ಅಶ್ಲೀಲ ಎಂಎಂಎಸ್, ಇ-ಮೇಲ್‌ಗೆ ಜೈಲು

7

ಅಶ್ಲೀಲ ಎಂಎಂಎಸ್, ಇ-ಮೇಲ್‌ಗೆ ಜೈಲು

Published:
Updated:

ನವದೆಹಲಿ (ಪಿಟಿಐ): ಇನ್ನು ಮುಂದೆ ಅಶ್ಲೀಲ ಚಿತ್ರ, ದೃಶ್ಯಗಳನ್ನು ಬಹು ಮಾಧ್ಯಮ ಸೇವೆ (ಎಂಎಂಎಸ್) ಇಲ್ಲವೇ ಇ- ಮೇಲ್ ಮಾಡಿದರೆ ಜೋಕೆ! ಮೂರು ವರ್ಷ ಜೈಲುಪಾಲಾಗಬೇಕಾದೀತು. ಜೊತೆಗೆ ದೊಡ್ಡ ಪ್ರಮಾಣದಲ್ಲಿ ದಂಡವನ್ನೂ ತೆರಬೇಕಾದೀತು.ಪ್ರಧಾನಿ ಮನಮೋಹನ್ ಸಿಂಗ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಕೇಂದ್ರ ಸಂಪುಟ ಸಭೆ ಇಂಥ ಕಠಿಣ ಕ್ರಮ ಜಾರಿಗೆ ತರಲು ಮುಂದಾಗಿದೆ. `ಮಹಿಳೆಯರನ್ನು ಅಸಭ್ಯವಾಗಿ ಬಿಂಬಿಸುವುದನ್ನು ನಿರ್ಬಂಧಿಸುವ ಕಾಯ್ದೆ- 1986~ಕ್ಕೆ (ಐಆರ್‌ಡಬ್ಲ್ಯುಎ) ತಿದ್ದುಪಡಿ ತರಲು ಒಪ್ಪಿಗೆ ನೀಡಿದೆ.ಈಗ ಜಾರಿಯಲ್ಲಿರುವ ಕಾನೂನು ಮುದ್ರಣ ಮಾಧ್ಯಮಕ್ಕೆ ಮಾತ್ರ ಅನ್ವಯವಾಗುತ್ತಿತ್ತು. ಇದನ್ನು ಎಲ್ಲಾ ಬಗೆಯ ಮಾಧ್ಯಮಗಳಿಗೂ ವಿಸ್ತರಿಸಲಾಗುವುದು.`ದೃಶ್ಯ- ಶ್ರಾವ್ಯ ಮಾಧ್ಯಮ ಮತ್ತು ಯಾವುದೇ ವಿಧದ ವಿದ್ಯುನ್ಮಾನ ರೂಪದಲ್ಲಿ ಇರುವ ದಾಖಲೆಗೆ ಸಂಬಂಧಿಸಿದ ಕಾನೂನನ್ನು ಮತ್ತಷ್ಟು ಬಿಗಿಗೊಳಿಸಿ ಅದರ ವ್ಯಾಪ್ತಿಯನ್ನು ವಿಸ್ತರಿಸುವ ಉದ್ದೇಶ ಈ ತಿದ್ದುಪಡಿಗೆ ಇದೆ~ ಎಂದು ಕೇಂದ್ರ ಸರ್ಕಾರ ತಿಳಿಸಿದೆ.ಅಶ್ಲೀಲ ಎಂಎಂಎಸ್ ಇಲ್ಲವೇ ಇ-ಮೇಲ್ ರವಾನಿಸಿದವರಿಗೆ ಉದ್ದೇಶಿತ ತಿದ್ದುಪಡಿಯಲ್ಲಿ ದಂಡದ ಪ್ರಮಾಣವು ಅಧಿಕವಾಗಿಯೇ ಇದೆ. ಮೊದಲ ಸಲದ ತಪ್ಪಿಗೆ ಕನಿಷ್ಠ ರೂ 50,000 ದಿಂದ ಒಂದು ಲಕ್ಷದ ವರೆಗೆ ದಂಡ ವಿಧಿಸಲು ಅವಕಾಶ ಇದೆ.ಎರಡನೇ ಸಲ ತಪ್ಪು ಮಾಡಿದವರಿಗೆ ಜೈಲು ಶಿಕ್ಷೆಯನ್ನು ಏಳು ವರ್ಷದವರೆಗೆ ವಿಸ್ತರಿಸಬಹುದು ಮತ್ತು ಒಂದು ಲಕ್ಷದಿಂದ ಐದು ಲಕ್ಷ ರೂಪಾಯಿವರೆಗೂ ದಂಡ ವಿಧಿಸಬಹುದು.ಜಾರಿಯಲ್ಲಿರುವ ಕಾನೂನಿನಲ್ಲಿ ಇಂತಹ ಕೃತ್ಯಕ್ಕೆ ಕೇವಲ ರೂ 2000 ದಂಡ ವಿಧಿಸಲು ಅವಕಾಶ ಇತ್ತು.

`ಐಆರ್‌ಡಬ್ಲ್ಯುಎ ಕಾಯ್ದೆ ರಚನೆ ಸಂದರ್ಭದಲ್ಲಿ ಮಹಿಳೆಯರನ್ನು ಜಾಹೀರಾತು, ಪ್ರಕಾಶನ, ಬರಹ, ಪೇಂಟಿಂಗ್ ಅಥವಾ ಇನ್ನಾವುದೇ ವಿಧದಲ್ಲಿ ಅಸಭ್ಯವಾಗಿ ಬಿಂಬಿಸುವುದನ್ನು ನಿರ್ಬಂಧಿಸಲಾಗಿತ್ತು.

 

ಆದರೆ, ತಂತ್ರಜ್ಞಾನ ಕ್ಷೇತ್ರದಲ್ಲಿ ಆದ ಕ್ರಾಂತಿಯಿಂದ ಸಂವಹನವು ಅನೇಕ ಮಜಲುಗಳಲ್ಲಿ ತೆರೆದುಕೊಂಡಿತು. ಅಂತರ್‌ಜಾಲ, ಉಪಗ್ರಹ ಆಧಾರಿತ  ಸಂವಹನ, ಮಲ್ಟಿ ಮೀಡಿಯಾ ಮೆಸೇಜ್, ಕೇಬಲ್ ಟಿವಿ ಮುಂತಾದವುಗಳ ಮೂಲಕವೂ ಸಾಧ್ಯವಾಯಿತು. ಆದ್ದರಿಂದ ಐಆರ್‌ಡಬ್ಲ್ಯುಎ ಕಾಯ್ದೆಯನ್ನು ಮರು ವಿಶ್ಲೇಷಿಸಿ ಅದರ ವ್ಯಾಪ್ತಿಯನ್ನು ಎಲ್ಲಾ ಮಾಧ್ಯಮಗಳಿಗೂ ವಿಸ್ತರಿಸುವುದು ಅತ್ಯಗತ್ಯವಾಯಿತು~ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry