ಭಾನುವಾರ, ಮಾರ್ಚ್ 7, 2021
28 °C
ನಿತ್ಯ ನೇಮ ಒಮ್ಮೆಯೂ ತಪ್ಪಿಲ್ಲ

ಅವುಜಿಕರ ಮಹಾರಾಜರ ಸ್ಮರಣೆಗೆ 8 ದಶಕ

ಪ್ರದೀಪ ಮೇಲಿನಮನಿ Updated:

ಅಕ್ಷರ ಗಾತ್ರ : | |

ಅವುಜಿಕರ ಮಹಾರಾಜರ ಸ್ಮರಣೆಗೆ 8 ದಶಕ

ಪ್ರತಿದಿನ ಇಲ್ಲಿ ಎರಡು ಹೊತ್ತು ಮಹಾರಾಜರ ಸ್ಮರಣೆ ನಡೆಯುತ್ತದೆ. ಭಾರಾ ಅಭಂಗಗಳ ಭಜನೆ, ಕಾಕಡಾರತಿ  ಹಾಗೂ ಚರಿತ್ರೆ ಓದುವ ಮೂಲಕ ನಿತ್ಯ ಬೆಳಿಗ್ಗೆ ಮತ್ತು ಸಂಜೆ ಅವರನ್ನು ಆರಾಧಿಸಲಾಗುತ್ತದೆ.ಇದು ಚನ್ನಮ್ಮನ ಕಿತ್ತೂರು ಸಮೀಪದ ತುರಕರಶೀಗಿಹಳ್ಳಿ ಗ್ರಾಮದ ಗಿರಿಮಲ್ಲೇಶ್ವರ ಮಹಾರಾಜರ ಮಠದಲ್ಲಿ ನಡೆದುಕೊಂಡು ಬಂದ ಪದ್ಧತಿ.ಬರುವ ವರ್ಷ ಅಂದರೆ 2014ಕ್ಕೆ ಈ ನಿತ್ಯ ಸ್ಮರಣೆಗೆ ಭರ್ತಿ 80ವರ್ಷ ಮುಗಿಯುತ್ತದೆ. ಬೇಸಿಗೆ, ಮಳೆಗಾಲ, ಚಳಿಗಾಲವಿರಲಿ ಊರಲ್ಲಿ ಏನೇ ಕಾರ್ಯಕ್ರಮ ಹಾಗೂ ಅವಘಡಗಳು ಸಂಭವಿಸಲಿ ಇಲ್ಲಿಯ ಜನರ ಈ ಅಚಲ ಭಕ್ತಿ ಒಮ್ಮೆಯೂ ಅಲುಗಾಡಿದ್ದಿಲ್ಲ. ಚುಮು ಚುಮು ಬೆಳಕಲ್ಲಿ, ಸಂಜೆ ಸೂರ್ಯಾಸ್ತ ಆದ ನಂತರ ಈ ಭಕ್ತಿಯ ಕಾರ್ಯಕ್ರಮ ನಿತ್ಯ ಎರಡು ಹೊತ್ತು ನಡೆದುಕೊಂಡು ಬಂದಿದೆ.ಪ್ರತಿವರ್ಷದ ಶ್ರಾವಣ, ಗೋಕುಲಾಷ್ಟಮಿ, ಹೋಳಿ ಹಬ್ಬ ಮತ್ತು ಬಸವ ಜಯಂತಿ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಬಡ ಕುಟುಂಬಗಳಿಗೆ ವರದಾನವಾಗಿರುವ ಸಾಮೂಹಿಕ ವಿವಾಹದಂತಹ ಕಲ್ಯಾಣ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ.ಇಂತಹ ವಿಶೇಷ ಸಂದರ್ಭದಲ್ಲಿ ಎರಡು ಬಾರಿ ನಡೆಯುತ್ತಿದ್ದ ಭಜನೆಯನ್ನು ನಾಲ್ಕು ಬಾರಿ ಮಾಡಲಾಗುತ್ತದೆ. ಯಾವುದೇ ಜಾತಿ-ಮತ, ಪಂಥ-ಪಂಗಡದ ಚೌಕಟ್ಟು ಇಲ್ಲಿಲ್ಲ. ಎಲ್ಲ ಸಮಾಜದವರು ಬೆರೆತು ಮಹಾರಾಜರನ್ನು ಆರಾಧಿಸುತ್ತಾರೆ. ನಾಲ್ಕೂವರೆ ಸಾವಿರದಷ್ಟು ಜನಸಂಖ್ಯೆ ಇರುವ ಈ ಊರಿನ ವಿಶೇಷವೂ ಇದಾಗಿದೆ.1934ರಲ್ಲಿ ಸ್ಥಾಪನೆ

ಇಲ್ಲಿಯ ಭಜನೆ ಸಂಪ್ರದಾಯ ಯಾವಾಗ ಪ್ರಾರಂಭವಾಯಿತು ಎಂದು ಸ್ಪಷ್ಟವಾಗಿ ಊರ ಹಿರಿಯರಿಗೆ ನಿಖರವಾಗಿ ಗೊತ್ತಿಲ್ಲ.  ನಾಥ್ ಪಂಥದ ಕೊಂಡಿ ಅವುಜಿಕರ ಮಹಾರಾಜರು ಇಲ್ಲಿದ್ದರು. ಅವರ ಕಾಲದಲ್ಲಿ ಈ ಮಠ ಸ್ಥಾಪನೆಯಾಗಿರಬಹುದು. 1934ರಲ್ಲಿ ಅವರು ಕಾಲವಾದರು. ಆ ನಂತರದಿಂದ ಈ ನಿತ್ಯ ಭಜನೆ ಆರಂಭವಾಗಿರಬಹುದು. ಅಂದು ಪ್ರಾರಂಭಗೊಂಡ ಎರಡು ಹೊತ್ತಿನ ಚರಿತ್ರೆ ಓದುವಿಕೆ ಹಾಗೂ ಭಜನೆ ಮೂಲಕ ಸ್ಮರಿಸುವ ಪದ್ಧತಿ ಅನೂಚಾನವಾಗಿ ನಡೆದುಕೊಂಡು ಬಂದಿದೆ ಎಂದು ಹಿರಿಯರು ಹೇಳುತ್ತಾರೆ.ಪ್ರತಿನಿತ್ಯ ಬೆಳಿಗ್ಗೆ 5 ಗಂಟೆಗೆ ಗುಡಿಯಲ್ಲಿ ಕಟ್ಟಲಾಗಿರುವ ಗಂಟೆ ಬಾರಿಸಲಾಗುತ್ತದೆ. ನಿಶ್ಯಬ್ದತೆ ಭೇದಿಸಿ ಕೇಳುವ ಗಂಟೆಯಿಂದ ಭಕ್ತರು ಎಚ್ಚರಗೊಂಡು ಮಠದ ಕಡೆಗೆ ಧಾವಿಸುತ್ತಾರೆ. ಬರಿ ಗಂಡಸರು ಮಾತ್ರ ಇತ್ತ ಹೆಜ್ಜೆ ಹಾಕುವುದಿಲ್ಲ. ಮಹಿಳೆಯರೂ ಭಕ್ತಿಯ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಒಂದು ಗಂಟೆಯವರೆಗೆ ಕಾಕಡಾರತಿ ನೆರವೇರಿಸಲಾಗುತ್ತದೆ. ಸಂಜೆ ಆರೇಳು ಗಂಟೆಗೆ ಮತ್ತೆ ಭಕ್ತರು ಮಠದ ಕಡೆಗೆ ಆಗಮಿಸುವರು. ಸಂಜೆ ದಾಸಬೋಧ ಮತ್ತು ಮನೋಬೋಧ ಚರಿತ್ರೆ ಹೇಳಲಾಗುತ್ತದೆ. ಅನಂತರ ತುಕಾರಾಮರ ಭಾರಾ ಅಭಂಗಗಳ ಭಜನೆ ಮಾಡಲಾಗುತ್ತದೆ. ಮಂಗಳದೊಂದಿಗೆ ಅಂದಿನ ದಿನದ ಕಾರ್ಯಕ್ರಮ ಮುಕ್ತಾಯಗೊಳ್ಳುತ್ತದೆ.`ಈ ಮೊದಲು ಶಂಕ್ರೆಯ್ಯಸ್ವಾಮಿ ಹಿರೇಮಠ, ಸಂಗಲೆಪ್ಪ ತೇಗೂರ, ನಿಂಗಪ್ಪ ನರಗಟ್ಟಿ ಚರಿತ್ರೆ ಓದುತ್ತಿದ್ದರು. ಅದೇ ಪರಂಪರೆಯನ್ನು ಈಗ ಪ್ರಭು ನರಗಟ್ಟಿ ಹಾಗೂ ರೇವಣಸಿದ್ಧಪ್ಪ ನೇಸರಗಿ ಮುಂದುವರಿಸಿದ್ದಾರೆ' ಎಂದು ಗ್ರಾ.ಪಂ. ಸದಸ್ಯ ರಾಜು ಹೊಸೆಟ್ಟಿ ವಿವರ ನೀಡಿದರು.`ಸದಾಶಿವ ನೇಸರಗಿ, ಬಸಪ್ಪ ತೇಗೂರ,  ದೊಡ್ಡಪ್ಪ ಹಡಪದ, ಪುಂಡಲಿಕ ಕಳಸಣ್ಣವರ, ಯಲ್ಲಪ್ಪ ಕುರಿ, ಸಿದ್ದಪ್ಪ ಹೆರೂರ, ಗಿರಿಮಲ್ಲಪ್ಪ ನರಗಟ್ಟಿ, ಫಕ್ಕೀರಪ್ಪ ಕುಲಗೋಳ, ಮಲ್ಲಪ್ಪ ಕಂಬಳಿ, ಸಿದ್ದಪ್ಪ ಹೊಸೆಟ್ಟಿ, ಪಕ್ಕೀರಪ್ಪ ಬೋಗೂರ, ಬಸವರಾಜ ಕಲಭಾವಿ, ಶಿವನಂದ ನರಗಟ್ಟಿ ಮತ್ತು ಮಹಿಳೆಯರು ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ಭಕ್ತರು ನಿತ್ಯದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿರುತ್ತಾರೆ' ಎಂದು ಅವರು ತಿಳಿಸಿದರು.`ಮಠದ ಜೀರ್ಣೋದ್ಧಾರಕ್ಕೂ ಹೆಚ್ಚು ಒತ್ತು ಕೊಡಲಾಗಿದೆ. ಮಾಜಿ ಶಾಸಕ ಜಗದೀಶ ಮೆಟಗುಡ್ಡ ಅವರ ಅನುದಾನದಲ್ಲಿ ಸಾಮೂಹಿಕ ವಿವಾಹ ಹಾಗೂ ವಿಶೇಷ ಕಾರ್ಯಕ್ರಮಗಳು ನಡೆಯಲು ಅನುಕೂಲವಾಗುವಂತೆ ಮಠದ ಆವರಣದಲ್ಲಿ ಹಾಲ್ ನಿರ್ಮಿಸಲಾಗಿದೆ' ಎಂದು ಹೊಸೆಟ್ಟಿ ಹೇಳಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.