ಭಾನುವಾರ, ಜನವರಿ 19, 2020
27 °C
ಕೃಷಿ ವಿಶೇಷ

ಅವಿಭಕ್ತ ಕುಟುಂಬದ ಬಹುರೂಪಿ ಕೃಷಿ

ಪ್ರಜಾವಾಣಿ ವಾರ್ತೆ/ಸಂಜಯ ಪಾಟೀಲ Updated:

ಅಕ್ಷರ ಗಾತ್ರ : | |

ಆಳಂದ: ಕೃಷಿಯನ್ನು ಬದುಕಾಗಿಸಿ­ಕೊಂಡ ಅವಿಭಕ್ತ ಕುಂಟುಬ ಇದು. ಸದಸ್ಯರೆಲ್ಲರೂ ಬೆವರು ಸುರಿಸಿ ದುಡಿ­ದರೂ ಸಾಲ ಮಾಡುವುದು ತಪ್ಪಲಿಲ್ಲ. ಹೀಗಾಗಿ ಹತಾಶೆಯಲ್ಲಿ ಮುಳುಗಿದ್ದ ಕುಟುಂಬಕ್ಕೆ ರೇಷ್ಮೆ ಅಧಿಕಾರಿ ಚಾಂದ­ಸಾಬ ಭರವಸೆಯ ಬೆಳಕಂತೆ ಬಂದರು. ಅವರ ಸಲಹೆ ಮೇರೆಗೆ ರೇಷ್ಮೆ ಕೃಷಿ ಆರಂಭಿಸಿ 30 ವರ್ಷಗಳೇ ಕಳೆದಿವೆ.ತಾಲ್ಲೂಕಿನ ಹಳ್ಳಿ ಸಲಗರ ಗ್ರಾಮದ ಸುಲ್ತಾನಪ್ಪ ವಾಗ್ದರ್ಗಿ ಕುಟುಂಬದ ಕಷ್ಟ ಕಳೆದು ಸುಖದ ದಿನಗಳು ಬಂದಿವೆ. ಆಧುನಿಕ ತಂತ್ರಜ್ಞಾನ ಮತ್ತು ಪ್ರಗತಿಪರ ಬೇಸಾಯ ಪದ್ಧತಿ ಅಳವಡಿಸಿಕೊಂಡ ಸುಲ್ತಾನಪ್ಪ ವಾಗ್ದರ್ಗಿ ಮಾದರಿ ರೈತ­ರಾಗಿ­ದ್ದಾರೆ. ಸುಲ್ತಾನಪ್ಪ ಅವರ ಐವರು ಸಹೋದರರು, ಸಹೋದರರ ಪತ್ನಿ­ಯರು ಹಾಗೂ ಮಕ್ಕಳು ಸಹ ಕೃಷಿ­ಯಲ್ಲಿ ತೊಡಗಿಸಿಕೊಂಡು ಪ್ರತಿ ವರ್ಷವೂ ಹೊಸ ಹೊಸ ಬೆಳೆ ಬೆಳೆದು ನೂರರಷ್ಟು ಲಾಭ ಮಾಡಿಕೊಳ್ಳುವ ಗುಣವನ್ನು ಮೈಗೂಡಿಸಿಕೊಂಡಿದ್ದಾರೆ.ಬೆಳೆ ಹಲವು, ಆದಾಯವೂ:

ಮುನ್ನಳ್ಳಿ ರಸ್ತೆ ಮಾರ್ಗದಲ್ಲಿ 63 ಎಕರೆ ಭೂಮಿಯಲ್ಲಿ 8ಎಕರೆ ಪಪ್ಪಾಯಿ, 6 ಎಕರೆ ಹತ್ತಿ, 25 ಎಕರೆ ತೊಗರಿ, 18 ಎಕರೆ ಜೋಳ ಮತ್ತು ಉಳಿದ ಭೂಮಿಯಲ್ಲಿ ಕಡಲೆ, ಈರುಳ್ಳಿ ಬೆಳೆ ಇದೆ. ಕೊಡಲ ಹಂಗರಗಾ ಸಮೀಪದಲ್ಲಿ 22 ಎಕರೆ ಖರೀದಿ ಮಾಡಿದ ಸಾಧಾರಣ ಭೂಮಿಯಿದೆ. ರೇಷ್ಮೆ, ದ್ರಾಕ್ಷಿ, ಅರಿಸಿಣ, ತೊಗರಿ, ಮತ್ತಿ­ತರ ಬೆಳೆ ಬೆಳೆಯುತ್ತಾರೆ. ಒಟ್ಟು 42 ಎಕರೆ ಭೂಮಿಯಿಲ್ಲಿ ಹನಿ ನೀರಾ­ವರಿ ಅಳವಡಿಸಿಕೊಂಡಿದ್ದಾರೆ.ಗುಡ್ಡದ ಮೇಲಿರುವ ಬರಡು ನೆಲದಲ್ಲಿ 7ಎಕರೆಯಲ್ಲಿ ವಿ1 ತಳಿಯ ಹಿಪ್ಪುನೇರಳೆ ಬೆಳೆ ಇದೆ. ವರ್ಷಕ್ಕೆ ಮೂರು ಬೆಳೆ ಬರುತ್ತವೆ. ವರ್ಷಕ್ಕೆ 60 ಕ್ವಿಂಟಲ್ ನಷ್ಟು ರೇಷ್ಮೆ ಗೂಡು  ಬಂದೇ ಬರುತ್ತದೆ. 2 ಎಕರೆ ದ್ರಾಕ್ಷಿ ಬೆಳೆಯುತ್ತಿ­ದ್ದಾರೆ. ಪ್ರತಿ ವರ್ಷ ₨ 4 ಲಕ್ಷ ಲಾಭ ಮಾಡುತ್ತಿದ್ದಾರೆ.

ಸಾವಯವ ಪದ್ಧತಿಯಲ್ಲಿ 2 ಎಕರೆ ಅರಿಸಿಣ ಬೆಳೆ ಇದೆ. ಹೊಲದ ಬದುವಿ­ನಲ್ಲಿ ಸುಮಾರು 400 ಸಾಗುವಾನಿ ಮರಗಳು ಬೆಳೆಸಲಾಗಿದೆ. ಎರೆಹುಳು ಗೊಬ್ಬರ ತಯಾರಿಕೆ ಘಟಕವೂ ಇದೆ.ಮುನ್ನಳ್ಳಿ ರಸ್ತೆ ಮಾರ್ಗದಲ್ಲಿರುವ ಹೊಲದವರೆಗೆ ₨ 14ಲಕ್ಷ ವೆಚ್ಚ ಮಾಡಿ  4 ಕಿಲೋಮೀಟರ್‌ ಉದ್ದ 5 ಇಂಚಿನ  ಪೈಪ್ ಲೈನ್ ಮಾಡಿ ಕೊಡಲ ಹಂಗ­ರಗಾ ಹೊಲದ  ಬಾವಿಯಿಂದ ನೀರು ತಂದಿದ್ದಾರೆ. ಇವರ ಭಗೀರಥ ಪ್ರಯತ್ನ­ದಿಂದ ಇಲ್ಲಿ 8 ಎಕರೆ ಪಪ್ಪಾಯಿ ಬೆಳೆ­ಯಿದೆ. ತೈವಾನಿನ ಎನ್ ರೆಡ್ ಲೇಡಿ 786 ತಳಿಯ ಬೆಳೆಯಲ್ಲಿ ಪ್ರತಿ ಎಕರೆಗೆ  50 ಟನ್ ಪಪ್ಪಾಯಿ ಬೆಳೆ ತೆಗೆಯು­ತ್ತಾರೆ. ಪಪ್ಪಾಯಿ ಪಕ್ಕದಲ್ಲಿಯೇ 6 ಎಕರೆ ಹತ್ತಿ ಮೊದಲ ಬಾರಿಗೆ ಬೆಳೆದಿದ್ದಾರೆ. ಹಿಂದಿನಿಂದಲೂ ತೊಗರಿ, ಜೋಳವನ್ನು ಅಧಿಕವಾಗಿ ಬೆಳೆಯು­ತ್ತಲೇ ಇದ್ದಾರೆ. ಈರುಳ್ಳಿ ಸೇರಿದಂತೆ ಒಣ ಬೇಸಾಯ ಪದ್ಧತಿಯಲ್ಲಿ ಹೆಸರು, ಉದ್ದ, ಸೂರ್ಯಕಾಂತಿ ಮತ್ತಿತರ ಬೆಳೆ ಬೆಳೆಯುವರು.‘ಸಹೋದರರಾದ ಹಣಮಂತ­ರಾಯ, ಶಿವಶರಣಪ್ಪ, ಪ್ರಭುಲಿಂಗ, ಕುಪೇಂದ್ರ ಹಾಗೂ ಮಕ್ಕಳಾದ ರವಿ­ಕಿರಣ, ಕಾಶಿನಾಥ ಮತ್ತು ಮಹಿಳೆಯ­ರೆಲ್ಲರೂ ಬೆವರು ಸುರಿಸುವುದರಿಂದ ಸಂಪೂರ್ಣವಾಗಿ ಬೆಳೆಯಲು ಸಾಧ್ಯವಾ­ಗುತ್ತಿದೆ.ಇತ್ತೀಚಿನ ವರ್ಷಗಳಲ್ಲಿ ಸಾವ­ಯುವ ಕೃಷಿಗೆ ಹೆಚ್ಚಿನ ಮಹತ್ವ ನೀಡುತ್ತಾ  ಸಾವಯುವ ಕೃಷಿ ಪರಿ­ವಾರದ  ಸಂಚಾಲಕನಾಗಿ ಕೆಲಸ ಮಾಡು­ತ್ತಿದ್ದೇನೆ’ ಎನ್ನುತ್ತಾರೆ ಸುಲ್ತಾ­ನಪ್ಪ ವಾಗ್ದರ್ಗಿ. ಫೋನ್‌–   (9980699065)‘ವಿದ್ಯಾವಂತರು ಒಲವು ತೋರಲಿ’

ಇತ್ತೀಚಿನ ವರ್ಷ­ಗಳಲ್ಲಿ ರೈತರು ವೈಜ್ಞಾ­ನಿಕ ಕೃಷಿ ಪದ್ಧತಿ ಮೂಲಕ ಲಾಭ ಪಡೆದುಕೊಳ್ಳುವ ಅರಿವು ಬೆಳೆಯುತ್ತಿರುವುದು ಉತ್ತಮ ಬೆಳವಣಿಗೆ. ಇಲಾಖೆಯು ಕ್ಷೇತ್ರೋತ್ಸವ, ತರಬೇತಿ ಕಾರ್ಯಕ್ರಮ, ಮಾಹಿತಿ ನೀಡಲು ಪ್ರಯತ್ನ ನಡೆಸುತ್ತಿದೆ. ರೇಷ್ಮೆ, ಪಪ್ಪಾಯಿ, ದ್ರಾಕ್ಷಿ, ತೋಟಗಾರಿಕೆ ಬೆಳೆ ಸೇರಿದಂತೆ ಹೈನುಗಾರಿಕೆಗೂ ಪ್ರೋತ್ಸಾಹ ನೀಡುತ್ತಿದೆ. ವಿದ್ಯಾವಂತರು ಕೃಷಿ ಕಡೆಗೆ ಒಲುವು ತೋರಿಸಬೇಕು.

– ಶಶಾಂಕ ಶಹಾ,

ತಾಲ್ಲೂಕು ಸಹಾಯಕ ಕೃಷಿ  ಅಧಿಕಾರಿ‘ಪೈಪೋಟಿ ಇದೆ’


ಆಳಂದ ತಾಲ್ಲೂಕಿನಲ್ಲಿ 600 ಹೆಕ್ಟೇರ್‌ನಲ್ಲಿ ರೇಷ್ಮೆ ಬೆಳೆಯಿದೆ. ಅದರಲ್ಲಿ ಹಳ್ಳಿ ಸಲಗರ ಮೊದಲ ಸ್ಥಾನದಲ್ಲಿದೆ. ಇಲ್ಲಿ ಬೆಳೆಗಾರ ನಡುವೆ ಮಾಹಿತಿ, ಅನುಭವ ಹಾಗೂ ಸಲಕರಣೆ­ಗಳು ವಿನಿಮಯ­ದೊಂದಿಗೆ ಹೆಚ್ಚಿನ ಇಳುವರಿ ತೆಗೆಯುವ ಆರೋಗ್ಯಕರ ಪೈಪೋಟಿ ಇದೆ.

ಶರಣಬಸಪ್ಪ ಕಾಂಬಳೆ ಧಂಗಾಪುರ, ರೇಷ್ಮೆ ಅಧಿಕಾರಿ

 

ಪ್ರತಿಕ್ರಿಯಿಸಿ (+)