ಅವ್ಯವಸ್ಥೆಯ ಆಗರ

7

ಅವ್ಯವಸ್ಥೆಯ ಆಗರ

Published:
Updated:

ಗದಗ: ನಗರದ ಕೆ.ಎಚ್.ಪಾಟೀಲ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭಗೊಂಡ ರಾಜ್ಯ ಪದವಿಪೂರ್ವ ಕಾಲೇಜುಗಳ ಮಟ್ಟದ ಅಥ್ಲೆಟಿಕ್ಸ್ ಕೂಟ ಅವ್ಯವಸ್ಥೆಯ ಆಗರವಾಗಿತ್ತು.ಪದವಿ ಪೂರ್ವ ಶಿಕ್ಷಣ ಇಲಾಖೆ ಆಯೋಜಿಸಿದ್ದ ಈ ಕೂಟ ನಿಗದಿತ ಸಮಯಕ್ಕಿಂತ ಎರಡು ಗಂಟೆ ತಡವಾಗಿ ಆರಂಭಗೊಂಡಿತಲ್ಲದೆ, ಕೂಟಕ್ಕೆ ಚಾಲನೆ ನೀಡಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕಳಕಪ್ಪ ಬಂಡಿ ಸೇರಿದಂತೆ ಶಾಸಕರು ಮತ್ತು ಸಂಸದರು ಗೈರು ಹಾಜರಾಗಿದ್ದರು.ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಎಸ್.ಪಾಟೀಲ ಧ್ವಜಾರೋಹಣ ಮಾಡುವ ವೇಳೆ ಹಗ್ಗ ತುಂಡಾಗಿ ಕ್ರೀಡಾ ಧ್ವಜ ಸಂಘಟಕರ ಮೇಲೆ ಬಿತ್ತು. ಆಗ ವೇದಿಕೆ ಮೇಲೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಸೇರಿದಂತೆ ಹಲವು ಗಣ್ಯರಿದ್ದರು. ಕ್ರೀಡಾಕೂಟಕ್ಕೆ ಪೂರ್ವ ಸಿದ್ಧತೆ ಮಾಡಿಕೊಳ್ಳದೆ ಕ್ರೀಡಾ ಧ್ವಜಕ್ಕೆ ಅವಮಾನ ಮಾಡಲಾಗಿದೆ ಎಂದು ನೆರೆದಿದ್ದ ಕ್ರೀಡಾಪಟುಗಳು          ಮತ್ತು ಕ್ರೀಡಾ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರು. ಹಗ್ಗ ಸರಿಪಡಿಸಿದ ನಂತರ ಮತ್ತೆ ಧ್ವಜಾರೋಹಣ ನೆರವೇರಿಸಲಾಯಿತು. ಅಚಾತುರ್ಯಕ್ಕೆ ಜಿಲ್ಲಾಧಿಕಾರಿ ಕ್ಷಮೆಯಾಚಿಸಿದರು.ಸಮವಸ್ತ್ರ ನೀಡಿಲ್ಲ ಎಂದು ಜಿಲ್ಲೆಯ ಕ್ರೀಡಾಪಟುಗಳು ಅಧಿಕಾರಿಗಳ ವಿರುದ್ಧ ಕೂಗಾಡಿದ್ದರಿಂದ ಆತಂಕದ ಪರಿಸ್ಥಿತಿ ಉಂಟಾಯಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 2800 ಕ್ರೀಡಾಪಟುಗಳು ಸಮರ್ಪಕ ನೀರಿನ ವ್ಯವಸ್ಥೆ ಇಲ್ಲದೆ ಪರದಾಡಿದರು. ಕಾಟಾಚಾರಕ್ಕೆ ಕೆಲವೆಡೆ ನೀರಿನ ಕ್ಯಾನ್ ಇಡಲಾಗಿತ್ತು.`ಟ್ರಾಕ್ ಸೂಟ್ ನೀಡದ ಕಾಲೇಜಿನ ಪ್ರಾಂಶುಪಾಲರಿಗೆ ನೋಟಿಸ್ ನೀಡಲಾಗುವುದು~ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ  ಉಪ ನಿರ್ದೇಶಕ ಬಿ.ಎಸ್.ಗೌಡರ ಸ್ಪಷ್ಟನೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry