ಅವ ಈಗ ಮಾತನಾಡ್ತಾನೆ ನೋಡ್ರಿ...

7

ಅವ ಈಗ ಮಾತನಾಡ್ತಾನೆ ನೋಡ್ರಿ...

Published:
Updated:

ತುಮಕೂರು: ಮೈಸೂರಿನಲ್ಲಿ ಬಿ.ಕಾಂ ಅಧ್ಯಯನ ಮಾಡುತ್ತಿರುವ ಪಾವಗಡದ ಓಬಳಾಪುರದ ಪಲ್ಲವಿ ಮುಖದಲ್ಲಿ ನಗೆಯ ಗೆರೆ ಹಾದು ಹೋಯಿತು. ‘ಅವ ಈಗ ಮಾತಾಡ್ತಾನೆ ನೋಡ್ರಿ’ ಎಂದು ಸಂತಸ ಹಂಚಿಕೊಂಡರು.‘ಬಾಬುಗೆ (ಪಲ್ಲವಿಯ ತಮ್ಮ) ಹತ್ತು ವರ್ಷವಾದರೂ ಸರಿಯಾಗಿ ಮಾತಾಡಲು ಬರುತ್ತಿರಲಿಲ್ಲ. ಯಾರೊಟ್ಟಿಗೂ ಸೇರುತ್ತಿರಲಿಲ್ಲ. ನಿತ್ಯ ಕರ್ಮಗಳನ್ನು ಬಟ್ಟೆಯಲ್ಲೇ ಮಾಡಿಕೊಳ್ಳುತ್ತಿದ್ದನು. ಈಗ ಆಗಿಲ್ಲ ನೋಡಿ. ಎಲ್ಲರೊಂದಿಗೆ ಬೆರೆಯುತ್ತಾನೆ. ಶಾಲೆಯಿಂದಲೇ ಮೊಬೈಲ್‌ನಿಂದ ಮಾತನಾಡುತ್ತಾನೆ. ಮಕ್ಕಳ ಜತೆ ಆಟ ಆಡುತ್ತಾನೆ. ಮನೆಯಲ್ಲಿದ್ದ ದಿನಗಳಿಗೆ ಹೋಲಿಸಿಕೊಂಡರೆ ಈಗ ಅವನಲ್ಲಿ ‘ಮ್ಯಾಜಿಕ್’ನಂಥ ಸುಧಾರಣೆ ಕಂಡುಬಂದಿದೆ’ ಎಂದು ಪಲ್ಲವಿ ಹೇಳುತ್ತಾ ಸಾಗಿದರು.ನಗರದ ಬಟವಾಡಿಯ 80ಅಡಿ ರಸ್ತೆಯಲ್ಲಿರುವ ಸ್ಪಂದನಾ ಬುದ್ಧಿಮಾಂದ್ಯ ಶಾಲೆಯಲ್ಲಿ ಪಾವಗಡದ ಬಾಬು ಮಾತ್ರವಲ್ಲ, ಹಿರಿಯೂರು ತಾಲ್ಲೂಕಿನ ಚೇತೂರು ಪಾಳ್ಯದ ಗೋವಿಂದಪ್ಪ, ತುಮಕೂರಿನ ಶೆಟ್ಟಿಹಳ್ಳಿಯ ಮಾನಸ, ಶಿರಾ, ಚಿಕ್ಕನಾಯಕನಹಳ್ಳಿಯಿಂದ ಬಂದಿರುವ ಮಕ್ಕಳಲ್ಲೂ ಇಂಥದೇ ಬದಲಾವಣೆ. ಸದ್ಯ, ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಬಂದಿರುವ 50 ಮಕ್ಕಳು ಶಾಲೆಯಲ್ಲಿದ್ದಾರೆ. ಇಲ್ಲಿವರೆಗೂ 250 ಮಕ್ಕಳು ಶಾಲೆಯಲ್ಲಿ ತರಬೇತಿ ಪಡೆದು