ಮಂಗಳವಾರ, ನವೆಂಬರ್ 19, 2019
26 °C

ಅಶೋಕ್ ವಿರುದ್ಧ ದೂರು ದಾಖಲು

Published:
Updated:

ಬೆಂಗಳೂರು: ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆರ್.ಅಶೋಕ ಅವರು ನಾಮಪತ್ರದ ಜೊತೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ವಾಯುಪಡೆಯ ನಿವೃತ್ತ ವಿಂಗ್ ಕಮಾಂಡರ್ ಜಿ.ಬಿ.ಅತ್ರಿ ಮಂಗಳವಾರ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.`ಅಶೋಕ ಸಲ್ಲಿಸಿರುವ ಪ್ರಮಾಣಪತ್ರದ ಪ್ರತಿಯನ್ನು ಚುನಾವಣಾಧಿಕಾರಿಗಳಿಂದ ನಾನು ಪಡೆದುಕೊಂಡಿದ್ದೆ. ಶಾಸಕರಾಗಿದ್ದ ಅವಧಿಯಲ್ಲಿ ಅವರು ಲೋಕಾಯುಕ್ತರಿಗೆ ಸಲ್ಲಿಸಿದ್ದ ಆಸ್ತಿ ವಿವರಗಳ ಪ್ರಮಾಣಪತ್ರವನ್ನೂ ಪಡೆದುಕೊಂಡು ಎರಡನ್ನೂ ಪರಿಶೀಲಿಸಿದ್ದೇನೆ.ಕೆಲವು ಸ್ಥಿರಾಸ್ತಿಗಳು, ಕೆಲವು ವ್ಯಕ್ತಿಗಳಿಗೆ ನೀಡಿರುವ ಮುಂಗಡ, ಖಾಸಗಿ ಕಂಪೆನಿಗಳಲ್ಲಿ ಮಾಡಿರುವ ಹೂಡಿಕೆ ಮತ್ತು ಕೆಲವು ವ್ಯಕ್ತಿಗಳಿಂದ ಪಡೆದಿರುವ ಸಾಲದ ವಿವರಗಳನ್ನು ಅವರು ನಾಮಪತ್ರ ಸಲ್ಲಿಕೆ ವೇಳೆ ಬಹಿರಂಗಪಡಿಸಿಲ್ಲ' ಎಂದು ದೂರಿನಲ್ಲಿ ಆರೋಪಿಸಿದ್ದಾರೆ.ಅಶೋಕ 2007, 2008 ಮತ್ತು 2011ರಲ್ಲಿ ಲೋಕಾಯುಕ್ತರಿಗೆ ಸಲ್ಲಿಸಿರುವ ಆಸ್ತಿ ವಿವರಗಳಿಗೂ ಈ ಬಾರಿ ಚುನಾವಣಾಧಿಕಾರಿಗೆ ಸಲ್ಲಿಸಿರುವ ಪ್ರಮಾಣಪತ್ರಕ್ಕೂ ವ್ಯತ್ಯಾಸವಿದೆ. ಈ ಕುರಿತು ಪರಿಶೀಲನೆ ನಡೆಸಿ ತಕ್ಷಣವೇ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)