ಅವ್ಯವಸ್ಥೆ ಆಗರವಾದ ಬಸ್ ನಿಲ್ದಾಣ

7

ಅವ್ಯವಸ್ಥೆ ಆಗರವಾದ ಬಸ್ ನಿಲ್ದಾಣ

Published:
Updated:

ಕೃಷ್ಣರಾಜಪುರ: `ಕೆ.ಆರ್.ಪುರದಲ್ಲಿ ಸುಸಜ್ಜಿತ ಬಿಎಂಟಿಸಿ ನಿಲ್ದಾಣದ ಕನಸು ಮರೀಚಿಕೆಯಾಗಿಯೇ ಉಳಿದಿದ್ದು, ಬಸ್ ನಿಲುಗಡೆ ತಾಣದ ಅವ್ಯವಸ್ಥೆಯಿಂದ ಅಸಹನೀಯ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ' ಎಂದು ಸ್ಥಳೀಯರು ದೂರಿದ್ದಾರೆ.`ನಿಲ್ದಾಣದಿಂದ ಪ್ರತಿದಿನ 120ಕ್ಕೂ ಅಧಿಕ ಬಸ್‌ಗಳು ಸಂಚಾರ ನಡೆಸುತ್ತಿವೆ. ನಿತ್ಯ ಸುಮಾರು 5ರಿಂದ 8 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಬಿಎಂಟಿಸಿ ವಾಹನಗಳನ್ನೇ ಬಳಸುತ್ತಿದ್ದಾರೆ. ಆದರೆ, ನಿಲ್ದಾಣದಲ್ಲಿ ಅವ್ಯವಸ್ಥೆಯ ಆಗರವಾಗಿದೆ. ಜತೆಗೆ ದೂಳಿನಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.`ಬಸ್ ಬರುವವರೆಗೆ ಕಾಯಲು ತಂಗುದಾಣವೂ ಇಲ್ಲ. ಸುಮಾರು ಎಂಟು ವರ್ಷಗಳಿಂದ ನಿರ್ಮಾಣ ಹಂತದಲ್ಲಿರುವ ಶೌಚಾಲಯ ಇನ್ನೂ ಪೂರ್ಣಗೊಂಡಿಲ್ಲ. ಅಪೂರ್ಣಗೊಂಡ ಶೌಚಾಲಯವನ್ನೇ ಅನಿವಾರ್ಯವಾಗಿ ಬಳಸಬೇಕಿದೆ' ಎಂದು ನೋವು ತೋಡಿಕೊಂಡಿದ್ದಾರೆ.`ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಮೂಲಸೌಕರ್ಯ ಇಲ್ಲ. ಕಾಂಪೌಂಡ್ ಬಳಿ ಕಸದ ರಾಶಿ ಬಿದ್ದಿರುವ ಕಾರಣ ಸೊಳ್ಳೆಗಳ ಕಾಟ ಹೆಚ್ಚಾಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.`ಕೆಲವು ತಿಂಗಳ ಹಿಂದೆ ಸಂತೆ ಮೈದಾನದಲ್ಲಿ ಸುಸಜ್ಜಿತ ಬಸ್ ನಿಲ್ದಾಣಕ್ಕೆ ಉಪಮುಖ್ಯಮಂತ್ರಿ ಆರ್.ಅಶೋಕ ಗುದ್ದಲಿಪೂಜೆ ನೆರವೇರಿಸಿದ್ದು ಇನ್ನೂ ಕಾಮಗಾರಿ ಆರಂಭವಾಗಿಲ್ಲ. ಬೆಂಗಳೂರು ಪೂರ್ವ ತಾಲ್ಲೂಕಿಗೆ ಕೇಂದ್ರವಾಗಿರುವ ಮತ್ತು ವಿಧಾನಸಭಾ ಕ್ಷೇತ್ರವಾದ ಕೆ.ಆರ್.ಪುರಕ್ಕೆ ಸುಸಜ್ಜಿತ ಬಸ್ ನಿಲ್ದಾಣ ಇಲ್ಲದಿರುವುದು ನೋವಿನ ಸಂಗತಿ' ಎಂದು ಪ್ರಯಾಣಿಕರಾದ ಈಶ್ವರ್, ಸಿದ್ದಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.ಬಿಎಂಟಿಸಿ ನಿಲ್ದಾಣದ ಜಾಗ ಐಟಿಐಗೆ ಸೇರಿದೆ. ಶೌಚಾಲಯವನ್ನು ಪೂರ್ಣಗೊಳಿಸಲು ಸಂಸ್ಥೆ ಅನುಮತಿ ನೀಡಿಲ್ಲ. ಈಗಾಗಲೇ 2-3 ಬಾರಿ ಆಡಳಿತ ಮಂಡಳಿಯೊಡನೆ ಚರ್ಚಿಸಲಾಗಿದೆ. ಮತ್ತೊಮ್ಮೆ ಅವರೊಡನೆ ಚರ್ಚಿಸಲಾಗುವುದು. ಈಗಾಗಲೇ ಬಿಬಿಎಂಪಿ ಎದುರು ಸಾರ್ವಜನಿಕ ಶೌಚಾಲಯ ಇದೆ. ಆದರೆ, ಅದು ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ.

- ವೇಣುಗೋಪಾಲ್,  ಬಿಬಿಎಂಪಿ ಕಾರ್ಯನಿರ್ವಾಹಕ ಎಂಜಿನಿಯರ್

ಬಿಎಂಟಿಸಿ ನಿಲ್ದಾಣ ಐಟಿಐಗೆ ಸೇರಿದ್ದು ಜಾಗವನ್ನು ಬಿಎಂಟಿಸಿ ಬಿಟ್ಟುಕೊಟ್ಟರೆ ನಿಲ್ದಾಣದಲ್ಲಿ ಮೂಲಸೌಕರ್ಯಕ್ಕೆ ಚಾಲನೆ ನೀಡಲಾಗುವುದು.

  -ಚಂದ್ರಶೇಖರ್,  ಬಿಎಂಟಿಸಿ ಘಟಕದ ವ್ಯವಸ್ಥಾಪಕರು

ಶಾಸಕರು ಮನಸ್ಸು ಮಾಡಿದರೆ ಮಾತ್ರ ನಿಲ್ದಾಣದಲ್ಲಿ ಪ್ರಯಾಣಿಕರಿಗೆ  ನಿರೀಕ್ಷಿಸಿದ ಸೌಲಭ್ಯಗಳು ದೊರೆಯುವ ಸಾಧ್ಯತೆ ಇದೆ.

         - ಸ್ಥಳೀಯ ಬಿಎಂಟಿಸಿ ಸಿಬ್ಬಂದಿ ವರ್ಗ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry