ಅವ್ವ ಟ್ರಸ್ಟ್‌ನಿಂದ ಏಳು ಸಾಧಕರಿಗೆ ಪುರಸ್ಕಾರ

7

ಅವ್ವ ಟ್ರಸ್ಟ್‌ನಿಂದ ಏಳು ಸಾಧಕರಿಗೆ ಪುರಸ್ಕಾರ

Published:
Updated:

ಪ್ರಜಾವಾಣಿ ವಾರ್ತೆ

ಹುಬ್ಬಳ್ಳಿ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಏಳು ಮಂದಿಗೆ ಅವ್ವಾ ಸೇವಾ ಟ್ರಸ್ಟ್ ವತಿಯಿಂದ ಇದೇ 8ರಂದು ಪ್ರಶಸ್ತಿ ನೀಡಿ ಪುರಸ್ಕರಿಸಲಾಗುವುದು ಎಂದು ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಹೊರಟ್ಟಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಧಾರವಾಡದ ಮನಗುಂಡಿಯಲ್ಲಿ ಸಮುದಾಯ ಆರೋಗ್ಯ ಮತ್ತು ಸಮಾಜ ಸೇವೆಗೆ ತಮ್ಮನ್ನು ತೊಡಗಿಸಿಕೊಂಡಿರುವ ಬಸವಾನಂದ ಸ್ವಾಮೀಜಿ, ವಿದ್ಯಾರ್ಥಿಗಳ ಏಳಿಗೆಗೆ ತಮ್ಮ ಜೀವನ ಮುಡಿಪಿಟ್ಟಿರುವ ಗದುಗಿನ ಶಿಕ್ಷಕ ಬಿ.ಜಿ. ಅಣ್ಣಿಗೇರಿ, ಉತ್ತರ ಕನ್ನಡ ಜಿಲ್ಲೆಯ ಸಾಹಿತಿ ವಿಷ್ಣು ನಾಯ್ಕ, ಅಂಗವಿಕಲರ ಏಳಿಗೆಗೆ ದುಡಿಯುತ್ತಿರುವ ಹುಬ್ಬಳ್ಳಿಯ ಈರಣ್ಣ ಲಕ್ಕುಂಡಿ, ನವಲಗುಂದ ತಾಲ್ಲೂಕಿನ ಶಿರಕೋಳ ಗ್ರಾಮದ 85 ಮಂದಿ ಅವಿಭಕ್ತ ಕುಟುಂಬದ ಮುಖ್ಯಸ್ಥ ವೀರಭದ್ರಪ್ಪ ಯಕ್ಕುಂಡಿ, ಕೃಷಿಯಲ್ಲಿ ಸಾಧನೆ ಮಾಡಿರುವ ಹಾವೇರಿ ಜಿಲ್ಲೆ ಹಾನಗಲ್ಲ ತಾಲ್ಲೂಕಿನ ಬಾದಮಗಟ್ಟಿ ಗ್ರಾಮದ ರಾಜೇಶ್ವರಿ ಹಿರೇಮಠ ಹಾಗೂ ದ್ವಿತೀಯ ಪಿಯು ಕಲಾ ವಿಭಾಗದ ಪರೀಕ್ಷೆಯಲ್ಲಿ 2011-12ನೇ ಸಾಲಿನಲ್ಲಿ ಪ್ರಥಮ ರ‌್ಯಾಂಕ್ ಪಡೆದ ಕುಂದಗೋಳ ತಾಲ್ಲೂಕಿನ ಗುರುವಿನಹಳ್ಳಿ ಗ್ರಾಮದ ಶಶಿಕಲಾ ಡಫಳಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಅವರು ಹೇಳಿದರು.ಇದೇ 8ರಂದು ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿರುವ ಗುಜರಾತ್ ಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದರು.ಕಲಘಟಗಿಯ ಹಾರೋಗೇರಿ ನಿವಾಸಿ ಶೇಖಪ್ಪ ಹರಿಜನ ಹಾಗೂ ಅವರ ಕುಟುಂಬ ಮತ್ತು ಗದುಗಿನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿರಹಟ್ಟಿ ತಾಲ್ಲೂಕಿನ ಖಾನಾಪುರ ಗ್ರಾಮದ ರೇಣುಕಾ ಹೆಗ್ಗಣ್ಣವರ ಅವರ ಕಷ್ಟಕ್ಕೆ ಸ್ಪಂದಿಸಲು ಟ್ರಸ್ಟ್ ನಿರ್ಧರಿಸಿದೆ. ಈ ಎರಡೂ ಕುಟುಂಬಗಳ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು ತಲಾ ಒಂದು ಲಕ್ಷ ರೂಪಾಯಿ ಇಡಲಾಗುವುದು. ಇದರ ಬಡ್ಡಿ ಹಣವನ್ನು ಆ ಕುಟುಂಬಗಳು ಬಳಸಿಕೊಳ್ಳಲಿವೆ ಎಂದರು.ಎಂಡೋ ಸಲ್ಫಾನ್ ಪೀಡಿತ ಉತ್ತರ ಕನ್ನಡ ಜಿಲ್ಲೆಯ ಕುಟುಂಬಗಳಿಗೆ ಟ್ರಸ್ಟ್‌ನಿಂದ ನೆರವು ನೀಡಲು ಯೋಜಿಸಲಾಗುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕಕ್ಕೆ ಒಂದು ಲಕ್ಷ ರೂಪಾಯಿ ದತ್ತಿ ನಿಧಿ ನೀಡಲಾಗುತ್ತಿದ್ದು, ಅವಿಭಕ್ತ ಕುಟುಂಬಗಳ ಕುರಿತ ಕಾರ್ಯಕ್ರಮಕ್ಕೆ ಬಳಸಿಕೊಳ್ಳಲು ಕೋರಲಾಗಿದೆ. ಹಿರಿಯ ಜೀವಗಳ ಸಮಸ್ಯೆ ಆಲಿಸಲು ಪ್ರತಿ ಜಿಲ್ಲೆಗೆ ಒಂದು ಕೌನ್ಸೆಲಿಂಗ್ ಆರಂಭಿಸಲು ಯೋಜಿಸಲಾಗುತ್ತಿದೆ ಎಂದು ಹೇಳಿದರು.ಸೂಪರ್ ಮಾರ್ಕೆಟ್: ಕ್ರಮಕ್ಕೆ ಆಗ್ರಹ

