವುದನ್ನು ತಿಳಿದು ಅದನ್ನು ಹುಡುಕಲು ಕುರಿ ಮೇಯಿಸಿದ ಕಡೆಯಲೆಲ್ಲಾ ಓಡಾಡಿದ, ಸ್ಮಶಾನದ ಬಳಿ ಕುರಿ ಮ್ಯಾ.. ಮ್ಯಾ.. ಎಂದು ಅರಚಿ ಕೊಳ್ಳುತ್ತಿರುವುದನ್ನು ಕೇಳಿಸಿಕೊಂಡು ಅತ್ತ ನಡೆದ ತಾತ ಅದನ್ನು ಹಿಡಿಯಲು ಹೋದರೆ ಕುರಿ ತಕ್ಷಣ ಮಾಯವಾಗಿ ಸ್ಮಶಾನದ ಇನ್ನೊಂದು ಬದಿಯಲ್ಲಿ ಪ್ರತ್ಯಕ್ಷವಾಗುತ್ತಿತ್ತು. ಅಲ್ಲಿ ಹಿಡಿಯಲು ಹೋದರೆ ಮತ್ತೊಂದೆಡೆ ಪ್ರತ್ಯಕ್ಷ.ಹೇಗೋ ಕಷ್ಟಪಟ್ಟು ಕುರಿಯ ಕಾಲುಗಳನ್ನು ಹಿಡಿದ ತಾತ ಅದನ್ನು ಭುಜದ ಮೇಲೆ ಏರಿಸಿಕೊಂಡು ಮನೆಕಡೆ ಬರುತ್ತಿರುವಾಗ, ಅರ್ಧದಾರಿ ಬರುವಷ್ಟರಲ್ಲಿ ಆ ಕುರಿ ತಾತನನ್ನು ಕುರಿತು ‘ಮಾಮ ನಾನು ಮುನೆಮ್ಮನು, ಬಸಿರೆಂಗ್ಸು  ಮೆತ್ತುಗ ಕೆಳಕಿಳಿಸು’ ಅಂತಂತೆ. ತಾತನಿಗೆ ತಕ್ಷಣ ಇದು ಮುನೆಮ್ಮನ ದೆವ್ವ ಅಂತ ಗೊತ್ತಾಗಿ ಸಿಟ್ಟು ಬಂದು ನೆಲಕ್ಕೆ ಎತ್ತಿ ಕುಕ್ಕಿದ್ದನಂತೆ. ಆ ಕುರಿ ಅಷ್ಟು ದೂರ ಓಡಿಹೋಗಿ ಅಲ್ಲೇ ಬೆಳ್ಳಗೆ ಹೊಗೆಯಾಗಿ ಗಾಳಿಯಲ್ಲಿ ತೇಲಿ ಹೋಯಿತಂತೆ. ಈ ತರಹದ ಸಾಕಷ್ಟು ಕತೆಗಳನ್ನು ತಾತ ಹೇಳುತ್ತಿದ್ದ.ಕತೆ ಕೇಳಿದ ಚಿಕ್ಕವರಾದ ನಾವೆಲ್ಲರೂ ಭಯದಿಂದ ಅಲ್ಲಾಡಿ ಹೋಗುತ್ತಿದ್ದೆವು. ಅಡುಗೆ ಮನೆಗೆ ಹೋದರೂ, ಹೊಲಕ್ಕೆ ಹೋದರೂ, ಶಾಲೆಗೆ ಹೋಗುವ ದಾರಿಯಲ್ಲಿ, ಆಟವಾಡುವಾಗ ಮುನಿಯಮ್ಮನ ದೆವ್ವ ನಮ್ಮನ್ನು ಅಟ್ಟಿಸಿಕೊಂಡು ಬರುವಂತೆ ಆಗುತ್ತಿತ್ತು. ಆ ದೆವ್ವ ಬೆಳ್ಳಗೆ ಅಷ್ಟೇ ಅಲ್ಲ ಕರ್ರಗೆ ಕೂಡ ಪರಿವರ್ತನೆಯಾಗಿರುವುದನ್ನು ಕಂಡು ತುಂಬಾ ಹೆದರಿದ್ದರಿಂದ ಜ್ವರ ಬಂದಿತ್ತು. ಅಮ್ಮ ನಮ್ಮನ್ನು ಕುರಿತು ‘ಮೊದಲು ಕರೆಂಟು ಇರಲಿಲ್ಲ ಅದಕ್ಕೆ ಕತ್ತಲು ಜಾಸ್ತಿ ಇದ್ದಿದ್ದರಿಂದ ದೆವ್ವಗಳು ಇದ್ದವು,ಆದರೆ ಈಗ ಕರೆಂಟು ಇರೋದ್ರಿಂದ ಲೈಟು ಬೆಳಕುಗಳನ್ನು ನೋಡಿದರೆ ದೆವ್ವಗಳಿಗೆ ಭಯ ಎಂದು ಹೇಳುತ್ತಿದ್ದರು. ಅಜ್ಜಿ ಕೂಡ ‘ಅಯ್ಯೋ ದೆವ್ವ ಗಿವ್ವ ಏನು ಇಲ್ಲ ಸುಮ್ಮನೆ ಇರು ಮಗುವೇ, ಮನುಷ್ಯರೇ ದೊಡ್ಡ ದೆವ್ವುಗಳು. ಅವ್ರುಗಿಂತ ದೊಡ್ಡ ದೆವ್ವ ಬ್ಯಾರೆ ಇಲ್ಲ. ಧರ್ಮದಿಂದ ನಡದೋರು ದೇವ್ರುಗ್ಳು, ಪಾಪದಿಂದ ನಡದೋರು ದೆವ್ವಗ್ಳು’ ಅಂತಿದ್ಲು.  ಅಮ್ಮ ವೆಂಕಟ ಸಾಮಪ್ಪನನ್ನು ಕರೆಸಿ ಕಿಸುರು ನೀರು ಮಾಡಿ(ಅರಿಸಿನ ಮತ್ತು ಸುಣ್ಣ ಬೆರೆಸಿದ ನೀರು) ಬೇವಿನ ಸೊಪ್ಪಿನಿಂದ ಮಂತ್ರ ಹಾಕಿಸಿ, ಶಾಂತಿ ಮಾಡಿಸಿದರು. ಆ ದಿನ ಸಂಜೆ ನಾವು ದೊಡ್ಡಮ್ಮನ ಊರಿಗೆ ಹೋದೆವು ಜ್ವರ ಕಡಿಮೆಯಾಯಿತು.ತಾತ ಸಾಯುವ ದಿನಗಳಲ್ಲಿ  ಏನೇನೋ ಮಾತನಾಡ್ತಾ ಇದ್ದ. ಬಾಗಿಲ ಕಡೆ ನೋಡುತ್ತಾ ’ಅನುಮಂತ್ನು, ಎಂಟುಸಾಮಿ, ತಿಕ್ಕಲೋನು, ಮುನೆಮ್ಮನು ಎಲ್ಲರೂನು ನಿಂತವರೆ, ಕರಿತಾವರೆ, ಬೇಗ ಬಾ ಅಂತವರೆ’ ಎನ್ನುತ್ತಿದ್ದರು. ತಾತ ಆಗ ಹೇಳುತ್ತಿದ್ದ ಹೆಸರುಗಳೆಲ್ಲಾ ಸತ್ತು ಹೋದವರ ಹೆಸರುಗಳೇ ಆಗಿದ್ದವು. ನಾನು ಬಾಗಿಲ ಕಡೆ ಎಷ್ಟು ದಿಟ್ಟಿಸಿ ನೋಡಿದರೂ ಅವರ‍್ಯಾರು ನನಗೆ ಕಾಣಿಸುತ್ತಿರಲಿಲ್ಲ. ತಾತನಿಗೆ ಮಾತ್ರ ಅವರು ಯಾಕೆ ಕಾಣಿಸುತ್ತಾರ? ನನಗೆ ಯಾಕೆ ಅವರು ಕಾಣಿಸುವುದಿಲ್ಲ? ಸತ್ತವರು ದೇವರುಗಳಾಗಿದ್ದಾರಾ? ಅಥವಾ ದೆವ್ವಗಳಾಗಿದ್ದಾರಾ? ದಿಗಿಲಾಗಿ ದೇವರ ಜಪ ಮಾಡುತ್ತಿದ್ದೆ.ದೇವರ ಕುರಿತು ಅಜ್ಜಿಗೆ ತುಂಬಾ ಪ್ರಶ್ನೆ ಕೇಳಿ ತಲೆ ತಿನ್ನುತ್ತಿದ್ದೆ. ‘ಯಾವ್ ದೇವ್ರು ಅವನೋ, ಯಾವ್ ದೇವ್ರು ಇಲ್ಲಾನೋ ತಿಳೀದು ನನಕ ಹೋಗಮ್ಮ!. ನಾನು ಇವತ್ತು ಕೂಲಿಕ ಹೋಗದೀರ ಇದ್ರೆ ಹಿಟ್ಟು ಹಾಕ್ತಾನಾ ಅವನು ನನುಕ? ನಮ್ ಕಷ್ಟುಕ ಯಾವ್ ದೇವ್ರು ಆಗಲ್ಲ, ನಾವೇ ಪರ್ಯಾಯ ಮಾಡಿಕಂಬೇಕು’ ಎನ್ನುತ್ತಿದ್ದರು.  ಹೈಸ್ಕೂಲಿಗೆ ಬರುವಷ್ಟರಲ್ಲಿ ದೇವರು/ದೆವ್ವದ ಕುರಿತ ನನ್ನ ಪ್ರಶ್ನೆಗಳು, ಕುತೂಹಲಗಳು ಭಿನ್ನವಾಗುತ್ತಾ ಹೋದವು. ನಿಜವಾಗಿಯೂ ದೆವ್ವ ಎಂಬುವುದು ಇದೆಯಾ?ಕೋಟ್ಯಂತರ ಜನ ಸತ್ತಿದ್ದಾರೆ, ಸಾಯುತ್ತಿದ್ದಾರೆ ಅವರೆಲ್ಲಾ ದೆವ್ವಗಳಾಗಿ ಗಾಳಿಯಲ್ಲಿ ಇದ್ದರೆ ಇಲ್ಲಿ ಜಾಗ ಸಾಕಾಗುತ್ತಾ? ದೆವ್ವಗಳು ಏನು ಮಾಡುತ್ತವೆ? ಅವುಗಳಿಗೆ ಹೊಟ್ಟೆ ಹಸಿಯುತ್ತಾ? ಇಲ್ಲವಾ? ರೂಪ ಹೇಗಿರುತ್ತೆ? ದೆವ್ವಕ್ಕೆ ವಿರುದ್ದವಾಗಿ ನಮ್ಮಲ್ಲಿ ಇರುವಂತಹುದು ದೇವರು. ದೇವರನ್ನು ಸರ್ವಂತರ್ಗಾಮಿ ಅಂತಾರಲ್ಲಾ! ಸರ್ವದರಲ್ಲೂ ದೇವರು ಇರುವಾಗ ದೆವ್ವಗಳಿಗೆ ಇಲ್ಲಿ ಇರಲು ಜಾಗ ಇರುವುದಿಲ್ಲವಲ್ಲಾ?  ಈಗಲೂ ಈ ಪ್ರಶ್ನೆಗಳು ಕಾಡುತ್ತಲೇ ಇರುತ್ತವೆ. ದೇವರು ದೆವ್ವ ಎಂಬುವುದು ಅವರವರ ಭಾವಕ್ಕೆ ಸಂಬಂಧಿಸಿದುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.