ಭಾನುವಾರ, ನವೆಂಬರ್ 17, 2019
20 °C

ಅಶೋಕ ಖೇಣಿ ನಾಮಪತ್ರ ಕ್ರಮಬದ್ಧ

Published:
Updated:

ಬೀದರ್: ಕರ್ನಾಟಕ ಮಕ್ಕಳ ಪಕ್ಷದ ಅಭ್ಯರ್ಥಿ, ನೈಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಖೇಣಿ ಅವರು ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಸ್ಪರ್ಧಿಸಿ ಸಲ್ಲಿಸಿದ್ದ ನಾಮಪತ್ರ ಕ್ರಮಬದ್ಧ ಎಂದು ಚುನಾವಣಾಧಿಕಾರಿ ಘೋಷಿಸಿದ್ದಾರೆ.ಹೀಗಾಗಿ ಅವರ ನಾಮಪತ್ರದ ಕ್ರಮಬದ್ಧತೆ ಕುರಿತು ಇಬ್ಬರು ಪ್ರತಿಸ್ಪರ್ಧಿ ಅಭ್ಯರ್ಥಿಗಳು ತಕರಾರು ಅರ್ಜಿಗೆ ಸೋಲಾಗಿದೆ. ಖೇಣಿ ಪರ ವಕೀಲರ ತಂಡ ಮತ್ತು ವಿರುದ್ಧವಾಗಿ ಪಕ್ಷೇತರ ಅಭ್ಯರ್ಥಿ ಟಿ.ಜೆ.ಅಬ್ರಹಾಂ ಸ್ವತಃ ಶುಕ್ರವಾರ ಸುಮಾರು ಎರಡೂವರೆ ಗಂಟೆ ವಾದ ಮಂಡಿಸಿದರು. ವಾದ- ಪ್ರತಿವಾದ ಆಲಿಸಿದ ಚುನಾವಣಾಧಿಕಾರಿ ನೀಲಕಂಠ ಅವರು, `ಇಬ್ಬರೂ ಅಭ್ಯರ್ಥಿಗಳು ಖೇಣಿ ಅವರ ನಾಮಪತ್ರ ಕುರಿತು ಸಲ್ಲಿಸಿರುವ ತಕರಾರುಗಳು ಅಂಗೀಕರಿಸಲು ಅರ್ಹವಲ್ಲ. ಅವುಗಳನ್ನು ತಿರಸ್ಕರಿಸಲಾಗಿದೆ' ಎಂದು ಘೋಷಿಸಿದರು. ಖೇಣಿ ಪರ ವಕೀಲರ ತಂಡದ ನೇತೃತ್ವವನ್ನು ಹಿರಿಯ ವಕೀಲ ಎಸ್.ಎಂ. ಚಂದ್ರಶೇಖರ್ ವಹಿಸಿದ್ದರು.ಪಕ್ಷೇತರ ಅಭ್ಯರ್ಥಿ ಟಿ.ಜೆ.ಅಬ್ರಹಾಂ, `ಖೇಣಿ ಅವರು ಭಾರತೀಯ ಪೌರರಲ್ಲ. ಅವರು ಅಮೆರಿಕ ಪೌರರಾಗಿದ್ದು, ಅಲ್ಲಿ ವಹಿವಾಟು ಹೊಂದಿದ್ದಾರೆ. ಹೀಗಾಗಿ, ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಅರ್ಹರಲ್ಲ' ಎಂದು ತಕರಾರು ಸಲ್ಲಿಸಿದ್ದು, ಪೂರಕವಾಗಿ ಖೇಣಿ ಅವರ ಅಮೆರಿಕದಲ್ಲಿನ ವಹಿವಾಟು ಕುರಿತ ಅಂಶಗಳನ್ನು ಉಲ್ಲೇಖಿಸಿದ್ದರು.ಜೆಡಿಎಸ್ ಅಭ್ಯರ್ಥಿ ಬಂಡೆಪ್ಪ ಕಾಶೆಂಪುರ ತಮ್ಮ ತಕರಾರು ಅರ್ಜಿಯಲ್ಲಿ, `ಖೇಣಿ ಅವರು ನೈಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗ್ದ್ದಿದಾರೆ. ಈ ಸಂಸ್ಥೆ ಸರ್ಕಾರದ ಯೋಜನೆಗಳ ಗುತ್ತಿಗೆ ಪಡೆಯುವ ಕಾರಣ ಇದು ಲಾಭದಾಯಕ ಹುದ್ದೆಯ ವ್ಯಾಪ್ತಿಗೆ ಬರಲಿದೆ' ಎಂದು ವಾದ ಮಂಡಿಸಿದ್ದರು.ಆದರೆ, `ಖೇಣಿ ಅವರು ಭಾರತೀಯ ಪೌರರೇ ಆಗಿದ್ದಾರೆ' ಎಂದು ಪ್ರತಿಪಾದಿಸಿದ ವಕೀಲರ ತಂಡ, ಪೂರಕವಾಗಿ 5-3-2022ರ ವರೆಗೂ ಊರ್ಜಿತವಿರುವ ಅವರ ಭಾರತೀಯ ಪಾಸ್‌ಪೋರ್ಟ್, ಆದಾಯ ತೆರಿಗೆ ಇಲಾಖೆ ನೀಡಿರುವ ಪ್ಯಾನ್ ಕಾರ್ಡ್, ಮತಪಟ್ಟಿಯಲ್ಲಿಯೂ ಅವರ ಹೆಸರು ಸೇರ್ಪಡೆ ಆಗಿರುವುದರ ದಾಖಲೆಯನ್ನು ಹಾಜರುಪಡಿಸಿತು.ಲಾಭದಾಯಕ ಹುದ್ದೆ ಕುರಿತು ಆಕ್ಷೇಪ ಸಲ್ಲಿಸಿದ್ದ ಬಂಡೆಪ್ಪ ಕಾಶೆಂಪುರ ಅವರು ವಿಚಾರಣೆ ಸಂದರ್ಭದಲ್ಲಿ ಗೈರುಹಾಜರಾಗಿದ್ದರು. ಅವರು ನೈಸ್ ಸಂಸ್ಥೆ ಸರ್ಕಾರದಿಂದ ರಸ್ತೆ, ಸೇತುವೆ, ಗೃಹ ವಸತಿ ನಿರ್ಮಿಸಲು ಗುತ್ತಿಗೆ ಪಡೆಯಲಿದೆ. ನಿರ್ಮಾಣ ಮಾಡಿದ ರಸ್ತೆ ಬಳಕೆಗೆ ಶುಲ್ಕ ಪಡೆಯಲಿದೆ. ಖೇಣಿ ಈ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು. ಹೀಗಾಗಿ, ಇದು ಲಾಭದಾಯಕ ಹುದ್ದೆ ಆಗಲಿದೆ' ಎಂದು ಪ್ರತಿಪಾದಿಸಿ ನೈಸ್ ಸಂಸ್ಥೆ ಕುರಿತ ದಾಖಲೆ ನೀಡಿದ್ದರು.ಈ ವಾದವನ್ನು ಖೇಣಿ ಪರ ವಕೀಲರ ತಂಡ ವಿರೋಧಿಸಿತು. ಲಾಭದಾಯಕ ಹುದ್ದೆ ವ್ಯಾಖ್ಯಾನವನ್ನು ಅರಿಯಲು ಶಿವಮೂರ್ತಿ ಸ್ವಾಮಿ ಇನಾಂದಾರ್ ವಿರುದ್ಧ ಅಗಡಿ ಸಂಗಣ್ಣ ಆನಂದಪ್ಪ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆದೇಶದಲ್ಲಿ ಉಲ್ಲೇಖಿಸಿದ್ದ ಅಂಶಗಳನ್ನು ಪರಾಮರ್ಶಿಸಲಾಯಿತು.ಇಡೀ ದಿನದ ಕುತೂಹಲ

ಬೆಳಿಗ್ಗೆ 11 ರಿಂದ ಮಧ್ಯಾಹ್ನ1 ಗಂಟೆಯವರೆಗೂ ವಾದ- ಪ್ರತಿವಾದ ನಡೆಯಿತು. ಬಳಿಕ ಚುನಾವಣಾಧಿಕಾರಿಗಳು ವಿಚಾರಣೆಯನ್ನು ಸಂಜೆ ನಾಲ್ಕಕ್ಕೆ ಮುಂದೂಡಿ, ತೀರ್ಪು ಪ್ರಕಟಣೆ ಕಾದಿರಿಸಿದರು. ಕಚೇರಿಯ ಹೊರಗಡೆ ಖೇಣಿ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದರು.

ನಾಲ್ಕು ಗಂಟೆಗೆ ಮತ್ತೆ ಸೇರಿದಾಗ ಖೇಣಿ ಮತ್ತು ಬೆಂಬಲಿಗರು ಹಾಜರ್ದ್ದಿದರು. ತಕರಾರು ಎತ್ತಿ ಸ್ವತಃ ವಾದವನ್ನು ಮಂಡಿಸಿದ್ದ ಪಕ್ಷೇತರ ಅಭ್ಯರ್ಥಿ ಅಬ್ರಹಾಂ ಬಂದಿರಲಿಲ್ಲ. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಇದ್ದರು. ಆರು ಸಾಲಿನ ಆದೇಶ, ಪೂರಕವಾಗಿ ಐದು ಪುಟಗಳ ವಿವರಣೆಯೊಂದಿಗೆ ಆದೇಶ ಪ್ರಕಟಿಸಿದ ಚುನಾವಣಾಧಿಕಾರಿಗಳು `ಖೇಣಿ ಅವರ ನಾಮಪತ್ರ ಅಂಗೀಕರಿಸಲಾಗಿದೆ, ಆಕ್ಷೇಪಗಳನ್ನು ತಿರಸ್ಕರಿಸಲಾಗಿದೆ' ಎಂದು ಹೇಳಿದಾಗ ಹೊರಗಡೆ ಖೇಣಿ ಅಭಿಮಾನಿಗಳ ಸಂಭ್ರಮ ಮೇರೆ ಮೀರಿತು.

ಪ್ರತಿಕ್ರಿಯಿಸಿ (+)