ಅವರಿನ್ನೂ ಬದುಕಿದ್ದಾರೆ

7

ಅವರಿನ್ನೂ ಬದುಕಿದ್ದಾರೆ

Published:
Updated:
ಅವರಿನ್ನೂ ಬದುಕಿದ್ದಾರೆ

ಪ್ರತಿ ವರ್ಷ ಏಪ್ರಿಲ್ ಬಂದರೆ ಅನೇಕರ ಬಾಯಲ್ಲಿ ರಾಜ್‌ಕುಮಾರ್ ಹೆಸರು ನಲಿದಾಡತೊಡಗುತ್ತದೆ. ರಾಜ್‌ಕುಮಾರ್ ಹುಟ್ಟಿದ ದಿನವು ಹೀಗೆ ತಂತಾನೇ ಒಂದು ಆಚರಣೆಯ ಸ್ವರೂಪ ಪಡೆದುಕೊಂಡಿರುವುದೇ ನನಗೆ ದೊಡ್ಡ ಶಕ್ತಿಯಂತೆ ಕಾಣುತ್ತದೆ.ಅವರು ನಮ್ಮ ನಡುವೆ ದೈಹಿಕವಾಗಿ ಇಲ್ಲದ ಈ ಸಂದರ್ಭದಲ್ಲೂ ಇದ್ದಾರೆ ಎನ್ನಿಸಲು ಇಂಥ ಸಾವಿರ ಸಾವಿರ ಕಾರಣಗಳು ಸಿಗುತ್ತಾ ಹೋಗುತ್ತವೆ.ಸಾಹಿತ್ಯವನ್ನು ಶಕ್ತಿ ಎಂದು ಅನೇಕರು ಹೇಳುತ್ತಾರೆ. ಅದು ಸತ್ಯ ಕೂಡ. ಆದರೆ, ರಾಜ್‌ಕುಮಾರ್ ಕಲೆಯ ಮೂಲಕ ತಲುಪಿದ ರೀತಿ ಬಹುಶಃ ಎಲ್ಲಾ ಸಾಹಿತ್ಯವನ್ನೂ ಮೀರಿದ್ದು. ಪೂರ್ಣ ಪ್ರಮಾಣದಲ್ಲಿ ಜನರನ್ನು ತಲುಪಿದ ಕನ್ನಡದ ಏಕೈಕ ನಟ ಅವರೊಬ್ಬರೇ. ಅವರಿಗೆ ಎರಡು ಕೋಟಿ ಅಭಿಮಾನಿಗಳಿದ್ದಾರೆ ಎಂದಿಟ್ಟುಕೊಳ್ಳೋಣ.ಅವರೆಲ್ಲಾ ರಾಜ್‌ಕುಮಾರ್ ಸಿನಿಮಾದಲ್ಲಿ ಹೇಳುವ ಸಂಗತಿಗಳನ್ನು ಒಪ್ಪಿಕೊಳ್ಳುತ್ತಾರೆ. ಆ ಪೈಕಿ ಕಾಲು ಭಾಗ ಜನ ಕೇಳಿದ ಪಾಠವನ್ನು ಆಚರಣೆಗೆ ತಂದರೆ ಅದಕ್ಕಿಂತ ಪರಿವರ್ತನೆಯ ದೊಡ್ಡ ದಾರಿ ಇನ್ಯಾವುದಿದ್ದೀತು?ನಾನು ಸ್ಕೂಲಿನಲ್ಲಿ ಕಲಿಯುತ್ತಿದ್ದಾಗ ಮೇಷ್ಟರು ಮಾತಿನ ಉಚ್ಚಾರಣೆ ಇದ್ದರೆ ರಾಜ್‌ಕುಮಾರ್ ಅವರ ಹಾಗಿರಬೇಕು ಎನ್ನುತ್ತಿದ್ದರು. ಮನೆಯಲ್ಲಿ ದೊಡ್ಡವರ ಫೋಟೋ ತೋರಿಸಿ ಮಾತಾಡುವಾಗ ಅಪ್ಪ-ಅಮ್ಮ ಹಳೆಯ ಕಥೆಗಳನ್ನು ಹೇಳುತ್ತಾ ಇದ್ದರು. ಆ ಕಥೆಗಳಲ್ಲಿ ಎಲ್ಲಾದರೂ ರಾಜ್‌ಕುಮಾರ್ ಬಂದೇ ಬರುತ್ತಿದ್ದರು.