ಬುಧವಾರ, ನವೆಂಬರ್ 13, 2019
22 °C
ಹೈದರಾಬಾದ್: ಜವಳಿ ಮಳಿಗೆಗೆ ಯಾಸಿನ್ ಭಟ್ಕಳ್ ಭೇಟಿ

ಅವಳಿ ಸ್ಫೋಟ- ಮಹತ್ವದ ಸುಳಿವು

Published:
Updated:

ಹೈದರಾಬಾದ್: ದಿಲ್‌ಸುಖ್‌ನಗರದಲ್ಲಿ ಸಂಭವಿಸಿದ ಅವಳಿ ಸ್ಫೋಟ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮಹತ್ವದ ಸುಳಿವು ಕಲೆಹಾಕಿದೆ. ಈ ವಿಧ್ವಂಸಕ ಕೃತ್ಯದ ಹಿಂದೆ ನಿಷೇಧಿತ ಇಂಡಿಯನ್ ಮುಜಾಹಿದ್ದೀನ್ (ಐಎಂ) ಸಂಘಟನೆ ಕೈವಾಡ ಇರುವ ಸಾಧ್ಯತೆ ಈ ಸುಳಿವಿನಿಂದ ಬಲಗೊಂಡಿದೆ.`ಸ್ಫೋಟ ಸಂಭವಿಸಿದ ಫೆ.21ರಂದು `ಐಎಂ' ಪ್ರಮುಖ ಉಗ್ರ ಯಾಸಿನ್ ಭಟ್ಕಳ್ ಹೈದರಾಬಾದ್‌ನಲ್ಲಿ ಇದ್ದ. ಈತ ಸ್ಫೋಟ ಸಂಭವಿಸಿದ ಸ್ಥಳದ ಸಮೀಪ ಇರುವ ಜವಳಿ ಮಳಿಗೆಗೆ ಭೇಟಿ ನೀಡಿದ್ದ. ಇದು ಮಳಿಗೆಯಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಜೊತೆಗೆ ಘಟನಾ ಸ್ಥಳದ ಹತ್ತಿರ ಇರುವ ಟ್ರಾಫಿಕ್ ಸ್ನಿಗಲ್ ಬಳಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲೂ ಶಂಕಿತರ ಚಲನವಲನಗಳು ದಾಖಲಾಗಿವೆ' ಎಂದು `ಎನ್‌ಐಎ' ಇತ್ತೀಚೆಗೆ ಪ್ರಕರಣದ ತನಿಖೆ ಪ್ರಗತಿ ಕುರಿತು ಗೃಹ ಸಚಿವಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಹೇಳಿದೆ.`ಜವಳಿ ಮಳಿಗೆಯಲ್ಲಿನ ದೃಶ್ಯಗಳಲ್ಲಿ ಕಾಣಿಸಿರುವ ಶಂಕಿತ ವ್ಯಕ್ತಿ ಚಹರೆಯು ಕರ್ನಾಟಕ ಮೂಲದ ಅಹ್ಮದ್ ಸಿದ್ದಬಪ್ಪ ಅಲಿಯಾಸ್ ಯಾಸಿನ್ ಭಟ್ಕಳ್‌ನ ಚಹರೆಗೆ ನಿರ್ದಿಷ್ಟವಾಗಿ ಹೋಲಿಕೆ ಆಗುತ್ತದೆ. ಆತ ಚೀಲ ಇತ್ತು. ಬಹುಶಃ ಅದರಲ್ಲೇ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಇದ್ದಿರಬಹುದು. ಅದನ್ನು ವೆಂಕಟಾದ್ರಿ ಸಿನಿಮಾ ಮಂದಿರ ಬಳಿಯ ಬಸ್ ನಿಲ್ದಾಣದಲ್ಲಿ ಇಟ್ಟು ಸ್ಫೋಟಿಸಲಾಗಿದೆ' ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.`ಆದರೆ, ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಗಾವಹಿಸಲು ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಇಬ್ಬರು ಶಂಕಿತರ ಚಲನವಲನ ದಾಖಲಾಗಿದೆ. ಇದರಲ್ಲಿ ಭಟ್ಕಳ್‌ನ ಚಹರೆ ಅಷ್ಟು ಸ್ಪಷ್ಟವಾಗಿಲ್ಲ. ಶಂಕಿತರಲ್ಲಿ ಒಬ್ಬ ಪಾದಚಾರಿಯಾದರೆ, ಮತ್ತೊಬ್ಬ ಸೈಕಲ್ ಸವಾರ. ಈ ದೃಶ್ಯಾವಳಿಯನ್ನು ಗಾಂಧಿನಗರದಲ್ಲಿರುವ ವಿಶೇಷ ತಂತ್ರಜ್ಞಾನ ಪ್ರಯೋಗಾಲಯಕ್ಕೆ ಮತ್ತು ಅಮೆರಿಕದ ಎಫ್‌ಬಿಐ ಪ್ರಯೋಗಾಲಕ್ಕೆ ಕಳುಹಿಸಿ, ಅಭಿಪ್ರಾಯ ಕೋರಲಾಗಿದೆ. ಜೊತೆಗೆ ವಿವಿಧ ವಿಧ್ವಂಸಕ ಕೃತ್ಯಗಳ ಆರೋಪದ ಮೇಲೆ ಬಂಧಿತರಾಗಿರುವ ಉಗ್ರರು ಸಹ ಈ ಸ್ಫೋಟಕ್ಕೆ ಭಟ್ಕಳ್ ಕಾರಣ ಎಂದು ಹೇಳಿಕೆ ನೀಡಿದ್ದಾರೆ' ಎಂಬ ಅಂಶ ವರದಿಯಲ್ಲಿದೆ.

ಪ್ರತಿಕ್ರಿಯಿಸಿ (+)