ಅಸಂಗತ ಕಾನೂನು ಮಾರಕ

7

ಅಸಂಗತ ಕಾನೂನು ಮಾರಕ

Published:
Updated:
ಅಸಂಗತ ಕಾನೂನು ಮಾರಕ

ಬೆಂಗಳೂರು: `ಬೇರೆ ದೇಶಗಳಲ್ಲಿ ಅನುಷ್ಠಾನದಲ್ಲಿರುವ ಕಾಯ್ದೆಗಳನ್ನು ಯಾವುದೇ ಬದಲಾವಣೆಗೆ ಒಳಪಡಿಸದೆ ನಮ್ಮ ದೇಶದಲ್ಲೂ ಅನುಷ್ಠಾನಕ್ಕೆ ತರುತ್ತಿರುವ ಕಾರಣ ಕಾನೂನಿನಲ್ಲಿ ಅಸಂಗತ ವಿಚಾರಗಳು, ನ್ಯೂನತೆಗಳು ಹೆಚ್ಚಾಗುತ್ತಿವೆ. ಇದು ದೇಶದ ಅಭಿವೃದ್ಧಿಗೇ ಮಾರಕವಾಗಲಿದೆ~ ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆರ್.ವಿ. ರವೀಂದ್ರನ್ ಆತಂಕ ವ್ಯಕ್ತಪಡಿಸಿದರು.ನ್ಯಾಯಮೂರ್ತಿ ಜಿ.ಎನ್. ಸಭಾಹಿತ್ ಸ್ಮಾರಕ ಉಪನ್ಯಾಸ ಟ್ರಸ್ಟ್ ಇಲ್ಲಿನ ಸಚಿವಾಲಯ ಕ್ಲಬ್‌ನಲ್ಲಿ ಭಾನುವಾರ ಆಯೋಜಿಸಿದ್ದ, `ಕಾನೂನಿನಲ್ಲಿ ಅಸಂಗತ ವಿಷಯಗಳು~ ಕುರಿತು ಉಪನ್ಯಾಸ ನೀಡಿದ ಅವರು, `ಜಗತ್ತಿನ ಮುಂದುವರಿದ ದೇಶಗಳಾದ ಅಮೆರಿಕ, ಸ್ವೀಡನ್‌ನಲ್ಲಿನ ಕಾಯ್ದೆಗಳನ್ನು ಭಿನ್ನ ಮಾದರಿಯ ಸಮಾಜ ಹೊಂದಿರುವ ಭಾರತದಲ್ಲೂ ಜಾರಿ ಮಾಡಲಾಗುತ್ತಿದೆ. ಇದರಿಂದಾಗಿ ದೇಶದ ಕಾನೂನಿನಲ್ಲಿ ಅಸಂಗತ ವಿಚಾರಗಳು ಹೆಚ್ಚುತ್ತಿವೆ~ ಎಂದು ಬೇಸರ ವ್ಯಕ್ತಪಡಿಸಿದರು.ಭಾರತೀಯ ದಂಡ ಸಂಹಿತೆಯನ್ನು ಅತ್ಯಂತ ವ್ಯವಸ್ಥಿತವಾಗಿ ರಚಿಸಲಾಗಿದೆ. ಅಲ್ಲಿ ಅಸಂಗತ ವಿಚಾರಗಳು ಹೆಚ್ಚಿನ ಪ್ರಮಾಣದಲ್ಲಿ ಇಲ್ಲ. ಆದರೆ ಇತ್ತೀಚೆಗೆ ರಚನೆಯಾಗಿರುವ ಕೆಲವು ಕಾಯ್ದೆಗಳಲ್ಲಿ ಅಸಂಗತ ವಿಚಾರಗಳು ಹೆಚ್ಚಾಗಿ ಕಂಡುಬರುತ್ತಿವೆ ಎಂದರು.`ದುರದೃಷ್ಟದ ಸಂಗತಿಯೆಂದರೆ ನಮ್ಮ ವಕೀಲರು ಹಣ ಮಾಡುವುದರಲ್ಲೇ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಕಾನೂನಿನಲ್ಲಿರುವ ಅಸಂಗತ ವಿಷಯಗಳ ಕುರಿತು ಅವರು ಧ್ವನಿ ಎತ್ತಬೇಕು. ಕಾನೂನು ಜಾರಿ ಮಾಡುವ ಅಧಿಕಾರವುಳ್ಳ ಸಂಸದರು ಮತ್ತು ಶಾಸಕರಲ್ಲಿ ಇಂಥ ವಿಚಾರಗಳ ಕುರಿತು ಜಾಗೃತಿ ಮೂಡಿಸಬೇಕು~ ಎಂದು ಆಗ್ರಹಿಸಿದರು.ಅಪಘಾತಕ್ಕೆ ಕಾರಣವಾಗುವ ವ್ಯಕ್ತಿಗೆ ಪ್ರಸ್ತುತ ಸಾವಿರ ಅಥವಾ ಎರಡು ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತಿದೆ. ದಂಡದ ಮೊತ್ತ ಇಷ್ಟು ಎಂದು ನಿರ್ಧರಿಸಿದ್ದು 1850ರಲ್ಲಿ. ಅಂದಿನ ಒಂದು ಸಾವಿರ ರೂಪಾಯಿ ಇಂದಿನ 15.5 ಲಕ್ಷ ರೂಪಾಯಿಗೆ ಸಮನಾದ ಮೊತ್ತ. ಈ ಹಿನ್ನೆಲೆಯಲ್ಲಿ ಗಂಭೀರ  ಅಪಘಾತಕ್ಕೆ ಕಾರಣರಾಗುವ ವ್ಯಕ್ತಿಗಳಿಗೆ ಭಾರಿ ಮೊತ್ತದ ದಂಡ ವಿಧಿಸಬೇಕು. ಇಲ್ಲವಾದರೆ, ಜನರಲ್ಲಿ ಕಾನೂನಿನ ಭಯ ಇಲ್ಲದಂತಾಗುತ್ತದೆ ಎಂದರು.ಅಪರಾಧ ಎಸಗುವ ವ್ಯಕ್ತಿಗೆ ಆತನ ಮಾಸಿಕ ಆದಾಯ ಆಧರಿಸಿ ದಂಡ ವಿಧಿಸುವ ಕಾಯ್ದೆಗಳು ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಜಾರಿಗೆ ಬಂದಿವೆ. ಇದೇ ಮಾದರಿಯ ಕಾಯ್ದೆಗಳನ್ನು ಭಾರತದಲ್ಲೂ ಜಾರಿಗೆ ತರಬೇಕು ಎಂದರು.ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್, ನಿವೃತ್ತ ನ್ಯಾಯಮೂರ್ತಿ ಎನ್.ಡಿ.ವಿ. ಭಟ್, ಟ್ರಸ್ಟ್‌ನ ಅಧ್ಯಕ್ಷ ನಾರಾಯಣ ಸಭಾಹಿತ್ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry