ಬುಧವಾರ, ನವೆಂಬರ್ 20, 2019
21 °C
ನಿಲ್ಲದ ಹೆಣ್ಣು ಶಿಶು, ಭ್ರೂಣ ಹತ್ಯೆ

ಅವಿವಾಹಿತರ ಭವಿಷ್ಯ ಕರಾಳ

Published:
Updated:

ನಾಗಪುರ (ಪಿಟಿಐ): ದೇಶದಲ್ಲಿ ಹೆಣ್ಣು ಶಿಶು ಮತ್ತು ಹೆಣ್ಣುಭ್ರೂಣ ಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿರುವುದಕ್ಕೆ ತೀವ್ರ ಆತಂಕ ವ್ಯಕ್ತಪಡಿಸಿರುವ ರಾಷ್ಟ್ರೀಯ ಮಹಿಳಾ ಆಯೋಗ, ಇದರಿಂದಾಗಿ ಮುಂಬರುವ ದಿನಗಳಲ್ಲಿ  2 ಕೋಟಿ ಅವಿವಾಹಿತ ಯುವಕರಿಗೆ  ವಧುಗಳು ಸಿಗುವುದು ಕಷ್ಟವಾಗಲಿದೆ ಎಂದು ಅಭಿಪ್ರಾಯಪಟ್ಟಿದೆ.`ದೇಶದ ಸುಮಾರು ಎರಡು ಕೋಟಿ ಅವಿವಾಹಿತ ಯುವಕರು ಮದುವೆಯಾಗಲು ಹೆಣ್ಣುಮಕ್ಕಳ ಕೊರತೆ ಎದುರಿಸಲಿದ್ದಾರೆ. ಹೆಣ್ಣು ಶಿಶು ಮತ್ತು ಭ್ರೂಣ ಹತ್ಯೆ ಹೀಗೆ ಮುಂದುವರಿದಿದ್ದೇ ಆದರೆ, ಈ ಹುಡುಗರಿಗೆ ಸೂಕ್ತ ಸಂಗಾತಿ ಸಿಗುವುದು ಕಷ್ಟ' ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಮಮತಾ ಶರ್ಮಾ ಹೇಳಿದ್ದಾರೆ.ವಿವಿಧ ಸಮೀಕ್ಷೆ ಮತ್ತು ಇತರ ಮೂಲಗಳಿಂದ ಸಂಗ್ರಹಿಸಿದ ಅಂಕಿ ಅಂಶಗಳನ್ನು ಆಧರಿಸಿ ಈ ಮಾಹಿತಿ ಸಂಗ್ರಹಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.

`ಹೆಣ್ಣು ಶಿಶು ಮತ್ತು ಭ್ರೂಣಗಳ ಹತ್ಯೆ ಹೀಗೆ ಮುಂದುವರಿದರೆ ಲಿಂಗಾನುಪಾತದ ನಡುವೆ ಸಮತೋಲನ ತರಲು ಸಾಧ್ಯವಾಗದು ಎಂದೂ ಅವರು ಎಚ್ಚರಿಸಿದ್ದಾರೆ.ನೆರೆಯ ಪಾಕಿಸ್ತಾನ, ನೇಪಾಳ, ಚೀನಾ ಮತ್ತು ಬಾಂಗ್ಲಾದೇಶದ ಗಡಿಗೆ ಹೊಂದಿಕೊಂಡಿರುವ ಪ್ರದೇಶಗಳಿಂದ ಭಾರತಕ್ಕೆ ಮಾಡಲಾಗುತ್ತಿರುವ ಮಹಿಳೆಯರ ಅಕ್ರಮ ಸಾಗಣೆಯನ್ನು ತಡೆಯುವುದಕ್ಕೆ ಮಹಿಳಾ ಆಯೋಗ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ ಎಂದೂ ಮಮತಾ ಹೇಳಿದ್ದಾರೆ.ಹೆಣ್ಣು ಶಿಶು ಮತ್ತು ಭ್ರೂಣ ಹತ್ಯೆಯನ್ನು ತಡೆಯುವ ನಿಟ್ಟಿನಲ್ಲಿ ನಡೆಸಲಾಗುತ್ತಿರುವ ಅಭಿಯಾನವನ್ನು ಆಯೋಗವು ಮತ್ತಷ್ಟು ತೀವ್ರಗೊಳಿಸಲಿದೆ ಎಂದೂ ಅವರು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)