ಮನೆಗಳಿಗೆ ಹಿಂತಿರುಗಿದ್ದಾರೆ. ಸಾಮಾನ್ಯ ಮಕ್ಕಳಂತೆ ಈ ಮಕ್ಕಳಿಗೆ ಶಿಕ್ಷಣ ಕೊಡಲು ಸಾಧ್ಯವಿಲ್ಲ. ದಿನ ನಿತ್ಯದ ಕರ್ತವ್ಯ ಮಾಡಿಕೊಳ್ಳಲು, ರಚ್ಚೆ ಹಿಡಿಯದಂತೆ ತಮ್ಮಷ್ಟಕ್ಕೆ ತಾವೇ ಆಡಿಕೊಳ್ಳಲು, ಬಟ್ಟೆ ಹಾಕಿಕೊಳ್ಳುವ, ಹಲ್ಲುಜ್ಜಿ ಸ್ನಾನ ಮಾಡುವುದು ಹಾಗೂ ಯಾರ ನೆರವು ಇಲ್ಲದೇ ಬಡಿಸಿದ್ದನ್ನು ತಾವೇ ಊಟ ಮಾಡುವುದನ್ನು ಅತ್ಯಂತ ಕಷ್ಟದಿಂದ ಈ ಮಕ್ಕಳಿಗೆ ಇಲ್ಲಿ ಕಲಿಸಲಾಗುತ್ತದೆ.ಹೆತ್ತ ತಂದೆ-ತಾಯಿಗಳಿಗೂ ವಿಶೇಷ ಮಕ್ಕಳನ್ನು ಸಾಕುವುದು ಕೂಡ ಕಷ್ಟದ ಕೆಲಸ. ಹೇಳುವುದನ್ನು ಕಲಿಯುವಷ್ಟು, ನೆನಪಿನಲ್ಲಿಟ್ಟು ಕೊಳ್ಳುವಷ್ಟು ಈ ಮಕ್ಕಳಲ್ಲಿ ಬುದ್ದಿ ಬೆಳೆದಿರುವುದಿಲ್ಲ. ಹೀಗಾಗಿ ಈ ಮಕ್ಕಳಿಗೆ ವಿಶೇಷ ತರಬೇತಿ ಪಡೆದ, ತುಂಬಾ ಸಂಯಮ ಹೊಂದಿರುವ, ಸೇವಾ ಮನೋಭಾವದ ಶಿಕ್ಷಕರು ಮಾತ್ರವೇ ಒಂದಿಷ್ಟು ತರಬೇತಿ ಕೊಡಲು ಸಾಧ್ಯ. ಇಂಥ ತರಬೇತಿ ಕೆಲಸದಲ್ಲಿ ಸ್ಪಂದನಾ ಶಾಲೆ ತೊಡಗಿಕೊಂಡಿದ್ದು. ಮಕ್ಕಳಿಗೆ ತರಬೇತಿ ಜೊತೆಗೆ ಉಚಿತ ಊಟ, ವಸತಿ ವ್ಯವಸ್ಥೆಯೂ ಇದೆ.ತುಮಕೂರು ಜಿಲ್ಲೆಯಲ್ಲಿ ಸುಮಾರು 10 ಸಾವಿರ ವಿಶೇಷ ಮಕ್ಕಳಿರಬಹುದು ಎಂದು ಸಮೀಕ್ಷೆಯೊಂದು ಹೇಳುತ್ತದೆ. ಆದರೆ ಇಡೀ ಜಿಲ್ಲೆಯಲ್ಲಿ ಇಂಥ ಮಕ್ಕಳಿಗಾಗಿ ಸ್ಪಂದನಾ ಶಾಲೆಯೊಂದೆ ಇರುವುದು. ಗ್ರಾಮೀಣ ಪ್ರದೇಶಗಳಿಗೆ ತೆರಳಿ ಜಾಗೃತಿ ಮೂಡಿಸುವ ಮೂಲಕ ಇಂಥ ಮಕ್ಕಳನ್ನು ಶಾಲೆಗೆ ಸೇರಿಸಿಕೊಂಡು ತರಬೇತಿ ಕೊಡುವ ಕೆಲಸವನ್ನು ಈ ಶಾಲೆ ಕಳೆದ ಹತ್ತು ವರ್ಷಗಳಿಂದ ಮಾಡುತ್ತಿದೆ.‘ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆ ಈ ಮಕ್ಕಳ ಕುರಿತು ತಾರತಮ್ಯದ ಕೆಲಸ ಮಾಡುತ್ತಿದೆ. ಇಂಥ ಮಕ್ಕಳಿಗಾಗಿ ಒಂದು ಕ್ರೀಡಾ ಚಟುವಟಿಕೆಯನ್ನು ಇಲ್ಲಿವರೆಗೂ ಹಮ್ಮಿಕೊಳ್ಳುವ ಕೆಲಸವನ್ನೇ ಮಾಡಿಲ್ಲ. ಇಂಥ ಮಕ್ಕಳ ಶಿಕ್ಷಣ, ತರಬೇತಿ ಕುರಿತು ಏನೊಂದು ಮಾಹಿತಿಯೇ ಇಲ್ಲ’ ಎಂದು ಪೋಷಕರೊಬ್ಬರು ‘ಪ್ರಜಾವಾಣಿ’ಯೊಂದಿಗೆ ಅಸಮಾಧಾನ ತೋಡಿಕೊಂಡರು.‘ಮೊದಲಿಗೆ ಇಂಥ ಶಾಲೆಗಳಿಗೆ ತೆರಳಿ ಮಕ್ಕಳಿಗೆ ಹಣ್ಣು, ಸಿಹಿ ತಿಂಡಿ ವಿತರಿಸುವ ಕೆಲಸ ಮಾಡುತ್ತಿದ್ದೆ. ಕೊನೆಗೆ ಹೈದರಾಬಾದ್‌ನಲ್ಲಿ ವಿಶೇಷ ಮಕ್ಕಳ ಶಿಕ್ಷಣ ತರಬೇತಿ ಕುರಿತ ಕೋರ್ಸ್ ಮುಗಿಸಿ ಇಲ್ಲೊಂದು ಶಾಲೆ ತೆರೆದೆ. ನಮ್ಮದೇ ಸ್ವಂತ ಕಟ್ಟಡ ಇದ್ದುದ್ದರಿಂದ ಅಷ್ಟೇನು ಕಷ್ಟವಾಗಿಲ್ಲ’ ಎನ್ನುತ್ತಾರೆ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಗಂಗಾಂಬಿಕಾ.ಸ್ವಲ್ಪ ಕಡಿಮೆ ಸಮಸ್ಯೆಯಿರುವ ಮಕ್ಕಳನ್ನು ಹೇಗಾದರೂ ಸಂಭಾಳಿಸಬಹುದು. ಆದರೆ ತೀವ್ರ ರೀತಿಯ ಸಮಸ್ಯೆಯಿಂದ ಬಳಲುವ ಮಕ್ಕಳನ್ನು ಸಂಭಾಳಿಸಿ ಅವರಿಗೆ ಹೇಳಿಕೊಡುವುದು ಕಷ್ಟದ ಕೆಲಸ ಎನ್ನುತ್ತಾರೆ ಶಾಲಾ ಶಿಕ್ಷಕಿ ಸುಜಾತಾ. ‘ಮಕ್ಕಳು ಅವರೇ ಸ್ವತಃ ಊಟ ಮಾಡುವುದನ್ನು ಕಲಿಸಲು ಕನಿಷ್ಠ ಆರು ತಿಂಗಳಾದರೂ ಬೇಕು’ ಎನ್ನುತ್ತಾರೆ ಅವರು.

ಸಂಪರ್ಕ ಸಂಖ್ಯೆ:  9980082974.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry