ಬುಧವಾರ, ನವೆಂಬರ್ 20, 2019
25 °C

ಅವ್ಯವಹಾರಗಳ ಬ್ರಹ್ಮಾಂಡ

Published:
Updated:

ಬೆಂಗಳೂರು ಬಳಿಯ ಪುಟ್ಟ ತಾಲ್ಲೂಕು ಮಾಗಡಿಯಲ್ಲಿ ರೂ 600 ಕೋಟಿಗಳಷ್ಟು ಮೊತ್ತದ ಭಾರಿ  ಅವ್ಯವಹಾರ ಬೆಳಕಿಗೆ ಬಂದಿದೆ. ರಾಜಕಾರಣಿಗಳ ಕೃಪಾಶೀರ್ವಾದದೊಂದಿಗೆ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಅಧಿಕಾರಿಗಳು ಗುತ್ತಿಗೆದಾರರ ಜೊತೆ ಶಾಮೀಲಾಗಿ ನಡೆಸಿರುವ ಈ ಅವ್ಯವಹಾರ, ಭ್ರಷ್ಟಾಚಾರ ತುಂಬಿ ತುಳುಕುತ್ತಿರುವ ನಮ್ಮ ವ್ಯವಸ್ಥೆಗೆ ದ್ಯೋತಕ. ರಾಮನಗರ ಜಿಲ್ಲೆಗೆ ಸೇರಿದ ಮಾಗಡಿ ತಾಲ್ಲೂಕ್ಕೊಂದಕ್ಕೇ 2011-12ನೇ ಸಾಲಿನಲ್ಲಿ 1300 ಕಾಮಗಾರಿಗಳನ್ನು ಮಂಜೂರು ಮಾಡಲಾಗಿದೆ ಎಂದರೆ ಈ ಅವ್ಯವಹಾರದ ಅಗಾಧ ವ್ಯಾಪ್ತಿಯನ್ನು ಅಂದಾಜು ಮಾಡಬಹುದು. ಏಕೆಂದರೆ, ಇದೇ ಅವಧಿಯಲ್ಲಿ ಉತ್ತರ ಕರ್ನಾಟಕದ ಎಲ್ಲ ವಿಭಾಗಗಳಿಗೆ ಒಟ್ಟಾಗಿ ನೀಡಲಾದ ಕಾಮಗಾರಿಗಳ ಸಂಖ್ಯೆ ಕೇವಲ 496ರೂ 600 ಕೋಟಿ ಮೊತ್ತದಷ್ಟು ಕಾಮಗಾರಿಗಳನ್ನು ಒಂದೇ ಆರ್ಥಿಕ ವರ್ಷದಲ್ಲಿ ಒಂದೇ ತಾಲ್ಲೂಕಿಗೆ ಮಂಜೂರು ಮಾಡಿದ ಉದಾಹರಣೆ ಪಿಡಬ್ಯ್ಲುಡಿ ಇತಿಹಾಸದಲ್ಲಿಯೇ ಇಲ್ಲ.

ಈ ಮೊತ್ತದ ಶೇ 40ರಷ್ಟು ಹಣವನ್ನೂ ಉತ್ತರ ಕರ್ನಾಟಕದ ಧಾರವಾಡ, ಬೆಳಗಾವಿ, ವಿಜಾಪುರ, ಬಾಗಲಕೋಟೆ, ಬೀದರ್, ಗುಲ್ಬರ್ಗ, ಕೊಪ್ಪಳ, ಗದಗ, ಹಾವೇರಿ, ಬಳ್ಳಾರಿ, ಕಾರವಾರ, ಶಿರಸಿ ಸೇರಿದಂತೆ 12 ವಿಭಾಗಗಳಲ್ಲಿ ಖರ್ಚು ಮಾಡಿಲ್ಲ ಎಂಬುದೇ ಈ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಸಾಕ್ಷಿ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ  ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಸೇರಿದಂತೆ  12 ಅಧಿಕಾರಿಗಳು ಹಾಗೂ ಮೂವರು ಗುತ್ತಿಗೆದಾರರ ವಿರುದ್ಧ ಲೋಕಾಯುಕ್ತ ಪೊಲೀಸರು  ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ.ಭಾರಿ ಹಣ ಒಳಗೊಂಡ ಈ ಹಗರಣದ ಬಗ್ಗೆ ತನಿಖೆ ನಡೆಯಬೇಕೆಂದು ವಿಧಾನಸಭೆಯಲ್ಲೂ ಚರ್ಚೆಯಾಗಿತ್ತು. ಈ ಅವ್ಯವಹಾರಗಳ ತನಿಖೆ ನಡೆಸಿದ ವಿಧಾನಸಭೆಯ ಸದನ ಸಮಿತಿ ತನ್ನ ಅಂತಿಮ ವರದಿಯಲ್ಲಿ ಪ್ರಭಾವಿ ರಾಜಕಾರಣಿಗಳ ಹಸ್ತಕ್ಷೇಪದ ಬಗ್ಗೆ ಗುಮಾನಿ ವ್ಯಕ್ತಪಡಿಸಿದ್ದು ಈ ಬಗ್ಗೆ ವಿಸ್ತೃತವಾದ ತನಿಖೆ ನಡೆಯುವುದು ಅವಶ್ಯ. ರಸ್ತೆ, ಚರಂಡಿ, ಸೇತುವೆಗಳಂತಹ ಸಾರ್ವಜನಿಕ ಅನುಕೂಲದ ಕಾಮಗಾರಿಗಳ ನಿರ್ಮಾಣ ವಿಚಾರಗಳು ಅಕ್ರಮ ಹಣ ಸಂಪಾದನೆಗೆ ಮಾರ್ಗಗಳಾಗುತ್ತಿರುವುದು ನಡೆದೇ ಇದೆ. ಆದರೆ ಮಾಗಡಿಯಲ್ಲಾಗಿರುವುದು ಹಗಲು ದರೋಡೆ. ಒಟ್ಟಾರೆರೂ600 ಕೋಟಿ ಮೊತ್ತದ ಕಾಮಗಾರಿಗಳಲ್ಲಿ ಅರ್ಧದಷ್ಟನ್ನು ಈಗಾಗಲೇ ಪೂರೈಸಲಾಗಿದೆ ಎಂಬ ವರದಿ ಸಿದ್ಧಪಡಿಸಿದ್ದ ಮಾಗಡಿ ಉಪ ವಿಭಾಗರೂ341 ಕೋಟಿ ಮೊತ್ತವನ್ನು ಗುತ್ತಿಗೆದಾರರಿಗೆ ಬಿಡುಗಡೆ ಮಾಡಿತ್ತು.

ಆದರೆ ಮಾಗಡಿ ಕಾಮಗಾರಿಗಳಿಗೆ ಬಜೆಟ್‌ನಲ್ಲಿ ಹಣ ಹಂಚಿಕೆಯಾಗಿರಲಿಲ್ಲ. ಕ್ರಿಯಾ ಯೋಜನೆಯಲ್ಲೂ ಸೇರ್ಪಡೆ ಆಗಿರಲಿಲ್ಲ. ಪ್ರಭಾವಿಯೊಬ್ಬರ ಶಿಫಾರಸಿನ ಮೇರೆಗೆ ಅನುಬಂಧ `ಇ' ನಲ್ಲಿ ಸೇರಿಸಿ ತರಾತುರಿಯಲ್ಲಿ ಒಪ್ಪಿಗೆ ಪಡೆಯಲಾಗಿತ್ತು ಎಂಬಂತಹ ದೂರುಗಳು ಈ ಅವ್ಯವಹಾರದ ಒಳಸುಳಿಗಳನ್ನು ತೆರೆದಿಟ್ಟಿವೆ. ಕಾಮಗಾರಿಗಳು ನಡೆದಿರುವುದನ್ನು ದೃಢಪಡಿಸಿಕೊಳ್ಳದೆ ಅವ್ಯವಹಾರಗಳ ಸರಮಾಲೆಗಳಿಗೆ ಅವಕಾಶನೀಡಿರುವ ಧಾರ್ಷ್ಟ್ಯ ತೋರಿರುವ ಎಂಜಿನಿಯರ್‌ಗಳು, ತಾಂತ್ರಿಕ ಸಹಾಯಕರು ಮತ್ತು ಲೆಕ್ಕ ಪತ್ರ ಇಲಾಖೆಯ ಸಿಬ್ಬಂದಿಯ ಮೇಲೆ ಹೊಣೆಗಾರಿಕೆ ನಿಗದಿಯಾಗಿ ಶಿಕ್ಷೆಯಾಗುವುದು ಅತ್ಯವಶ್ಯ. ಇಂತಹ ಅವ್ಯವಹಾರಗಳ ಕಡಿವಾಣಕ್ಕೆ ಈ ಹಗರಣ ತಾರ್ಕಿಕ ಅಂತ್ಯ ಕಾಣುವಂತಾಗಬೇಕು. ಲೋಕೋಪಯೋಗಿ ಇಲಾಖೆಗೆ ಇದು ಸರಿಯಾದ ಪಾಠವಾಗಬೇಕು.

ಪ್ರತಿಕ್ರಿಯಿಸಿ (+)