ಅವಿಶ್ವಾಸ ಗೊತ್ತುವಳಿ: ಜೆಡಿಯು ಬೆಂಬಲ

7

ಅವಿಶ್ವಾಸ ಗೊತ್ತುವಳಿ: ಜೆಡಿಯು ಬೆಂಬಲ

Published:
Updated:

ನವದೆಹಲಿ (ಪಿಟಿಐ): ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ವಿರುದ್ಧ ತೃಣಮೂಲ ಕಾಂಗ್ರೆಸ್ ಮಂಡಿಸಲಿರುವ ಅವಿಶ್ವಾಸ ಗೊತ್ತುವಳಿ ನಿರ್ಣಯಕ್ಕೆ ಬೆಂಬಲ ನೀಡುವುದಾಗಿ ಜೆಡಿಯು ಮಂಗಳವಾರ ಘೋಷಿಸಿದೆ.`ಕೇಂದ್ರ ಸರ್ಕಾರದ ಪತನದಲ್ಲಿ ತನಗೆ ಯಾವುದೇ ಆಸಕ್ತಿ ಇಲ್ಲ~ ಎಂಬ ತನ್ನ ಈ ಮೊದಲಿನ ನಿರ್ಧಾರವನ್ನು ಬದಲಿಸಿರುವ ಜೆಡಿಯು, `ಯುಪಿಎಯನ್ನು ಅಧಿಕಾರದಿಂದ ಕೆಳಗಿಳಿಸುವ ಬಗ್ಗೆ ತನಗೆ ಈಗಲೂ ಆಸಕ್ತಿ ಇಲ್ಲ, ಆದರೆ ಹೇಗಾದರೂ ಸರ್ಕಾರ ಬೀಳುವ ಹಂತದಲ್ಲಿದ್ದು `ಬೀಳಿಸುವ ಕಾರ್ಯ~ವನ್ನು ಬೆಂಬಲಿಸುವುದಾಗಿ~ ಸ್ಪಷ್ಟಪಡಿಸಿದೆ.ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಯು ಅಧ್ಯಕ್ಷ ಶರದ್ ಯಾದವ್, `ಯುಪಿಎ ಸರ್ಕಾರದ ವಿರುದ್ಧ ಎನ್‌ಡಿಎ ಮೈತ್ರಿಕೂಟ ಅವಿಶ್ವಾಸ ಗೊತ್ತುವಳಿ ನಿರ್ಣಯವನ್ನು ಮಂಡಿಸುವುದಿಲ್ಲ. ಆದರೆ ಬೇರೆ ಯಾವುದೇ ರಾಜಕೀಯ ಪಕ್ಷ ಮಂಡಿಸುವ ನಿರ್ಣಯದ ಕುರಿತು ಮೈತ್ರಿಕೂಟ ಚರ್ಚಿಸಿ ಮುಕ್ತ ನಿರ್ಧಾರ ತೆಗೆದುಕೊಳ್ಳಲಿದೆ~ ಎಂದು ಸ್ಪಷ್ಟಪಡಿಸಿದರು.`ಏನೇ ಆಗಲಿ ಈ ವಿಷಯದಲ್ಲಿ ಎನ್‌ಡಿಎ ತೆಗೆದುಕೊಳ್ಳುವ ನಿರ್ಧಾರವೇ ನಿರ್ಣಾಯಕವಾಗಲಿದ್ದು, ಅವಿಶ್ವಾಸ ಗೊತ್ತುವಳಿಗೆ ನಿರ್ಣಯವನ್ನು ಖಂಡಿತವಾಗಿಯೂ ಎನ್‌ಡಿಎ ಬೆಂಬಲಿಸಲಿದೆ~ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

`ಮಮತಾ ಹೆಣ್ಣುಹುಲಿ~
ಕೇಂದ್ರ ಸರ್ಕಾರದ ವಿರುದ್ಧ ನಿರ್ಣಾಯಕ ಹೋರಾಟಕ್ಕೆ ಇಳಿದಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರನ್ನು `ಹೆಣ್ಣು ಹುಲಿ~ ಎಂದು ಇದೇ ಸಂದರ್ಭದಲ್ಲಿ ಬಣ್ಣಿಸಿದರು.`ಸಂಯುಕ್ತ ರಂಗ ರಚನೆ ಸಾಧ್ಯವಿಲ್ಲ~: ಆದರೆ, ಮಮತಾ ಬ್ಯಾನರ್ಜಿ ಅವರ ಕನಸಿನ ಸಂಯುಕ್ತ ರಂಗ ರಚನೆ ಬಗ್ಗೆ ಶರದ್ ಯಾದವ್ ಅಷ್ಟೇನೂ ಆಸಕ್ತಿ ತೋರಲಿಲ್ಲ. `ಮುಖ್ಯ ಪಕ್ಷವನ್ನು ಹೊರತುಪಡಿಸಿ ಸಂಯುಕ್ತ ರಂಗ ರಚನೆ ಅಸಾಧ್ಯದ ಮಾತು. ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಅಂತಹ ಯಾವುದೇ ಮೈತ್ರಿಕೂಟ ರಚನೆ ಕನಸಿನ ಮಾತು. ಜನತಾದಳ ಅಸ್ತಿತ್ವದಲ್ಲಿದ್ದಾಗ ಮಾತ್ರ ತೃತೀಯ ರಂಗ ಮತ್ತು ನಾಲ್ಕನೇ ರಂಗದ ರಚನೆ ಸಾಧ್ಯವಿತ್ತು. ಆದರೆ, ಈಗ ಅದು ಅಸಾಧ್ಯದ ಮಾತು~ ಎಂದು ವಿಶ್ಲೇಷಿಸಿದರು.`ದೇಶದಲ್ಲಿ ಸದ್ಯ ಅಸ್ತಿತ್ವದಲ್ಲಿರುವ ಪ್ರಮುಖ ಮೂರು ಮೈತ್ರಿಕೂಟಗಳೆಂದರೆ ಯುಪಿಎ, ಎನ್‌ಡಿಎ ಮತ್ತು ಎಡರಂಗ ಮಾತ್ರ. ಯುಪಿಎಗೆ ಕಾಂಗ್ರೆಸ್, ಎನ್‌ಡಿಎಗೆ ಬಿಜೆಪಿ ಮತ್ತು ಎಡರಂಗಕ್ಕೆ ಸಿಪಿಎಂ ಆಧಾರಸ್ತಂಭಗಳು. ಹೀಗಾಗಿ ಅಂತಹ ಆಧಾರಸ್ತಂಭಗಳ ನೆರವಿಲ್ಲದೆ ತೃತೀಯ ರಂಗ ಅಥವಾ ಸಂಯುಕ್ತ ರಂಗ ರಚನೆ ಕಷ್ಟಸಾಧ್ಯ~ ಎಂದು ಅಭಿಪ್ರಾಯಪಟ್ಟರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry