ಅವಿಶ್ವಾಸ ಗೊತ್ತುವಳಿ ಮಂಡನೆಗೆ ಕಾಂಗ್ರೆಸ್ ಹಿಂದೇಟು

7

ಅವಿಶ್ವಾಸ ಗೊತ್ತುವಳಿ ಮಂಡನೆಗೆ ಕಾಂಗ್ರೆಸ್ ಹಿಂದೇಟು

Published:
Updated:

ಸುವರ್ಣ ವಿಧಾನಸೌಧ (ಬೆಳಗಾವಿ): ಇದೇ 13ರವರೆಗೂ ನಡೆಯುವ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸದೇ ಇರಲು ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ತೀರ್ಮಾನಿಸಿದೆ. ಬುಧವಾರ ಬೆಳಿಗ್ಗೆ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.ಸುವರ್ಣ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸೇರಿದಂತೆ ಪಕ್ಷದ ಬಹುತೇಕ ಶಾಸಕರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಅವಿಶ್ವಾಸ ಗೊತ್ತುವಳಿ ಮಂಡನೆ ಸಾಧ್ಯತೆ, ಕಲಾಪದ ವೇಳೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಇರುವ ಅವಕಾಶಗಳು ಮತ್ತಿತರ ವಿಷಯಗಳ ಕುರಿತು ಸಭೆಯಲ್ಲಿ ದೀರ್ಘಕಾಲ ಚರ್ಚೆ ನಡೆದಿದೆ.`ಬಿ.ಎಸ್.ಯಡಿಯೂರಪ್ಪ ಬಿಜೆಪಿಯಿಂದ ಹೊರ ಹೋಗಿದ್ದಾರೆ. ಅವರ ಜೊತೆ ಗುರುತಿಸಿಕೊಂಡಿರುವ ಹಲವು ಶಾಸಕರು ಸರ್ಕಾರದ ಬೆಂಬಲಕ್ಕೆ ನಿಲ್ಲುವ ಸಾಧ್ಯತೆ ಕಡಿಮೆ. ಈ ಸಂದರ್ಭದಲ್ಲಿ ಅವಿಶ್ವಾಸ ಗೊತ್ತುವಳಿ ಮಂಡಿಸಿದರೆ ಸರ್ಕಾರದ ಪತನ ಖಚಿತ. ಈ ಅವಕಾಶ ನಾವು ಬಳಸಿಕೊಳ್ಳಬೇಕು' ಎಂದು ಸಭೆಯಲ್ಲಿ ಭಾಗವಹಿಸಿದ್ದ ಕೆಲ ಶಾಸಕರು ಹೇಳಿದ್ದಾರೆ.ಆದರೆ, ಶಾಸಕರ ಒತ್ತಾಯವನ್ನು ಸಿದ್ದರಾಮಯ್ಯ, ಪರಮೇಶ್ವರ್ ಮತ್ತಿತರರು ನಯವಾಗಿಯೇ ತಿರಸ್ಕಸಿದ್ದಾರೆ. `ರಾಜ್ಯ ಸರ್ಕಾರ ಈಗಾಗಲೇ ಪತನದ ಅಂಚಿನಲ್ಲಿದೆ. ಈ ಹಂತದಲ್ಲಿ ನಾವು ಅವಿಶ್ವಾಸ ಗೊತ್ತುವಳಿ ಮೂಲಕ ಸರ್ಕಾರವನ್ನು ಕೆಡವಿದರೆ ಸುಮ್ಮನೆ ಅಪವಾದಕ್ಕೆ ಗುರಿಯಾಗಬೇಕಾಗುತ್ತದೆ. ಈ ಹಂತದಲ್ಲಿ ಅಂತಹ ನಿಲುವು ತಾಳುವುದು ಬೇಡ' ಎಂಬುದಾಗಿ ಹೇಳಿದರು ಎಂದು ಕಾಂಗ್ರೆಸ್‌ನ ಉನ್ನತ ಮೂಲಗಳು ತಿಳಿಸಿವೆ. ಈ ಬಗ್ಗೆ ಗುರುವಾರವೂ ಮತ್ತೆ ಶಾಸಕಾಂಗ ಪಕ್ಷದ ಸಭೆ ನಡೆಸಲು ತೀರ್ಮಾನಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry