ಅವ್ಯವಸ್ಥೆ: ವರದಿಗೆ ಸೂಚನೆ

7

ಅವ್ಯವಸ್ಥೆ: ವರದಿಗೆ ಸೂಚನೆ

Published:
Updated:

ಬೀದರ್: ಜಿಲ್ಲಾ ಆಸ್ಪತ್ರೆಯ ಅವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿ ಒಂದು ವಾರದೊಳಗಾಗಿ ವರದಿಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿ ಅವರಿಗೆ ಸೂಚನೆ ನೀಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ರಾಮದಾಸ್ ಬುಧವಾರ ತಿಳಿಸಿದರು.ಬೀದರ್ ವೈದ್ಯಕೀಯ ಕಾಲೇಜು ಹಾಗೂ ಜಿಲ್ಲಾ ಆಸ್ಪತ್ರೆಗೆ  ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ  ಪತ್ರಕರ್ತರೊಂದಿಗೆ ಮಾತನಾಡಿದರು.ಜಿಲ್ಲಾಸ್ಪತ್ರೆಯಲ್ಲಿ  ಹಲವಾರು ಲೋಪದೋಷ ಗಮನಿಸಲಾಗಿದೆ. ಸಣ್ಣಪುಟ್ಟ ಔಷಧಿಗಳನ್ನು ಹೊರಗಿನಿಂದ ತರಿಸುತ್ತಿರುವ ಬಗ್ಗೆ ದೂರುಗಳು ಬಂದಿವೆ. ಆಸ್ಪತ್ರೆ ಪರಿಸರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲು ಸೂಚಿಸಲಾಗಿದೆ. ಆಸ್ಪತ್ರೆಯಲ್ಲಿ ಸೇವಾ ಲೋಪಗಳ ಕುರಿತಾದ ದೂರುಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.ಆಸ್ಪತ್ರೆಯಲ್ಲಿ ಯಾವುದೇ ದಾಖಲೆಗಳನ್ನು ಸರಿಯಾಗಿ ನಿರ್ವಹಿಸದಿರುವುದನ್ನು ಗಮನಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ರೋಗಿಗಳ ಮಾಹಿತಿಯನ್ನು ಪ್ರತ್ಯೇಕವಾಗಿ ನಮೂದಿಸುವ ಮೂಲಕ ಅವರಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ದೊರಕಿಸಿಕೊಡಲು ಆದೇಶಿಸಲಾಗಿದೆ. ಆಸ್ಪತ್ರೆಯ ಅವ್ಯವಸ್ಥೆಗೆ ಜವಾಬ್ದಾರರಾಗಿರುವ ಆರ್‌ಎಂಒ (ರೆಸಿಡೆಂಟ್ ಮೆಡಿಕಲ್ ಆಫಿಸರ್) ಅವರ ವಿರುದ್ಧ ತಕ್ಷಣ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದರು.ಆಸ್ಪತ್ರೆಯಲ್ಲಿ  ಸ್ಕ್ಯಾನರ್, ಎಂಐಆರ್‌ನಂತಹ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಆಸ್ಪತ್ರೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು 15 ದಿನದಲ್ಲಿ ನೇರ ಸಂದರ್ಶನದ ಮೂಲಕ ಭರ್ತಿಗೊಳಿಸಲು ಸೂಚಿಸಲಾಗಿದೆ ಎಂದರು.ಬೀದರ್ ಮೆಡಿಕಲ್ ಕಾಲೇಜಿನಲ್ಲಿ ಪರಿಶೀಲನೆ ಸಂದರ್ಭದಲ್ಲಿ ಹಲವಾರು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಅನಧಿಕೃತವಾಗಿ ಗೈರು ಹಾಜರಾಗಿರುವುದು ಗಮನಕ್ಕೆ ಬಂದಿದೆ. ಎಲ್ಲರಿಗೂ ನೋಟಿಸ್ ಜಾರಿಗೊಳಿಸಲು ತಿಳಿಸಲಾಗಿದೆ. ಹಲವು ದಿನಗಳಿಂದ ಗೈರು ಹಾಜರು ಆಗಿರುವವರನ್ನು ಅಮಾನತುಗೊಳಿಸಲಾಗುವುದು ಎಂದರು.ಬೀದರ್ ಮೆಡಿಕಲ್ ಕಾಲೇಜಿನ ಬೋಧಕ ಸಿಬ್ಬಂದಿಗಳಿಗೆ ಎಐಸಿಟಿಇ ವೇತನ  ಶ್ರೇಣಿಯನ್ನು ಜಾರಿಗೊಳಿಸಲಾಗುವುದು. ಕಾಲೇಜಿನಲ್ಲಿರುವ ಗುತ್ತಿಗೆ ಆಧಾರದ ನೌಕರರನ್ನು ಖಾಯಂಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಬಡ್ತಿ ಕುರಿತಾಗಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಶಾಸಕರಾದ ರಹೀಮ್‌ಖಾನ್, ಬಂಡೆಪ್ಪ ಕಾಶೆಂಪೂರ್, ಜಿ.ಪಂ. ಸದಸ್ಯ ಡಾ. ಶೈಲೇಂದ್ರ ಬೆಲ್ದಾಳೆ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry