ಶನಿವಾರ, ನವೆಂಬರ್ 23, 2019
23 °C

ಅವೈಜ್ಞಾನಿಕ ಮತಗಟ್ಟೆ : ಪರದಾಟ

Published:
Updated:

ನರಸಿಂಹರಾಜಪುರ: ಚುನಾವಣಾ ಆಯೋಗ ಸುಸೂತ್ರ ಮತದಾನಕ್ಕಾಗಿ ಎಲ್ಲಾ ಗ್ರಾಮ ಮಟ್ಟದಲ್ಲೂ ಸಹ ಮತದಾರರಿಗೆ ಸಾಕಷ್ಟು ಹತ್ತಿರವಾಗುವಂತೆ ಮತಗಟ್ಟೆಗಳನ್ನು ಸ್ಥಾಪಿಸುವುದು ಸಾಮಾನ್ಯ ಸಂಗತಿ. ಆದರೆ ಬಹುತೇಕ ಸಂದರ್ಭಗಳಲ್ಲಿ ಆಯೋಗಕ್ಕೆ ಅಧಿಕಾರಿಗಳು ರವಾನಿಸುವ ಮಾಹಿತಿಗಳು ಅವಾಸ್ತವಿಕತೆಯಿಂದ ಕೊಡಿರುವುದರಿಂದ ಮತದಾರರನ್ನು ಪೇಚಿಗೆ ಸಿಲುಕಿಸುತ್ತವೆ.ತಾಲ್ಲೂಕಿನ ಹಲವು ಮತಟಗಟ್ಟೆಗಳನ್ನು ವಿಂಗಡಣೆ ಮಾಡಿರುವ ಆಯೋಗದ ಕ್ರಮ ಚುನಾವಣೆ ಆರಂಭವಾಗುವ ಮೊದಲೇ ಗ್ರಾಮಸ್ಥರ ಟೀಕೆಗೆ ಗುರಿಯಾಗಿದೆ. ಮುಖ್ಯವಾಗಿ ತಾಲ್ಲೂಕಿನ ಲಿಂಗಾಪುರ ಗ್ರಾಮದವರಿಗೆ ಇದರ ವ್ಯಾಪ್ತಿಯಲ್ಲಿಯೇ ಬರುವ ಪ್ರಾಥಮಿಕ ಶಾಲೆಯಲ್ಲಿ ಮತಗಟ್ಟೆ ಸ್ಥಾಪಿಸಿರುವುದು  ಸಂತೋಷ ತಂದಿದ್ದರೂ ಈ ಗ್ರಾಮದಿಂದ ಸಾಕಷ್ಟು ದೂರದಲ್ಲಿರುವ ಜೈಲ್ ಬಿಲ್ಡಿಂಗ್ ನಿವಾಸಿಗಳನ್ನು ಈ ವ್ಯಾಪ್ತಿಗೆ ಒಳಪಡಿಸಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಹೊಸ ಮತದಾನ ಕೇಂದ್ರಕ್ಕಿಂತ ಈ ಹಿಂದಿನ ಪ್ರವಾಸಿಮಂದಿರದ ಬಳಿಯ ಉರ್ದು ಶಾಲೆ ಮತಗಟ್ಟೆ ಕೇಂದ್ರವೇ ಹತ್ತಿರವಾಗಿತ್ತು ಎಂಬುದು ಸಾರ್ವಜನಿಕರ ವಾದ.ಲಿಂಗಾಪುರ ಗ್ರಾಮಕ್ಕೆ ಹೊಂದಿಕೊಂಡಿರುವ ರಾವೂರು ಗ್ರಾಮದ ಮತದಾರರಿಗೆ ಪಕ್ಕದ ಗ್ರಾಮದ ಕಲ್ಲುಗುಡ್ಡೆ ಶಾಲೆಯ ಮತಗಟ್ಟೆ ಕೇಂದ್ರದಲ್ಲಿ ಮತದಾನಕ್ಕೆ ಅವಕಾಶಕಲ್ಪಿಸಲಾಗಿದ್ದು, ಇದಕ್ಕಾಗಿ ಇಲ್ಲಿನ ಮತದಾರರು ಕಿಲೋ ಮೀಟರ್‌ಗಟ್ಟಲೇ ನಡೆದೇ ಹೋಗಬೇಕಾದ ಸ್ಥಿತಿ ಇದೆ.ಕಲ್ಲುಗುಡ್ಡೆ ಮತದಾನ ಕೇಂದ್ರದ ಕೂಗಳತೆ ದೂರದಲ್ಲಿರುವ ಹಳೇಮಾಕೋಡು ಗ್ರಾಮಸ್ಥರಿಗೆ ಲಿಂಗಾಪುರ ಶಾಲೆಯ ಮತಗಟ್ಟೆ ಕೇಂದ್ರಕ್ಕೆ ವರ್ಗಾಯಿಸಲಾಗಿದ್ದು, ಈ ಗ್ರಾಮಸ್ಥರು 8ರಿಂದ 10 ಕಿಲೋ ಮೀಟರ್‌ಗಳಷ್ಟು ನಡದೇ ಮತದಾನಕ್ಕೆ ಹೋಗಬೇಕಾದ ಸ್ಥಿತಿ ಇದೆ.

ಇಲಾಖೆಯಲ್ಲಿಯೇ ಕುಳಿತು ಗ್ರಾಮದ ನಕಾಶೆಯನ್ನು ಆಧರಿಸಿ ಅಧಿಕಾರಿಗಳು ತಯಾರಿಸುವ ಈ ಅವೈಜ್ಞಾನಿಕ ಮತಗಟ್ಟೆ ವಿಂಗಡಣೆ ಮತದಾರರನ್ನು ಸಂಕಷ್ಟಕ್ಕಿಡು ಮಾಡಿದೆ.ಈ ಅವಾಂತರ ಹಿಂದಿನಿಂದಲೂ ನಡೆದು ಬಂದಿದೆ.  ಹಿಂದಿನ ಹಲವು ಚುನಾವಣೆಗಳಲ್ಲಿ ಈ ಗ್ರಾಮಸ್ಥರನ್ನು 15ಕಿಲೋ ಮೀಟರ್ ದೂರದ ಸೂಸಲವಾನಿ ಗ್ರಾಮಕ್ಕೆ ವರ್ಗಾಯಿಸಿದ ಉದಾಹರಣೆಗಳು ಇದೆ. ಕೇವಲ ನಕಾಶೆಯನ್ನು ಆಧರಿಸಿ ಮತಗಟ್ಟೆ ವಿಂಗಡಣೆ ಮಾಡುವಾಗ ಗ್ರಾಮಗಳ ಮಧ್ಯೆ ಇರುವ ಭದ್ರಾ ಹಿನ್ನೀರು ಕೂಡ ಅಧಿಕಾರಿಗಳ ಕಣ್ಣಿಗೆ ಕಾಣುವುದಿಲ್ಲ. ವಾಸ್ತವಾಂಶ ಅರಿಯುವ ವ್ಯವಧಾನವೂ ಸಹ ಅಧಿಕಾರಿಗಳಿಗಿಲ್ಲ.ಕಟ್ಟುನಿಟ್ಟಿನ ಚುನಾವಣಾ ನೀತಿ ಸಹಿಂತೆಯಿಂದ ವಾಹನ ಬಳಕೆಗೆ ನಿಷೇಧವಿರುವುದರಿಂದ ಈ ಗ್ರಾಮಗಳಲ್ಲಿ ಬಸ್ ಸೌಕರ್ಯಗಳು ಇಲ್ಲದಿರುವು ದರಿಂದ ಹಾಗೂ  ಖಾಸಗಿ ವಾಹನ ಹೊಂದಿರದ ಸಾಕಷ್ಟು ಮತದಾರರು ಮತದಾನದಿಂದ ದೂರ ಉಳಿಯುವುದೇ ಹೆಚ್ಚು.

ಪ್ರಸ್ತುತ ಚುನಾವಣಾ ಆಯೋಗ ಮತದಾನದ ಪ್ರಮಾಣ ಹೆಚ್ಚಿಸಲು ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ.

ಆದರೆ ಮತಗಟ್ಟೆ ವಿಂಗಡಣೆಯ ಸಂದರ್ಭದಲ್ಲಿ ಆಗುವ ಇಂತಹ ಅವಾಂತರಗಳು ಮತದಾನದ ಪ್ರಮಾಣ ಕಡಿಮೆಯಾಗಲೂ ಕಾರಣ ಎಂಬುದು ಗ್ರಾಮಸ್ಥರ ಅಭಿಪ್ರಾಯವಾಗಿದೆ. ಈಗಲಾದರೂ ಸಂಬಂಧಪಟ್ಟವರು ಇತ್ತ ಗಮನಹರಿಸಿ ಗ್ರಾಮಸ್ಥರಿಗಾಗುತ್ತಿರುವ ಸಮಸ್ಯೆ ಬಗೆಹರಿಸ ಬೇಕೆಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

-ಕೆ.ವಿ.ನಾಗರಾಜ್.

ಪ್ರತಿಕ್ರಿಯಿಸಿ (+)