ಸೋಮವಾರ, ಮಾರ್ಚ್ 8, 2021
24 °C

ಅವಳಿನಗರದಲ್ಲಿ ಆಲಿಕಲ್ಲು ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅವಳಿನಗರದಲ್ಲಿ ಆಲಿಕಲ್ಲು ಮಳೆ

ಹುಬ್ಬಳ್ಳಿ: ಸೋಮವಾರ ಬೆಳಿಗ್ಗೆಯಿಂದ ಸುರಿವ ಬಿಸಿಲಿನಿಂದಾಗಿ ಬೆವರ ಹನಿ ಒರಿಸಿಕೊಂಡ ಜನರಿಗೆ ಸಂಜೆಗೆ ಮಳೆಯ ಹನಿಯನ್ನು ಕಂಡು ಹರ್ಷಗೊಂಡರು. ಜೊತೆಗೆ ಸಾಲಾಗಿಟ್ಟ ಮುತ್ತುಗಳಂತೆ ಬೀಳುತ್ತಿದ್ದ ಆಲಿಕಲ್ಲುಗಳನ್ನು ಕಂಡು ಬೆರಗಾದರು. ವಿಜಯನಗರ ಹಾಗೂ ವಿದ್ಯಾನಗರದ ಕೆಲ ಪ್ರದೇಶಗಳಲ್ಲಿ ಬೀಳುತ್ತಿದ್ದ ಆಲಿಕಲ್ಲುಗಳನ್ನು ತಿನ್ನಬೇಕೆಂದು ಕೆಲವರು ಕೈಯೊಡ್ದಿದಾಗ ಸಿಗದೆ ನೆಲಕ್ಕೆ ಬಿದ್ದಾಗ ನಿರಾಸೆಗೊಂಡರು. ಧಾರವಾಡದ ಸಪ್ತಾಪುರ, ಸದಾಶಿವನಗರ ಹಾಗೂ ಮಾಳಮಡ್ಡಿಯಲ್ಲಿ ಆಲಿಕಲ್ಲು ಮಳೆಯಾಯಿತು.ಸಂಜೆ 4 ಗಂಟೆಯಿಂದಲೇ ಮೋಡ ಕವಿದ ವಾತಾವರಣದಿಂದ ನಗರದ ಜನರು ಮಳೆ ಬಿದ್ದೀತೆಂದು ಕಾದರು. ಸಂಜೆ 6 ಗಂಟೆಯ ಹೊತ್ತಿಗೆ ಇದ್ದಕ್ಕಿದ್ದಂತೆ ಗಾಳಿ ಸಮೇತ ಮಳೆ ಸುರಿಯಿತು. ನಂತರ ಗುಡುಗು-ಮಿಂಚು ಸಮೇತ 10 ನಿಮಿಷಗಳವರೆಗೆ ಮಳೆಯಾಯಿತು.ಸ್ವಲ್ಪ ಹೊತ್ತು ಬಿಡುವು ಕೊಟ್ಟ ಮಳೆಯು ಮತ್ತೆ ರಾತ್ರಿ 7ರ ಹೊತ್ತಿಗೆ ಜೋರಾಗಿ ಬಿತ್ತು. ಇದ್ದಕ್ಕಿದ್ದಂತೆ ಮಳೆಯಾದುದರಿಂದ ಬಿಸಿಲಿಗೆ ಆಸರೆಯೆಂದು ಛತ್ರಿ ತಂದವರಿಗೆ ಮಳೆಗೆ ಅನುಕೂಲವಾಯಿತು. ಛತ್ರಿ ತರದ ಅನೇಕರು ಅಂಗಡಿಗಳ ಮೊರೆ ಹೊಕ್ಕರು. ಆಟವಾಡುತ್ತಿದ್ದ ಮಕ್ಕಳು ಖುಷಿಯಾಗಿ ಮಳೆಗೆ ಮೈಯೊಡ್ಡಿದರು.ಅಣ್ಣಿಗೇರಿ, ಕುಂದಗೋಳ ತಾಲ್ಲೂಕಿನ ಶಿರೂರ, ಗುಡಗೇರಿ, ಕಮಡೊಳ್ಳಿ, ಸಂಶಿ, ಮುಳ್ಳೊಳ್ಳಿ, ಬೆನಕನಹಳ್ಳಿ, ಹಿರೇನರ್ತಿ ಮೊದಲಾದ ಗ್ರಾಮಗಳಲ್ಲಿ ತುಂತುರು ಮಳೆಯಾಗಿದೆ. ಜೊತೆಗೆ ಗುಡುಗು-ಮಿಂಚು ಕೂಡಾ ಇತ್ತು. ಕಲಘಟಗಿ ಹಾಗೂ ತಾಲ್ಲೂಕಿನ ದೇವಿಕೊಪ್ಪ, ಸಂಗಮೇಶ್ವರ, ಬಮ್ಮಿಗಟ್ಟಿ, ತಬಕದಹೊನ್ನಳ್ಳಿ ಹಾಗೂ ಹಿರೇಹೊನ್ನಳ್ಳಿಯಲ್ಲಿ ಗುಡುಗು-ಮಿಂಚು ಸಮೇತ ಮಳೆಯು ರಾತ್ರಿ 7.30ರ ಹೊತ್ತಿಗೆ ಸುರಿಯಿತು.ಮಳೆ ಗಾಳಿಗೆ ಉರುಳಿದ ಮರ

ಅಣ್ಣಿಗೇರಿ: ಪಟ್ಟಣ ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ಸೋಮವಾರ ಮಧ್ಯಾಹ್ನ ಗುಡುಗು-ಸಿಡಿಲಿನಿಂದ ಕೂಡಿದ ಮಳೆ ಸುರಿದಿದೆ. ಹಳ್ಳಿಕೇರಿ-ಅಡ್ನೂರ ರಸ್ತೆಯಲ್ಲಿ ಆಲದ ಮರವೊಂದು ಉರುಳಿ ಬಿದ್ದಿದ್ದರಿಂದ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.ಅಡ್ನೂರ ಕೆರೆ ದಂಡೆಯ ಮೇಲೆ ಮತ್ತೊಂದು ಮರ ಉರುಳಿಬಿದ್ದಿದೆ. ಮರ ಬಿದ್ದಿದ್ದರಿಂದ 3-4 ವಿದ್ಯುತ್ ಕಂಬಗಳೂ ಧರೆಗುರುಳಿವೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸಿಡಿಲು ಬಡಿದು ಮತ್ತೊಂದು ಮರ ಬಿರುಕುಬಿಟ್ಟರೆ, ಎತ್ತಿನ ಕೋಡೊಂದು ಮುರಿದ ಘಟನೆ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ಮಳೆ ಗಾಳಿಗೆ 15ಕ್ಕೂ ಅಧಿಕ ಮನೆಗಳ ತಗಡಿನ ಛಾವಣಿ ಕಿತ್ತುಕೊಂಡು ಹೋಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.