ಸೋಮವಾರ, ಮೇ 17, 2021
21 °C

ಅವ್ಯವಹಾರ: ಸೊಸೈಟಿ ನಿರ್ದೇಶಕರ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ನಗರದ ಬೇತೂರು ರಸ್ತೆಯ ಅಲ್ ಫತ್ಹಾ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮಾಜಿ ಅಧ್ಯಕ್ಷರು ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಿದ್ದು, ಬ್ಯಾಂಕ್ ಹಾಗೂ ನಿರ್ದೇಶಕರಿಗಾದ ನಷ್ಟವನ್ನು ಭರ್ತಿ ಮಾಡಬೇಕು ಎಂದು ಒತ್ತಾಯಿಸಿ ಸೊಸೈಟಿಯ ಹಾಲಿ, ಮಾಜಿ  ನಿರ್ದೇಶಕರು ಸಂಸ್ಥೆಯ ಮುಂದೆ ಸೋಮವಾರ ಧರಣಿ ನಡೆಸಿದರು.ಸೊಸೈಟಿಯ ಮಾಜಿ ಅದ್ಯಕ್ಷ ರೆಹೆಮಾನ್ ಎಂಬುವರು ಸುಮಾರು ರೂ 12 ಕೋಟಿಗೂ ಮಿಕ್ಕಿ ಅವ್ಯವಹಾರ ನಡೆಸಿದ್ದಾರೆ. ಸಾಕಷ್ಟು ಮೊತ್ತದ ನಿವೇಶನಗಳನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ನಿರ್ದೇಶಕರ ನಕಲಿ ಸಹಿ ಹಾಕಿ ಈ ಎಲ್ಲ ವ್ಯವಹಾರಗಳನ್ನು ನಡೆಸಲಾಗಿದೆ. ಅಲ್ಲದೇ ಸೊಸೈಟಿಯು ನಗರದ ವಿವಿಧ ಸಹಕಾರ ಬ್ಯಾಂಕ್‌ಗಳಲ್ಲಿ ಸಾಲ ಮಾಡಿದ್ದು, ಅವೆಲ್ಲವೂ ನಿರ್ದೇಶಕರಿಗೆ ಸುತ್ತಿಕೊಂಡಿವೆ.

 

ಇದೀಗ ಅಮಾಯಕ ನಿರ್ದೇಶಕರಿಗೆ ನ್ಯಾಯಾಲಯದಿಂದ ನೋಟಿಸ್ ಬಂದಿದ್ದು, ಸೊಸೈಟಿ ವ್ಯವಹಾರಗಳು ತಮಗೆ ತಲೆನೋವಾಗಿ ಪರಿಣಮಿಸಿದೆ. ಮೃತಪಟ್ಟ ನಿರ್ದೇಶಕರ ಹೆಸರಿನಲ್ಲಿಯೂ ಸಾಲ ಮಾಡಲಾಗಿದೆ ಎಂದು ಧರಣಿ ನಿರತರು ದೂರಿದರು.ರಹಮಾನ್ ವಿರುದ್ಧ 64 ಪ್ರಕರಣಗಳ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಅವರು ಹೊಂದಿರುವ ಆಸ್ತಿಗಳ ದಾಖಲೆ ಲಭ್ಯವಿದೆ. ಆ ಆಸ್ತಿಯನ್ನು ಮಾರಾಟ ಮಾಡಿ ಬ್ಯಾಂಕ್‌ನ ನಷ್ಟ ತುಂಬಬೇಕು. ಎಲ್ಲ ಸಾಲಗಳನ್ನು ಮರು ಪಾವತಿಸಬೇಕು. ಸಂಸ್ಥೆಯನ್ನು ಅವರೇ ಬೇಕಾದರೆ ನಡೆಸಲಿ. ಯಾವುದೇ ಹಣಕಾಸು ವ್ಯವಹಾರ ನಡೆಸದ ತಮ್ಮನ್ನು ಕಾನೂನು ಕ್ರಮದಿಂದ ಬಿಡುಗಡೆಗೊಳಿಸಲಿ ಎಂದು ಧರಣಿ ನಿರತರು ಹತಾಶೆಯಿಂದ ನುಡಿದರು.ಪ್ರಕರಣದ ಆರೋಪಿ ರಹಮಾನ್ ಪ್ರತಿಕ್ರಿಯಿಸಿ ಎಲ್ಲ ಪ್ರಶ್ನೆಗಳಿಗೆ ಏ. 20ರಂದು ಉತ್ತರಿಸುವುದಾಗಿ ತಿಳಿಸಿದರು. ಕೊನೆಗೆ ವಾಗ್ವಾದ ಮಿತಿ ಮೀರಿದಾಗ ನಗರದ ಸಿಪಿಐ ಎಚ್.ಕೆ. ರೇವಣ್ಣ ಸ್ಥಳಕ್ಕಾಗಮಿಸಿ ಸಮಾಧಾನಪಡಿಸಲು ಯತ್ನಿಸಿದರು.ನಾಳೆ (ಬುಧವಾರ) ಉಭಯರನ್ನೂ ಸೇರಿಸಿ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು. ಅಲ್ಲಿಯೂ ಬಗೆಹರಿಯದಿದ್ದರೆ ಕಾನೂನು ಕ್ರಮ ಕೈಗೊಳ್ಳಬಹುದು ಎಂದು ಸಲಹೆ ನೀಡಿದರು.ಸೊಸೈಟಿಯ ಹಾಲಿ ಅಧ್ಯಕ್ಷ ಮಹಮದ್ ರಿಯಾಜ್, ನಿರ್ದೇಶಕ ಎ.ಆರ್. ಭಾಷಾ, ಸೈಯದ್ ಗೌಸ್, ಹಬೀಬ್ ಸಾಬ್, ಮಹಮದ್ ಸಾಬ್, ಎನ್.ಎಂ. ಮಹಮದ್ ಸಾಬ್, ಮುಸ್ತರಿಜಾನ್, ಮಹಮದ್ ರಿಯಾಜ್,  ಶೌಕತ್ ಅಲಿ, ಯಾಸಿನ್ ರಜ್ವಿ, ಶಂಶುದ್ದೀನ್ ರಜ್ವಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.