ಆದರ್ಶದ ಮಾತಿಗೆಲ್ಲಾ ಅವರೇ ಸಿಂಗಾರ. ಮತ್ತು ಅವರ ಉದಾಹರಣೆಯನ್ನು ಯಾರೊಬ್ಬರೂ ಅಲ್ಲಗಳೆಯುವುದಿಲ್ಲ. ಸಂಗೀತ, ಯೋಗದ ವಿಷಯ ಬಂದರೂ ಲೆಕ್ಕವಿಲ್ಲದಷ್ಟು ಜನ ಅವರತ್ತಲೇ ನೋಡುತ್ತಾರೆ. ಈಗಲೂ ಎಷ್ಟೋ ವ್ಯಾಯಾಮ ಶಾಲೆಗಳಲ್ಲಿ ರಾಜ್‌ಕುಮಾರ್ ಮೈಕಟ್ಟಿನ ಚಿತ್ರ ಅಂಟಿಸಿರುತ್ತಾರೆ. ಒಬ್ಬ ವ್ಯಕ್ತಿ ಈ ಮಟ್ಟಕ್ಕೆ ಜನರ ಬದುಕನ್ನು ಆವರಿಸಿಕೊಳ್ಳುವುದೇ ದೊಡ್ಡ ಫ್ಯಾಂಟಸಿ ಅಲ್ಲವೇ?ಕನ್ನಡ ಅಂದೊಡನೆ ನೇರವಾಗಿ ರಾಜ್ ನೆನಪಾಗಲು ಅನೇಕ ಕಾರಣಗಳು ಸಿಗುತ್ತವೆ. ಮೊದಲಿಗೆ- ಅವರ ಅಸ್ಖಲಿತ, ಶುದ್ಧ ಮಾತು. ಎರಡನೆಯದಾಗಿ- ಉದ್ದಕ್ಕೂ ಸಿನಿಮಾಗಳಲ್ಲಿ ಅವರು ಪೋಷಿಸಿಕೊಂಡು ಬಂದ ಅಭಿರುಚಿ. ಮೂರು- ಅವರಿಗಿದ್ದ ಬಹುಮುಖ ಆಸಕ್ತಿ.ನಾಲ್ಕು- ಅವರ ಮುಗ್ಧತೆ. ಐದು-ಅವರು ಹೇಳಿದ್ದನ್ನು ಬಹುಪಾಲು ಕನ್ನಡಿಗರು ಕಣ್ಣಿಗೊತ್ತಿಕೊಳ್ಳುವುದು. ಈ ಪಟ್ಟಿಯನ್ನು ಮುಗಿಸುವುದು ನನಗಂತೂ ಸಾಧ್ಯವಿಲ್ಲ.ಸಿನಿಮಾದಿಂದ ಸಂಸ್ಕೃತಿಗೆ ಏನು ಉಪಯೋಗ ಎಂಬ ಪ್ರಶ್ನೆ ಮೊದಲಿನಿಂದಲೂ ಇದೆ. ಈಗಂತೂ ಇದು ಇನ್ನೂ ಗಂಭೀರವಾಗಿದೆ. ಅದಕ್ಕೆ ಕಾರಣ ಇನ್ನು ರಾಜ್‌ಕುಮಾರ್ ನಟಿಸಲು ಸಾಧ್ಯವಿಲ್ಲವೆನ್ನುವುದು. ಅವರು ಕುಡಿತ ಕೂಡದು, ಸಿಗರೇಟು ಸೇದುವುದು ಒಳ್ಳೆಯದಲ್ಲ ಎಂದರೆ ಲೆಕ್ಕವಿಲ್ಲದಷ್ಟು ಜನ ಆ ಚಟಗಳನ್ನು ಬಿಡುತ್ತಿದ್ದರು.ಅಷ್ಟೇ ಏಕೆ, ‘ನಮ್ಮ ಕಾಲದಲ್ಲಿ ಹುಡುಗಿಯರನ್ನು ಛೇಡಿಸುವುದರಲ್ಲೂ ಒಂದು ಸಜ್ಜನಿಕೆ ಇತ್ತು. ಅದನ್ನು ಕಲಿಸಿದ್ದೇ ರಾಜ್‌ಕುಮಾರ್ ಚಿತ್ರಗಳು’ ಎಂದು ಕವಿ ಎಚ್.ಎಸ್.ವೆಂಕಟೇಶಮೂರ್ತಿಯವರು ಒಂದು ಕಡೆ ಬರೆದಿದ್ದಾರೆ.ಅಂದರೆ, ಮನರಂಜನೆಯನ್ನು ಎಂದೂ ಅಗ್ಗದ ಸರಕಾಗಿ ರಾಜ್‌ಕುಮಾರ್ ಬಳಸಲೇ ಇಲ್ಲ.ಇಡೀ ಸಮುದಾಯ ಹೆಣ್ಣುಮಕ್ಕಳನ್ನು ಗೌರವದಿಂದ ಕಾಣುವಂತೆ ಮಾಡಲು ಪ್ರೇರಣೆಯಾಗುವುದಂತೂ ತುಂಬಾ ಅಪರೂಪ. ರಾಜ್‌ಕುಮಾರ್ ಆ ಅಪರೂಪವಾಗಿದ್ದರು.

