ಶುಕ್ರವಾರ, ಮೇ 14, 2021
21 °C

ಅಶ್ವಾರೂಢ ಕೆಂಪೇಗೌಡ ಪ್ರತಿಮೆ ಸ್ಥಾಪನೆ: ಸಿ.ಎಂ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ವಿಧಾನಸೌಧ, ವಿಕಾಸಸೌಧದ ನಡುವೆ ಸೂಕ್ತ ಸ್ಥಳ ಗುರುತಿಸಿ ಮುಂದಿನ ದಿನಗಳಲ್ಲಿ ಅಶ್ವಾರೂಢ ಕೆಂಪೇಗೌಡ ಪ್ರತಿಮೆ ಪ್ರತಿಷ್ಠಾಪಿಸಲಾಗುವುದು~ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಘೋಷಿಸಿದರು.ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಶ್ರಯದಲ್ಲಿ ಪಾಲಿಕೆಯ ಡಾ. ರಾಜ್ ಕುಮಾರ್ ಗಾಜಿನ ಮನೆಯಲ್ಲಿ ಶುಕ್ರವಾರ ಸಂಜೆ ನಡೆದ ಕೆಂಪೇಗೌಡ ದಿನಾಚರಣೆ ಸಮಾರಂಭದಲ್ಲಿ 50 ಮಂದಿಗೆ ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡುತ್ತಿದ್ದರು.`ಕೆಂಪೇಗೌಡರ 500 ವರ್ಷ ಆಚರಣೆಗೆ ಗೃಹ ಸಚಿವ ಆರ್. ಅಶೋಕ್ ನೇತೃತ್ವದಲ್ಲಿ ಸಚಿವರ ಸಮಿತಿ ರಚಿಸಲಾಗಿದ್ದು, 500ನೇ ದಿನಾಚರಣೆಯನ್ನು ಅಭೂತಪೂರ್ವವಾಗಿ ಹಮ್ಮಿಕೊಳ್ಳಲಾಗುವುದು~ ಎಂದರು. 

ಇಂದು ರಜೆ
`ಕೆಂಪೇಗೌಡ ದಿನಾಚರಣೆ ಹಿನ್ನೆಲೆಯಲ್ಲಿ ಆರೋಗ್ಯ, ಆಸ್ಪತ್ರೆ ಹಾಗೂ ಮಾರುಕಟ್ಟೆ ವಿಭಾಗ ಹೊರತುಪಡಿಸಿ ಬಿಬಿಎಂಪಿಗೆ ಶನಿವಾರ ರಜೆ ಘೋಷಿಸಲಾಗಿದೆ~ ಎಂದು ಸಮಾರಂಭದ ಕೊನೆಯಲ್ಲಿ ಘೋಷಿಸಲಾಯಿತು.

`ನಗರದ ಕೆಂಪಾಂಬುದಿ ಹಾಗೂ ಯಡಿಯೂರು ಕೆರೆಯನ್ನು ವರ್ಷದ ಅಂತ್ಯದೊಳಗೆ ಅಭಿವೃದ್ಧಿಪಡಿಸಲಾಗುವುದು. ನಗರದ ನಾಗರಿಕರು ಶುಚಿತ್ವ ಕಾಪಾಡಲು ಹೆಚ್ಚಿನ ಗಮನ ನೀಡಬೇಕು. ಪಾಲಿಕೆ ಶೇ 30ರಷ್ಟು ಶುಚಿತ್ವ ಕೆಲಸ ಮಾಡಬಹುದು. ಶೇ 70ರಷ್ಟು ಜವಾಬ್ದಾರಿ ನಾಗರಿಕರದ್ದು. ಸಮರೋಪಾದಿಯಲ್ಲಿ ಈ ಕೆಲಸ ಆಗಬೇಕು.ಬಿಬಿಎಂಪಿಯ ಶುಚಿತ್ವ ಯೋಜನೆಗಳಿಗೆ ರಾಜ್ಯ ಸರ್ಕಾರ ಅಗತ್ಯ ನೆರವು ನೀಡಲಿದೆ~ ಎಂದು ಭರವಸೆ ನೀಡಿದರು.

`ಬೆಂಗಳೂರು ಸುತ್ತಮುತ್ತ ನೀರಿಗಾಗಿ ಹಾಹಾಕಾರ ಉಂಟಾಗಿದೆ. ರಾಜ್ಯ ಸರ್ಕಾರ ನೀರಿನ ಸಮಸ್ಯೆ ಬಗೆಹರಿಸಲು ರೂ 100 ಕೋಟಿ ಬಿಡುಗಡೆ ಮಾಡಿದೆ. 20-30 ವರ್ಷ ಹಿಂದೆ ಆಡಳಿತ ನಡೆಸಿದವರು ನಗರದ ಕೆರೆಗಳ ಅಭಿವೃದ್ಧಿಗೆ ಗಮನ ಹರಿಸಿದ್ದರೆ ಈಗ ಸಮಸ್ಯೆ ಉದ್ಭವವಾಗುತ್ತಿರಲಿಲ್ಲ~ ಎಂದು ಅವರು ಪ್ರತಿಪಾದಿಸಿದರು.ಇದಕ್ಕೂ ಮುನ್ನ ಗೃಹ ಸಚಿವ ಆರ್. ಅಶೋಕ್ ಮಾತನಾಡಿ, `ನಗರದ ಸಮಗ್ರ ಅಭಿವೃದ್ಧಿಗೆ ಮುಖ್ಯಮಂತ್ರಿ ಅವರು ಶಾಶ್ವತ ಯೋಜನೆಗಳ ಬಗ್ಗೆ ಘೋಷಣೆ ಮಾಡಬೇಕು~ ಎಂದು ವಿನಂತಿಸಿದರು.ಶಾಸಕ ರೋಷನ್ ಬೇಗ್ ಅಧ್ಯಕ್ಷತೆ ವಹಿಸಿ, `ಶ್ರೀಮಂತರ ಊಟ- ವಸತಿಗೆ ರಾತ್ರಿ ಹೊತ್ತು ಪಂಚತಾರಾ ಹೋಟೆಲ್‌ಗಳು ತೆರೆದಿರುತ್ತವೆ. ಬಡ ಹಾಗೂ ಮಧ್ಯಮ ವರ್ಗದವರು ಪರದಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಗರದ 10 ಕಡೆ ಫುಡ್ ಕೋರ್ಟ್ ಆರಂಭಿಸಬೇಕು~ ಎಂದು ಆಗ್ರಹಿಸಿದರು.ಬಿಬಿಎಂಪಿ ಆಯುಕ್ತ ಎಂ.ಕೆ. ಶಂಕರಲಿಂಗೇಗೌಡ ಮಾತನಾಡಿ, `ನಗರದ ಜನಸಂಖ್ಯೆ 85 ಲಕ್ಷ. ಪ್ರತಿನಿತ್ಯ ಓಡಾಡುವ ವಾಹನಗಳು 40 ಲಕ್ಷ. ದಿನಕ್ಕೆ 5 ಸಾವಿರ  ಟನ್ ತ್ಯಾಜ್ಯ ಸಂಗ್ರಹವಾಗುತ್ತಿದೆ. 3,000 ಮೆಗಾವಾಟ್ ವಿದ್ಯುತ್ ಬಳಕೆಯಾಗುತ್ತಿದೆ~ ಎಂದರು.`ಆದರೆ ರಾಜ್ಯದ ಆದಾಯಕ್ಕೆ ನಗರದ ಕೊಡುಗೆ ಶೇ 40. ರಾಜ್ಯ ಸರ್ಕಾರ ಈ ಬಾರಿ ಪಾಲಿಕೆಗೆ ರೂ 1,000 ಕೋಟಿ ವಿಶೇಷ ಅನುದಾನ ನೀಡಿದೆ. ಇದರಲ್ಲಿ ರೂ 150 ಕೋಟಿ ಅನುದಾನವನ್ನು ಈಗಾಗಲೇ ಬಿಡುಗಡೆ ಮಾಡಿದೆ~ ಎಂದರು.ಶಾಸಕರಾದ ಸಿ.ಎನ್. ಅಶ್ವತ್ಥನಾರಾಯಣ, ರವಿ ಸುಬ್ರಹ್ಮಣ್ಯ, ವಿಜಯ ಕುಮಾರ್, ವಿಧಾನ ಪರಿಷತ್ ಸದಸ್ಯ ಅಶ್ವತ್ಥನಾರಾಯಣ, ಮೇಯರ್ ಶಾರದಮ್ಮ, ಮೈಸೂರು ಮೇಯರ್ ಪುಷ್ಪಲತಾ ಟಿ.ಜಿ. ಚಿಕ್ಕಣ್ಣ, ಬಿಬಿಎಂಪಿ ಉಪಮೇಯರ್ ಎಸ್. ಹರೀಶ್, ಪಾಲಿಕೆ ಆಡಳಿತ ಪಕ್ಷದ ನಾಯಕ ನಂಜುಂಡಪ್ಪ, ವಿರೋಧ ಪಕ್ಷದ ನಾಯಕ ಉದಯಶಂಕರ್, ಜೆಡಿಎಸ್ ನಾಯಕ ಪದ್ಮನಾಭ ರೆಡ್ಡಿ, ಮಾಜಿ ಮೇಯರ್ ನಟರಾಜ್, ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಕೃಷ್ಣಪ್ಪ, ಮೋಹನ್, ಪ್ರಸಾದ್, ಸ್ಥಳೀಯ ಪಾಲಿಕೆ ಸದಸ್ಯ ಎಂ. ಗೋಪಿ ಮತ್ತಿತರರು ಉಪಸ್ಥಿತರಿದ್ದರು.

ವಿದ್ಯುತ್ ವ್ಯತ್ಯಯ

  ಮುಖ್ಯಮಂತ್ರಿ ಅವರು ಮಾತನಾಡುವ ವೇಳೆಗೆ ವಿದ್ಯುತ್ ವ್ಯತ್ಯಯ ಉಂಟಾಯಿತು. `ನಗರದಲ್ಲಿ ಮಳೆ ಬಂದಿರುವುದು ಶುಭ ಸೂಚನೆ. ವಿದ್ಯುತ್ ಹೋದುದು ಅಶುಭ ಎಂದು ಭಾವಿಸಬೇಡಿ~ ಎಂದು ಮುಖ್ಯಮಂತ್ರಿ  ಸಮಜಾಯಿಷಿ ನೀಡಿದರು.

 

ಪ್ರಶಸ್ತಿ ಪಟ್ಟಿಗೆ ಐವರ ಸೇರ್ಪಡೆ

ಕೆಂಪೇಗೌಡ ಪ್ರಶಸ್ತಿ ಪ್ರದಾನದ ವೇಳೆಗೆ ಪ್ರಶಸ್ತಿ ಪುರಸ್ಕೃತರ ಸಂಖ್ಯೆ ಐವತ್ತಕ್ಕೆ ಏರಿತ್ತು. ಬಿಬಿಎಂಪಿ ಮಂಗಳವಾರ 45 ಮಂದಿಯ ಹೆಸರನ್ನು ಪ್ರಕಟಿಸಿತ್ತು. ಸಮಾಜಸೇವೆಗೆ ಪಿ. ಶ್ರೀನಿವಾಸಲು ಭೀಮಜ್ಯೋತಿ ಸೀನು, ಕೆ. ನಾರಾಯಣ್, ಇನ್ಸ್‌ಪೆಕ್ಟರ್ ಬಾಳೇಗೌಡ, ಪತ್ರಕರ್ತ ಕೆ.ಎಂ. ಶಿವರಾಜು, ಸಂಗೀತ/ ಸಾಂಸ್ಕೃತಿಕ ಸಾಧನೆಗೆ ಗುರುರಾಜ್ ಕೆ., ರಂಗಭೂಮಿ/ಕಿರುತೆರೆ- ಬಿ.ಎನ್. ನಾಗರಾಜಯ್ಯ ಹೆಸರು ಸೇರ್ಪಡೆಯಾಗಿತ್ತು.`ಕೆಂಪೇಗೌಡ ಪ್ರಶಸ್ತಿಗೆ ಅರ್ಹರಾದವರು ಸಾವಿರಾರು ಮಂದಿ ಇದ್ದಾರೆ. ಆದರೆ ಪ್ರಶಸ್ತಿ ಗೌರವ ಹೆಚ್ಚಿಸುವ ಕೆಲಸ ಮಾಡಬೇಕಿದೆ. ಹಾಗಾಗಿ 50 ಮಂದಿಗೆ ಮಾತ್ರ ಪ್ರಶಸ್ತಿ ನೀಡಲಾಗಿದೆ~ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಪ್ರಶಸ್ತಿ ಆಯ್ಕೆಯನ್ನು ಸಮರ್ಥಿಸಿಕೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.