ಶುಕ್ರವಾರ, ಮೇ 7, 2021
20 °C

ಅವಳಿನಗರದಲ್ಲಿ ವಿಜೃಂಭಣೆಯ ಶಿವಾಜಿ ಜಯಂತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ನಗರದಲ್ಲಿ ಸೋಮವಾರ ಛತ್ರಪತಿ ಶಿವಾಜಿ ಮಹಾರಾಜರ 385ನೇ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ವಿವಿಧ ಮರಾಠಾ ಸಂಘಟನೆಗಳ ಸಹಯೋಗದಲ್ಲಿ ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ.ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಮುಖ್ಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಂಸದ ಪ್ರಹ್ಲಾದ ಜೋಶಿ, `ಶಿವಾಜಿ ಮಹಾರಾಜರು ಕೇವಲ ಮರಾಠಿ ಸಮುದಾಯಕ್ಕೆ ಮಾತ್ರ ಸೀಮಿತವಾಗಿಲ್ಲ. ಇಡೀ ಹಿಂದು ಸಮಾಜಕ್ಕೆ ಸೇರಿದವರು. ತಾಯಿಯಿಂದ ಪ್ರೇರಣೆ ಪಡೆದ ಶಿವಾಜಿ ಮೂರು ಶತಮಾನಗಳ ಹಿಂದೆ ಸಾಮ್ರಾಜ್ಯವನ್ನು ಕಟ್ಟಿದರು. ಅವರ ನೆನಪನ್ನು ಹಸಿರಾಗಿಡಲು ಸರ್ಕಾರ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಶಿವಾಜಿ ಜಯಂತಿ ಆಚರಣೆಗೆ ಕ್ರಮ ಕೈಗೊಂಡಿದೆ~ ಎಂದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ಚಂದ್ರಕಾಂತ ಬೆಲ್ಲದ, `ಬುದ್ಧ, ಬಸವ, ಶಿವಾಜಿ, ಡಾ.ಅಂಬೇಡ್ಕರ್ ಅವರನ್ನು ಯಾವುದೇ ಒಂದು ಸಮಾಜಕ್ಕೆ ಸೀಮಿತಗೊಳಿಸಿ ನೋಡಬಾರದು~ ಎಂದರು.`ಕಾಯಕಜೀವಿ ಆಗಿದ್ದ ಬಸವಣ್ಣನವರ ಜಯಂತಿ ಸೇರಿದಂತೆ ಯಾವುದೇ ಮಹಾಪುರುಷರ ಜಯಂತಿ ಬಂದಾಗ ರಜೆ ಘೋಷಣೆ ಮಾಡುವುದು ಸರಿಯಲ್ಲ~ ಎಂದು ಅವರು ಪ್ರತಿಪಾದಿಸಿದರು.ಪಾಲಿಕೆಯ ಮೇಯರ್ ಡಾ.ಪಾಂಡುರಂಗ ಪಾಟೀಲ, ಶಾಸಕಿ ಸೀಮಾ ಮಸೂತಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಅಡಿವೆಪ್ಪ ಮನಮಿ, ಪಾಲಿಕೆ ಸದಸ್ಯರಾದ ಪ್ರಕಾಶ ಘಾಟಗೆ, ಪ್ರಕಾಶ ಗೋಡಬೋಲೆ, ಜಿಲ್ಲಾಧಿಕಾರಿ ದರ್ಪಣ ಜೈನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಡಿ.ಹಿರೇಗೌಡರ, ಮನೋಹರ ಮೋರೆ, ಮೋಹನ ಮೋರೆ, ಸುಭಾಷ ಸಿಂಧೆ, ಪ್ರತಾಪ ಚವ್ಹಾಣ, ಮಲ್ಲೆೀಶಪ್ಪ ಸಿಂಧೆ ಹಾಜರಿದ್ದರು.ಮರಾಠಾ ವಿದ್ಯಾಪ್ರಸಾರಕ ಮಂಡಳಿ, ಕರ್ನಾಟಕ ಕ್ಷತ್ರಿಯ ಮರಾಠಾ ಮಹಾ ಒಕ್ಕೂಟ ಘಟಕ, ಧಾರವಾಡ ಶಹರ ಮರಾಠಾ ಸಮಾಜ, ಕ್ಷತ್ರಿಯ ಮರಾಠಾ ಪರಿಷತ್ತು, ಶಹರ ಮರಾಠಾ ಯುವ ವೇದಿಕೆ, ಮರಾಠಾ ಜಾಗೃತ ಸಮಿತಿ ಹಾಗೂ ಮಹಿಳಾ ಘಟಕದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಇದಕ್ಕೂ ಮುನ್ನ ನಗರದ ಶಿವಾಜಿ ವೃತ್ತದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಗೆ ಅವಳಿ ನಗರದ ಗಣ್ಯರು ಮಾಲಾರ್ಪಣೆ ಮಾಡುವ ಮೂಲಕ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ನಗರದಾದ್ಯಂತ ಆಟೊಗಳು, ಕಾರ್‌ಗಳಲ್ಲಿ ಶಿವಾಜಿ ಭಾವಚಿತ್ರ ಹೊತ್ತ ಧ್ವಜ ಹಾರಾಡುತ್ತಿತ್ತು.ಹುಬ್ಬಳ್ಳಿ ವರದಿ

ಹುಬ್ಬಳ್ಳಿ: ಶಿವಾಜಿ ಮಹಾರಾಜರು ಕಂಡ ಹಿಂದವಿ (ಹಿಂದೂ) ಸಾಮ್ರಾಜ್ಯದ ಕನಸು ನನಸಾಗಿಸಲು ಪ್ರಯತ್ನಗಳು ನಡೆಯಬೇಕಿದೆ ಎಂದು ಸಂಸದ ಪ್ರಹ್ಲಾದ ಜೋಶಿ ಆಶಿಸಿದರು.ಇಲ್ಲಿನ ಕೊಯಿನ್ ರಸ್ತೆಯ ಬಾಣಿ ಓಣಿಯಲ್ಲಿ ಶ್ರೀ ಶಕ್ತಿ ಯುವಕ ಮಂಡಳದ ಆಶ್ರಯದಲ್ಲಿ ಸೋಮವಾರ ನಡೆದ ಛತ್ರಪತಿ ಶಿವಾಜಿ ಮಹಾರಾಜರ 385ನೇ ಹಾಗೂ ಜಗಜ್ಯೋತಿ ಬಸವೇಶ್ವರರ 881ನೇ ಜಯಂತ್ಯುತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.