ಶುಕ್ರವಾರ, ಡಿಸೆಂಬರ್ 6, 2019
17 °C

ಅವರೆಕಾಯಿ ಆವಕದ ಪ್ರಮಾಣ ಹೆಚ್ಚಿ ಬೆಲೆ ಕುಸಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅವರೆಕಾಯಿ ಆವಕದ ಪ್ರಮಾಣ ಹೆಚ್ಚಿ ಬೆಲೆ ಕುಸಿತ

ಶ್ರೀನಿವಾಸಪುರ: ಪಟ್ಟಣದ ಮಾರುಕಟ್ಟೆಯಲ್ಲಿ ಭಾನುವಾರ ಅವರೆಕಾಯಿ ಆವಕದ ಪ್ರಮಾಣ ಹೆಚ್ಚಿ ಬೆಲೆ ಕುಸಿತವಾಯಿತು. ಇದರಿಂದ ಗ್ರಾಮೀಣ ಪ್ರದೇಶದಿಂದ ಕಾಯಿ ತಂದಿದ್ದ ರೈತರು ನಿರಾಶರಾಗಿ ಹಿಂತಿರುಗಿದರು.  ಸುಗ್ಗಿ ಆರಂಭದಲ್ಲಿ ಅವರೆಕಾಯಿ ಕೆ.ಜಿ.ಗೆ ರೂ. 35ರಿಂದ 40ರ ವರೆಗೆ ಏರಿತ್ತು. ಆವಕದ ಪ್ರಮಾಣ ಹೆಚ್ಚಿದಂತೆ ಬೆಲೆ ಕುಸಿಯುತ್ತಾ ರೂ. 15ರಿಂದ 18ರ ಆಜೂಬಾಜು ನಿಂತಿತ್ತು. ಆದರೆ ಭಾನುವಾರ ಸಗಟು ಖರೀದಿ ಬೆಲೆ ಕೆ.ಜಿ.ಗೆ ರೂ. 8ರಿಂದ 9ಕ್ಕೆ ಕುಸಿಯಿತು.ಕಾಯಿ ಕಿತ್ತ ಕೂಲಿ, ಸಾಗಣೆ ವೆಚ್ಚ, ಕಮಿಷನ್ ಕಳೆದರೆ ಕೈಗೆ ಬರುವುದು ಏನೂ ಇಲ್ಲ. ಕಾಯಿ ಕಿತ್ತು ತಂದಿದ್ದೇನೆ. ಹೋದಷ್ಟಕ್ಕೆ ಕೊಡದೆ ವಿಧಿಯಿಲ್ಲ ಎಂದು ಹಳೆಪೇಟೆಯ ರೈತ ನಾರಾಯಣಸ್ವಾಮಿ `ಪ್ರಜಾವಾಣಿ~ಗೆ ತಿಳಿಸಿದರು.ಈಗಷ್ಟೇ ಪೂರ್ಣ ಪ್ರಮಾಣದ ಅವರೆಕಾಯಿ ಸುಗ್ಗಿ ಪ್ರಾರಂಭವಾಗಿದೆ. ಹೆಚ್ಚು ಖರೀದಿ ಇರುತ್ತದೆಂದು ರೈತರು ಕಾಯಿ ಕಿತ್ತು ತಂದಿದ್ದಾರೆ.ಆದರೆ ಹೊರಗಿನ ವ್ಯಾಪಾರಸ್ಥರು ತಮಗೆ ಅಗತ್ಯವಾದಷ್ಟನ್ನು ಮಾತ್ರ ಖರೀದಿಸುತ್ತಾರೆ. ಇದರಿಂದ ಬೆಲೆಯಲ್ಲಿ ಇಳಿಕೆಯಾಗಿದೆ ಎಂದು ಅವರೆ ಕಾಯಿ ಮಂಡಿ ಮಾಲೀಕ ಫಯಾಜ್ ಅಭಿಪ್ರಾಯಪಟ್ಟರು.ಅವರೆಕಾಯಿ ಬೆಲೆ ಕುಸಿತ ಉಂಟಾದರೂ ಕಾಯಿಯನ್ನು ಕೀಳದೆ ಬೀಜಕ್ಕೆ ಬಿಡಬಹುದು. ಒಣಗಿದ ಕಾಯಿಯನ್ನು ಕಿತ್ತು ಕಾಳನ್ನು ಒಕ್ಕಿ ಒಣಗಿಸಿ ಸಂಗ್ರಹಿಸಬಹುದು. ಉತ್ತಮ ಬೆಲೆ ಬಂದಾಗ ಮಾರಬಹುದು. ಆದರೆ ಹಸಿಕಾಯಿ ಕಿತ್ತು ಮಾರುವಷ್ಟು ಲಾಭ ಸಿಗುವುದಿಲ್ಲ. ಜೊತೆಗೆ ಕೆಲಸವೂ ಹೆಚ್ಚು ಎನ್ನುತ್ತಾರೆ ಅನುಭವಿ ರೈತರು.ಇಷ್ಟಕ್ಕೂ ನೆಲದಲ್ಲಿ ತೇವಾಂಶದ ಕೊರತೆಯಿಂದ ಗಿಡ ಉಳಿಯುತ್ತಿಲ್ಲ. ಈಗಾಗಲೆ ಹೆಚ್ಚಿನ ಪ್ರದೇಶದಲ್ಲಿ ಗಿಡ ಹಳದಿ ಬಣ್ಣಕ್ಕೆ ತಿರುಗಿ ಒಣಗುತ್ತಿದೆ. ಬೀಜಕ್ಕೆ ಬಿಟ್ಟರೂ ಉತ್ತಮ ಗುಣುಟ್ಟದ ಬೀಜ ಸಿಗುವ ಭರವಸೆ ಇಲ್ಲ. ಆದ್ದರಿಂದ ರೈತರು ಬಂದಷ್ಟಕ್ಕೆ ಕೈ ಚಾಚಬೇಕಾದ ಅನಿವಾರ್ಯ ಪರಿಸ್ಥಿತಿಗೆ ಸಿಕ್ಕಿದ್ದಾರೆ.

 

ಪ್ರತಿಕ್ರಿಯಿಸಿ (+)