ಅಷ್ಟಗಾ: ಮೂಲಸೌಲಭ್ಯಕ್ಕೆ ‘ಅಷ್ಟ’ ದಿಗ್ಬಂಧನ!

7
ಗ್ರಾಮಾಯಣ

ಅಷ್ಟಗಾ: ಮೂಲಸೌಲಭ್ಯಕ್ಕೆ ‘ಅಷ್ಟ’ ದಿಗ್ಬಂಧನ!

Published:
Updated:

ಗುಲ್ಬರ್ಗ: ಜಿಲ್ಲಾ ಕೇಂದ್ರದಿಂದ 20 ಕಿ.ಮೀ ದೂರದಲ್ಲಿರುವ ಅಷ್ಟಗಾ ಗ್ರಾಮದಲ್ಲಿ ಮೂಲ­ಸೌಲಭ್ಯಕ್ಕೆ ಅಷ್ಟ ದಿಗ್ಬಂಧನ ಹಾಕಲಾಗಿದೆ.

ಒಬ್ಬರು ತಾಲ್ಲೂಕು ಪಂಚಾಯಿತಿ ಸದಸ್ಯ, ಒಬ್ಬರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ನಾಲ್ವರು ಗ್ರಾಮ ಪಂಚಾಯಿತಿ ಸದಸ್ಯರಿದ್ದರೂ ಮೂಲ ಸೌಲಭ್ಯಗಳಿಂದ ಗ್ರಾಮ ಬಹುದೂರ ಉಳಿದಿದೆ.ಕಲ್ಲಹಂಗರಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗ್ರಾಮದಲ್ಲಿ ಮೂರು ಸಾವಿರ ಜನಸಂಖ್ಯೆ ಇದೆ. ಗ್ರಾಮದ ಓಣಿಗಳಲ್ಲಿ ಅಲ್ಲಲ್ಲಿ ಸಿ.ಸಿ ರಸ್ತೆ ಇದ್ದರೂ ಕಿತ್ತು ಹೋಗಿವೆ. ಕೆಲವೆಡೆ ಚರಂಡಿ ನಿರ್ಮಿಸಲಾಗಿದ್ದು, ನಿರ್ವಹಣೆ ಇಲ್ಲದ್ದರಿಂದ ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿದೆ. ಇದರಿಂದಾಗಿ ಗ್ರಾಮಸ್ಥರು ರಸ್ತೆ ಮಧ್ಯದಲ್ಲಿ ಚಪ್ಪಡಿ ಕಲ್ಲುಗಳನ್ನು ಹಾಕಿ ದಾಟಬೇಕಾದ ಸ್ಥಿತಿ ನಿರ್ಮಾಣವಾಗಿದೆ.ಗ್ರಾಮದಲ್ಲಿರುವ ಸರ್ಕಾರಿ ಶಾಲೆಯಲ್ಲಿ 250 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಆದರೆ, ಶಾಲಾ ಕಟ್ಟಡ ಸುಸ್ಥಿತಿಯಲ್ಲಿ ಇಲ್ಲ. ಹೊಸ ಕೋಣೆಗಳನ್ನು ನಿರ್ಮಿಸಿದರೂ ಕೊಠಡಿ ಸಮಸ್ಯೆ ನಿವಾರಣೆಯಾಗಿಲ್ಲ. 10 ಜನ ಶಿಕ್ಷಕರಿದ್ದು, ಈ ಪೈಕಿ ಪ್ರತಿನಿತ್ಯ 3–4 ಶಿಕ್ಷಕರು ರಜೆ ಮೇಲೆ ಇರುತ್ತಾರೆ. ಇದರಿಂದಾಗಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ.‘ಗ್ರಾಮದಲ್ಲಿ ಮೂರು ಅಂಗನವಾಡಿ ಕೇಂದ್ರಗಳಿವೆ. ಆದರೆ, ಯಾವತ್ತೂ ಸಮಯಕ್ಕೆ ಸರಿಯಾಗಿ ತೆರೆದಿರುವುದಿಲ್ಲ. ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳನ್ನು ಶಾಲೆಗೆ ಕರೆದೊಯ್ದು ಪಾಠ ಮಾಡಿದ್ದು ಕಡಿಮೆ. ಬೆಳಿಗ್ಗೆ 11 ಗಂಟೆಗೇ ಬೀಗ ಹಾಕುತ್ತಾರೆ. ಮಕ್ಕಳಿಗೆ ಸರ್ಕಾರ ನೀಡುವ ಪಡಿತರ ಏನಾಗುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ಅಂಗನವಾಡಿ ಕಾರ್ಯಕರ್ತೆಯರನ್ನು ವಿಚಾರಿಸಿದರೆ ಸರಿಯಾಗಿ ಸ್ಪಂದಿಸುವುದಿಲ್ಲ’ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.‘ಗ್ರಾಮದಲ್ಲಿ ನೀರಿನ ತೊಂದರೆಯೂ ಸಾಕಷ್ಟಿದೆ. ಶಾಲಾ ಮಕ್ಕಳು ಮಧ್ಯಾಹ್ನದ ಬಿಸಿ ಊಟಕ್ಕೆ ಹೊರಗಿನಿಂದ ನೀರು ತರುವ ಸ್ಥಿತಿ ಇದೆ. ನೀರು, ಚರಂಡಿ, ಶೌಚಾಲಯ, ಸಿ.ಸಿ ರಸ್ತೆ, ಸಾರ್ವಜನಿಕ ಗ್ರಂಥಾಲಯ, ಸಮುದಾಯ ಭವನ, ಆರೋಗ್ಯ ಕೇಂದ್ರ ಇತರೆ ಯಾವ ಸೌಲಭ್ಯವೂ ಗ್ರಾಮಕ್ಕೆ ದೊರೆತ್ತಿಲ್ಲ’ ಎಂಬುದು ಗ್ರಾಮಸ್ಥರ ಗೋಳು.ಶಾಸಕರ ಅನುದಾನದಡಿ ₨ 48 ಲಕ್ಷದಲ್ಲಿ ರಸ್ತೆ ಕಾಮಗಾರಿ ಕೈಗೊಳ್ಳಲಾಗಿದೆ. ಜಂಬಗದಿಂದ ಅಷ್ಟಗಾ ಗ್ರಾಮದ ವರೆಗೆ 3 ಕಿ.ಮೀ ರಸ್ತೆ ಕಾಮಗಾರಿ ನಡೆದು ವರ್ಷಗಳೇ ಕಳೆದರೂ ಇನ್ನೂ ದುರಸ್ತಿಯಾಗಿಲ್ಲ. ದುರಸ್ತಿಗೆಂದು ರಸ್ತೆಗೆ ಗುಂಡುಕಲ್ಲು ಹಾಕಲಾಗಿದ್ದು, ಮುರುಮ್ ಹಾಕದೇ ಬಿಡಲಾಗಿದೆ. ಇದರಿಂದ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.‘ಗ್ರಾಮ ಪಂಚಾಯಿತಿಯಿಂದ ಶೌಚಾಲಯ ನಿರ್ಮಿಸುವ ಯೋಜನೆ ನಮ್ಮೂರಿಗೂ ಬಂದಿದೆ. ಆದರೆ, ಕುಡಿಯುವುದಕ್ಕೆ ನೀರು ಸಿಗೊದಿಲ್ಲ. ಇನ್ನು ಶೌಚಾಲಯಕ್ಕೆ ಎಲ್ಲಿಂದ ನೀರು ತರಬೇಕು. ಬೇಸಿಗೆಯಲ್ಲಿ ನೀರಿನ ತೊಂದರೆ ಆಗುತ್ತದೆ. ಆಗ ಇನ್ನೂ ತೊಂದರೆ ಅನುಭವಿಸಬೇಕಾಗುತ್ತದೆ’ ಎನ್ನುತ್ತಾರೆ ಶಿವಾನಂದ ಅಂಬಾಡಿ.‘ಕಲ್ಲಹಂಗರಗಾ ಗ್ರಾಮ ಪಂಚಾಯಿತಿ ಅಧ್ಯಕ್ಷರು ಇದೇ ಗ್ರಾಮದವರು. ಆದರೆ, ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದರೆ ಮೌನವಹಿಸುತ್ತಾರೆ. ತಾಲ್ಲೂಕು ಪಂಚಾಯಿತಿ ಸದಸ್ಯರಂತೂ ಗ್ರಾಮದ ಕಡೆ ಬರುವುದೇ ಇಲ್ಲ’ ಎಂದು ಗ್ರಾಮಸ್ಥ ರಾಜಕುಮಾರ ಬೆನಕನಳ್ಳಿ ಬೇಸರ ವ್ಯಕ್ತಪಡಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry