ಗುರುವಾರ , ಫೆಬ್ರವರಿ 25, 2021
18 °C

ಅವ್ಯವಸ್ಥಿತ ಬಸ್ ನಿಲ್ದಾಣ: ಪ್ರಯಾಣಿಕರ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅವ್ಯವಸ್ಥಿತ ಬಸ್ ನಿಲ್ದಾಣ: ಪ್ರಯಾಣಿಕರ ಪರದಾಟ

ಹೊಸಕೋಟೆ: ಇಲ್ಲಿನ ಹೆದ್ದಾರಿಯ ಚನ್ನಬೈರೇಗೌಡ ವೃತ್ತದಲ್ಲಿನ ಬಸ್ ನಿಲುಗಡೆ ಜಾಗ ಅವ್ಯವಸ್ಥೆಯ ಅಗರವಾಗಿದ್ದು, ಪ್ರಯಾಣಿಕರು ಪ್ರತಿನಿತ್ಯ ಪರದಾಡುವಂತಾಗಿದೆ.ಬೆಂಗಳೂರು ಹಾಗೂ ಕೋಲಾರದ ಕಡೆ ಹೋಗುವ ಬಸ್‌ಗಳು ಹೆದ್ದಾರಿಯ ಎರಡೂ ಬದಿ ನಿಲ್ಲುತ್ತವೆ. ಪ್ರತಿನಿತ್ಯ ಸಾವಿರಾರು ಜನ ಇಲ್ಲಿ ಬಸ್ ಹತ್ತಲಿದ್ದು ಸದಾ ಪ್ರಯಾಣಿಕರರಿಂದ ಗಿಜಿಗುಟ್ಟುತ್ತಿರುತ್ತದೆ. ಆದರೆ, ಇಲ್ಲಿ ಯಾವುದೇ ಸುಸಜ್ಜಿತ ಬಸ್ ನಿಲ್ದಾಣ ಇರದ ಕಾರಣ ರಸ್ತೆಯೇ ಬಸ್ ನಿಲ್ದಾಣವಾಗಿದ್ದು ಎಲ್ಲೆಂದರಲ್ಲಿ ಬಸ್‌ಗಳನ್ನು ನಿಲ್ಲಿಸಲಾಗುತ್ತದೆ.ಹೀಗಾಗಿ, ಬಸ್‌ಗಾಗಿ ಅತ್ತಿಂದಿತ್ತ ಪ್ರಯಾಣಿಕರು ಓಡಬೇಕಿದೆ. ರಸ್ತೆ ಬದಿ ಅವೈಜ್ಞಾನಿಕವಾಗಿ ಚರಂಡಿ ಸಹ ನಿರ್ಮಾಣ ಮಾಡಿದ್ದು ಇದು ಸರಾಗ ಸಂಚಾರಕ್ಕೆ ಅಡ್ಡಿಯಾಗಿದೆ. ಅಲ್ಲದೆ ಈ ಚರಂಡಿಯೇ ಪ್ರಯಾಣಿಕರಿಗೆ ನಿಲ್ಲುವ ಪ್ಲಾಟ್‌ಫಾರಂ ಸಹ ಆಗಿದೆ. ಆದರೆ ಚರಂಡಿಗೆ ಸರಿಯಾಗಿ ಮುಚ್ಚದಿರುವುದು ಪ್ರಯಾಣಿಕರ ಆತಂಕಕ್ಕೆ ಎಡೆಮಾಡಿದೆ.ಬಸ್‌ಗಾಗಿ ಕಾಯುವ ಪ್ರಯಾಣಿಕರು ಬಸ್ ಹತ್ತುವ ಆತುರದಲ್ಲಿ ಬಹಳಷ್ಟು ಜನ ನಿತ್ಯ ಚರಂಡಿಗೆ ಬಿದ್ದು ಗಾಯಮಾಡಿಕೊಳ್ಳುವುದು ಸಾಮಾನ್ಯವಾಗಿದೆ. ಕತ್ತಲಾದ ಮೇಲಂತೂ ಪ್ರಯಾಣಿಕರ ಪಾಡು ಹೇಳತೀರದು. ಇಲ್ಲಿ ಬೀದಿ ದೀಪದ ವ್ಯವಸ್ಥೆಯೇ ಇಲ್ಲದಿರುವುದರಿಂದ ಪ್ರಯಾಣಿಕರು ಭಯದ ನೆರಳಿನಲ್ಲಿನ ಕತ್ತಲಲ್ಲಿ ನಿಂತು ಬಸ್‌ಗಾಗಿ ಕಾಯಬೇಕಿದೆ. ಸರಗಳ್ಳತನ, ಪಿಕ್‌ಪಾಕೆಟ್, ಕುಡುಕರ ಹಾವಳಿ ಹೆಚ್ಚಿರುವುದು ಕೂಡ ಪ್ರಯಾಣಿಕರನ್ನು ಮತ್ತಷ್ಟು ಸಂಕಷ್ಟಕ್ಕೀಡು ಮಾಡಿದೆ.ಸಾವಿರಾರು ಮಂದಿ ಪ್ರಯಾಣಿಕರು ಇಲ್ಲಿ ನಿಲ್ಲುತ್ತಿದ್ದರೂ ಮೂಲ ಸೌಕರ್ಯಗಳಾದ  ಮೂತ್ರಾಲಯವಾಗಲಿ ಅಥವಾ ಕುಡಿಯುವ ನೀರಿನ ವ್ಯವಸ್ಥೆಯಾಗಲಿ ಇಲ್ಲದೆ ಮೇಲ್ಸೇತುವೆ ಕೆಳಗಿನ ಒಂದು ಭಾಗ ಸಾರ್ವಜನಿಕ ಮೂತ್ರಾಲಯವಾಗಿ ಮಾರ್ಪಟ್ಟಿದೆ. ಹೀಗಾಗಿ ರೋಗದ ತಾಣವಾಗಿರುವ ಈ ಜಾಗ ಗಬ್ಬು ನಾರುತ್ತಿದ್ದು ರಸ್ತೆಯಲ್ಲಿ ಓಡಾಡುವವರು ಮೂಗು ಮುಚ್ಚಿಕೊಂಡೇ ಹೋಗಬೇಕಿದೆ. ಹೆದ್ದಾರಿ ವಿಸ್ತರಣೆ ನಂತರ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಿದೆ ಎನ್ನುತ್ತಾರೆ ಸಾರ್ವಜನಿಕರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.