ಶನಿವಾರ, ಜನವರಿ 18, 2020
26 °C
ಕಾಂಗ್ರೆಸ್‌ನ ರಮೇಶ್‌ ಕುಮಾರ್‌, ಸ್ಪೀಕರ್‌ ವಿರೋಧ

ಅವಶ್ಯಕ ಸೇವೆಗಳಲ್ಲಿ ಮುಷ್ಕರ ನಿಷೇಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುವರ್ಣಸೌಧ (ಬೆಳಗಾವಿ): ಜೆಡಿಎಸ್ ಸದಸ್ಯರ ಸಭಾತ್ಯಾಗ, ಬಿಜೆಪಿ, ಕೆಜೆಪಿ ಮತ್ತು ಬಿಎಸ್ಆರ್ ಕಾಂಗ್ರೆಸ್ ಸದಸ್ಯರ ಆಕ್ಷೇಪಗಳ ನಡುವೆಯೇ ‘ಕರ್ನಾಟಕ ಅತ್ಯಾವಶ್ಯಕ ಸೇವೆಗಳ ನಿರ್ವಹಣಾ ಮಸೂದೆಗೆ’ ಬುಧವಾರ ವಿಧಾನಸಭೆ ಒಪ್ಪಿಗೆ ನೀಡಿದೆ. ಇದರಿಂದಾಗಿ ನೀರು, ವಿದ್ಯುತ್, ಸಾರಿಗೆ ಮುಂತಾದ ಅತ್ಯಾವಶ್ಯಕ ಸೇವೆಗಳ ಸಿಬ್ಬಂದಿ ಮುಷ್ಕರ ನಡೆಸುವಂತಿಲ್ಲ. ಮುಷ್ಕರ ನಡೆಸಿದರೆ  ವಾರಂಟ್ ಇಲ್ಲದೆ ಬಂಧಿಸಬಹುದಾಗಿದೆ. ಅಲ್ಲದೆ ಒಂದು ವರ್ಷ ಜೈಲು, ₨ ೫ ಸಾವಿರ ದಂಡ ಅಥವಾ ಈ ಎರಡೂ ಶಿಕ್ಷೆ ನೀಡುವ ಅವಕಾಶ ಈ ಮಸೂದೆಯಲ್ಲಿದೆ.ಮುಷ್ಕರಕ್ಕೆ  ಪ್ರಚೋದನೆ,  ಹಣದ ಸಹಾಯ ನೀಡಿದರೂ ಒಂದು ವರ್ಷ ಜೈಲು ಶಿಕ್ಷೆ ಮತ್ತು ₨ ೫ ಸಾವಿರ ದಂಡ ವಿಧಿಸಲು ಅವಕಾಶವಿದೆ.

ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಂಡಿಸಿದ ಮಸೂದೆಗೆ ವಿಧಾನಸಭೆ ಧ್ವನಿಮತದ ಮೂಲಕ ಒಪ್ಪಿಗೆ ನೀಡಿತು. ಯಾವುದೇ ಅತ್ಯಾವಶ್ಯಕ ಸೇವೆಯ ಸಿಬ್ಬಂದಿ ಮುಷ್ಕರದಿಂದ ಜನ ಸಮುದಾಯಕ್ಕೆ ತೊಂದರೆ ಯಾಗಿದೆ ಎಂದು ಸರ್ಕಾರಕ್ಕೆ ಮನವರಿಕೆಯಾದರೆ ‘ಅತ್ಯಾವಶ್ಯಕ ಸೇವೆ’ ಎಂದು ಪರಿಗಣಿಸಿ ಈ ಕಾಯ್ದೆಯನ್ನು ಜಾರಿ ಮಾಡಬಹುದಾಗಿದೆ.ಎಚ್‌ಡಿಕೆ ವಿರೋಧ: ಈ ಕಾಯ್ದೆಯನ್ನು ರಾಜಕೀಯ ಉದ್ದೇಶಕ್ಕೆ ದುರುಪಯೋಗ ಮಾಡುವ ಸಾಧ್ಯತೆ ಇರುವುದರಿಂದ ಮಸೂದೆ ಅಂಗೀಕಾರ ಬೇಡ ಎಂದು ವಿರೋಧ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಒತ್ತಾಯಿಸಿದರು. ಮುಷ್ಕರ ನಿರತ ಸಿಬ್ಬಂದಿಯನ್ನು ವಾರಂಟ್ ಇಲ್ಲದೆ ಬಂಧಿಸುವ ಪ್ರಸ್ತಾಪ ಸರಿ ಅಲ್ಲ ಎಂದು ಬಿಜೆಪಿಯ ಜಗದೀಶ್ ಶೆಟ್ಟರ್ ಅಭಿಪ್ರಾಯಪಟ್ಟರು.'ಇದೊಂದು ದಮನಕಾರಿ ಮಸೂದೆ. ಯಾವುದೇ ಕಾರಣಕ್ಕೂ ಇದು ಅಂಗೀಕಾರವಾಗಬಾರದು' ಎಂದು ಜೆಡಿಎಸ್ ನ ಎಂ.ಟಿ.ಕೃಷ್ಣಪ್ಪ ಹೇಳಿದರು. ಹೋರಾಟ ಮಾಡುವ ಅಧಿಕಾರವನ್ನೇ ಕಸಿದು ಕೊಳ್ಳಬಾರದು. ಇದು ಪ್ರಜಾಪ್ರಭುತ್ವಕ್ಕೆ ವಿರೋಧಿ ಯಾಗಿದೆ ಎಂದು ಜೆಡಿಎಸ್‌ನ ಕೋನರೆಡ್ಡಿ ಅಭಿ ಪ್ರಾಯಪಟ್ಟರು. ಅತ್ಯಾವಶ್ಯಕ ಸೇವೆಗಳು ಯಾವುದು ಎನ್ನುವುದನ್ನು ಸ್ಪಷ್ಟವಾಗಿ ನಮೂದಿಸಬೇಕಾಗಿತ್ತು ಎಂದು ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.ಜೆಡಿಎಸ್‌ನ ಮಂಜುನಾಥ ಗೌಡ, ಚಲುವ ರಾಯಸ್ವಾಮಿ, ಶಿವಲಿಂಗೇಗೌಡ ಮುಂತಾದವರು ಮಸೂದೆಯನ್ನು ವಿರೋಧಿಸಿದರು. ಸಚಿವರಾದ ರಾಮಲಿಂಗಾ ರೆಡ್ಡಿ ಮತ್ತು ಟಿ.ಬಿ. ಜಯಚಂದ್ರ ಅವರು 'ಇದು ನೌಕರರ ಸಂಘಟನೆಯ ವಿರುದ್ಧ ತಂದಿರುವ ಮಸೂದೆ ಅಲ್ಲ. ಈ ಕಾಯ್ದೆ ಜಾರಿ ಮಾಡುವಾಗ ಸಚಿವ ಸಂಪುಟದಲ್ಲಿ ಚರ್ಚಿಸಿದ ನಂತರವೇ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ರಾಜಕೀಯ ದುರುಪಯೋಗಕ್ಕೆ ಅವಕಾಶ ನೀಡುವು ದಿಲ್ಲ' ಎಂದು ಸ್ಪಷ್ಟನೆ ನೀಡಿದರು. ಇದನ್ನು ಒಪ್ಪದ ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದರು.ಸ್ಪೀಕರ್‌ಗೆ ಅಸಮಾಧಾನ: ಮುಷ್ಕರ ನಿಷೇಧ ಮಸೂದೆಗೆ ಆಡಳಿತ ಪಕ್ಷದ ಹಿರಿಯ ಸದಸ್ಯ ಕೆ.ಆರ್. ರಮೇಶ್ ಕುಮಾರ್ ಅವರೂ ತೀವ್ರ ವಿರೋಧ ವ್ಯಕ್ತಪಡಿಸಿದರು. 'ದುಡಿಯಯವ ವರ್ಗಗಳ ಸಂಘಟನೆ ದುರ್ಬಲಗೊಳಿಸುವ ಪ್ರಸ್ತಾವಕ್ಕೆ ಈ ಸದನ ಒಪ್ಪಿಗೆ ನೀಡಬಾರದು. ಮಸೂದೆ ಜಾರಿಗೆ ಬಂದರೆ ನಾವು ಅಪರಾಧಿಗಳಾಗುತ್ತೇವೆ' ಎಂದು ಹೇಳಿದರು.ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರೂ ಕೂಡ ಮಸೂದೆಗೆ ವಿರೋಧ ವ್ಯಕ್ತಪಡಿಸಿದರು. 'ಯಾವ ಉದ್ದೇಶದಿಂದ ಈ ಮಸೂದೆಯನ್ನು ಜಾರಿ ಗೊಳಿಸಲಾಗುತ್ತಿದೆ ಎನ್ನುವುದು ನನಗೂ ಅರ್ಥ ವಾಗುತ್ತಿಲ್ಲ' ಎಂದು ಅವರು ಹೇಳಿದರು. ಆದರೂ ಅವರು ಮಸೂದೆಯನ್ನು ಮತಕ್ಕೆ ಹಾಕಿದರು. ಆ ಸಂದರ್ಭದಲ್ಲಿ ರಮೇಶ್ ಕುಮಾರ್ ಅವರು ತಮ್ಮ ಆಸನ ಬಿಟ್ಟು ವಿರೋಧ ಪಕ್ಷದ ಭಾಗದಲ್ಲಿ ಬಿಎಸ್ಆರ್ ಶಾಸಕ ರಾಜೀವ ಅವರ ಬಳಿ ಕುಳಿತಿದ್ದರು.

ಪ್ರತಿಕ್ರಿಯಿಸಿ (+)