ಗುರುವಾರ , ಏಪ್ರಿಲ್ 15, 2021
22 °C

ಅವಳಿನಗರದಲ್ಲಿ ಸಂಭ್ರಮದ ಶಿವರಾತ್ರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ/ಧಾರವಾಡ: ನಗರದಲ್ಲಿ ಬುಧವಾರ ಬೆಳಿಗ್ಗೆಯಿಂದಲೇ ಶಿವಭಕ್ತಿಯ ಸಂಚಲನ. ಹುಬ್ಬಳ್ಳಿಯ ಹಳೆಯ ಶಿವಾಲಯಗಳು ಹಾಗೂ ಬಡಾವಣೆಗಳ ಶಿವಮಂದಿರಗಳಲ್ಲಿ ಅಭಿಷೇಕ, ಪೂಜೆ, ಜಪ-ತಪಗಳು ನಡೆದವು. ಶಿವರಾತ್ರಿಯ ಅಂಗವಾಗಿ ಇಡೀ ದಿನ ಶಿವನ ಪೂಜೆ, ಉಪವಾಸ ವ್ರತದಲ್ಲಿದ್ದ ಜನರು ರಾತ್ರಿ ಜಾಗರಣೆಗಾಗಿ ಸಂಗೀತ, ಪುರಾಣ ಪ್ರವಚನಗಳಲ್ಲಿ ಭಾಗವಹಿಸಿದ್ದರು.ನಗರದ ಸ್ಟೇಷನ್ ರಸ್ತೆ, ಉಣಕಲ್ಲ, ಹಳೇಹುಬ್ಬಳ್ಳಿ, ಗೋಕುಲ ರಸ್ತೆ, ವಿದ್ಯಾನಗರ, ಕೇಶ್ವಾಪುರ, ಮಧುರಾ ಎಸ್ಟೇಟ್‌ನಲ್ಲಿರುವ ಶಿವಾಲಯಗಳಲ್ಲಿ ನೂರಾರು ಭಕ್ತರು ಪೂಜೆ ಸಲ್ಲಿಸಿದರು.ಸ್ಟೇಷನ್ ರಸ್ತೆಯ ಈಶ್ವರ ಗುಡಿ, ಹೊಸಹುಬ್ಬಳ್ಳಿ ಕಿಲ್ಲಾದಲ್ಲಿರು ಉಮಾಮಹೇಶ್ವರಗುಡಿ, ಉಣಕಲ್ಲ ಉಳವಿ ಚನ್ನಬಸವಣ್ಣನ ಗುರಿ, ಗೋಕುಲ ರಸ್ತೆ ಬಸವೇಶ್ವರನಗರದ ಶಿವಾಲಯ, ವಿದ್ಯಾನಗರದ ಜಯನಗರದ ಶಿವಾಲಯಗಳು, ಮಧುರಾ ಎಸ್ಟೇಟಿನ ಕಾಶಿ ವಿಶ್ವನಾಥ ಗುಡಿ, ಗೋಕುಲ ರಸ್ತೆಯ ಶಿವಗಿರಿಯಲ್ಲಿ ಬೃಹತ್ ಈಶ್ವರ ಮೂರ್ತಿಗೆ ಅಭಿಷೇಕ, ಹೋಮ ಹವನಗಳು ನಡೆದವು.ಚಿನ್ಮಯ ಮಿಷನ್‌ನಲ್ಲಿ ಶಿವರಾತ್ರಿ: ಗೋಕುಲ ರಸ್ತೆಯ ರೇಣುಕಾನಗರದಲ್ಲಿರುವ ಚಿನ್ಮಯ ಮಿಷನ್‌ನಲ್ಲಿ ಮಹಾಶಿವರಾತ್ರಿ ಜಾಗರಣೆಯಂಗವಾಗಿ ಬುಧವಾರ ಮಧ್ಯರಾತ್ರಿ ವಿಶೇಷ ಪೂಜೆ ಮತ್ತು ಅಭಿಷೇಕಗಳು ನಡೆದವು. ಶಿವಲಿಂಗಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ತಡರಾತ್ರಿ 12ಕ್ಕೆ ಮಹಾಮಂಗಳಾರತಿ ನಡೆಯಿತು. ಈ ಸಂದರ್ಭದಲ್ಲಿ ಅವಳಿನಗರದ ನೂರಾರು ಭಕ್ತರು ಸೇರಿದ್ದರು.ಸಿದ್ಧಾರೂಢಮಠದಲ್ಲಿ ಸಂಭ್ರಮ: ಶಿವರಾತ್ರಿಯ ಅಂಗವಾಗಿ ಗುರುವಾರ ಸಂಜೆ ನಡೆಯಲಿರುವ ರಥೋತ್ಸವ ಮತ್ತು ಉತ್ಸವಕ್ಕಾಗಿ ಬುಧವಾರ ಸಂಜೆಯೇ ಪರ ಊರುಗಳಿಂದ ನೂರಾರು ಜನರು ಆಗಮಿಸಿದ್ದಾರೆ. ಬೀದರ್, ವಿಜಾಪುರ, ಚಿತ್ರದುರ್ಗ, ದಾವಣಗೆರೆ, ಕೊಪ್ಪಳ, ಬಳ್ಳಾರಿ, ಬೆಳಗಾವಿ, ಬಾಗಲಕೋಟೆ, ಮಹಾರಾಷ್ಟ್ರ, ಆಂಧ್ರಪ್ರದೇಶಗಳಿಂದ ಭಕ್ತರು ಕುಟುಂಬ ಸಮೇತ ಆಗಮಿಸಿದ್ದಾರೆ. ಕೈಲಾಸಮಂಟಪದ ಆವರಣ, ಯಾತ್ರಿ ನಿವಾಸಗಳಲ್ಲಿ ಬೀಡುಬಿಟ್ಟಿದ್ದಾರೆ.ಶಿವರಾತ್ರಿ ಉಪವಾಸದ ದಿನವಾದ ಬುಧವಾರ ಶ್ರೀಮಠದಲ್ಲಿ ವಿಶೇಷ ಅನ್ನ ದಾಸೋಹದಲ್ಲಿ ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಿದರು. ಜಾಗರಣೆ ಅಂಗವಾಗಿ ಭಜನೆ, ಸಂಗೀತ ಕಾರ್ಯಕ್ರಮಗಳು ನಡೆದವು. ಜಾತ್ರೆಯ ಅಂಗವಾಗಿ ರಥವನ್ನು ಸಿಂಗರಿಸಲಾಗಿದ್ದು. ಮಕ್ಕಳಿಗಾಗಿ  ಆಟವಾಡಲು ಜಾಯಿಂಟ್‌ವ್ಹೆಲ್, ರೋಲಿಂಗ್ ಚೇರ್ ಮತ್ತಿತರ ಸಾಮಗ್ರಿಗಳು ಸಿದ್ಧವಾಗಿವೆ.

ಬಾಯಲ್ಲಿ ನೀರೂರಿಸುವ ಗಿರಮಿಟ್, ಮಿರ್ಚಿ, ಭಜಿ, ಚಹಾ ಅಂಗಡಿಗಳು, ಸೋಡಾ, ಕಬ್ಬಿನ ಹಾಲಿನ ಅಂಗಡಿಗಳು ಕಾರ್ಯಾರಂಭ ಮಾಡಿವೆ. ಧಾರವಾಡ ವರದಿ: ನಗರದ ವಿವಿಧ ದೇವಸ್ಥಾನಗಳಲ್ಲಿ ಈಶ್ವರನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಶಿವರಾತ್ರಿಯನ್ನು ಬುಧವಾರ ಆಚರಿಸಲಾಯಿತು.ಶ್ರೀಕ್ಷೇತ್ರ ಸೋಮೇಶ್ವರದಲ್ಲಿ ನಸುಕಿನ ಜಾವವೇ ಈಶ್ವರನಿಗೆ ಅಭಿಷೇಕ, ವಿಶೇಷ ಪೂಜೆ ನೆರವೇರಿಸಲಾಯಿತು. ಸಾವಿರಾರು ಭಕ್ತರು ಈಶ್ವರನ ದರ್ಶನ ಪಡೆದರು. ಬೆಳಿಗ್ಗೆಯಿಂದಲೇ ಸೋಮೇಶ್ವರದಲ್ಲಿ ಜನಜಂಗುಳಿ ನೆರದಿತ್ತು. ಈಶ್ವರನಿಗೆ ಬಿಲ್ವಪತ್ರೆ ಅರ್ಪಿಸುವ ಮೂಲಕ ಅನೇಕರು ಪೂಜೆ ಸಲ್ಲಿಸಿದರು. ಜಯನಗರದ ಈಶ್ವರ ದೇವಸ್ಥಾನದಲ್ಲಿ ರುದ್ರಾಭಿಷೇಕ, ಧಾರ್ಮಿಕ ಕಾರ್ಯಕ್ರಮ ನಡೆದವು. ಪ್ರಭು ಕುಂದರಗಿ ದ್ಯಾವನಗೌಡ ಪಾಟೀಲ ಅವರಿಂದ ಭಜನೆ ನಡೆಯಿತು.ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಶಿವಸಹಸ್ರನಾಮ ಪಠಣ, ಭಜನೆ. ಶಿವನಾಮ ಸಂಕೀರ್ತನೆ, ಮಹಾ ಮಂಗಳಾರತಿ ನಡೆಯಿತು. ಕರ್ನಾಟಕ ಕಾನ್ಯಕುಬ್ಜ ಬ್ರಾಹ್ಮಣ ಮತ್ತು ರಜಪೂತ ಸಮಾಜದ ವತಿಯಿಂದ ತುಂಗಭದ್ರೇಶ್ವರ ದೇವಸ್ಥಾನದಲ್ಲಿ ರುದ್ರಾಭಿಷೇಕ, ಹರಿಭಕ್ತ ಮಂಡಳಿಯಿಂದ ಭಜನೆ ಜರುಗಿತು. ಗಾಂಧಿನಗರದ ಈಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ವಿಶೇಷ ಪೂಜೆ ನಡೆಯಿತು. ಸಂಜೆ ಸಾಂಸ್ಕೃತಿಕ ಹಾಗೂ ಭಜನೆ ಕಾರ್ಯಕ್ರಮ ನಡೆಯಿತು. ರಾಷ್ಟ್ರೀಯ ಬಸವದಳದ ವತಿಯಿಂದ ಶಿವರಾತ್ರಿ ಅಂಗವಾಗಿ ಬಸವಣ್ಣನವರ ಭಾವಚಿತ್ರದ ಬೃಹತ್ ಮೆರವಣಿಗೆ ನಡೆಯಿತು. ನಂತರ ಅಕ್ಕಮಹಾದೇವಿ ಆಶ್ರಮದ ಬಸವ ಮಂಟಪದಲ್ಲಿ ಸಾಮೂಹಿಕ ಪ್ರಾರ್ಥನೆ, 770 ಅಮರ ಗುಣಗಳ ನಾಮಸ್ಮರಣೆ ನಡೆಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.