ನಾನು ಈಗ ವಜ್ರೇಶ್ವರಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಅವರ ಮನೆಯಲ್ಲಿ ರಾಘಣ್ಣ (ರಾಘವೇಂದ್ರ ರಾಜ್‌ಕುಮಾರ್), ಪುನೀತ್ ಎಲ್ಲರೂ ಸ್ಕ್ರಿಪ್ಟ್ ಚರ್ಚೆಗೆ ಕೂತಾಗ ಅನೇಕ ಸಲ- ‘ಅಪ್ಪಾಜಿ ಹೀಗನ್ನುತ್ತಿದ್ದರು, ವರದಣ್ಣ ಇದನ್ನು ಕೇಳಿದ್ದರೆ ಖುಷಿ ಪಡುತ್ತಿದ್ದರು’ ಎಂದೆಲ್ಲಾ ಹೇಳುತ್ತಿರುತ್ತಾರೆ. ಅವರ ಮನೆಯಲ್ಲಿ ಅನೇಕರನ್ನು ನಾನು ಗಮನಿಸಿದ್ದೇನೆ.ಎಲ್ಲರಲ್ಲೂ ರಾಜ್‌ಕುಮಾರ್ ಅವರಿಗಿದ್ದ ಒಂದಲ್ಲ ಒಂದು ಗುಣ ಕಾಣುತ್ತದೆ. ಶೂಟಿಂಗ್ ನಡೆಯುವಾಗ ಒಂದು ಶಾಟ್ ಮುಗಿದ ನಂತರ ಬಿಡುವಿದ್ದಾಗ ನೆರೆದ ಜನರನ್ನು ಹೋಗಿ ಪುನೀತ್ ಮಾತನಾಡಿಸಿಕೊಂಡು ಬರುತ್ತಾರೆ. ಈ ಕಾಲಮಾನದಲ್ಲಿ ಅಷ್ಟು ತಾಳ್ಮೆ, ಸಜ್ಜನಿಕೆ ಒಬ್ಬ ಸ್ಟಾರ್‌ಗೆ ಇರುವುದು ಅಪರೂಪ. ನನಗೆ ಅಲ್ಲಿ ರಾಜ್‌ಕುಮಾರ್ ಕಾಣುತ್ತಾರೆ.ವಾಕಿಂಗ್ ಹೋಗುತ್ತಾ ಇದ್ದಾಗ ಯಾರದ್ದೋ ಮನೆಯಿಂದ ಕೋಳಿ ಸಾರಿನ ಹದವಾದ ಪರಿಮಳ ರಾಜ್‌ಕುಮಾರ್ ಅವರ ಮೂಗಿಗೆ ಬಡಿಯಿತಂತೆ. ನೇರವಾಗಿ ಹೋಗಿ ಅವರ ಮನೆಯಲ್ಲಿ ಊಟ ಮಾಡಿ ಬಂದರಂತೆ. ಇಂಥ ಸರಳವಾದ ಕಥೆಗಳನ್ನು ಕೇಳಿದರೆ ನನಗೆ ಈಗಲೂ ರೋಮಾಂಚನವಾಗುತ್ತದೆ.ನನಗೆ ರಾಜ್‌ಕುಮಾರ್ ಅವರನ್ನು ಮಾತನಾಡಿಸಲು ಸಾಧ್ಯವಾಗಿಯೇ ಇರಲಿಲ್ಲ. ಒಂದು ಸಲ ಸಮಾರಂಭವೊಂದಕ್ಕೆ ಸ್ಟೇಜ್ ಮಾಡುತ್ತಿದ್ದೆವು. ನಾನು ಥರ್ಮೋಕೋಲನ್ನು ಕರ್ನಾಟಕ ಮ್ಯಾಪ್ ಆಕಾರಕ್ಕೆ ಕತ್ತರಿಸುತ್ತಿದ್ದೆ. ಆ ಸಮಾರಂಭಕ್ಕೆ ರಾಜ್‌ಕುಮಾರ್ ಅತಿಥಿಯಾಗಿ ಬಂದಿದ್ದರು. ಅವರನ್ನು ಹತ್ತಿರದಿಂದ  ನೋಡಿದ್ದು ಅದೇ ಮೊದಲು. ಆ ರೋಮಾಂಚನದಲ್ಲಿ ನನಗೆ ಮಾತೇ ಹೊರಡಲಿಲ್ಲ.

 

ನಾವು ಮಾಡಿದ ಕೆಲಸವನ್ನು ಅವರು ತುಂಬಾ ಸೂಕ್ಷ್ಮವಾಗಿ ಗಮನಿಸಿದ್ದನ್ನು ನಾನು ಕಂಡಿದ್ದೆ. ಅಂಥ ಮೇರುನಟ ಅಷ್ಟು ಸರಳವಾಗಿರುವುದು ಕೂಡ ನನಗೆ ಬೆರಗಾಗಿ ಕಂಡಿತ್ತು.

 

ಇನ್ನೊಮ್ಮೆ ಬಾದಾಮಿ ಹೌಸ್‌ನಲ್ಲಿ ಒಂದು ಸಿನಿಮಾ ನೋಡಲು ಹೋಗಿದ್ದಾಗ ಅವರೂ ಬಂದಿದ್ದರು. ಆಗಲೂ ನನಗೆ ಮಾತಾಡಿಸಲು ಆಗಿರಲಿಲ್ಲ. ಈಗ ಅವರಿದ್ದು ನನ್ನ ಸಿನಿಮಾಗಳನ್ನು ನೋಡಿದ್ದರೆ ಏನನ್ನುತ್ತಿದ್ದರೋ ಎಂಬ ಪ್ರಶ್ನೆ, ಕುತೂಹಲ ಅನೇಕ ಸಲ ನನ್ನಲ್ಲಿ ಮೂಡುತ್ತಲೇ ಇದೆ. ಹಾಗಾಗಿ ರಾಜ್‌ಕುಮಾರ್ ಇನ್ನೂ ಬದುಕಿಯೇ ಇದ್ದಾರೆ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry