ಅವೈಜ್ಞಾನಿಕ ಕಾಮಗಾರಿಗೆ ಆಕ್ರೋಶ

7

ಅವೈಜ್ಞಾನಿಕ ಕಾಮಗಾರಿಗೆ ಆಕ್ರೋಶ

Published:
Updated:

ಗಜೇಂದ್ರಗಡ: ಕಳೆದ ಹಲವು ದಿನಗಳಿಂದ ಸುರಿ­ಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜಲಾ­ವೃತಗೊಂಡಿದ್ದ ಅಮರಗಟ್ಟಿ ಗ್ರಾಮಕ್ಕೆ ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಘಟಕದ ಉಪಾಧ್ಯಕ್ಷ ಮಿಥುನ್‌ ಪಾಟೀಲ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಅವರಲ್ಲಿ ಸಮಸ್ಯೆ ಹೇಳಿಕೊಂಡರು.‘ಮಳೆಗಾಲದ ದಿನಗಳಲ್ಲಿ ಲಕ್ಕಲಕಟ್ಟಿ ಗ್ರಾಮ ಹಾಗೂ ಸುತ್ತಲಿನ ಬೆಟ್ಟ ಗುಡ್ಡಗಳಿಂದ ಅಪಾರ ಪ್ರಮಾಣದ ನೀರು ಹರಿದು ಬರುತ್ತದೆ. ಹೀಗೆ ಹರಿದು ಬರುವ ನೀರು ವ್ಯವಸ್ಥಿತ ರೀತಿಯಲ್ಲಿ ಹರಿದು ಹೋಗಲು ರಸ್ತೆಗಳ ಅಕ್ಕ–ಪಕ್ಕದಲ್ಲಿ ಚರಂಡಿ­­ಗಳಿದ್ದವು. ಹೀಗಾಗಿ ಈ ಹಿಂದಿನ ವರ್ಷ ಎಷ್ಟೇ ದೊಡ್ಡ ಪ್ರಮಾಣದ ಮಳೆ ಬಿದ್ದರೂ ಅಮರಗಟ್ಟಿ ಗ್ರಾಮದಲ್ಲಿ ನೀರು ಪ್ರವೇಶಿಸಿರಲಿಲ್ಲ. ಆದರೆ, ಕಳೆದ ಕೆಲ ತಿಂಗಳುಗಳ ಹಿಂದೆ ನಡೆದ ಅಮರಗಟ್ಟಿ–ಲಕ್ಕಲಕಟ್ಟಿ ರಸ್ತೆ ಕಾಮಗಾರಿ ವೇಳೆ ಅವೈಜ್ಞಾನಿಕ ರಸ್ತೆ ಕಾಮಗಾರಿ ನಡೆಸಲಾಗಿದೆ.

ರಸ್ತೆ ಮಧ್ಯ ದೊಡ್ಡ ಪ್ರಮಾಣದ ಮೇಲ್ಸೇತುವೆ ನಿರ್ಮಿಸುವ ಬದಲು ಕಿಷ್ಕಿಂದೆಯಂತಹ ಸೇತುವೆ ನಿರ್ಮಿಸಿದ್ದರಿಂದ ದೊಡ್ಡ ಪ್ರಮಾಣದ ನೀರು ಹರಿದು ಹೋಗಲು ಸಾಧ್ಯವಾಗದೆ ಮಳೆಯ ದೊಡ್ಡ ಪ್ರಮಾಣದ ನೀರು ಗ್ರಾಮ ಪ್ರವೇಶಿಸಿದೆ’ ಎಂದು ಗ್ರಾಮಸ್ಥರು ಒಕ್ಕೊರಲಿನಿಂದ ಹೇಳಿದರು.‘ಮಳೆಯ ನೀರು ದೊಡ್ಡ ಪ್ರಮಾಣದಲ್ಲಿ ಗ್ರಾಮ ಪ್ರವೇಶಿಸಿದ ಪರಿಣಾಮ ಗ್ರಾಮದ 12ಕ್ಕೂ ಮಣ್ಣಿ­ನ ಮನೆಗಳು ನೆಲಕಚ್ಚಿವೆ. ಕುರಿ–ಕೋಳಿಗಳೆಲ್ಲ ನೀರಿ­ನ ರಭಸಕ್ಕೆ ಕೊಚ್ಚಿ ಹೋಗಿವೆ. ಸಮೃದ್ಧವಾಗಿ ಬೆಳೆದು ನಿಂತಿದ್ದ ಮೆಕ್ಕೆಜೋಳ, ಶೇಂಗಾ, ಸಜ್ಜಿ, ವೀಳ್ಯದೆಲೆ ಇತ್ಯಾದಿ ಬೆಳೆಗಳು ಕೊಳೆ ರೋಗದ ಭೀತಿ­ಯನ್ನು ಎದುರಿಸುತ್ತಿವೆ. ಮಳೆ ನೀರಿನಿಂದ ನಷ್ಟ­ವನ್ನು ಕೂಡಲೇ ಭರಿಸಬೇಕು’ ಎಂದು ಗ್ರಾಮಸ್ಥರು ಮಿಥುನ್‌ ಪಾಟೀಲರಿಗೆ ಮನವಿ ಮಾಡಿದರು.‘ಅವೈಜ್ಞಾನಿಕ ಮೇಲ್ಸೇತುವೆ ನಿರ್ಮಾಣ ಹಾಗೂ ರಸ್ತೆ ಕಾಮಗಾರಿಯಿಂದಾಗಿ ಅಮರಗಟ್ಟಿ ಗ್ರಾಮಕ್ಕೆ ನುಗ್ಗುತ್ತಿರುವ ಮಳೆ ನೀರನ್ನು ತಡೆಯುವುದಕ್ಕಾಗಿ ಕೂಡಲೇ ಜಿ.ಪಂ ಎಂಜಿನಿ­ಯರ್‌­ರೊಂದಿಗೆ ಮಾತುಕತೆ ನಡೆಸಲಾಗುವುದು. ಅಮಗರಟ್ಟಿ ಗ್ರಾಮದಲ್ಲಿನ ವಾಸ್ತವ ಚಿತ್ರಣವನ್ನು ಶಾಸಕ ಜಿ.ಎಸ್‌.ಪಾಟೀಲ ಅವರ ಗಮನಕ್ಕೆ ತಂದು ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗುವುದು’ ಎಂದು ಮಿಥುನ್‌ ಪಾಟೀಲ ಗ್ರಾಮಸ್ಥರಿಗೆ ಭರವಸೆ ನೀಡಿದರು.ಅಮಗರಟ್ಟಿ ಗ್ರಾಮಸ್ಥರ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳುವವರೆಗೂ ಗ್ರಾಮಸ್ಥ­ರಿಗೆ ತಾತ್ಕಾಲಿಕ ಪರಿಹಾರ ಒದಗಿಸಲು ಸ್ಥಳೀಯ ಆಡಳಿತ ಶ್ರಮಿಸಬೇಕು. ಗ್ರಾಮದಲ್ಲಿ ಉಂಟಾದ ನಷ್ಟದ ಸಮೀಕ್ಷೆಯನ್ನು ಸಮರ್ಪಕ ರೀತಿಯಲ್ಲಿ ನಡೆಸಬೇಕು ಎಂದು ಗ್ರಾಮ ಲೆಕ್ಕಾಧಿಕಾರಿ ಮಲ್ಲಿಗವಾಡ್‌ ಅವರಿಗೆ ಹೇಳಿದರು. ಪರಸಪ್ಪ ರಾಠೋಡ್‌, ಬಸಪ್ಪ ಹೊಸಳ್ಳಿ, ಕುಬೇರಪ್ಪ ಗಡಗಿ, ಮುತ್ತಪ್ಪ ಅತ್ತಲ್‌ಕರ್‌, ಲಕ್ಷ್ಮಣ್ಣ ಅತ್ತಲ್‌ಕರ್‌, ಮುತ್ತಪ್ಪ ಕುರಿ, ಯಲ್ಲಪ್ಪ ರಾಜೂರ ಅನೇಕರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry