ಗುರುವಾರ , ಮೇ 19, 2022
21 °C
ನಡುಗಡ್ಡೆಯಂತಿರುವ ಹಳ್ಳಿಗಳು, ಇಲ್ಲ ಮೂಲ ಸೌಲಭ್ಯ, ದೊರಕೀತೆ ಮೇಲ್ಸೇತುವೆ ಭಾಗ್ಯ?

ಅವಳಿ ಗ್ರಾಮಗಳ ಅಜ್ಞಾತವಾಸ!

ಪ್ರಜಾವಾಣಿ ವಾರ್ತೆ / -ಚಂದ್ರಕಾಂತ ಬಾರಕೇರ . Updated:

ಅಕ್ಷರ ಗಾತ್ರ : | |

ಗಜೇಂದ್ರಗಡ: ಅವು 180 ರಿಂದ 218 ಮನೆಗಳುಳ್ಳ ಎರಡು  ಗ್ರಾಮಗಳು. ಸುತ್ತಲೂ ಹಳ್ಳದ ನೀರಿನ ಮಧ್ಯೆ  ದ್ವೀಪದಂತಿರುವ ಅವಳಿ ಗ್ರಾಮಗಳಿವು. ಇವು ಮೂಲ ಸೌಲಭ್ಯಗಳಿಂದ ವಂಚಿತ ಗ್ರಾಮಗಳು. ಕಾಲುಹಾದಿಯೇ ಗ್ರಾಮದ ರಹದಾರಿ. ಗಿಡ-ಗಂಟಿಗಳ ಪೊದೆಯೇ ಶೌಚಾಲಯ. ಮನೆಯೇ ಪಾಠಶಾಲೆ. ಮನೆಮದ್ದೇ ಆಸ್ಪತ್ರೆ!ಇದು ರೋಣ ತಾಲ್ಲೂಕಿನ `ದ್ಯಾಮುಣಸಿ' ಮತ್ತು `ಬೇವಿನಕಟ್ಟಿ' ಎಂಬ ಎರಡು ನತದೃಷ್ಟ ಹಳ್ಳಿಗಳ ಕತೆ. ಸೂಡಿಯಿಂದ ಕೇವಲ ಎರಡು ಕಿ.ಮೀ. ದೂರದಲ್ಲಿರುವ ಈ ಅವಳಿ ಗ್ರಾಮಗಳನ್ನು ತಲುಪಲು ದುರ್ಗಮ ಕಾಲುದಾರಿಯಲ್ಲೇ ಸಾಗಬೇಕು.ಇಂದಿನ ನಗರೀಕರಣದ ಯುಗದಲ್ಲೂ ಈ ಗ್ರಾಮಗಳು ಕುಗ್ರಾಮದಂತಿವೆ. ಜನಪ್ರತಿನಿಧಿಗಳಿಗೆ, ಅಧಿಕಾರಿಗಳ ಕಣ್ಣಿಗೆ ಈ ಹಳ್ಳಿಗಳು ಕಂಡಿಲ್ಲ. ಸರ್ಕಾರದ ಒಂದೇ ಒಂದು ಯೋಜನೆಯೂ ಗ್ರಾಮಗಳನ್ನು ತಲುಪಿಲ್ಲ. ಈ ಗ್ರಾಮಗಳ ಮಾರ್ಗ ಮಧ್ಯೆ ಗೌರಿ ಮತ್ತು ಹಿರೇಹಳ್ಳಗಳಿವೆ. ಮಳೆ ಬಂತೆಂದರೆ ಎರಡೂ ಉಕ್ಕಿ ಹರಿದು ಇದ್ದಕಾಲು ದಾರಿಯೂ ಕೊಚ್ಚಿ ಹೋಗುತ್ತವೆ. ಅವಳಿ ಗ್ರಾಮಗಳು ಸಂಪೂರ್ಣ ಸಂಪರ್ಕವನ್ನೇ ಕಳೆದುಕೊಳ್ಳುತ್ತವೆ. ಇಂತಹ ಸಂದರ್ಭದಲ್ಲಿ ಗ್ರಾಮಸ್ಥರಿಗಾದ ಕಹಿ ಅನುಭವಗಳು ಅಪಾರ. ಅವರ ಬದುಕು ಸಂಪೂರ್ಣ ಅಜ್ಞಾತವಾಸ.ಮೂಲ ಸೌಲಭ್ಯಗಳಿಲ್ಲ: ರಸ್ತೆ, ಮೇಲ್ಸೇತುವೆ, ಶಾಲೆ, ಆಸ್ಪತ್ರೆ ಹೀಗೆ ಕನಿಷ್ಟ ಮೂಲ ಸೌಲಭ್ಯಗಳೂ ಈ ಗ್ರಾಮಗಳಲ್ಲಿ ಇಲ್ಲ. ಸೂಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರುವ ದ್ಯಾಮುಣಸಿ, ಬೇವಿನಕಟ್ಟಿ ಗ್ರಾಮಸ್ಥರ ಬದುಕು ಇಂದಿಗೂ ಆದಿವಾಸಿಗಳ ರೀತಿಯಲ್ಲೇ ಇದೆ. ಶಿಕ್ಷಣ, ಆರೋಗ್ಯ ಭಾಗ್ಯವಂತೂ ಇವರಿಗೆ ಗಗನಕುಸುಮ.

ಕಾಲು ದಾರಿ ಸರಿಯಾಗಿಲ್ಲದ ಈ ಅವಳಿ ಗ್ರಾಮಗಳಿಗೆ ಮಾಜಿ ಸಚಿವ ಕಳಕಪ್ಪ ಬಂಡಿ ತಮ್ಮ ಅಧಿಕಾರಾವಧಿಯಲ್ಲಿ ರಸ್ತೆ ನಿರ್ಮಿಸಿದರು. ಆದರೆ, ಸಾರಿಗೆ ವ್ಯವಸ್ಥೆ ದೊರೆತಿಲ್ಲ. ಬೇಸಿಗೆಯ ದಿನಗಳಲ್ಲಿ ಮಾತ್ರ ಗ್ರಾಮದಿಂದ ಇತರೆ ಹಳ್ಳಿ, ನಗರಗಳಿಗೆ ತೆರಳಲು ಸಾಧ್ಯ. ಮಳೆಗಾಲದಲ್ಲಿದು ಕನಸು. ಹಳ್ಳಿಗಳ ನಡುವಿನ ಹಳ್ಳಗಳು ಉಕ್ಕಿ ಹರಿಯುವ ಕಾರಣ ಗ್ರಾಮದ ಮಕ್ಕಳಿಗೆ ಸೂಡಿ, ಗಜೇಂದ್ರಗಡ ನಗರಕ್ಕೂ ಬಂದು ಶಿಕ್ಷಣ ಕಲಿಯಲು ಸಾಧ್ಯವಾಗುವುದಿಲ್ಲ.`ಅನರೋಗ್ಯಕ್ಕೆ ಒಳಗಾದವರ ಪಾಡಂತೂ ಹೇಳ ತೀರದು. ಯಾರಾದರೂ ಗಂಭೀರ ಸ್ಥಿತಿಯಲ್ಲಿದ್ದರೆ ಶಿವನ ಪಾದವೇ ಗತಿ. ಈ ಹಳ್ಳಿಗಳ ಇಷ್ಟೊಂದು ಕಷ್ಟದ ಜೀವನ ಅನುಭವಿಸುತ್ತಿದ್ದರೂ  ಇದು ಯಾವುದೇ ಜನಪ್ರತಿನಿಧಿ, ಅಧಿಕಾರಿಗಳ ಗಮನಕ್ಕೆ ಬಂದಿಲ್ಲ. ಕನಿಷ್ಠ ಚುನಾವಣೆ ವೇಳೆಯಲ್ಲಾದರೂ ರಾಜಕಾರಣಿಗಳ ಕಣ್ಣಿಗೆ ಬೀಳಬೇಕಿತ್ತು. ಅದೂ ಸಾಧ್ಯವಾಗಿಲ್ಲ' ಎನ್ನುತ್ತಾರೆ ಗ್ರಾಮದ ವಿದ್ಯಾರ್ಥಿಗಳಾದ ಕವಿತಾ ಕುರಿ, ಭೀಮನಗೌಡ ಪಾಟೀಲ.ನಮ್ಮ ಗ್ರಾಮ ಸರ್ಕಾರಿ ದಾಖಲೆಗಳಲ್ಲಿ ಇದೆಯೋ ಇಲ್ಲವೋ ಎನ್ನುವಂತಹ ಅನುಮಾನ ಈ ಅವಳಿ ಗ್ರಾಮಸ್ಥರನ್ನು ಕಾಡಿದ್ದರೂ ಆಶ್ಚರ್ಯವಿಲ್ಲ. ಸುವರ್ಣ ಗ್ರಾಮ, ಸ್ವಚ್ಛಗ್ರಾಮ, ನಿರ್ಮಲ ಗ್ರಾಮ, ವಿಮಾಗ್ರಾಮ.ಅಕ್ಷರ ದಾಸೋಹದಂತಹ ಯೋಜನೆಗಳ ದೃಷ್ಟಿ ಈ ಗ್ರಾಮಗಳ ಮೇಲೆ ಬಿದ್ದಿಲ್ಲ.

ಒಮ್ಮೆ ಜಿಲ್ಲಾಡಳಿತದ ಅಧಿಕಾರಿಗಳು, ನಮ್ಮ ಜನಪ್ರತಿನಿಧಿಗಳು ಮೇಲ್ಸೇತುವೆ ಇಲ್ಲದ ಈ ದುರ್ಗಮ ಹಳ್ಳಗಳಲ್ಲಿ ಕಾಲ್ನಡಿಗೆಯಲ್ಲಿ ಪಾದಯಾತ್ರೆ ನಡೆಸಿ ಗ್ರಾಮದ ಕನಿಷ್ಠ ಅಭಿವೃದ್ಧಿಗೆ  ಬದ್ಧರಾಗುವರೇ ಎಂದು  ಈ ಗ್ರಾಮಗಳ ಜನರು ಎದಿರು ನೋಡುತ್ತಿದ್ದಾರೆ.

-ಚಂದ್ರಕಾಂತ ಬಾರಕೇರ .

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.