ದೇವಿ ತುಳಜಾಭವಾನಿಯ ಆಶೀರ್ವಾದ ಹಾಗೂ ತಾಯಿ ಜೀಜಾಬಾಯಿ ಮಾರ್ಗದರ್ಶನದಲ್ಲಿ ಸಶಕ್ತ ಹಿಂದೂ ಯೋಧನಾಗಿ ರೂಪುಗೊಂಡ ಶಿವಾಜಿ ಮಹಾರಾಜರು ಮುಂದೆ ಸ್ವತಂತ್ರ ಹಿಂದೂ ಸಾಮ್ರಾಜ್ಯ ಸ್ಥಾಪಿಸುವಲ್ಲಿ ಯಶಸ್ವಿಯಾದರು. ಆ ನಿಟ್ಟಿನಲ್ಲಿ ಇಂದಿನ ಯುವಜನತೆಗೆ ಶಿವಾಜಿ ಮಹಾರಾಜರು ಸದಾ ಸ್ಫೂರ್ತಿಯಾಗಿ ನಿಲ್ಲುತ್ತಾರೆ ಎಂದು ಹೇಳಿದರು.ಶಾಸಕ ವೀರಭದ್ರಪ್ಪ ಹಾಲಹರವಿ ಮಾತನಾಡಿ, ದೇಶದಲ್ಲಿ ಹಿಂದೂಗಳ ಸಂರಕ್ಷಣೆಗೆ ಕೈಗೊಳ್ಳಬೇಕಾದ ಕಾರ್ಯಕ್ರಮಗಳಿಗೆ ಶಿವಾಜಿ ಮಹಾರಾಜರ ವಿಚಾರಧಾರೆಗಳು ನೆರವಾಗುತ್ತವೆ ಎಂದರು.ಆಕ್ಸ್‌ಫರ್ಡ್ ಕಾಲೇಜಿನ ಸಂಸ್ಥಾಪಕ ವಸಂತ ಹೊರಟ್ಟಿ ಮಾತನಾಡಿ, ಶಿವಾಜಿ ಮಹಾರಾಜರ ಆದರ್ಶಗಳ ಪಾಲನೆಯ ನಿಟ್ಟಿನಲ್ಲಿ ಎಲ್ಲರೂ ಒಂದಾಗಿ ಶ್ರಮಿಸಬೇಕಿದೆ ಎಂದರು.ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಮಹೇಶ ಟೆಂಗಿನಕಾಯಿ ಮಾತನಾಡಿ ಶಿವಾಜಿ  ಹಾಕಿಕೊಟ್ಟ ಹಾದಿಯಲ್ಲಿಯೇ ಹಿಂದೂ ಸಾಮ್ರಾಜ್ಯ ನಿರ್ಮಾಣಕ್ಕೆ ಎಲ್ಲರೂ ಪ್ರಯತ್ನಿಸೋಣ ಎಂದರು.ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಶಕ್ತಿ ಯುವಕ ಮಂಡಳದ ಅಧ್ಯಕ್ಷ ಈಶ್ವರ ಶಿರಕೋಳ ವಹಿಸಿದ್ದರು. ಬಿಜೆಪಿ ಯುವಮೋರ್ಚಾ ಜಿಲ್ಲಾ ಘಟಕದ ಕಾರ್ಯದರ್ಶಿ ಸುಬ್ರಹ್ಮಣ್ಯ ಶಿರಕೋಳ, ನಗರಪಾಲಿಕೆ ಸದಸ್ಯ ಡಿ.ಕೆ.ಚವ್ಹಾಣ, ದೇವರಾಜ ಅರಸು ಹಿಂದುಳಿದ ಅಭಿವೃದ್ಧಿ ನಿಗಮದ ಅಧ್ಯಕ್ಷ ಅಶೋಕ ಕಾಟವೆ, ಉದ್ಯಮಿ ಪ್ರಮೋದ ಕದಂ, ಸಿ.ಎಫ್.ಚಿಕ್ಕನಗೌಡ್ರ, ಕೃಷ್ಣಾ ಮ.ಗಂಡಗಾಳೇಕರ, ಗೋವಿಂದ ಕಲಬುರ್ಗಿ, ಸುಹಾಸ ಓತಾರಿ, ರಾಮು ಮೈದರ್ಗಿ ಮತ್ತಿತರರು ಉಪಸ್ಥಿತರಿದ್ದರು.ಮೆರವಣಿಗೆ ಹಾಗೂ ಬೈಕ್ ರ‌್ಯಾಲಿ: ಶಿವಾಜಿ ಮಹಾರಾಜರು ಹಾಗೂ ಬಸವೇಶ್ವರರ ಜಯಂತ್ಯೋತ್ಸವದ ಅಂಗವಾಗಿ ಶಕ್ತಿನಗರದ ಬಾನಿ ಓಣಿಯಿಂದ ಭಾವಚಿತ್ರ ಮೆರವಣಿಗೆ ಹಾಗೂ ಬೈಕ್ ರ‌್ಯಾಲಿ ನಡೆಯಿತು. ಶಕ್ತಿ ನಗರದಿಂದ ಆರಂಭಗೊಂಡು, ದುರ್ಗದ ಬೈಲು, ತುಳಜಾಭವಾನಿ ದೇವಸ್ಥಾನ, ಕಿತ್ತೂರು ರಾಣಿ ಚೆನ್ನಮ್ಮ ವೃತ್ತ ಹಾಗೂ ಸ್ಟೇಶನ್ ರಸ್ತೆಯ ಮೂಲಕ ಮೆರವಣಿಗೆ ಸಂಚರಿಸಿತು. ಬಿಜೆಪಿ ಮುಖಂಡ ಸುಬ್ರಹ್ಮಣ್ಯ ಶಿರಕೋಳ ಅವರ ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ಶ್ರೀ ಮಲ್ಲಿಕಾರ್ಜುನ ದಾಲಪಟ ಕಲಾವಿದರು ಸೇರಿದಂತೆ ನೂರಾರು ಮಂದಿ ಚಕ್ಕಡಿ ಗಾಡಿ, ಟ್ರ್ಯಾಕ್ಟರ್ ಹಾಗೂ ಬೈಕ್‌ಗಳಲ್ಲಿ ಮೆರವಣಿಗೆಯಲ್ಲಿ ಸಾಗಿದರು. ಶಿವಾಜಿ ಮಹಾರಾಜರಿಗೆ, ತುಳಜಾ ಭವಾನಿಗೆ ಜಯ ಘೋಷ ಮಾಡುತ್ತಾ ಮೆರವಣಿಗೆಗೆ ಧಾರ್ಮಿಕ ಕಳೆ ತಂದರು.ಕೇಶ್ವಾಪುರ ವೃತ್ತ

ಶಿವಾಜಿ ಮಹಾರಾಜರ ಜಯಂತಿಯ ಅಂಗವಾಗಿ ಕೇಶ್ವಾಪುರದ ಸರ್ವೋದಯ ವೃತ್ತದಲ್ಲಿರುವ ಶಿವಾಜಿ ಮೂರ್ತಿಗೆ ಪೂಜೆ ಸಲ್ಲಿಸಿದ ರಾಜ್ಯ ಯುವ ಕಾಂಗ್ರೆಸ್ ಘಟಕದ ಮಾಜಿ ಅಧ್ಯಕ್ಷ ಸದಾನಂದ ಡಂಗನವರ ಮೆರವಣಿಗೆಗೆ ಚಾಲನೆ ನೀಡಿದರುಈ ಸಂದರ್ಭದಲ್ಲಿ ಗೋಪನಕೊಪ್ಪದ ಮುಖಂಡರಾದ ಮಾರುತಿ ಮಾನೆ, ಕಲ್ಲಪ್ಪ ಖಂಡೇಕರ, ಸಂಜಯ ಮಾನೆ, ಬೀರೇಶ್ವರ, ಸಿದ್ದು ಹಂಡೇ, ಆನಂದ ಮುಗದಮ್ ಮತ್ತಿತರರು ಹಾಜರಿದ್ದರು.ಮರಾಠ ಭಾರತಿ ಮಠ

ಮರಾಠ ಗಲ್ಲಿಯ ಮರಾಠ ಶ್ರೀ ಭಾರತಿ ಮಠದ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಆಚರಿಸಲಾಯಿತು. ಬೆಳಿಗ್ಗೆ 8 ಗಂಟೆಗೆ ಮರಾಠ ಗಲ್ಲಿಯ ಶಿವಾಜಿ ಚೌಕದಲ್ಲಿ  ಧ್ವಜಾರೋಹಣದ ಮೂಲಕ ಜಯಂತಿಗೆ ಚಾಲನೆ ನೀಡಲಾಯಿತು.ನಂತರ ತಹಸೀಲ್ದಾರ್ ಎಸ್.ಎಸ್.ಬಿರಾದಾರ್ ಶಿವಾಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಉದ್ಘಾಟಿಸಿದರು. ಸಂಜೆ ಮರಾಠ ಭಾರತಿಮಠ ಆವರಣದ ಹನುಮಾನ ಮಂದಿರದಿಂದ ಆರಂಭವಾದ ಶಿವಾಜಿ ಮಹಾರಾಜರ ತೈಲಭಾವ ಚಿತ್ರದ ಮೆರವಣಿಗೆ ಮಹಾರಾಜ ಪೇಟೆ, ರಾಣಿಚೆನ್ನಮ್ಮ ವೃತ್ತ, ಸ್ಟೇಶನ್ ರಸ್ತೆಯ ಮೂಲಕ ಸಂಚರಿಸಿ ಮರಾಠ ಗಲ್ಲಿಗೆ ಹಿಂದಿರುಗಿತು. ಮರಾಠ ಶ್ರೀ ಭಾರತಿ ಮಠದ ಅಧ್ಯಕ್ಷ ಸುನೀಲ ಬಿ.ದಳವಿ ಮೆರವಣಿಗೆ ನೇತೃತ್ವ ವಹಿಸಿದ್ದರು.ದಲಿತ ರಕ್ಷಣಾ ವೇದಿಕೆ

ಹಳೇ ಹುಬ್ಬಳ್ಳಿ ಭುವನೇಶ್ವರಿ ನಗರ ಹೆಗ್ಗೇರಿ ಕಾಲೊನಿಯಲ್ಲಿ ಸೋಮವಾರ ಕರ್ನಾಟಕ ದಲಿತ ರಕ್ಷಣಾ ವೇದಿಕೆಯಿಂದ ಶಿವಾಜಿ ಮಹಾರಾಜರ 385ನೇ ಜನ್ಮದಿನ ಆಚರಿಸಲಾಯಿತು.ದಲಿತ ರಕ್ಷಣಾ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಯಲ್ಲಪ್ಪ ಡಿ.ಬಾಗಲಕೋಟೆ ಮಾತನಾಡಿದರು. ಕಾಂಗ್ರೆಸ್ ಮುಖಂಡರಾದ ಮಹೇಶ ದಾಬಡೆ, ಬಸವರಾಜ ನೆವನೂರು, ಭುವನೇಶ್ವರಿ ಸಂಘದ ಅಧ್ಯಕ್ಷ ರವಿ ಎನ್.ಬಂಕಾಪುರ, ಗೋಪಾಲ ಊದುಬತ್ತಿ, ಮಂಜು ಪಾಟೀಲ, ವಿಜಯ ಬಾಗಲಕೋಟಿ, ಕೃಷ್ಣ ಬಿಲಾನ, ಶಂಕರ ಬೆಟಗೇರಿ, ರಾಜು ಬಿಲಾನ, ಮಂಜು ಕರುವಿನಕೊಪ್ಪ, ಫಕ್ಕೀರಪ್ಪಾ, ಗಣೇಶ, ಬಸವರಾಜ ಮತ್ತಿತರರು ಇದ್ದರು.ಭೀಮಸೈನ್ಯ ಗೆಳೆಯರ ಬಳಗ

ವಿದ್ಯಾನಗರ ನೇಕಾರ ಕಾಲೊನಿಯ ಭೀಮಸೈನ್ಯ ಗೆಳೆಯರ ಬಳಗದ ವತಿಯಿಂದ ಸೋಮವಾರ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಆಚರಿಸಲಾಯಿತು.ವಿದ್ಯಾನಗರದ ರೆಡ್ಡಿಕ್ಯಾಂಟೀನ್ ಬಳಿ ಮುಂಜಾನೆ ಶಿವಾಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮಹಾನಗರ ಪಾಲಿಕೆ ಸದಸ್ಯ ಶಿವು ಹಿರೇಕೆರೂರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನೇಕಾರರ ಸಂಘಟನೆಯ ಅಧ್ಯಕ್ಷ ಎಸ್.ಎನ್.ಮಾಳವದೆ, ಮೇಘರಾಜ ಹಿರೇಮನಿ, ಶಕ್ತಿರಾಜ ದಾಂಡೇಲಿ ಹಾಜರಿದ್ದರು.