ಶನಿವಾರ, ಮೇ 15, 2021
29 °C

ಅವಾಸ್ತವ ದೃಷ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಡತನ ರೇಖೆಗಿಂತ ಕೆಳಗೆ (ಬಿಪಿಎಲ್) ಬದುಕುತ್ತಿರುವ ಜನರನ್ನು ಗುರುತಿಸುವ ವಿಷಯದಲ್ಲಿ ಸರ್ಕಾರಕ್ಕೆ ಸ್ಪಷ್ಟತೆ ಇಲ್ಲ. ಸಬ್ಸಿಡಿ ದರದಲ್ಲಿ ನೀಡುವ ಆಹಾರ ಧಾನ್ಯ ಅನರ್ಹರ ಪಾಲಾಗುತ್ತಿದೆ ಎಂದರೆ ಅದಕ್ಕೆ  ಫಲಾನುಭವಿಗಳ ಆಯ್ಕೆಯಲ್ಲಿರುವ ಲೋಪಗಳೇ ಕಾರಣ. ದೇಶದ ಉದ್ದಗಲದಲ್ಲಿ ಕೋಟ್ಯಂತರ ಅನರ್ಹರು ಬಿಪಿಎಲ್ ಫಲಾನುಭವಿ ಗಳಾಗಿದ್ದಾರೆ. ಅರ್ಹರನ್ನು ಗುರುತಿಸಲು ಹೊಸ ಮಾನದಂಡಗಳನ್ನು ರಚಿಸುವ ಸರ್ಕಾರದ ಪ್ರಯತ್ನ ಸ್ವಾಗತಾರ್ಹ. ಆದರೆ ಯೋಜನಾ ಆಯೋಗ ರೂಪಿಸಿರುವ ಹೊಸ ಮಾನದಂಡಗಳಲ್ಲಿ ತರ್ಕವೂ ಇಲ್ಲ, ಮಾನವೀಯ ತೆಯೂ ಇಲ್ಲ. ವಾಸ್ತವ ದೃಷ್ಟಿಯೂ ಇಲ್ಲ. ನಗರದ ಪ್ರದೇಶದಲ್ಲಿ ದಿನಕ್ಕೆ 32 ರೂಪಾಯಿ, ಗ್ರಾಮೀಣ ಪ್ರದೇಶದಲ್ಲಿ 26 ರೂಪಾಯಿ ವೆಚ್ಚ ಮಾಡುವಷ್ಟು ಆದಾಯವಿರುವ ವ್ಯಕ್ತಿ ಸಬ್ಸಿಡಿ ದರದ ಆಹಾರ ಧಾನ್ಯಗಳನ್ನು ಪಡೆಯಲು ಅರ್ಹನಲ್ಲ ಎಂಬ ನಿರ್ಧಾರಕ್ಕೆ ಆಯೋಗ ಬಂದಿದೆ.  ಈ ಮಾನದಂಡಗಳಿಗೆ ಪ್ರಧಾನಮಂತ್ರಿಗಳ ಕಚೇರಿ ಒಪ್ಪಿಗೆಯನ್ನೂ ನೀಡಿದೆ. ಇಂತಹ ಅತಾರ್ಕಿಕ ಮಾನದಂಡಗಳನ್ನು ಆಧರಿಸಿ ಸರ್ಕಾರ ಸುಪ್ರೀಂ ಕೋರ್ಟಿಗೆ ಪ್ರಮಾಣಪತ್ರ ಸಲ್ಲಿಸಿದೆ. ಈ ಲೆಕ್ಕಾಚಾರಕ್ಕೆ ವ್ಯಾಪಕ ವಿರೋಧ ಕೇಳಿಬಂದ ನಂತರ ಸರ್ಕಾರ ಎಚ್ಚೆತ್ತುಕೊಂಡಿದೆ. ಬೆಲೆ ಏರಿಕೆ, ನಿರುದ್ಯೋಗ, ನಗರ ಹಾಗೂ ಗ್ರಾಮೀಣ  ಬಡವರ ಜೀವನ ಮಟ್ಟವನ್ನು ಸರಿಯಾಗಿ ಗಮನಿಸಿದ್ದರೆ ಯೋಜನಾ ಆಯೋಗ ಇಂತಹ ನಿರ್ಧಾರಕ್ಕೆ ಬರುತ್ತಿರಲಿಲ್ಲ.ಒಬ್ಬ ವ್ಯಕ್ತಿಗೆ ನಿತ್ಯದ ಆಹಾರ, ವಸತಿ, ಬಟ್ಟೆ ಬರೆ, ಔಷಧಿ ಮತ್ತಿತರ ವೆಚ್ಚಗಳಿಗೆ ಎಷ್ಟು ಹಣ ಬೇಕಾದೀತು ಎಂಬುದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ದೇಶದ ಉದ್ದಗಲದಲ್ಲಿ ಲಕ್ಷಾಂತರ ಕುಟುಂಬಗಳ ಮಕ್ಕಳು, ವೃದ್ಧರು, ಗರ್ಭಿಣಿ, ಬಾಣಂತಿಯರ ಕನಿಷ್ಠ ಅಗತ್ಯಗಳಿಗೆ ಬೇಕಾಗುವ ಹಣವನ್ನು  ಕುಟುಂಬದ ಸದಸ್ಯರೆಲ್ಲರೂ ದುಡಿದರೂ ಗಳಿಸಲು ಸಾಧ್ಯವಿಲ್ಲ. ಏರುತ್ತಿರುವ ಅಗತ್ಯ ವಸ್ತುಗಳ ಬೆಲೆಯಿಂದಾಗಿ ಅರೆಹೊಟ್ಟೆಯಲ್ಲೇ ದಿನ ಕಳೆಯುವ ಲಕ್ಷಾಂತರ ಜನರು ದೇಶದಲ್ಲಿದ್ದಾರೆ. ವಿಶ್ವಸಂಸ್ಥೆಯೇ ಮೂರನೇ ಜಗತ್ತಿನ ರಾಷ್ಟ್ರಗಳಲ್ಲಿನ ಬಡತನದ ರೇಖೆಯನ್ನು ನಿರ್ಧರಿಸುವ ಮಾನ ದಂಡವನ್ನು ಪ್ರತಿವ್ಯಕ್ತಿಗೆ ದಿನಕ್ಕೊಂದು ಡಾಲರ್‌ನಂತೆ ವೆಚ್ಚ ಮಾಡುವ ಸಾಮರ್ಥ್ಯ ಎಂದು ನಿಗದಿಪಡಿಸಿದೆ. ಇದನ್ನು ಪರಿಷ್ಕರಿಸುವ ಚಿಂತನೆಯಲ್ಲಿದೆ. ವಿಶ್ವಸಂಸ್ಥೆ ರೂಪಿಸಿದ ಪ್ರಮಾಣಕ್ಕಿಂತಲೂ ಕಡಿಮೆ ಹಣವನ್ನು ನಿಗದಿಪಡಿಸಿದ ಯೋಜನಾ ಆಯೋಗದ ಲೆಕ್ಕಾಚಾರದ ಹಿಂದಿನ ತರ್ಕವನ್ನು ಸರ್ಕಾರ ಸ್ಪಷ್ಟಪಡಿಸಬೇಕಿದೆ. ಯೋಜನಾ ಆಯೋಗ ನಿರ್ಧರಿಸಿದ ಮಾನದಂಡದಂತೆ ಸಬ್ಸಿಡಿ ಪಡೆಯುವ ಅರ್ಹತೆಯನ್ನು ನಿರ್ಧರಿಸಿದರೆ ಬೆಲೆ ಏರಿಕೆಯನ್ನು ನೆಪಮಾಡಿಕೊಂಡು ಕಾಲಕಾಲಕ್ಕೆ ಸರ್ಕಾರಿ ಸಿಬ್ಬಂದಿ, ಜನಪ್ರತಿನಿಧಿಗಳ ವೇತನವನ್ನು ಪರಿಷ್ಕರಿಸುತ್ತಿರುವುದು ಏಕೆ? ಬಡತನದ ಎಲ್ಲಾ ಮಗ್ಗುಲುಗಳನ್ನು ಗಮನದಲ್ಲಿ ಇಟ್ಟುಕೊಂಡು ಮಾನದಂಡಗಳನ್ನು ರೂಪಿಸಬೇಕು. ಬಡತನ ನಿವಾರಣೆಗೆ ರೂಪಿಸಿದ ಯೋಜನೆಗಳಿಗೆ ನೀಡಿದ ಹಣ ಮಧ್ಯವರ್ತಿಗಳ ಪಾಲಾಗುತ್ತಿದೆ ಎಂಬುದನ್ನು ಸರ್ಕಾರ ಮರೆತೇಬಿಟ್ಟದೆ. ದುರುಪಯೋಗ ತಡೆಯುವ ಯಾವುದೇ ಕ್ರಮಗಳು ವಸ್ತುಸ್ಥಿತಿಗೆ ಪೂರಕವಾಗಿರಬೇಕು. ಅಂಕಿ ಅಂಶಗಳ ಕಸರತ್ತಿನಲ್ಲಿ ಬಡವರ ಬದುಕು ಇನ್ನಷ್ಟು ಅಸಹನೀಯವಾಗುವಂತೆ ಸರ್ಕಾರ ಮಾಡಬಾರದು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.