ಗುರುವಾರ , ಆಗಸ್ಟ್ 13, 2020
26 °C

ಅವರೆಕಾಯಿ ಮಾರುತ್ತಿದ್ದ ಹುಡುಗನೀಗ ಸಚಿವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅವರೆಕಾಯಿ ಮಾರುತ್ತಿದ್ದ ಹುಡುಗನೀಗ ಸಚಿವ

ತುಮಕೂರು: ಅವರೆಕಾಯಿ ಮಾರುತ್ತಿದ್ದ, ಕೇವಲ ಎರಡೇ ಜೊತೆ ಬಟ್ಟೆಯ ಹುಡುಗನೀಗ ರಾಜ್ಯದ ಸಚಿವ ಸಂಪುಟ ದರ್ಜೆ ಸಚಿವ.ಇದು ಸಚಿವ ಸೊಗಡು ಶಿವಣ್ಣ ಅವರ ಜೀವನಗಾಥೆ. ತುಮಕೂರು ಸಮೀಪದ ಹೊಸಹಳ್ಳಿಯಲ್ಲಿ ಏಪ್ರಿಲ್ 14, 1947ರಲ್ಲಿ ಜನನ. ಅವರೆಕಾಯಿ ಮಾರುತ್ತಿದ್ದ ಕಾರಣ ಸೊಗಡಿನ ವಾಸನೆ ಬೀರುತ್ತಿದ್ದ ಶಿವಣ್ಣ ಅವರನ್ನು ಸ್ನೇಹಿತರು ಪ್ರೀತಿಯಿಂದ `ಸೊಗಡು~ ಎಂದೇ ಕರೆಯುತ್ತಿದ್ದರು. ಕೊನೆಗೆ ಆ ಹೆಸರೇ ಅವರ ಹೆಸರಿನ ಹಿಂದೆ ಅಂಟಿಕೊಂಡಿತು.ಶಿವಣ್ಣ ಅವರೇ ಬಹಿರಂಗವಾಗಿ ಹೇಳಿಕೊಳ್ಳುವಂತೆ ಅವರ ಬಳಿ ಇದ್ದದ್ದು ಎರಡೇ ಜೊತೆ ಬಟ್ಟೆ. ನನ್ನಲ್ಲಿ ಎರಡು ಜೊತೆ ಬಟ್ಟೆ ಇದ್ದಾಗ ಯಾವ ಲಿಂಗಾಯತರು ಹತ್ತಿರ ಸೇರಿಸಿಕೊಳ್ಳುತ್ತಿರಲಿಲ್ಲ. ಈಗ ಬಟ್ಟೆ, ಕಾರು, ಬಂಗಲೆ ಬಂದಾಕ್ಷಣ ಲಿಂಗಾಯತ ಎಂದು ಅಪ್ಪಿಕೊಳ್ಳಲು ಹಾತೊರೆಯುತ್ತಾರೆ ಎಂದು ಸಾರ್ವಜನಿಕವಾಗಿಯೇ ಜಾತಿ, ಸಮುದಾಯ ಟೀಕಿಸಿದ ರಾಜಕಾರಣಿ.ತುಮಕೂರಿನಲ್ಲಿ ಪಿಯುಸಿ, ಬೆಂಗಳೂರಿನಲ್ಲಿ ಸಿಪಿಇಡಿ ಶಿಕ್ಷಣ. ತುರ್ತು ಪರಿಸ್ಥಿತಿ ವಿರೋಧಿಸಿ 18 ತಿಂಗಳ ಕಾಲ ಜೈಲುವಾಸ. ಜೈಲಿನಿಂದ ಹೊರಬಂದ ಅವರು `ಸೊಗಡು~ ಹೆಸರಿನ ಪತ್ರಿಕೆ ಆರಂಭಿಸಿ ಸಂಪಾದಕರಾದರು. 1994ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ನಂತರ ಹಿಂದಿರುಗಿ ನೋಡಿಲ್ಲ. ಸತತ ನಾಲ್ಕು ಸಲ ಗೆಲುವಿನ ಸರದಾರ.ವಿದ್ಯಾರ್ಥಿ ದೆಸೆಯಿಂದಲೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರಿಯ ಕಾರ್ಯಕರ್ತ. ಒಂದು ಕಾಲದ ತುಮಕೂರಿನ `ಫೈರ್ ಬ್ರಾಂಡ್~. ರಾಜ್ಯಮಟ್ಟದ ಕಬಡ್ಡಿ ಆಟಗಾರ. ಕೃಷಿ ಎಂದರೆ ಈಗಲೂ ಅವರಿಗೆ ಪಂಚಪ್ರಾಣ. ಎಮ್ಮೆ, ಹಸು, ಎಮು ಪಕ್ಷಿಗಳ ಸಾಕಣೆಯನ್ನು ಈಗಲೂ ಮಾಡುತ್ತಿದ್ದಾರೆ. ಹೊಸ ಪಕ್ಷಿ, ಪ್ರಾಣಿಗಳನ್ನು ಸಾಕುವುದು ಅವರ ಪ್ರೀತಿಯ ಹವ್ಯಾಸ.ಯಾರಿಗೂ ಬಗ್ಗಿ ಸಲಾಮ್ ಹೇಳುವರರಲ್ಲ. ಇದೇ ಕಾರಣಕ್ಕೆ ನಾಲ್ಕು ಸಲ ಗೆದ್ದರೂ ಪಕ್ಷ ಅಧಿಕಾರಕ್ಕೆ ಬಂದಾಗ ಮಂತ್ರಿ ಸ್ಥಾನದಿಂದ ವಂಚಿತರಾದರು. ಆದರೆ ಜೆಡಿಎಸ್-ಬಿಜೆಪಿ ಸರ್ಕಾರದಲ್ಲಿ ಕೇವಲ 8 ತಿಂಗಳ ಕಾಲ ರೇಷ್ಮೆ ಸಚಿವರಾಗಿದ್ದರು.ಕೇಸರೀಕರಣದ ಪರ ಮಾತನಾಡುವಷ್ಟೇ ಸಲೀಸಲಾಗಿ ಮುಸ್ಲಿಂರ ಮನೆಯಲ್ಲೇ ಊಟ ಮಾಡಿ ಎಲ್ಲರನ್ನು ಮೆಚ್ಚಿಸುವ ಚಾಣಾಕ್ಷರು. ತಾಯಿ ತಿಮ್ಮವ್ವ, ಪತ್ನಿ ನಾಗರತ್ನಾ, ಇಬ್ಬರು ಪುತ್ರರು, ಸೊಸೆಯಂದಿರು ಹಾಗೂ ಮೊಮ್ಮಕ್ಕಳಿದ್ದಾರೆ. ಮನೆ ನಿರ್ವಹಣೆ ಅವರ ಪತ್ನಿ ನಾಗರತ್ನಾ ಅವರದಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.