ನಂತರ ಶಿವಾಜಿ ಮಹಾರಾಜರ ಭಾವಚಿತ್ರದ ಮೆರವಣಿಗೆ ವಿದ್ಯಾನಗರದ ಮೂಲಕ ಉಣಕಲ್ ಕ್ರಾಸ್ ನಂತರ ಕೆಎಲ್‌ಇ ಕ್ಯಾಂಪಸ್ ಮುಂಭಾಗದಿಂದ ಶಿರೂರು ಪಾರ್ಕ್‌ವರೆಗೆ ನಡೆಯಿತು. ಮೆರವಣಿಗೆಯ ನೇತೃತ್ವವನ್ನು ಭೀಮಸೈನ್ಯ ಗೆಳೆಯರ ಬಳಗದ ಮುಖಂಡರಾದ ಹನುಮಂತ ಎಂ.ಕಟಾವಕರ, ವಿನಾಯಕ ಕುಟ್ರೆ, ಸ್ವಾಮಿನಾಥ ಮತ್ತಿತರರು ವಹಿಸಿದ್ದರು.ನವಲಗುಂದ ವರದಿ

ನವಲಗುಂದ: ದೇಶ ಸದೃಢವಾಗಬೇಕಾದರೆ ಯುವಕರು ಛತ್ರಪತಿ ಶಿವಾಜಿ ಮಹಾರಾಜರ ಆದರ್ಶಗಳನ್ನು ಪಾಲಿಸಿಕೊಂಡು ದೇಶ ರಕ್ಷಣೆಗೆ ಮುಂದಾಗಬೇಕು ಎಂದು ಮಾಜಿ ಸಚಿವ ಕೆ.ಎನ್.ಗಡ್ಡಿ  ಕರೆ ನೀಡಿದರು.ಇಲ್ಲಿಯ ಅಂಭಾಭವಾನಿ ದೇವಸ್ಥಾನದ ಮುಂದೆ ಛತ್ರಪತಿ ಶಿವಾಜಿ ಜಯಂತ್ಯುತ್ಸವ ಸಮಿತಿ ವತಿಯಿಂದ ಏರ್ಪಡಿಸಿದ್ದ  ಕಾರ್ಯಕ್ರಮದಲ್ಲಿ ಶಿವಾಜಿ ಮಹಾರಾಜರ ಹಾಗೂ ಬಸವಣ್ಣನವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.ಇದಕ್ಕೂ ಮೊದಲು ಅಂಭಾಭವಾನಿ ದೇವಸ್ಥಾನದಿಂದ ಪ್ರಾರಂಭವಾದ ಶಿವಾಜಿ ಮಹಾರಾಜರ ಹಾಗೂ ಬಸವೇಶ್ವರ ಭಾವಚಿತ್ರದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ   ಸಂಚರಿಸಿತು. ಮಹಿಳೆಯರು ಕುಂಭ ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.  ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಮೆರವಣಿಗೆಯಲ್ಲಿ ಪಾಲ್ಗೊಂಡು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.ತಹಶೀಲ್ದಾರ ವಿನಾಯಕ ಪಾಲನಕರ, ಪುರಸಭೆ ಅಧ್ಯಕ್ಷ ಜೀವನ ಪವಾರ, ಮಂಜು ಜಾಧವ, ಸೋಮು ಖವಟೆಕರ, ಯಲ್ಲಪ್ಪ ಪವಾರ, ವಿಠ್ಠಲ ತೋಡಕರ, ನೇತಾಜಿ ಕಲಾಲ, ರಾಜು ತುಳಸಿಕರ, ನಾಗಪ್ಪ ಶಿಂಥ್ರೆ, ಸಿಪಿಐ ಎಸ್.ಎಸ್.ಪಡೋಳಕರ  ಪಾಲ್ಗೊಂಡಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.