ಅವಳು ಅವನು: ಜ್ಞಾನ ಅವಳ ಬಗೆಗಿನ ಮೌಢ್ಯ ಕಳಚಿದೆ

7

ಅವಳು ಅವನು: ಜ್ಞಾನ ಅವಳ ಬಗೆಗಿನ ಮೌಢ್ಯ ಕಳಚಿದೆ

Published:
Updated:
ಅವಳು ಅವನು: ಜ್ಞಾನ ಅವಳ ಬಗೆಗಿನ ಮೌಢ್ಯ ಕಳಚಿದೆ

ವಿಜ್ಞಾನ ಕ್ಷೇತ್ರದಲ್ಲಿ ಅವಳಿನ್ನೂ ಸಾಧನೆಯ ಉತ್ತುಂಗಕ್ಕೆ ಏರಿಲ್ಲ ನಿಜ. ಆದರೆ ಇತ್ತೀಚಿನ ದಿನಗಳಲ್ಲಿ ಅವಳ ಪಾಲುಗಾರಿಕೆ ಹೆಚ್ಚಾಗುತ್ತಿದೆ. ಅವಳೂ ಆಸಕ್ತಿಯಿಂದ ಈ ಕ್ಷೇತ್ರದಲ್ಲಿ ಭಾಗಿಯಾಗುತ್ತಿದ್ದಾಳೆ. ಆದರೆ ಅವಳಿಗೆ  ಸಾಕಷ್ಟು ಅಡ್ಡಿಗಳು ಇವೆ. ವಿಜ್ಞಾನ ಕ್ಷೇತ್ರ ಹೆಚ್ಚು ಸಮಯವನ್ನು ಕೇಳುತ್ತದೆ. ಅಷ್ಟು ಸಮಯವನ್ನು ಇಲ್ಲಿಗೇ ನೀಡಲು ಅವಳು ವಿಫಲವಾಗುತ್ತಿದ್ದಾಳೆ.ಕೌಟುಂಬಿಕ ವ್ಯವಸ್ಥೆ ಕೂಡ ಇದಕ್ಕೆ ಕಾರಣವಾಗಿರಬಹುದು. ಆಕೆ ಹೆಚ್ಚು ಕುಟುಂಬದ ಬಗ್ಗೆ ಗಮನ ಕೊಡಬೇಕಾಗಿರುವುದರಿಂದ ಹೆಚ್ಚಿನ ಸಮಯವನ್ನು ಇಲ್ಲಿ ನೀಡಲು ಆಕೆಗೆ ಸಾಧ್ಯವಾಗದೇ ಇರಬಹುದು. ಆದರೆ ವಿಜ್ಞಾನ ಆಕೆಯ ಬಗೆಗಿನ ಮೌಢ್ಯವನ್ನು ಕಡಿಮೆ ಮಾಡಿದೆ. ಅಲ್ಲದೆ ಮಹಿಳೆ ಬೇರೆ ಬೇರೆ ಕ್ಷೇತ್ರಗಳಲ್ಲಿ ತೊಡಗಿಕೊಳ್ಳುವಂತೆ ಮಾಡಲು ಆಕೆಗೆ ಸಹಕಾರಿಯಾಗಿದೆ. ಅಡುಗೆ ಮನೆಯಲ್ಲಿ ಆಕೆಯ ಶ್ರಮವನ್ನು ಕಡಿಮೆ ಮಾಡಿದೆ.ಹಿಂದಿನ ಕಾಲದಲ್ಲಿ ಇಡೀ ದಿನ ಕೆಲಸ ಮಾಡಿದರೂ ಆಕೆಯ ಅಡುಗೆಯ ಕೆಲಸವೇ ಮುಗಿಯುತ್ತಿರಲಿಲ್ಲ. ಬೆಳಗಿನ ಜಾವ ಎದ್ದ ಮಹಿಳೆ ಬೆಳಗಿನ ತಿಂಡಿತೀರ್ಥಗಳನ್ನು ಮುಗಿಸಿ ಮಧ್ಯಾಹ್ನದ ಅಡುಗೆಗೆ ಸಿದ್ಧವಾಗುತ್ತಿದ್ದಳು. ಮಧ್ಯಾಹ್ನದ್ದು  ಮಗಿಯಿತು ಎಂದರೆ ಸಂಜೆ ಮತ್ತು ನಾಳೆಯ ಅಡುಗೆಯ ಚಿಂತೆಯೇ ಆಕೆಯನ್ನು ಕಾಡುತ್ತಿತ್ತು. ಆದರೆ ಈಗ ವೈಜ್ಞಾನಿಕ ಆವಿಷ್ಕಾರಗಳಿಂದ ಅವಳ ಅಡುಗೆ ಮನೆಯ ಕೆಲಸ ಸುಲಭವಾಗಿದೆ. ಆಕೆಗೆ ಸಮಯವೂ ಉಳಿತಾಯವಾಗುತ್ತಿದೆ. ಈ ಸಮಯವನ್ನು ಮಹಿಳೆಯರು ಸಮರ್ಥವಾಗಿಯೇ ಬಳಸಿಕೊಳ್ಳುತ್ತಿದ್ದಾರೆ.ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರ ಸಾಧನೆ ಕಡಿಮೆ. ನೊಬೆಲ್ ಬಹುಮಾನ ಪಡೆದ ಮಹಿಳೆಯರ ಸಂಖ್ಯೆ ಕೂಡ ಹೆಚ್ಚೇನೂ ಇಲ್ಲ. ದೇಶ ಅಥವಾ ವಿದೇಶಗಳಲ್ಲಿ ಕೂಡ ಈ ತಕ್ಷಣಕ್ಕೆ ಹೆಸರಿಸಬಹುದಾದ ಮಹಿಳಾ ವಿಜ್ಞಾನಿಗಳು ಇಲ್ಲ.  ಮಹಿಳೆಯರು ವಿಜ್ಞಾನ ಶಿಕ್ಷಣದಲ್ಲಿ ಉತ್ತಮ ಸಾಧನೆಯನ್ನೇ ಮಾಡುತ್ತಿದ್ದಾರೆ. ಎಂಎಸ್‌ಸಿಗಳಲ್ಲಿ ರ್ಯಾಂಕ್ ಪಡೆಯುತ್ತಾರೆ. ಕೆಲವರು ಪಿಎಚ್‌ಡಿಯನ್ನೂ ಮಾಡುತ್ತಾರೆ. ಆದರೆ ನಂತರ ಅವರು ಮಾಯವಾಗಿ ಬಿಡುತ್ತಾರೆ.ಪ್ರೌಢಶಾಲೆ,  ಪಿಯುಸಿ ಹಂತದಲ್ಲಿಯೂ ಬಾಲಕಿಯರೇ ಹೆಚ್ಚಿನ ರ್ಯಾಂಕ್ ಪಡೆಯುತ್ತಾರೆ. ಅತಿ ಹೆಚ್ಚಿನ ಅಂಕಗಳನ್ನು ಗಳಿಸುತ್ತಾರೆ. ಆದರೆ ಅವರು ಮತ್ತೆ ಎಲ್ಲಿ ಹೋಗುತ್ತಾರೆ ಎನ್ನುವುದೇ ತಿಳಿಯುವುದಿಲ್ಲ.ನನ್ನ ಸಹಪಾಠಿಯೊಬ್ಬಳು ರಸಾಯನ ಶಾಸ್ತ್ರ ಎಂಎಸ್‌ಸಿಯಲ್ಲಿ ರ್ಯಾಂಕ್ ಪಡೆದಳು. ಈಗ ಆಕೆ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಾಳೆ. ವಿಜ್ಞಾನ ಪದವಿಯನ್ನೇ ಗಳಿಸಿಕೊಂಡಿದ್ದರೂ ಬೇರೆ ಬೇರೆ ಕ್ಷೇತ್ರದಲ್ಲಿ ಕೆಲಸ ಮಾಡುವ ಬಹಳಷ್ಟು ಮಹಿಳೆಯರಿದ್ದಾರೆ. ವೈಜ್ಞಾನಿಕ ಸಂಶೋಧನೆಯಲ್ಲಿ ತೊಡಗುವುದು ಆಕೆಗೆ ಕಷ್ಟವಾಗುತ್ತಿದೆ. ನಾನು ಬೆಳಿಗ್ಗೆ ಪ್ರಯೋಗಾಲಯಕ್ಕೆ ಬಂದರೆ ಮಧ್ಯರಾತ್ರಿವರೆಗೆ ಕೂಡ ಇಲ್ಲಿಯೇ ಇರಬಹುದು. ಆದರೆ ಮಹಿಳೆಯೊಬ್ಬಳು ಹಾಗೆ ಮಾಡುವುದು ಕಷ್ಟ. ಒಂದು ದಿನ ಎರಡು ದಿನ ಮಾಡಬಹುದು. ಆದರೆ ನಿರಂತರವಾಗಿ ಹಾಗೆ ಮಾಡುವುದು ಆಕೆಗೆ ಕಷ್ಟ. ಇದು ಕೇವಲ ನಮ್ಮ ದೇಶದ ಕತೆಯಲ್ಲ. ವಿದೇಶಗಳಲ್ಲಿಯೂ ಇದೇ ಪರಿಸ್ಥಿತಿಇದೆ.ಇತ್ತೀಚಿನ ದಿನಗಳಲ್ಲಿ ಜೈವಿಕ ವಿಜ್ಞಾನ, ಆಹಾರ ತಂತ್ರಜ್ಞಾನದಲ್ಲಿ ಮಹಿಳೆಯರು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿ ದ್ದಾರೆ. ಆದರೆ ಭೌತಶಾಸ್ತ್ರ, ರಾಸಾಯನಿಕ ಶಾಸ್ತ್ರಗಳಲ್ಲಿ ಈಗಲೂ ಅವರ ಪಾಲ್ಗೊಳ್ಳುವಿಕೆ ಕಡಿಮೆ ಇದೆ. ಸಂಶೋಧನೆ   ಕ್ಷೇತ್ರದಲ್ಲಿ ಮಹಿಳೆಯರು ನಿಜಕ್ಕೂ ಉತ್ತಮ ಕೆಲಸವನ್ನೇ ಮಾಡಬಹುದು. ಆದರೆ ಅದು  ಸಾಧ್ಯವಾಗುತ್ತಿಲ್ಲ.

 

ಇತ್ತೀ ಚಿನ ವರ್ಷಗಳಲ್ಲಿ ಮಹಿಳೆಯರು ಈ ಕ್ಷೇತ್ರಕ್ಕೆ ಹೆಚ್ಚಾಗಿ ಬರುತ್ತಿರುವುದರಿಂದ ಮಹಿಳೆ ಮತ್ತು ಪುರುಷರ ಸಂಬಂಧ ದಲ್ಲಿ ಏನೂ ಬದಲಾವಣೆಯಾಗಿಲ್ಲ. ಮಹಿಳೆಯರು ಈ ಕ್ಷೇತ್ರಕ್ಕೆ ಹೆಚ್ಚಾಗಿ ಬರುವುದನ್ನು ಪುರುಷರು ಕೂಡ ಸ್ವಾಗತಿಸಿದ್ದಾರೆ. ಅಲ್ಲದೆ ಉತ್ತೇಜನವನ್ನೂ ನೀಡುತ್ತಿದ್ದಾರೆ. ರಾಜಕೀಯದಲ್ಲಿ ಮಹಿಳೆಯರ ನೂಕು ನುಗ್ಗಲು ಇದೆ. ಉದ್ದಿಮೆ ಕ್ಷೇತ್ರದಲ್ಲಿಯೂ ಸಾಕಷ್ಟು ಮಂದಿ ಕಾಣಿಸಿಕೊಳ್ಳುತ್ತಿದ್ದಾರೆ. ವಾಣಿಜ್ಯ ಕ್ಷೇತ್ರದಲ್ಲಿಯೂ ಅವರ ಪಾಲುಗಾರಿಕೆ ಇದೆ. ಆದರೆ ವಿಜ್ಞಾನ ಅಷ್ಟೊಂದು ಸುಲಭದ ಕೆಲಸವಲ್ಲ. ನೂರು ವರ್ಷಗಳ ಹಿಂದೆ ಮಹಿಳೆಯರು ಶಿಕ್ಷಣ ಪಡೆಯುವುದೇ ಕಷ್ಟವಾಗಿತ್ತು. ಪ್ರಾರಂಭದ ದಿನಗಳಲ್ಲಿ ಆಕೆಯ ಶಿಕ್ಷಣ ಹೆಚ್ಚಾಗಿ ಕಲಾ ಮಾಧ್ಯಮದಲ್ಲಿಯೇ ಆಗಿತ್ತು. ಈಗೀಗ ಮಹಿಳೆಯರು ವಿಜ್ಞಾನವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.ಬದಲಾದ ಮಹಿಳೆಯರಲ್ಲಿ ವೈಚಾರಿಕ ಸಾಮರ್ಥ್ಯ ಹೆಚ್ಚಾಗಿದೆ. 24 ಗಂಟೆಯ ಕೆಲಸವನ್ನು 4 ಗಂಟೆಯಲ್ಲಿಯೇ ಮುಗಿಸಬಹುದು ಎನ್ನುವುದೂ ಗೊತ್ತಾಗಿದೆ. ಇನ್ನೂ ಕೆಲವು ವರ್ಷಗಳು ಕಳೆದರೆ ಮಹಿಳಾ ವಿಜ್ಞಾನಿಗಳ ಸಂಖ್ಯೆ ಹೆಚ್ಚಾಗಬಹುದು.ದುರಾಸೆಯನ್ನು ಬಿಟ್ಟು ವಸ್ತುಸ್ಥಿತಿಯನ್ನು ಅರ್ಥಮಾಡಿಕೊಂಡು ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಂಡು ದೇಶಕ್ಕೆ ಒಳ್ಳೆಯದನ್ನು ಮಾಡಬೇಕು ಎಂಬ ಹಂಬಲವನ್ನು ಹೊಂದಿದ ಮಹಿಳೆಯೇ ನಿಜವಾಗಿಯೂ ಆದರ್ಶ ಮಹಿಳೆ.ಮಹಿಳೆಯಾಗಲಿ, ಪುರುಷರಾಗಲಿ ತಮ್ಮಂದ ಆಗದೇ ಇರುವುದನ್ನು ಆಲೋಚಿಸಬಾರದು. ಆಸಕ್ತಿಗೆ ತಕ್ಕಂತೆ ನಡೆಯಬೇಕು. ಆ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಂಡು ಮುಂದುವರಿಯಬೇಕು. ದಿನಕ್ಕೆ 3 ಊಟವನ್ನಂತೂ ಮಾಡಲೇ ಬೇಕು. ಆದರೆ ಈ ಮೂರು ಊಟಕ್ಕೆ ನನ್ನ ಶ್ರಮ ಏನು ಎನ್ನುವುದನ್ನು ಆಲೋಚಿಸಿದರೆ ಒಳ್ಳೆಯದು.ನನ್ನ 30 ವರ್ಷದ ವಿಜ್ಞಾನ ಕ್ಷೇತ್ರದ ಅನುಭವದಲ್ಲಿ ನಾನು ಬೇರೆ ಬೇರೆ ದೇಶಗಳಲ್ಲಿ ಕೆಲಸ ಮಾಡಿದ್ದೇನೆ. ವಿವಿಧ ರೀತಿಯ ಮಹಿಳೆಯರೊಂದಿಗೂ ಕೆಲಸ ಮಾಡಿದ್ದೇನೆ. ಕೆನಡಾದಲ್ಲಿ ಜೋಸ್ನಾ ಪ್ರಧಾನ ಎಂಬಾಕೆ ತುಂಬಾ ಪ್ರತಿಭಾವಂತೆಯಾಗಿದ್ದಳು. ಆದರೆ ಆಕೆಯೂ ಕೂಡ ಈಗ ಎಲ್ಲಿ ಹೋದಳು ಎನ್ನುವುದು ಗೊತ್ತಿಲ್ಲ.ಭಾರತದಲ್ಲಿ ಮಾತ್ರ ಅಲ್ಲ ಪಾಶ್ಚಿಮಾತ್ಯ ದೇಶಗಳಲ್ಲಿಯೂ ಕೂಡ ವಿಜ್ಞಾನ ಕ್ಷೇತ್ರ ಅದರಲ್ಲಿಯೂ ಸಂಶೋಧನಾ ಕ್ಷೇತ್ರಗಳಲ್ಲಿ ಮಹಿಳೆ ಕಾಣೆಯಾಗುತ್ತಲೇ ಇರುತ್ತಾಳೆ. ಆಕೆಯನ್ನು ಹುಡುಕಿಕೊಂಡು ಬಂದು ಇಲ್ಲಿಯೇ ನೆಲೆ ನಿಲ್ಲುವಂತೆ ಮಾಡಬೇಕಾಗಿದೆ.

- ನಿರೂಪಣೆ:  ರವೀಂದ್ರ ಭಟ್ಟ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry