ಗುರುವಾರ , ಜೂನ್ 17, 2021
27 °C

ಅವಳಿನಗರ ಸಮಗ್ರ ಅಭಿವೃದ್ಧಿಗೆ 3,000 ಕೋಟಿ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: `ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ 202 ಚದರ ಕಿ.ಮೀ. ವ್ಯಾಪ್ತಿ ಹೊಂದಿದ್ದು, 1200 ಕಿ.ಮೀ. ಉದ್ದದ ರಸ್ತೆ ಹಾಗೂ 300 ಅನಧಿಕೃತ ಬಡಾವಣೆಗಳನ್ನು ಹೊಂದಿದೆ. ಅವಳಿನಗರದ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ರೂ 3,000 ಕೋಟಿ ಅನುದಾನದ ಅಗತ್ಯವಿದೆ~ ಎಂದು ಪಾಲಿಕೆ ಆಯುಕ್ತ ಡಾ.ಕೆ.ವಿ. ತ್ರಿಲೋಕಚಂದ್ರ ತಿಳಿಸಿದರು.ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಎರಡೂ ನಗರಗಳಲ್ಲಿ ಸುಮಾರು 50 ವರ್ಷಗಳ ಹಿಂದಿನಷ್ಟು ವ್ಯವಸ್ಥೆಯೇ ಮುಂದುವರಿದ ಕಾರಣ ಹಲವು ಸಮಸ್ಯೆಗಳು ಹಾಗೇ ಉಳಿದಿವೆ. ಒಳಚರಂಡಿ, ರಸ್ತೆ, ಕುಡಿಯುವ ನೀರು ಪೂರೈಕೆ ಸಮಸ್ಯೆಗಳು ಅದರಲ್ಲಿ ಸೇರಿವೆ ಎಂದು ತಿಳಿಸಿದರು.`ಪಾಲಿಕೆ ವಾರ್ಷಿಕ ರೂ 50 ಕೋಟಿಯಷ್ಟು ವರಮಾನ ಹೊಂದಿದ್ದು, ಈ ಹಣದಲ್ಲೇ ಎಲ್ಲ 67 ವಾರ್ಡ್‌ಗಳಿಗೆ ಅನುದಾನ ನೀಡಬೇಕಿದೆ. ಹೀಗಾಗಿ ಸರ್ಕಾರದ ಆರ್ಥಿಕ ನೆರವಿಲ್ಲದೆ ಪಾಲಿಕೆ ಆಡಳಿತ ನಡೆಸುವುದು ಕಷ್ಟವಾಗಿದೆ. ತಕ್ಷಣಕ್ಕೆ ಪರಿಹಾರ ಸಿಗದಿದ್ದರೆ ಸಮಸ್ಯೆಗಳು ಉಲ್ಬಣಗೊಳ್ಳುತ್ತಾ ಹೋಗುತ್ತವೆ. ಆದ್ದರಿಂದ ಪಾಲಿಕೆ ಜನಕ್ಕೆ ಅಗತ್ಯವಾದ ಮೂಲ ಸೌಕರ್ಯ ಒದಗಿಸುವತ್ತ ಆದ್ಯತೆ ನೀಡುತ್ತಿದೆ~ ಎಂದು ವಿವರಿಸಿದರು.`ಕಸ ಸಂಗ್ರಹಕ್ಕೆ ಅವಳಿನಗರದಲ್ಲಿ 750 ಕಂಟೇನರ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಇನ್ನೂ ನೂರಾರು ಕಂಟೇನರ್‌ಗಳಿಗೆ ಬೇಡಿಕೆ ಇದೆ. ಆದರೆ, ಕೆಲವೆಡೆ ಕಂಟೇನರ್‌ಗಳಿದ್ದರೂ ಚರಂಡಿಗೆ ಕಸ ಎಸೆಯುವ ಪರಿಪಾಠ ಬೆಳೆದಿದೆ. ನಮ್ಮ ನಗರದ ಸುಧಾರಣೆಯಲ್ಲಿ ಪಾಲಿಕೆಯಷ್ಟೇ ಸಮುದಾಯದ ಪಾಲ್ಗೊಳ್ಳುವಿಕೆಯೂ ಅಷ್ಟೇ ಅಗತ್ಯವಾಗಿದ್ದು, ಜನ ತಮ್ಮ ಹೊಣೆಗಾರಿಕೆಯನ್ನು ಅರಿಯಬೇಕಿದೆ~ ಎಂದು ಹೇಳಿದರು.`ಕಸವನ್ನು ಕಂಟೇನರ್‌ಗಳಲ್ಲಿ ಹಾಕದೆ ಚರಂಡಿಯಲ್ಲಿ ಸುರಿದು, ಕೊಳಚೆ ನೀರು ಹರಿಯದೆ ಕಟ್ಟಿಕೊಂಡಿದೆ ಎಂದೆಲ್ಲ ದೂರಿದರೆ ಇದಕ್ಕೆ ಯಾರು ಹೊಣೆ~ ಎಂದು ಅವರು ಪ್ರಶ್ನಿಸಿದರು. `ಸ್ವಚ್ಛತೆಗೆ ಸಂಬಂಧಿಸಿದ ದೂರುಗಳ ಪೈಕಿ 88 ಮತ್ತು ಬೀದಿದೀಪದ ದೂರುಗಳಲ್ಲಿ 58ಕ್ಕೆ ತಕ್ಷಣ ಪರಿಹಾರ ಒದಗಿಸಲಾಗಿದೆ. ಉಳಿದ ಸಮಸ್ಯೆಗಳಿಗೆ ಕಾಲಮಿತಿಯಲ್ಲಿ ಪರಿಹಾರ ಒದಗಿಸಲಾಗುವುದು~ ಎಂದು ಭರವಸೆ ನೀಡಿದರು. `ಇದ್ದ ಮಿತಿಯಲ್ಲಿ ಸಾಕಷ್ಟು ಸುಧಾರಣಾ ಕೆಲಸಗಳನ್ನು ನಡೆಸಿದ್ದೇವೆ~ ಎಂದು ತಿಳಿಸಿದರು.`ವೈಯಕ್ತಿಕ ಕಾಳಜಿಯಷ್ಟೇ ಸಮಾಜದ ಕಾಳಜಿಯೂ ಮುಖ್ಯ~ ಎಂದ ಅವರು, `ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಪತ್ರಿಕಾ ಸಮೂಹ ಜನರಿಗೆ ಅತ್ಯುತ್ತಮ ಸೌಲಭ್ಯ ಕಲ್ಪಿಸುವ ಪಾಲಿಕೆ ಪ್ರಯತ್ನಕ್ಕೆ ಸಹಕಾರ ನೀಡಿದ್ದು, ಸ್ತುತ್ಯಾರ್ಹ ಕೆಲಸ ಮಾಡಿದೆ~ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಪತ್ರಿಕೆ ಪ್ರಸರಣ ವಿಭಾಗದ ಪ್ರಧಾನ ವ್ಯವಸ್ಥಾಪಕ ಎಸ್.ಶಿವರಾಮಕೃಷ್ಣ ಸ್ವಾಗತಿಸಿದರು. ಹಿರಿಯ ವ್ಯವಸ್ಥಾಪಕ ಬಿ.ಎ. ರವಿ, ಸುದ್ದಿ ವಿಭಾಗದ ಬ್ಯುರೋ ಮುಖ್ಯಸ್ಥ ಎಂ. ನಾಗರಾಜ, ಜಾಹೀರಾತು ವಿಭಾಗದ ಹಿರಿಯ ವ್ಯವಸ್ಥಾಪಕ ಕೆ.ದಿವಾಕರ ಹಾಜರಿದ್ದರು. ಸರ್ವಮಂಗಳಾ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ವರ್ಷಾ ಜೋಶಿ ಪ್ರಾರ್ಥಿಸಿದರು.ಕಾರ್ಯಕ್ರಮದ ಬಳಿಕೆ ಹಲವಾರು ಜನ ಆಯುಕ್ತರ ಬಳಿಗೆ ಬಂದು ತಮ್ಮ ಅಹವಾಲು ತೋಡಿಕೊಂಡರು. ಎಲ್ಲರ ಸಮಸ್ಯೆಗಳನ್ನು ಸಾವಧಾನದಿಂದ ಆಲಿಸಿದ ಆಯುಕ್ತರು ಪರಿಹಾರ ಒದಗಿಸುವ ಭರವಸೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.