ಮಂಗಳವಾರ ಅಗ್ನಿ ಅನಾಹುತ ಸಂಭವಿಸಿದ ಧಾರವಾಡದ ಸೂಪರ್ ಮಾರ್ಕೆಟ್ ಪರಿಸ್ಥಿತಿ ಸಂಬಂಧಿಸಿದಮತೆ ಆದಷ್ಟು ಶೀಘ್ರ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದರು.ನೀಟ್‌ಗೆ ವಿರೋಧ

ರಾಜ್ಯ ಸರ್ಕಾರವು ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ನೀಟ್ ಪರೀಕ್ಷೆಯನ್ನು ನಡೆಸಹೊರಟಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ ಚೇತನಾ ಕಾಲೇಜು ಆಡಳಿತ ಮಂಡಳಿ ಮುಖ್ಯಸ್ಥರಾದ ದ್ಯಾವಪ್ಪನವರ ಹಾಗೂ ವಳಸಂಗ, ಸರ್ಕಾರ ಮುಂದಿನ ಸಾಲಿನಿಂದ ಈ ಪರೀಕ್ಷೆಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.ಶಶಿ ಸಾಲಿ, ಜೆಡಿಎಸ್ ಮುಖಂಡ ಎನ್.ಎಚ್. ಕೋನರಡ್ಡಿ, ಕಸಾಪ ಜಿಲ್ಲಾ ಅಧ್ಯಕ್ಷ ಲಿಂಗರಾಜ ಅಂಗಡಿ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry